ಭಾವ ಭೈರಾಗಿ

ಕವಿತೆ : ಪ್ರೇಮ

Published

on

  • 13ನೇ ಶತಮಾನದ ಸೂಫಿ ಕವಿ ಮೌಲಾನಾ ಜಲಾಲುದ್ದೀನ್ ರೂಮಿ ಜಗತ್ತಿನ ಅಸಂಖ್ಯ ಕಾವ್ಯಪ್ರೇಮಿಗಳ ನೆಚ್ಚಿನ ಕವಿ. 800 ವರ್ಷಗಳ ದೀರ್ಘ ಕಾಲವನ್ನೂ, ಧರ್ಮ-ಭಾಷೆ-ಸಂಸ್ಕøತಿ-ನಂಬಿಕೆಗಳ ಗಡಿಯನ್ನೂ ದಾಟಿ ಜಗತ್ತಿನ ನೂರಾರು ಭಾಷೆಗೆ ಅನುವಾದಗೊಂಡಿರುವ, ಇನ್ನೂ ಅನುವಾದಗೊಳ್ಳುತ್ತಲೇ ಇರುವ ಕವಿ.  ಡಾ. ಎಚ್. ಎಸ್. ಅನುಪಮಾ ಕನ್ನಡಕ್ಕೆ  ಅನುವಾದಿಸಿರುವ ಲಡಾಯಿ ಪ್ರಕಾಶನ ಪ್ರಕಟಿಸಿರುವ  ‘ಉರಿವ ಕುಡಿಯ ನಟ್ಟ ನಡುವೆ’ ಕೃತಿಯಿಂದ ರೂಮಿಯ ಕವಿತೆ  ನಿಮಗಾಗಿ.

ಮೂಲ : ರೂಮಿ
ಅನುವಾದ : ಎಚ್.ಎಸ್.ಅನುಪಮಾ

ದೆಯಾಳದ ನೋವು ನೈಜ ಪ್ರೇಮಿಯ ಗುರುತು
ಇನ್ನಾವ ನೋವೂ ಇಲ್ಲ ಎದೆ ನೋವಿಗಿಂತ ಮಿಗಿಲು

ಉಳಿದ ಬೇನೆಗಳಂತಲ್ಲ ಪ್ರೇಮರೋಗವು
ತನ್ನ ಮದ್ದರೆವ ಗುಟ್ಟರಿತ ಅಳತೆಗೋಲು

ಲೋಭಿ ಮನಸು ಪ್ರೇಮದಿಂದ ಪ್ರೇಮಕೆ ಜಿಗಿದೀತು
ನೆನಪಿಡು, ಉದಾತ್ತ ಪ್ರೇಮವೆ ಕೊನೆಗದರ ಸೆಳೆವುದು

ಪ್ರೇಮವನೆಂತಾದರೂ ವಿವರಿಸು, ವ್ಯಾಖ್ಯಾನಿಸು
ಶಬ್ದ ತನ್ನಷ್ಟಕ್ಕೆ ತಾನೇ ಲಜ್ಜೆಗೊಳುವುದು

ನಾಲಿಗೆ ಕೆಲವನಷ್ಟೇ ವ್ಯಾಖ್ಯಾನಿಸಬಲ್ಲದು
ವ್ಯಾಖ್ಯಾನಗಳಿರದ ಪ್ರೇಮ ಸ್ಪಷ್ಟಗೊಳುವುದು

ಲೇಖನಿಗೆ ಬರೆವ ಅವಸರವಿರಬಹುದು
ಪ್ರೇಮಪದ ಬರೆವಾಗ ಮುರಿದು ತುಂಡು

ಶುರುವಾದರೆ ಜಿಜ್ಞಾಸೆ ದಿವ್ಯಪ್ರೇಮದ ಕುರಿತು
ನಿಬ್ಬು ಸೀಳಿ ಕಾಗದ ಹರಿಯತೊಡಗುವುದು

ತರ್ಕ ಸಿಕ್ಕಿಬೀಳುವುದು ಪ್ರೇಮ ವಿವರಿಸುತ್ತ, ಕೆಸರಲಿ ಹೂತ ಕತ್ತೆಯಂತೆ
ಪ್ರೇಮವನೂ ಪ್ರೇಮಿಗಳನೂ ವಿವರಿಸಲು ಶಕ್ತವಾದದ್ದು ಪ್ರೇಮವಷ್ಟೆ

ಸೂರ್ಯನಲ್ಲದೆ ಮತ್ತಾರೂ ಸೂರ್ಯನ ತೋರಿಸಲಾರರು
ಒಂದೊಮ್ಮೆ ತೋರಿಸಿದಲ್ಲಿ ಬೆನ್ನುಹಾಕಿ ನಡೆಯಬಾರದು

ನೆರಳು ಸೂರ್ಯನ ಇರವು ತಿಳಿಸಬಹುದು
ಸೂರ್ಯ ಮಾತ್ರ ಬದುಕಬಾನ ಬೆಳಗಬಲ್ಲನು

ಸಂಜೆಯ ಮಾತುಗಳಂತೆ ನೆರಳು ನಿದ್ರಾಲೋಕಕೆಳಸುತ್ತದೆ
ಸೂರ್ಯ ಹುಟ್ಟುವುದೇ ತಡ, ಚಂದ್ರಬಿಂಬ ಎರಡಾಗುತ್ತದೆ

ಲೋಕದಲಾವುದೂ ಇಲ್ಲ ಸೂರ್ಯನಂಥ ಅದ್ಭುತ
ಆತ್ಮಸೂರ್ಯನಿಗಿಲ್ಲ ಇಂದು ನಾಳೆ, ಉದಯಾಸ್ತಮಾನ

ಮುಗಿಲ ಸೂರ್ಯ ಏಕೈಕ, ಅನನ್ಯ. ಆದರೂ ಸಹ
ಸೃಷ್ಟಿಸಬಹುದು ಅವನಂಥ ಎಷ್ಟೋ ಸೂರ್ಯರನ್ನ

ಆತ್ಮಸೂರ್ಯ ಆಗಸವ ಮೀರಿದವನು
ಮೂರ್ತ ಅಮೂರ್ತಗಳಲಿ ಕಾಣಲಾಗದವನು

ಅವನ ರೂಪ ಗ್ರಹಿಸುವುದು ಹೇಗೆ?
ಅವನಂಥವರ ಊಹಿಸುವುದು ಹೇಗೆ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version