ದಿನದ ಸುದ್ದಿ
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟರ ಸಾವು ಅಕಾಲಿಕ ಮತ್ತು ಆಘಾತಕಾರಿ
ಐಪಿಎಸ್ ಅಧಿಕಾರಿ ಮಧುಕರ ಶೆಟ್ಟರ ಸಾವು ಅಕಾಲಿಕ ಮತ್ತು ಆಘಾತಕಾರಿ. ಅವರ ಸೇವೆ ನಾಡಿಗೆ ಅಗತ್ಯವಿತ್ತು. ಅವರು ಕರ್ನಾಟಕದಿಂದ ಹೊರಹೋಗುವಂತಹ ವಾತಾವರಣ ನಿರ್ಮಿಸಿದ ನಮ್ಮ ಸಂವೇದನಾರಹಿತ ಮತ್ತು ಭ್ರಷ್ಟ ವ್ಯವಸ್ಥೆಯೇ ಅವರ ಸಾವಿಗೆ ನೇರ ಹೊಣೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್’ನ ಒಂದು ಭ್ರಷ್ಟ ತೀರ್ಪು ಅವರು ಕರ್ನಾಟಕದಿಂದ ಕೇಂದ್ರ ಸೇವೆಗೆ ಹೋಗುವ ಸಂದರ್ಭದಲ್ಲಿ ಅವರನ್ನು ತೀವ್ರವಾಗಿ ಬಾಧಿಸಿತ್ತು.
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅವರ ಸಹಪಾಠಿ ಯಾಗಿದ್ದ ಮೈಸೂರಿನ ಗೆಳೆಯ ಪೃಥ್ವಿ ದತ್ತ ಚಂದ್ರ ಶೋಭಿ ಒಮ್ಮೆ 2011 ರ ಸುಮಾರಿನಲ್ಲಿ ಅವರಿಗೆ ನನ್ನನ್ನು ಪರಿಚಯಿಸಿದ್ದರು. ಅಷ್ಟೊತ್ತಿಗೆ ಅವರಿಗೆ ವ್ಯವಸ್ಥೆಯ ಮೇಲೆ ಸಾಕಷ್ಟು ಭ್ರಮನಿರಸನ ಆಗಿತ್ತು. ಲೋಕಾಯುಕ್ತದಲ್ಲಿ ಇದ್ದ ಭ್ರಷ್ಟರನ್ನು ಮತ್ತು ನೀಚರನ್ನು ಜಸ್ಟೀಸ್ ಸಂತೋಷ್ ಹೆಗಡೆಯವರು ಸಾಕಷ್ಟು ಹತೋಟಿಗೆ ತರಲಿಲ್ಲ ಎನ್ನುವ ಅಸಮಾಧಾನ ಇತ್ತು. ಸಂತೋಷ್ ಹೆಗಡೆಯವರು ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದಾಗಲೇ ಈ ವಿಚಾರದ ಬಗ್ಗೆ ಅವರು ಧ್ವನಿ ಎತ್ತಿದ್ದರು. ಈ ತರಹದ ಬೇಸರದಲ್ಲಿ ಅಮೆರಿಕದಲ್ಲಿ ಇದ್ದ ತಮ್ಮ ಪತ್ನಿ ಮತ್ತು ಚಿಕ್ಕವಯಸ್ಸಿನ ಮಗಳ ಬಳಿಗೆ ತೆರಳಿ ಅಲ್ಲಿಯೇ ಮೂರ್ನಾಲ್ಕು ವರ್ಷ ಇದ್ದು ಪಿ.ಎಚ್.ಡಿ ಮುಗಿಸಿಕೊಂಡು ವಾಪಸಾಗಿದ್ದರು.
ಅವರು ಹಿಂದಿರುಗಿ ಬಂದ ಮೇಲೆಯೂ ಸರ್ಕಾರ ಅವರನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ. ಅವರು ಭ್ರಷ್ಟರೊಂದಿಗೆ ರಾಜಿ ಆಗುತ್ತಿರಲಿಲ್ಲ. ಎರಡು ವರ್ಷದ ಹಿಂದೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡುವನ್ನು ರಾಜ್ಯ ಉಚ್ಛ ನ್ಯಾಯಾಲಯದ ಒಂದು ಅತಿ ಕೆಟ್ಟ ತೀರ್ಪು ದೋಷಮುಕ್ತಗೊಳಿಸಿದಾಗ ಬಹಳ ಬೇಸರಗೊಂಡಿದ್ದರು. ಅದೇ ಸಮಯದಲ್ಲಿ ನಾನು ಅವರನ್ನು ಇನ್ನೊಮ್ಮೆ ಭೇಟಿ ಆಗಿದ್ದೆ. ಬಹಳ ವಿಶ್ವಾಸದಿಂದ ಸುಮಾರು ಒಂದು ಗಂಟೆಯ ಕಾಲ ಅವರ ಕಚೇರಿಯಲ್ಲಿ ಮಾತನಾಡಿದ್ದೆವು. ಲೋಕಾಯುಕ್ತದಲ್ಲಿ ಇದ್ದಾಗ ಅವರೇ ಸಿದ್ಧಪಡಿಸಿದ್ದ ಸಾವಿರಾರು ಪುಟಗಳ ಸಾಕ್ಷ್ಯಾಧಾರಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್ ಶೀಟ್) ನ್ಯಾಯಾಲಯ ತಿರಸ್ಕರಿಸಿದ್ದ ಬಗ್ಗೆ ತೀವ್ರವಾಗಿ ನೊಂದಿದ್ದರು. ಕಾನೂನು ಪದವಿ ಮಾಡಿ ಆ ಭ್ರಷ್ಟ ತೀರ್ಪು ನೀಡಿದ ನ್ಯಾಯಮೂರ್ತಿಯ ಮುಂದೆ ನಿಂತು ಆತನ ಮುಖಕ್ಕೆ ರಾಚುವಂತೆ ಹೇಳುವ ಅಭಿಲಾಷೆಯ ಮಾತನ್ನು ನನ್ನೊಂದಿಗೆ ಆಡಿದ್ದರು. ಆದರೆ ಕೆಲವೇ ತಿಂಗಳುಗಳಲ್ಲಿ ಕೇಂದ್ರ ಸೇವೆಗೆಂದು ಹೈದರಾಬಾದ್’ಗೆ ಹೋದರು. ನಾಡು ಅವರನ್ನು ಶಾಶ್ವತವಾಗಿ ಕಳೆದುಕೊಂಡಿತು.
https://m.facebook.com/story.php?story_fbid=2474973089242008&id=100001880229123
ಸರಳರೂ ಪ್ರಾಮಾಣಿಕರೂ ಆಗಿದ್ದ ಅವರು ಮಿತಭಾಷಿಯೂ ಆಗಿದ್ದರು. ಬೌದ್ಧಿಕತೆಯೂ ಇತ್ತು. ಹಾಗಾಗಿ ಸಹಜವಾಗಿ ಅವರಿಗೆ ಇಲಾಖೆಯಲ್ಲಿ ಹೆಚ್ಚು ಜನ ಆಪ್ತ ಸ್ನೇಹಿತರು ಇದ್ದಂತಿರಲಿಲ್ಲ. ಆರಡಿಗಿಂತ ಎತ್ತರವಾಗಿದ್ದ ಅವರು, ಒಳ್ಳೆಯ ಬಾಡಿಬಿಲ್ಡರ್ ತರಹದ ದೇಹದಾರ್ಢ್ಯ ಹೊಂದಿದ್ದರು. ಕನ್ನಡದ ಪ್ರಾಮಾಣಿಕ ಮತ್ತು ಹೆಸರುವಾಸಿ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರ ಮಗನಾಗಿದ್ದ ಕಾರಣಕ್ಕೆ ಕನ್ನಡದಲ್ಲೂ ಅವರಿಗೆ ಸಾಕಷ್ಟು ಹಿಡಿತ ಇತ್ತು.
ತಮ್ಮದಲ್ಲದ ತಪ್ಪಿಗೆ ಇನ್ನೊಬ್ಬರಿಗೆ ಆಗುವ ಅನಾಹುತಗಳಿಗೆ ಮರುಗುವ ಮತ್ತು ಪೊಲೀಸ್ ಉದ್ಯೋಗಕ್ಕೆ ಅಪರೂಪವಾದ ಮತ್ತು ಕೆಲವೊಮ್ಮೆ ಅನಗತ್ಯವಾದ ಅನುಕಂಪ ಮತ್ತು ಪಾಪಪ್ರಜ್ಞೆಯೂ ಅವರಿಗಿತ್ತು. ಸೂಕ್ಷ್ಮ ಮತ್ತು ಸಂವೇದನಾಶೀಲ ವ್ಯಕ್ತಿಗಳ ಅಗಲಿಕೆ ಮತ್ತು ದಾರಿದ್ರ್ಯ ಸಮಾಜವನ್ನು ಹಿಂಸೆ ಮತ್ತು ಪಾಪದತ್ತ ದೂಡುತ್ತದೆ.
https://www.facebook.com/ravikrishnareddy2011
ಮುಂದಿನ ದಿನಗಳಲ್ಲಿ ಅವರು ಕರ್ನಾಟಕಕ್ಕೆ ವಾಪಸಾಗುತ್ತಾರೆ ಮತ್ತು ಹಿರಿಯ ಅಧಿಕಾರಿಯೂ ಆಗುತ್ತಾರೆ ಎನ್ನುವ ವಿಶ್ವಾಸ ಇತ್ತು ಮತ್ತು ಆ ಮೂಲಕ ನಮ್ಮ ಕೆಲವು ಹೋರಾಟಗಳಿಗೆ ನ್ಯಾಯ ಪಡೆಯುವುದೂ ಸಾಧ್ಯವಾಗಬಹುದು ಎನ್ನುವ ಆಸೆ ನನಗಿತ್ತು. ಅನಿರೀಕ್ಷಿತವಾಗಿ ಶೆಟ್ಟರು ನೆನ್ನೆ ರಾತ್ರಿ ನಮ್ಮನ್ನೆಲ್ಲ ಅಗಲಿದ್ದಾರೆ. ಅವರ ಕುಟುಂಬದವರಿಗೆ ಈ ಸಾವನ್ನು ಭರಿಸುವ ಶಕ್ತಿ ದೊರೆಯಲಿ.
-ರವಿಕೃಷ್ಣ ರಡ್ಡಿ
ರಾಜಕಾರಣಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401