ಅಂತರಂಗ
ಮನೆಯವರು ನೋಡುತ್ತಿದ್ದಂತೆಯೇ ಗುಂಡೇಟಿಗೆ ಬಲಿಯಾದ ಆಧಾರಸ್ತಂಭ
- ರಶೀದ್ ವಿಟ್ಲ
44ರ ಹರೆಯದ ಅಬ್ದುಲ್ ಜಲೀಲ್ ಅದಾಗಲೇ ಶಾಲೆಯಿಂದ ಮಕ್ಕಳನ್ನು ಕರಕೊಂಡು ಮನೆಗೆ ಬಂದಿದ್ದರು. ಬಂದರ್ ನಾರಾಯಣ ಹೋಟೆಲ್ ಎದುರುಗಡೆ ಬಾಡಿಗೆ ಫ್ಲಾಟ್’ನಲ್ಲಿದ್ದ ಅಬ್ದುಲ್ ಜಲೀಲ್ ಹೊರಗೆ ಶಬ್ದ ಕೇಳಿ ರಸ್ತೆ ಕಡೆ ಧಾವಿಸಿದರು. ಪತ್ನಿ, ಮಕ್ಕಳು ಹಿಂದಿಂದ ನೋಡುತ್ತಿದ್ದರು. ನಿರಂತರ ಗುಂಡಿನ ಶಬ್ದ ಕಿವಿಕ್ಕಪ್ಪಳಿಸುತ್ತಿತ್ತು.
ಅದರಲ್ಲೊಂದು ಗುಂಡು ಜಲೀಲ್’ರ ಕಣ್ಣ ಗುಡ್ಡೆಯನ್ನೇ ಸೀಳಿತು. ರಕ್ತ ಚಿಮ್ಮಿತು. ಮನೆಯವರೆದುರೇ ನೆಲಕ್ಕುರುಳಿದರು. ಬಂದರಿನ ದಕ್ಕೆಯಲ್ಲಿ ಮೀನು ಮಾರಿ ಪತ್ನಿ ಮತ್ತು ಎರಡು ಮಕ್ಕಳೊಂದಿಗೆ ಬಾಡಿಗೆ ಫ್ಲಾಟಲ್ಲಿ ಜೀವನ ಸವೆಸುತ್ತಿದ್ದ ಅಮಾಯಕ ಜಲೀಲ್ ಅನ್ಯಾಯವಾಗಿ ಬಲಿಯಾದರು.
ಎಲ್ಲರಿಗೂ ಬೇಕಾಗಿದ್ದ ಯುವಕನ ಬೆನ್ನಿಗೆ ಬಿದ್ದ ಗುಂಡು ಎದೆಯನ್ನು ಸೀಳಿ ಹೊರಬಂತು
ನೌಶೀನ್ ಕುದ್ರೋಳಿಯ ಜನರ ಪ್ರೀತಿಗೆ ಪಾತ್ರನಾದವ. ವಯಸ್ಸು 23 ಆದರೂ ವಯಸ್ಸಿಗೂ ಮೀರಿದ ಪಕ್ವತೆ ಇತ್ತು. ಮಾತುಗಾರಿಕೆ ಮತ್ತು ತಮಾಷೆಯಿಂದ ಕುದ್ರೋಳಿಯ ಸರ್ವ ಜನರ ಹೃದಯದಲ್ಲಿ ಮನೆಮಾತಾಗಿದ್ದ. “ವಾಯ್ಸ್ ಆಫ್ ಪೀಪಲ್” ಸಂಘಟನೆ ಮೂಲಕ ಸಮಾಜ ಸೇವೆ ಹಾಗೂ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿದ್ದ.ಮೆಕ್ಯಾನಿಕ್ ವೃತ್ತಿಯನ್ನು ಮಾಡುತ್ತಿದ್ದ.
ಅದಾಗಲೇ ಅಸರ್ ನಮಾಝ್ ಮಾಡಿ ಹೊರಬಂದಿದ್ದ. ಪ್ರತಿಭಟಿಸುತ್ತಿದ್ದ ನೂರಾರು ಜನರ ವಿದ್ಯಾಮಾನವನ್ನು ಗಮನಿಸುತ್ತಿದ್ದ. ಅಶ್ರುವಾಯು, ಲಾಠಿಚಾರ್ಜ್ ನಡೆಯುತ್ತಿತ್ತು. ಗುಂಡು ಹಾರಾಟ ಮಾಲೆ ಪಟಾಕಿಯಂತೆ ಕೇಳುತ್ತಿತ್ತು. ಮನೆಕಡೆ ಹೋಗುತ್ತಿದ್ದ ನೌಶೀನ್’ನ ಬೆನ್ನಿಗೆ ಗುಂಡು ಹೊಡೆಯಿತು.
ಬಂದರಿನ ಸ್ಟೀಲ್ ಸೆಂಟರ್ ಬಳಿ ಈ ಘಟನೆ ನಡೆಯಿತು. ಗುಂಡಿನ ತೀವ್ರತೆ ಎಷ್ಟಿತ್ತೆಂದರೆ ಬೆನ್ನು ಸೀಳಿ ಒಳನುಗ್ಗಿ ಹೃದಯ ದಾಟಿ ಎದುರಿನಿಂದ ಹೊರಬಂತು. ನೌಶೀನ್ ದೊಪ್ಪನೆ ಬಿದ್ದ. ಪ್ರಾಣಪಕ್ಷಿ ಹಾರಿಹೋಯಿತು. ಎಲ್ಲರಿಗೂ ಬೇಕಾಗಿದ್ದ ಪ್ರೀತಿಯ ಹುಡುಗ ನೀರವ ಮೌನವಾದ.
ಹೀಗೇ ಮಂಗಳೂರಿನ ಹಿಂಸಾಚಾರದಲ್ಲಿ ಎರಡು ಜೀವಗಳ ತರ್ಪಣವಾಯಿತು. ಒಂದು ಮನೆಯ ಆಧಾರಸ್ತಂಭವೇ ಕಳಚಿ ಬಿದ್ದರೆ ಇನ್ನೊಂದು ಊರಿನ ಬೆಳಕು ಆರಿತು. ಮಂಗಳೂರು ನಿಧಾನವಾಗಿ ಶಾಂತವಾಗುತ್ತಿದೆ. ಮೃತರ ಕುಟುಂಬ ಮಾತ್ರ ಅನಾಥವಾಗಿದೆ. ಯಾರದೋ ಸೇಡಿಗೆ ಇನ್ಯಾರೋ ಬಲಿಯಾದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243