ದಿನದ ಸುದ್ದಿ

ಪೊಲೀಸರಿಂದ ಕಾನೂನಿನ ಅತ್ಯಾಚಾರ

Published

on

ಅತ್ಯಾಚಾರ ಸಂತ್ರಸ್ತೆ ಮನಿಶಾ ಶವ ಸುಡುತ್ತಿರುವುದು
  • ದಿನೇಶ್ ಅಮಿನ್ ಮಟ್ಟು

ತ್ರಾಸ್ ನಲ್ಲಿ ಮೇಲ್ಜಾತಿಯ ದುರುಳರಿಂದ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ಯುವತಿಯ ಅಂತ್ಯಕ್ರಿಯೆಯನ್ನು ಪೊಲೀಸರು ತಂದೆ-ತಾಯಿಗೆ ಮಗಳ ಮುಖವನ್ನೂ ನೋಡಲು ಅವಕಾಶ ನೀಡದೆ ಅವಸರದಲ್ಲಿ ನಡುರಾತ್ರಿಯೇ ಅಂತ್ಯಕ್ರಿಯೆಯನ್ನು ಮುಗಿಸಿದರು. ಯಾಕೆ?

ನಮ್ಮ ಭವ್ಯಭಾರತದಲ್ಲಿ ಅತ್ಯಾಚಾರದ ನೂರು ಪ್ರಕರಣಗಳಲ್ಲಿ ಕೇವಲ 27 ಪ್ರಕರಣಗಳಲ್ಲಿ ಮಾತ್ರ ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ. 2018ರಲ್ಲಿ ಪೊಲೀಸ್ ಇಲಾಖೆಯಲ್ಲಿ ದಾಖಲಾಗಿದ್ದು 1,56,327 ರೇಪ್ ಪ್ರಕರಣಗಳು.

ಅವುಗಳಲ್ಲಿ ವಿಚಾರಣೆ ಪೂರ್ಣಗೊಂಡ ಪ್ರಕರಣಗಳು 17,313 ಮಾತ್ರ. ಇವುಗಳಲ್ಲಿ 11,133 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಕೆಯಾಗುವ ಮೊದಲೇ ಆರೋಪಿಗಳು ಬಿಡುಗಡೆಯಾಗಿದ್ದರು, 1472 ಪ್ರಕರಣಗಳಲ್ಲಿ ಆರೋಪಿಗಳು ವಿಚಾರಣೆ ನಡೆದು ದೋಷಮುಕ್ತರಾಗಿದ್ದರು.

ಆರೋಪಿಗಳು ದೋಷಮುಕ್ತರಾಗಲು ಒಂದು ಕಾರಣ ಏನೆನ್ನುವುದು ಬುಧವಾರ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪನ್ನು ನೋಡಿದವರಿಗೆ ಮನವರಿಕೆಯಾಗಿರಬಹುದು. ಇನ್ನೊಂದು ಪ್ರಮುಖ ಕಾರಣ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸುವ ಆರೋಪಪಟ್ಟಿಯಲ್ಲಿನ ದೋಷಗಳು.

ಅತ್ಯಾಚಾರದಂತಹ ಪ್ರಕರಣಗಳಲ್ಲಿ ಶೇಕಡಾ 90ರಷ್ಟು ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ ಎಫ್ ಐ ಆರ್ ದಾಖಲಾಗಿ ಆರೋಪ ಪಟ್ಟಿ ಸಿದ್ದಗೊಂಡು ನ್ಯಾಯಾಲಯಕ್ಕೆ ಸಲ್ಲಿಸುವ ಹಂತದಲ್ಲಿ ಸತ್ತು ಹೋಗಿರುತ್ತವೆ.

ಸರ್ಕಾರ ವಿಶೇಷ ಆಸಕ್ತಿ ವಹಿಸಿದರೆ, ಪಬ್ಲಿಕ್ ಪ್ರಾಸಿಕ್ಯೂಟರ್ ಗಳೇನಾದರೂ ಕಸಬುದಾರ ವಕೀಲರಂತೆ ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಸತ್ತುಹೋಗಿರುವ ಒಂದಷ್ಟು ಪ್ರಕರಣಗಳಿಗೆ ಜೀವ ತುಂಬಬಹುದು. ಅವರೂ ವ್ಯವಸ್ಥೆಯ ಜೊತೆ ಷಾಮೀಲಾಗಿದ್ದರೆ ಆತನೂ ಸೇರ್ಕೊಂಡು ಉಳಿದ ಪ್ರಕರಣಗಳನ್ನು ಮುಗಿಸಿಬಿಡುತ್ತಾರೆ.

ಅಪರಾಧಿಗಳನ್ನು ರಕ್ಷಿಸಲು ಪೊಲೀಸರು ನಿರ್ಧರಿಸಿದರೆ ಅವರು ಮೊದಲು ಸಾಕ್ಷ್ಯ ನಾಶಕ್ಕೆ ಇಳಿಯುತ್ತಾರೆ. ಹತ್ರಾಸ್ ನಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ದಲಿತ ಯುವತಿಯ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.
ಸೆಪ್ಟೆಂಬರ್ ಹದಿನಾಲ್ಕರಂದು ತನ್ನ ಮನೆ ಸಮೀಪದ ಕಾಡಲ್ಲಿ ಈ ದಲಿತ ಯುವತಿಯ ಮೇಲೆ ಊರಿನ ಮೇಲ್ಜಾತಿಯ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ಎಸಗುತ್ತಾರೆ.

ಅಲ್ಲಿಂದಲೇ ಸಾಕ್ಷ್ಯ ನಾಶದ ಕೆಲಸ ಪ್ರಾರಂಭವಾಗುತ್ತದೆ. ಆ ಯುವತಿ ಒಂದೆರಡು ವರ್ಷ ಮಾತ್ರ ಶಾಲೆಗೆ ಹೋಗಿದ್ದಳಂತೆ. ಓದಲು ಬರೆಯಲು ಗೊತ್ತಿದ್ದ ಹಾಗೆ ಕಾಣುತ್ತಿಲ್ಲ. ಇದರಿಂದಾಗಿ ಮೌಖಿಕ ಹೇಳಿಕೆಯನ್ನಷ್ಟೇ ನೀಡಲು ಸಾಧ್ಯವಿತ್ತು. ಅದಕ್ಕಾಗಿ ನಾಲಗೆಯನ್ನು ಕತ್ತರಿಸಲಾಗಿತ್ತು.

ಅಲ್ಲಿಂದ ಪೊಲೀಸರ ಪ್ರವೇಶವಾಗುತ್ತದೆ. ಅಷ್ಟರಲ್ಲಿ ಯುವತಿ ಅಪರಾಧಿಗಳ ಹೆಸರನ್ನು ಹೇಳಿರುತ್ತಾಳೆ, ನಾಲ್ವರ ಬಂಧನವೂ ಆಗಿರುತ್ತದೆ. ಮಾಧ್ಯಮಗಳಲ್ಲಿ ವರದಿ ಬರತೊಡಗುತ್ತದೆ. ಇದೇನು ಕೈಮೀರಿ ಹೋಗುತ್ತಿದೆ ಎಂದನಿಸಿದಾಗ ಹೆತ್ತವರಿಗೆ ಮನವರಿಕೆ ಮಾಡಿ ಸ್ಥಳೀಯ ಆಸ್ಪತ್ರೆಯಲ್ಲಿದ್ದ ಆಕೆಯನ್ನು ದಿಡೀರನೆ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸುತ್ತಾರೆ. ಹೋಗುವ ಮೊದಲು ಆಕೆ ತಾಯಿಯ ಜೊತೆ, ಹುಷಾರಾಗಿ ಬರ್ತೇನೆ ಎಂದು ಹೇಳಿ ಹೋಗಿದ್ದಳಂತೆ.

ಹದಿನಾಲ್ಕು ದಿನ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದ ಯುವತಿ ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆ ಸೇರಿದ ಹದಿನೈದು ಗಂಟೆಗಳಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆಯುತ್ತಾಳೆ. ತಕ್ಷಣ ಹತ್ರಾಸ್ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಧಾವಿಸುತ್ತಾರೆ. ಹೆತ್ತವರಿಗೆ ಸಾವಿನ ಸುದ್ದಿ ತಿಳಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅದರ ನಂತರ ಹೆತ್ತವರನ್ನು ದೂರ ಇಟ್ಟು ಯುವತಿಯ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಗಮನಿಸಬೇಕಾದ ಸಂಗತಿ ಎಂದರೆ ಇಲ್ಲಿಯ ವರೆಗೆ ಪೊಲೀಸರು ಹೆತ್ತವರಿಗೆ ಯುವತಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿಲ್ಲ. ಇಷ್ಟೆಲ್ಲ ತಂತ್ರ-ಕುತಂತ್ರಗಳನ್ನು ನಡೆಸಿದವರು ತ ಮರಣೋತ್ತರ ಪರೀಕ್ಷೆಯಲ್ಲಿಯೂ ಕೈಯಾಡಿಸಿರುವ ಸಾಧ್ಯತೆಗಳು ಖಂಡಿತ ಇದೆ. ಸಂಶಯಗೊಂಡು ಹೆತ್ತವರು ಮರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಬಾರದೆಂದೇ ಅವಸರದಲ್ಲಿ ಅಂತ್ಯಕ್ರಿಯೆ ನಡೆಸಿ ಅಳಿದುಳಿದ ಸಾಕ್ಷ್ಯಗಳನ್ನು ನಾಶ ಮಾಡಲಾಗಿದೆ.

ಸಾಮಾನ್ಯವಾಗಿ ಮೆಡಿಕೋ-ಲೀಗಲ್ ಪ್ರಕರಣಗಳಲ್ಲಿ ಮೃತದೇಹದ ಅಂತ್ಯಕ್ರಿಯೆಯನ್ನು ಹೇಗೆ ಮಾಡಬೇಕೆಂಬುದನ್ನು ಹೆತ್ತವರು/ಪೋಷಕರು ನಿರ್ಧರಿಸಬೇಕು. ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಗೆ ಮೊದಲು ಪೊಲೀಸರು ಒಂದಷ್ಟು ಕಾಗದಪತ್ರಗಳಿಗೆ ಯುವತಿಯ ತಂದೆಯ ಸಹಿಹಾಕಿಸಿದ್ದಾರೆ.

ಅನಕ್ಷರಸ್ಥ ತಂದೆ ಹೇಳಿಕೆಯನ್ನು ಖಂಡಿತ ಓದಿರುವುದಿಲ್ಲ, ಪೊಲೀಸರು ಓದಿ ಹೇಳಿದ್ದನ್ನು ಒಪ್ಪಿಕೊಂಡಿರಬಹುದು. ಅದರಲ್ಲಿ ಮಗಳ ಮೃತದೇಹವನ್ನು ಸುಡಲು ಒಪ್ಪಿಗೆ ನೀಡಿದ್ದ ಪತ್ರಕ್ಕೂ ಅವರು ಸಹಿಹಾಕಿರಬಹುದು. ಅದನ್ನೇ ಪೊಲೀಸರು ಈಗ ‘’ ತಂದೆಯ ಒಪ್ಪಿಗೆಯ ಮೇಲೆಯೇ ಮೃತದೇಹದ ಅಂತ್ಯಕ್ರಿಯೆ ನಡೆಸಲಾಗಿದೆ’ ಎಂದು ಹೇಳುತ್ತಿರುವುದು.

ಈಗಾಗಲೇ ಪೊಲೀಸರ ಹೇಳಿಕೆಗಳ ಧಾಟಿ ಬದಲಾಗಿದೆ. ಮೊದಲನೆಯದಾಗಿ ಯುವತಿಯ ಮೇಲೆ ರೇಪ್ ನಡೆದಿಲ್ಲ, ರೇಪ್ ಗೆ ಪ್ರಯತ್ನಿಸಲಾಗಿದೆ ಎಂದು ಹೇಳತೊಡಗಿದ್ದಾರೆ, ಇದರ ಜೊತೆಗೆ ಯುವತಿಯ ನಾಲಗೆ ಕತ್ತರಿಸಲಾಗಿಲ್ಲ ಎಂದೂ ಹೇಳತೊಡಗಿದ್ದಾರೆ. ಪೊಲೀಸರು ನಾಳೆ ಅಧಿಕೃತವಾಗಿ ಈ ಹೇಳಿಕೆ ನೀಡಿದರೆ ಇದು ಸುಳ್ಳೆಂದು ಸಾಬೀತುಪಡಿಸುವುದು ಹೇಗೆ? ಮೃತದೇಹ ಸುಟ್ಟು ಬೂದಿಯಾಗಿದೆ.

ಇದನ್ನೇ “ ಪೊಲೀಸರಿಂದ ಕಾನೂನಿನ ಅತ್ಯಾಚಾರ” ಎಂದು ಹೇಳಲಾಗುತ್ತಿದೆ.ಯುಪಿ ಪೊಲೀಸರು ಈ ಕಲೆಯಲ್ಲಿ ವರ್ಷದಿಂದ ಪಳಗಿ ಬಿಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version