ದಿನದ ಸುದ್ದಿ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ಕೋವಿಡ್ ಕಾರಣದಿಂದ ಕಳೆದ 2 ವರ್ಷಗಳಿಂದ ಸರಳವಾಗಿ ನಡೆದಿದ್ದ ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವ ನಡೆಯಿತು. ಕರಗ ಶಕ್ತ್ಯುತ್ಸವ ನಿನ್ನೆ ರಾತ್ರಿ12.30ಕ್ಕೆ ಆಯೋಜಿಸಲಾಗಿತ್ತು. ಧರ್ಮರಾಯ ಸ್ವಾಮಿ ದೇವಸ್ಥಾನವನ್ನು ಮಲ್ಲಿಗೆ ಹೂವಿನಿಂದ ಅಲಂಕರಿಸಲಾಗಿತ್ತು. ಬೆಂಗಳೂರಿನಲ್ಲಿ ಕರಗ ಉತ್ಸವದ ಸಂಭ್ರಮ ಮನೆಮಾಡಿತ್ತು.
  2. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಎರಡು ದಿನಗಳ ರಾಜ್ಯ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಪ್ರಗತಿಯಲ್ಲಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಮಾರ್ಚ್ ತಿಂಗಳಲ್ಲಿ ಕಾರ್ಯಕಾರಿಣಿ ಸಭೆ ನಡೆಯಬೇಕಿತ್ತು, ಆದರೆ ರಾಜ್ಯ ಬಜೆಟ್ ಕಾರಣ ಸಭೆ ನಡೆದಿರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇಂದು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
  3. ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಯೋಜನೆಯ ೪ನೇ ವರ್ಷಾಚರಣೆಯ ಅಂಗವಾಗಿ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯ ಇಂದು ದೇಶದ ಒಂದು ಲಕ್ಷ ಕೇಂದ್ರಗಳಲ್ಲಿ ಇ-ಸಂಜೀವಿನಿ ಟೆಲಿ ಸಮಾಲೋಚನೆ ಸೌಲಭ್ಯಗಳಿಗೆ ಚಾಲನೆ ನೀಡಿದರು. ಟೆಲಿ ಸಮಾಲೋಚನಾ ಸೇವೆಯಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದ್ದು, ಇದಕ್ಕಾಗಿ ಪ್ರಶಂಸನಾ ಪತ್ರ ಲಭಿಸಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಟ್ವೀಟ್ ಮಾಡಿ, ಇದು ರಾಜ್ಯಕ್ಕೆ ಸಂದ ಮಹತ್ವದ ಗೌರವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
  4. ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆಯಿಂದ ಮೂರು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಳ್ಳಲಿದ್ದಾರೆ. ಸೋಮವಾರದಂದು ಗಾಂಧಿನಗರದ ಕಮ್ಯಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಫಾರ್ ಸ್ಕೂಲ್ಸ್ಗೆ ಭೇಟಿ ನೀಡಲಿದ್ದಾರೆ. ಈ ಕೇಂದ್ರ ಪ್ರತಿ ವರ್ಷ 500 ಕೋಟಿ ದತ್ತಾಂಶವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಇದನ್ನು ಅರ್ಥಪೂರ್ಣವಾಗಿ ವಿಶ್ಲೇಷಿಸಿ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ಕಲಿಕೆಗೆ ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳ ಒಟ್ಟಾರೆ ಕಲಿಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ.
  5. ಚೈತ್ರ ಹುಣ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ, ಮಲ್ಲಿಗೆಯ ಕಂಪಿನ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ ವೈಭವಯುತವಾಗಿ ಜರುಗಿತು. ನಿನ್ನೆ ತಡರಾತ್ರಿ ಧರ್ಮರಾಯ ದೇವಸ್ಥಾನದಿಂದ ಹೊರಟ ಹೂವಿನ ಕರಗಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು. ಸಂಜೆ ಸುರಿದ ಭಾರೀ ಮಳೆ ನಡುವೆಯೂ ದೇವಾಲಯದಲ್ಲಿ ಹೋಮ-ಹವನ ಸೇರಿ ಧಾರ್ಮಿಕ ವಿಧಿ ವಿಧಾನಗಳು ಸಾಂಗವಾಗಿ ಜರುಗಿದವು. ಉತ್ಸವದಲ್ಲಿ ರಾಜಕೀಯ ಮುಖಂಡರು, ಪಾಲಿಕೆ ಸದಸ್ಯರು ಹಾಗೂ ಹಲವು ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು.
  6. ಎರಡು ದಿನಗಳ ರಾಜ್ಯ ಬಿಜೆಪಿ ಕಾರಿಣಿ ಸಭೆಗೆ ಇಂದು ತೆರೆ ಬೀಳಲಿದೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತಿತರ ಗಣ್ಯರು ಹೊಸಪೇಟೆಯಲ್ಲಿ ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಇಂದು ಭಾಗಿಯಾಗಲಿದ್ದಾರೆ. ನಿನ್ನೆ ಕಾರ್ಯಕಾರಿಣಿ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಎಲ್ಲರೂ ಒಟ್ಟಿಗೆ ಶ್ರಮಿಸೋಣ ಎಂದು ಹೇಳಿದ್ದಾರೆ.
  7. ಪರೀಕ್ಷಾ ಪೇ ಚರ್ಚಾ ಸಂವಹನಗಳ ಒಳನೋಟಗಳನ್ನು ನಮೋ ಆಪ್ನ ಹೊಸ ಕ್ಯುರೇಟೆಡ್ ವಿಭಾಗದಲ್ಲಿ ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನಮಂತ್ರಿ ಅವರು, “ನಮ್ಮ ಕ್ರಿಯಾತ್ಮಕ ಪರೀಕ್ಷಾ ಸೇನಾನಿಗಳ ಜತೆ ಸಂವಹನ ನಡೆಸಲು ತಮಗೆ ಆನಂದವಾಗುತ್ತದೆ. ಪರೀಕ್ಷಾ ಪೇ ಚರ್ಚಾ ಜೀವನ ಮತ್ತು ಪರೀಕ್ಷೆಗೆ ಸಂಬಂಧಿಸಿದ ಹಲವು ವಿಷಯಗಳಿಗೆ ಉಜ್ವಲ ವೇದಿಕೆಯಾಗಿದೆ. ಈ ಎಲ್ಲಾ ಸಂವಹನಗಳ ಒಳನೋಟಗಳನ್ನು ನಮೋ ಅಪ್ಲಿಕೇಶನ್ ನಲ್ಲಿ ಹೊಸದಾಗಿ ಸಂಗ್ರಹಿಸಲಾದ ವಿಭಾಗದಲ್ಲಿ ಕಾಣಬಹುದಾಗಿದೆ” ಎಂದು ಹೇಳಿದ್ದಾರೆ.
  8. ಉತ್ತರ ಪ್ರದೇಶ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ನಿನ್ನೆ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ತಮ್ಮ ಪತ್ನಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅವರು ಹೊಸದಾಗಿ ನಿರ್ಮಿಸಲಾದ ಕಾಶಿ ವಿಶ್ವನಾಥ ಧಾಮವನ್ನು ಸಹ ವೀಕ್ಷಿಸಿದರು.
  9. ಜಪಾನ್ನಲ್ಲಿ ಜನಸಂಖ್ಯೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಜಪಾನ್ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2021ರಲ್ಲಿ 6ಲಕ್ಷದ ೪೪ ಸಾವಿರದಷ್ಟು ಜನಸಂಖ್ಯೆ ಕುಸಿತಕಂಡಿದೆ. ಸತತ 11ನೇ ವರ್ಷ ಜನಸಂಖ್ಯೆಯಲ್ಲಿ ಕುಸಿತವಾಗಿದ್ದು, 1950ರ ನಂತರ ಹೋಲಿಕೆ ಮಾಡಿದರೆ ಇದು ಅತ್ಯಂತ ಹೆಚ್ಚಿನ ಪ್ರಮಾಣದ ಕುಸಿತವಾಗಿದೆ ಎಂದು ತಿಳಿಸಿದೆ.
  10. ಪರೋಪಕಾರಿ ಮತ್ತು ಮಾನವತಾವಾದಿ ಬಿಲ್ಕಿಸ್ ಈಧಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್ ಸಂದೇಶದಲ್ಲಿ ಅವರು, “ಬಲ್ಕಿಸ್ ಈಧಿ ನಿಧನಕ್ಕೆ ನನ್ನ ಪ್ರಾಮಾಣಿಕ ಸಂತಾಪಗಳು. ಮಾನವೀಯ ಕೆಲಸಕ್ಕಾಗಿ ಈಕೆ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದು, ಇವರ ಕರ್ತವ್ಯ ಜಗತ್ತಿನಾದ್ಯಂತ ಮುಟ್ಟಿದೆ. ಭಾರತದ ಜನತೆ ಕೂಡ ಈಕೆಯನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version