ದಿನದ ಸುದ್ದಿ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ಆಡಳಿತ ಯಂತ್ರಕ್ಕೆ ಚುರುಕು ನೀಡುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನ ಸೌಧದಲ್ಲಿ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಮುಂಗಾರು ಸಿದ್ಧತೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ತೊಂದರೆಗಳ ನಿವಾರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಚರ್ಚಿಸಲಿದ್ದಾರೆ.
  2. ಕನ್ನಡ ಗಣಕ ಪರಿಷತ್ ಹೊರತಂದಿರುವ ಕುಮಾರ ವ್ಯಾಸ ಭಾರತ ಎಂಬ ಕರ್ನಾಟ ಭಾರತ ಕಥಾ ಮಂಜರಿ ಪರಿಷ್ಕೃತ ಸಂಪುಟಗಳನ್ನು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಬೆಂಗಳೂರಿನಲ್ಲಿ ನಿನ್ನೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಸಮಕಾಲೀನ ಅಗತ್ಯಗಳಿಗೆ ಅನುಗುಣವಾಗಿ ಕನ್ನಡದ ಬೆಳವಣಿಗೆ ಆಗಬೇಕಿದೆ. ಇದಕ್ಕೆ ಸರ್ಕಾರ ಸೂಕ್ತ ನೆರವು ಒದಗಿಸಲಿದೆ ಎಂದು ತಿಳಿಸಿದರು.
  3. ರಾಜ್ಯದಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತೆ ಕುರಿತಂತೆ ಪರಿಶೋಧನೆ ನಡೆಸಿ ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ರಂದೀಪ್ ಸೂಚಿಸಿದ್ದಾರೆ. ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು ಸಾರ್ವಜನಿಕ ಆಸ್ಪತ್ರೆಗಳ ಸುರಕ್ಷತೆ ದೃಷ್ಟಿಯಿಂದ ಸೂಕ್ತ ಪರಿಶೀಲನೆಗೆ ಅವರು ಆದೇಶ ನೀಡಿದ್ದಾರೆ.
  4. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದೇ15 ರಿಂದ 7 ದಿನಗಳ ಕಾಲ ಕೆರೆಬಿಯನ್ ರಾಷ್ಟ್ರಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಜಮೈಕಾ, ಸೆಂಟ್ ವಿನ್ಸೆಂಟ್ ಮತ್ತು ಸೆಂಟ್ ಗ್ರೆನಡಿನೆಸ್ ದೇಶಗಳಿಗೆ ಪ್ರವಾಸ ಕೈಗೊಳ್ಳಲಿದ್ದಾರೆ. 15 ರಿಂದ 15ರವರೆಗೆ ಜಮೈಕಾಗೆ ಭೇಟಿ ನೀಡಲಿರುವ ಅವರು ಅಲ್ಲಿ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನ ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.
  5. ಸೈಬರ್ ಅಪರಾಧಗಳು, ಆರ್ಥಿಕ ಅಪರಾಧಗಳು ಮತ್ತು ಆನ್‌ಲೈನ್ ವಂಚನೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪೊಲೀಸರ ಕೌಶಲ್ಯ ಮೇಲ್ದರ್ಜೆಗೆ ಏರುವುದು ಅಗತ್ಯ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. ಪೊಲೀಸ್ ಸುಧಾರಣೆ ಮತ್ತು ಪೊಲೀಸರು ಎದುರಿಸುವ ಸವಾಲುಗಳ ಕುರಿತ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಜೊತೆಗೆ ಆನ್‌ಲೈನ್ ವಂಚನೆಗಳು ಸಹ ಹೆಚ್ಚುತ್ತಿವೆ. ಈ ಸವಾಲುಗಳನ್ನು ಎದುರಿಸಲು ಪೊಲೀಸರಲ್ಲಿ ತಂತ್ರಜ್ಞಾನದ ಕೌಶಲ್ಯ ಹೆಚ್ಚಿಸುವ ಅಗತ್ಯ ಇದೆ ಎಂದು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version