ಅಂತರಂಗ

ಪ್ರೇಮ ಪತ್ರ | ನಿಮ್ಮ ನೆನಪುಗಳ ಮೇಲೆ ನನ್ನ ಪ್ರೇಮ ಸವಾರಿ..!

Published

on

ನಿಮ್ಮ ಆ ಸ್ಮೈಲ್‍ನಿಂದ ನನ್ ಏನ್ ಮೋಡಿ ಮಾಡ್ತಿರ್ರಿ…! ನೀವ್ ಒಮ್ಮೆ ನಕ್ಕಿದ್ರೆ ಸಾಕು ಅದೆಲ್ಲೊ ಇರೋ ಮೊನಾಲಿಸಾಳ ಕಣ್ಣುಗಳಿಗೂ ಮತ್ಸರ ಬಂದು ಅವಳ ತುಟಿ ಬಿಗಿದು ಬಿಡುತ್ತೆ ! ಇದು ಜೋಕ್ ಅಂತ ತಿಳ್ಕಂಡ್ರ? ಜೋಕ್ ಅಲ್ಲ ಕಂಡ್ರಿ… ನೆಲದಿಂದ ನಾಲ್ಕಿಂಚು ನೀರು ಒಮ್ಮೆಲೆ ನುಗ್ಗಿ ಬರೋ ಥರ ನನ್ ಕಲ್ಲೆದೆಯಿಂದ ಬಂದ ಮಾತಿದು! ಆಕಾಶಕ್ಕೆ ಚಿಮ್ಮೊ ಯಾವ ರಾಕೆಟ್ ಕೂಡ ಕೊರೆಯದ ಈ ನನ್ನ ಎದೆಯನ್ನು ನಿಮ್ಮ ಆ ಸ್ಮೈಲು, ನಿಮ್ಮ ಆ ಲುಕ್ಕು ಸರಕ್ ಎಂದು ಕೊರೆದು ಸುರಂಗ ಮಾಡಿ, ಮಿಣ್‍ಕಾಡೋ ಸೀರಿಯಲ್ ಸೆಟ್‍ನ ಸಾಲಾಗಿ ತೂಗಿ ಬಿಟ್ಟಿವೆ. ಹೆಲ್ತಿಯಾಗಿದ್ದ ನನ್ನ ಹೃದಯಕ್ಕೆ ಈಗ ಡಿಜಿಟಲ್ ಸೌಂಡ್ ಫಿಕ್ಸ್ ಆಗಿದೆ. ನೀವ್ ಬಂದ್ರೆ ಕುಣಿಯೋದ್ ಅಷ್ಟೆ ಬಾಕಿ!

ಎಂಥೆಂಥ ವಿಚಾರದಲ್ಲಿ ಸ್ಟ್ರಾಂಗ್ ಆಗಿರುವ ನಾನು ಈ ಪ್ರೀತಿ ಪ್ರೇಮ ಅನ್ನೋ ವಿಚಾರದಲ್ಲಿ ತುಂಬಾ ವೀಕು ಕಂಡ್ರಿ. ನಿಮ್ ಗುಣದ ಬ್ಯೂಟಿ ಮುಂದೆ ನನ್ ತಾಕತ್ತು ಏನೂ ನಡಿಯಕಿಲ್ಲ ಬಿಡಿ. ನಾನ್ ನಿಮ್ನ ರಾಗಿ ಕಾಳಿನಷ್ಟಾದ್ರು ಪ್ರೀತಿಸ್ತಿದಿನಿ ಅಂತ ಹೇಳ್ ಕೊಳ್ಳೋಕೆ ಪತರಗುಡ್ತಿನಿ. ನಿಮ್ ನೋಟಕ್ಕೆ, ಮುಂಗುರುಳಿಗೆ, ಕೋಮಲ ಬೆರಳುಗಳಿಗೆ, ಖುಷಿಯಾದಗ ಒಮ್ಮೊಮ್ಮೆ ಹೊರಾಗ್ ಬಂದು ಒಳಾಗೋಗೊ ನಿಮ್ ನಾಲ್ಗೆಗೆ, ನಿಮ್ ಪುಟ್ ಪುಟ್ ಪಾದಗಳ ವಾಕಿಂಗ್ ಸ್ಟೈಲ್ ಗೆ ನನ್ ಮನ್ಸನ್ನೆ ಗಿರ್‍ಗಿಟ್ಳೆ ಆಡ್ಸೋ ನವಶಕ್ತಿ ಇದೆ! ನೀವ್ ಏನನ್ನೋ ನೋಡ್ಕಂಡು ಹೆಂಗೆಂಗೊ ಆಡ್ತಿದ್ರೆ… ನಾನ್ ನಿಮ್ಮನ್ ನೋಡ್ಕಂಡು ಹಂಗಂಗೆ ಆಡ್ತಿನಿ ಕಂಡ್ರಿ. ನಿಂತ್ ಜಾಗದಲ್ಲಿ ನಿಲ್ಲಾಕಿಲ್ಲ, ಕುಂತ್ ಜಾಗದಲ್ಲಿ ಕೂರಾಕಿಲ್ಲ, ಮತ್ ಮತ್ತೆ ನಿಮ್ಮನ್ನ ನೋಡೋದ್ ಬಿಡಾಕಿಲ್ಲ!

ನಿಮ್ಮನ್ನು ನೋಡಿದ ಆ ಮೊದಲ ಕ್ಷಣ ನನ್ ಹಾರ್ಟು ಬಲೆಗೆ ಸಿಕ್ಕಿಬಿದ್ದ ಗಿಣಿಮರಿಯ ಹಾರ್ಟಿನಂತೆ ಪಟಪಟನೆ ಪಟಪಟನೆ ನೂರಾರು ಬಾರಿ ಬಡ್ಕಳ್ತಾನೆ ಇತ್ತು! ಆ ಮೊದಲ ಕ್ಷಣ… ನೂರಾದಾಗ ಮುಂಗಾರು ಮಳೆಯ ಹನಿಗಳ ದುನಿಯಾ…! ನೀವು ನವಿಲಂತೆ ನಡೆದು ಹೋಗುವಾಗ ನಿಮ್ಮ ಕಣ್ಣು ರೆಪ್ಪೆಯ ಕೂದಲುಗಳು ಆಗಷ್ಟೆ ಅಂಜಿಕೆಯಿಂದ ಹೊರಸೂಸಿದ್ದ ಆ ವಾರೆನೋಟವು ಥಳಥಳಿಸಿದಾಗ ನನ್ನೆದೆಯಲ್ಲಿ ಒಟ್ಟೊಟ್ಟಿಗೆ ಸೂರ್ಯೋದಯ! ಚಂದ್ರೋದಯ! ಆಗ ನಂಗೊಂದು ಡೌಟ್ ಬಂತು ಕಂಡ್ರಿ… ನೀವು ಸೂರ್ಯ, ಚಂದ್ರ, ನಕ್ಷತ್ರಗಳಿಗೆಲ್ಲ ನಿಮ್ ಮುಖದಲ್ಲಿ ಮೂಡೊ ಬೆಳಕನ್ನ ಬಡ್ಡಿ ಲೆಕ್ಕದಲ್ಲಿ ಸಾಲ ಗೀಲ ಕೊಟ್ಟಿದಿರಾ ಅಂತ!?

ಈ ಹಾರ್ಟು ಮತ್ತು ಫೀಲಿಂಗ್ಸ್ ಮಧ್ಯೆ ಗ್ಯಾಪು ಜಾಸ್ತಿ ಆದಾಗೆಲ್ಲ ಪ್ರ್ಯಾಕ್ಟಿಕಲ್ ಲೈಫು ಹೇಳ್ದೆ ಕೇಳ್ದೆ ಒದ್ಕಂಡು ಬರ್ತದೆ. ನಂಗೆ ಇಂಥದ್ದೆಲ್ಲ ಇಷ್ಟ ಇಲ್ಲ ಕಂಡ್ರಿ. ನನ್ನ ಭಾವನೆಗಳಿಗೆ ನಾನೇ ಪ್ರಭು. ಈ ಹುಡ್ಗೀರ್ಗೆ ಬ್ಯೂಟಿ ಇದ್ರೆ ಬುದ್ಧಿ ಇರಲ್ವಂತೆ! ಬುದ್ಧಿ ಇದ್ರೆ ಚುರುಕ್‍ತನ ಇರಲ್ವಂತೆ! ಹೌದಾ? ಆದ್ರೆ, ನೀವು ಈ ‘ಇಲ್ಲ’ ಅನ್ನೋ ವ್ಯಾಪ್ತಿಯಿಂದ ನಾಟ್ ರೀಚಬಲ್ ! ನೀವ್ ಒಂದ್ ರೀತಿ ಸಂಕ್ರಾಂತಿ ಎಳ್ಳು-ಬೆಲ್ಲ ಇದ್ದಂಗೆ! ಜಾಸ್ತಿ ತಿಂದ್ರೆ ನೀರ್ ಕುಡಿಸ್ತಿರಿ…! ಕಡಿಮೆ ತಿಂದ್ರೆ, ಇನ್ನು ತಿನ್ನೋ ಹಂಗೆ ಮಾಡ್ತಿರ! ಒಟ್ನಲ್ಲಿ ನನ್ ಕಡೆ ಕದ್ ಕದ್ ನೋಡ್ತಿರಾ… ಸಣ್ ಸಣ್‍ಕೆ ನಕ್ಕಿ , ತುಟಿ ಮೇಲೆ ಕಾಂತಿ ಮೂಡ್ಸಿ… ಮರೆ ಆಗ್ತಿರ! ಆಗ ಗಿಡದಲ್ಲಿ ಬಿಡೋ ಹೂವಂತೆ ಈ ಹೃದಯ ಪ್ರೇಮಕ್ಕೆ ಪರವಶವಾಗುತ್ತೆ…! ಮೂಗ್ದಾರ ಕಟ್ಟಿ ಎಷ್ಟ್ ಎಳುದ್ರು ಕೂಡ ನಿಮ್ ಕಡೆಗೆ ಬರ್ತಾನೆ ಇರುತ್ತೆ..!

ರೀ.. ನೀವು ಕಾಣದೆ ಹೋದಾಗ ನಿಮ್ಮನ್ನು ಹುಡುಕಾಡುವ ಪರಿ ನನ್ನೊಳಗೆ ವೈಭವದ ಅನುಭವ! ನೀವ್ ಸಿಗ್ಲೇ ಬೇಕು ಅಂತ ನಾನು ನಿಮ್ನ ಪ್ರೀತಿ ಮಾಡ್ತಿಲ್ಲ ! ನೀವ್ ಸಿಕ್ಕಲ್ಲ ಅಂದ್ರೂನು ನಾನ್ ಸುಮ್ನೆ ಇರ್ಲಿಕ್ಕೆ ಪ್ರೀತಿ ಮಾಡ್ತಿಲ್ಲ ! ಆದರೆ ನೀವ್ ನನಗೆ ಸಿಗದೇ ಇದ್ದ ಆ ಮುಂದಿನ ಕ್ಷಣವೊಂದನು ಹೇಗೆ ನೂಕಲಿ ಎಂಬ ಅಧೈರ್ಯ ನನ್ನ ಕಾಡಲೂ ಬಹುದು! ಆಗ ನನ್ನ ಪ್ರೇಮ ಬದುಕಿನತ್ತ ಮುಖಮಾಡಿ ನಿಮ್ಮ ನೆನಪುಗಳ ಮೇಲೆ ಸವಾರಿ ಮಾಡ್ತಾನೇ ಇರುತ್ತೆ…! ಇಬ್ಬರೂ ಸೇರುವ ಬಿಂದುವಿಗಾಗಿ ಕಾಯುತ್ತಲೆ ಇರುತ್ತದೆ…!

– ನಿಮ್ಮ ಪ್ರೀತಿಯ ಗಿರಿ

(ಡಾ. ಗಿರೀಶ್ ಎಂ ಬಿ,ಮೂಗ್ತಿಹಳ್ಳಿ
ಚಿಕ್ಕಮಗಳೂರು,ಮೊಬೈಲ್ – 8867732340)

Trending

Exit mobile version