ಬಹಿರಂಗ
ಮನುವಾದ ಮತ್ತು ಸಂವಿಧಾನ : ಹೆಣ್ಣಿನ ಅಸ್ಮಿತೆಯ ಪ್ರಶ್ನೆ
- ಮಂಜುಳಾ.ಟಿ, ಉಪನ್ಯಾಸಕರು, ದಾವಣಗೆರೆ
ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣಿಗೆ ನೀಡಿರುವ ಗೌರವ ಹಾಗೂ ಉನ್ನತ ಸ್ಥಾನವನ್ನು ಜಗತ್ತಿನ ಯಾವುದೇ ಸಂಸ್ಕøತಿಯಲ್ಲಿ ನೀಡಿರಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ಹೆಣ್ಣನ್ನು ಭೂಮಿ, ಲಕ್ಷ್ಮೀ, ಸರಸ್ವತಿ, ನದಿ, ಪ್ರಕೃತಿಯ ಪ್ರತಿರೂಪವಾಗಿ ಆರಾಧಿಸಲಾಗಿದೆ. ಹಾಗೆಯೇ ‘ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ಸಕಲ ದೇವಾನುದೇವತೆಗಳು ನೆಲೆಸಿರುತ್ತಾರೆ’ ಎಂಬ ವಾಕ್ಯವನ್ನು ಪರಿಪಾಲಿಸಿಕೊಂಡು ಬರಲಾಗಿದೆ.
ಇಷ್ಟೊಂದು ಉನ್ನತವಾದ ಸ್ಥಾನಮಾನವನ್ನು ನೀಡಿರುವ ಭಾರತೀಯ ಸಂಸ್ಕøತಿಯಲ್ಲಿಯೇ ಹೆಣ್ಣನ್ನು ಧಾರ್ಮಿಕ ಚೌಕಟ್ಟಿನ ಅಡಿಯಲ್ಲಿ ನಿರಂತವಾಗಿ ಬಂಧಿಸಲಾಗಿದೆ. ಹೆಣ್ಣಿಗೆ ಇರಬೇಕಾದ ಪ್ರಕೃತಿ ಸಹಜವಾಗಿ ಲಭಿಸಬೇಕಾಗ ಸಮಾನ ಅವಕಾಶಗಳನ್ನು ವಂಚಿಸಲಾಗಿದೆ. ಹೆಣ್ಣನ್ನು ಲಿಂಗತಾರತಮ್ಯದ ನೆಲೆಯಲ್ಲಿ ಅವಕಾಶ ವಂಚಿತಳನ್ನಾಗಿಸಲು ‘ಮನು’ ಎಂಬ ಹಿಂದುತ್ವದ ಪ್ರತಿಪಾದಕ ಹಗಲಿರುಳು ಶ್ರಮಿಸಿರುವುದಕ್ಕೆ ‘ಮನುಧರ್ಮಶಾಸ್ತ್ರ’ವು ಜೀವಂತ ಸಾಕ್ಷಿಯಾಗಿ ಕಂಡುಬರುತ್ತದೆ.
ಮನುವಾದವು ಭಾರತೀಯ ಸಂಸ್ಕøತಿಯಲ್ಲಿ ಹೆಣ್ಣನ್ನು ಧಾರ್ಮಿಕ ಕಟ್ಟುಪಾಡುಗಳ ಅಡಿಯಲ್ಲಿ ಬಂಧಿಸುವುದಕ್ಕೆ ಒಂದು ಪ್ರಬಲ ಅಸ್ತ್ರವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಹೆಣ್ಣನ್ನು ಅಧಿಕಾರ ಹಾಗೂ ಹಕ್ಕುಗಳಿಂದ ವಂಚಿಸುವುದಕ್ಕೆ ರೂಪಿಸಿದಂತಹ ಶ್ಲೋಕದ ಮಾದರಿಯೊಂದು ಹೀಗಿದೆ;
ಅಸ್ವತಂತ್ರಾಃ ಸ್ತ್ರಿಯಃ ಕಾರ್ಯಾಃ ಪುರಸೈಃ ಸೈರ್ದಿವಾನಿಶಂ|
ವಿಷಯೇಷು ಚ ಸಜ್ಜಂತ್ಯಃ ಸಂಸ್ಥಾಪ್ಯಾ ಆತ್ಮನೋ ವಶೇ|| (ಮನುಸ್ಮøತಿ ಶ್ಲೋಕ-9.2)
ಮನುವಿನ ಈ ಧಾರ್ಮಿಕ ಶ್ಲೋಕದ ಆಶಯವೆಂದರೆ, “ಅಸ್ವತಂತ್ರ್ಯ ಅಂದರೆ ಸ್ವಾತಂತ್ರ್ಯವಿಲ್ಲದಿರುವುದೆ ಹೆಣ್ಣಿನ ಕಾರ್ಯಪ್ರವೃತ್ತಿಯಾಗಿದ್ದು, ಆಕೆ ಸ್ವಾತಂತ್ರ್ಯವನ್ನು ಬಯಸಬಾರದು. ಪುರುಷ ವಂಶವನ್ನು ಮುಂದುವರೆಸುವ ಕಾರ್ಯವು ಹೆಣ್ಣಿನ ಜವಬ್ದಾರಿಯಾಗಿದೆ. ಹೆಣ್ಣು ಈ ಹೊರೆಯನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಗಂಡಿನ ವಶದಲ್ಲಿಯೇ ಇರಬೇಕು” ಎಂಬುದನ್ನು ಇದು ಪ್ರತಿಪಾದಿಸುತ್ತದೆ.
ಇಲ್ಲಿ ರಾಜಕೀಯ ಅಧಿಕಾರ, ಉದ್ಯೋಗ, ಧನಾರ್ಜನೆಗಳಿಗಿಂತ ಪುರುಷ ಸಂತತಿಯ ಪಾಲನೆ ಮತ್ತು ಪೋಷಣೆ ಹೆಣ್ಣಿನ ಕರ್ತವ್ಯವೆಂದು ಆರೋಪಿಸಲಾಗಿದೆ. ಹೆಣ್ಣು ಸ್ವಾತಂತ್ರ್ಯ ಪಡೆದು ಸಾಧನೆ ಮಾರ್ಗವನ್ನು ತುಳಿದರೆ ಪುರುಷನಿಗೆ ಯಾವುದೇ ಅಸ್ತಿತ್ವವಿರುವುದಿಲ್ಲ. “ಗಾಳಿಗೆ ಹಾರಿಹೋಗುವ ಬೀಜ ಒಂದು ಹೆಮ್ಮರವಾಗಿ ಬೆಳೆದು ನೂರಾರು ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತದೆ. ಹೆಣ್ಣು ಅಂತಹ ಶಕ್ತಿಯೊಂದಿಗೆ ತನ್ನನ್ನು ಆರೋಪಿಸಿಕೊಂಡು ಹೆಮ್ಮರವಾಗಿ ಬೆಳೆಯುವ ಸಂಕಲ್ಪ ಮಾಡುವುದು ಪುರುಷನ ಉದ್ದೇಶಿತ ಗುರಿ ಸಾಧನೆಗೆ ಆತಂಕಕಾರಿ”.
ಜೀವನದಂತೆ ಸದಾ ಚಲನೆಯನ್ನು ಒಮ್ಮುಖವಾಗಿ ಮಾಡಿಕೊಂಡಿರುವ ಹಾಗೂ ತನ್ನ ಹರಿವಿನ ಪಾತ್ರದುದ್ದಕ್ಕೂ ಸಾವಿರಾರು ಜೀವರಾಶಿಗೆ ಜೀವನದ ಉಸಿರಾಗಿರುವ ಜೀವಂತ ನದಿ ಹೆಣ್ಣಿನ ಅದಮ್ಯ ಅಂತಸ್ಥ ಶಕ್ತಿಯನ್ನು ಚಿಗುರಿಸಿಬಿಟ್ಟರೆ ಪುರುಷನ ಅಧೀನದಲ್ಲಿ ಉಳಿಯುವುದು ಸಾಧ್ಯವಿಲ್ಲ. ಬೆಟ್ಟ, ಗುಡ್ಡ, ಪರ್ವತಗಳ ಅಚಲ ಮತ್ತು ಗಟ್ಟಿತನದ ಮನಸ್ಸಿನವಳಾಗಿ ಹೆಣ್ಣು ರೂಪ ತಳೆದುಬಿಟ್ಟರೆ ಗಂಡಸ್ಸಿನ ಪ್ರಾಬಲ್ಯ ಉಳಿಯುವುದಿಲ್ಲ.
ತನ್ನ ವಂಶ ಪರಂಪರೆಯ ಸ್ಥಾಪನೆ ಹಾಗೂ ಈ ಮೂಲಕ ತಾನು ಸಾಧಿಸಬೇಕಿರುವ ಪುರುಷಾರ್ಥ ಸಾಧನೆಗೆ ಬಲಿಷ್ಠನಾದ ಶ್ರಮ ಸಂಸ್ಕøತಿಯಲ್ಲಿ ಹುಟ್ಟಿದವನ ಶಕ್ತಿ ನಿಜವಾಗಿಯೂ ತೊಡರುಗಾಲಾಗಿ ಮಣಿಸಲಾಗದಂಥ ಸವಾಲಾಗಿತ್ತು. ಮನುವಿಗೆ ಇಂಥವರ ಹೆಸರು ಪಡೆದ ತನ್ನ ವೈರಿ ಪಡೆಯಂತೆಯೇ ಹೆಣ್ಣು ಬಲಿಷ್ಠಳಾಗಿ ತನ್ನ ಮನಸ್ಸನ್ನು ಬೆಳೆಸಿಕೊಂಡ ಪಕ್ಷದಲ್ಲಿ ಪುರುಷನು ತನ್ನ ಉದ್ದೇಶ ಸಾಧಿಸಲಾಗುವುದಿಲ್ಲ.” (ಅನಸೂಯ. ಎಂ. ಕದಂ, ಮಹಿಳಾ ಶೋಷಣೆಯ ನೆಲೆಗಳು, ಪು-110, 111) ಆದ್ದರಿಂದ ಹೆಣ್ಣು ಯಾವಾಗಲೂ ಪುರುಷನ ಅಧೀನದಲ್ಲಿಯೇ ಬಾಳಬೇಕು ಎಂಬುದು ಮನುವಿನ ನಿಲುವಾಗಿದೆ. ಆದ ಕಾರಣ ಹೆಣ್ಣನ್ನು ಬಂಧಿಸುವ ಅವೈಜ್ಞಾನಿಕ ಕಟ್ಟುಪಾಡುಗಳನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಪ್ರತಿಪಾದಿಸಿದ ಕೀರ್ತಿ ಮನುವಿಗೆ ಸಲ್ಲುತ್ತದೆ.
ಸಾವಿರಾರು ವರ್ಷಗಳಿಂದ ಮನುವಿನ ‘ಧರ್ಮಶಾಸ್ತ್ರ’ವು ಹೆಣ್ಣಿನ ಸ್ವಾಭಿಮಾನದ ಬದುಕನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು. ಈ ಧರ್ಮಶಾಸ್ತ್ರದ ಚೌಕಟ್ಟುಗಳನ್ನು ಮೀರಿದವರನ್ನು ರಾಕ್ಷಸಿ, ವೇಶ್ಯೆ ಎಂಬಿತ್ಯಾದಿಯಾದ ಪಟ್ಟಗಳನ್ನು ಕಟ್ಟುವ ಮೂಲಕ ಮನುವಾದವನ್ನು ಕಾಪಾಡಿಕೊಂಡು ಬರಲಾಯಿತು. ಆದರೆ ಭಾರತಕ್ಕೆ ಬಂದ ಬ್ರಿಟಿಷರಿಂದಾಗಿ ಮನುವಿನ ಧರ್ಮಶಾಸ್ತ್ರದ ಕಟ್ಟುಪಾಡುಗಳಿಗೆ ಧಕ್ಕೆ ಉಂಟಾಯಿತು. ಭಾರತದ ಮೇಲೆ ರಾಜಕೀಯ ಹಿಡಿತ ಸಾಧಿಸಲು ಮುಂದಾದ ಬ್ರಿಟಿಷರಿಗೆ ಇಲ್ಲಿನ ಸಾಂಸ್ಕøತಿಕ ಆಯಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು.
ಇಂತಹ ಸಂದರ್ಭದಲ್ಲಿ ಹೆಣ್ಣನ್ನು ‘ಕೀಳಾಗಿ’ ನಡೆಸಿಕೊಳ್ಳುತ್ತಿರುವ ಅಂಶಗಳ ಬದಲಾವಣೆಗಾಗಿ ಶ್ರಮಿಸಿದರು. ಇದರ ಫಲವಾಗಿಯೇ ಹೆಣ್ಣಿಗೆ ಶಿಕ್ಷಣ ನೀಡುವಂತಹ ಮಹತ್ವದ ಯೋಜನೆಗೆ ಮುಂದಾದರು. ಹಾಗೆಯೇ ಸತಿ ಪದ್ಧತಿ, ವಿಧವಾ ಪದ್ಧತಿಯಂತ ಅಮಾನವೀಯ ಸಂಪ್ರದಾಯಗಳನ್ನು ತೀವ್ರವಾಗಿ ವಿರೋಧಿಸಿದರು. ಇದರ ಫಲವಾಗಿ ಹೆಣ್ಣಿಗೆ ಒಂದಿಷ್ಟು ಮುಕ್ತವಾದ ಅವಕಾಶಗಳು ಲಭಿಸಿದವು. “ಸ್ವಾತಂತ್ರ್ಯಪೂರ್ವ ಕಾಲಘಟ್ಟದಲ್ಲಿ ಮಹಿಳೆಯರ ಪರವಾಗಿ ರೂಪುಗೊಳ್ಳುತ್ತಿದ್ದ ಈ ತಾತ್ವಿಕತೆಗಳು ಭಾರತೀಯ ಸಮಾಜ ಮತ್ತು ಸಂಸ್ಕøತಿಯಲ್ಲಿ ಅಪಾರವಾದ ಬದಲಾವಣೆಯನ್ನು ಉಂಟುಮಾಡಿದವು ಎನ್ನುವುದು ನಿಜ.
ಮಹಿಳೆಯರು ಶಿಕ್ಷಣ ಪಡೆಯಲಾರಂಭಿಸಿದರು, ಬರೆಯಲಾರಂಭಿಸಿದರು, ಕನ್ನಡದಲ್ಲಿ ತಿರುಮಲಾಂಬ ಅವರಂಥವರು ಪತ್ರಿಕೆಗಳನ್ನು ಪ್ರಾರಂಭಿಸಿ, ಮಹಿಳೆಯರ ಪರ ದನಿ ಎತ್ತಲಾರಂಭಿಸಿದರು. ಮುಖ್ಯವಾಹಿನಿಯತ್ತ ಮಹಿಳೆಯರು ಹೀಗೆ ಚಲಿಸುತ್ತಿರುವ ಸಂದರ್ಭದಲ್ಲಿಯೇ, ಈ ಹಾದಿಯಲ್ಲಿಯೇ ಅವರಿಗೆ ಎರಡನ್ನುಂಟು ಮಾಡುವಂಥ ಏರು ತಗ್ಗುಗಳಿದ್ದವು ಎನ್ನುವುದು ನಿಧಾನವಾಗಿ ಅವರ ಅರಿವಿಗೆ ಬರ ತೊಡಗಿತು.” (ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ (ಸಂ), ಎಚ್.ಡಿ.ಪ್ರಶಾಂತ್, ಪು-2) ಹೀಗೆ ಪ್ರಾರಂಭವಾದ ಮಹಿಳೆಯರ ಅಸ್ತಿತ್ವದ ಪಯಣವು ಮುಂದೆ ಸ್ವಾಭಿಮಾನದೆಡೆಗೆ ಸಾಗಿತು.
ಮಹಿಳೆಯರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ತಮ್ಮ ಬದುಕಿನ ಬದಲಾವಣೆಗಾಗಿ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಸಾಂಪ್ರದಾಯಿಕ ಬದುಕಿನ ಮೌಲ್ಯಗಳು ಹಾಗೂ ಆಧುನಿಕತೆಯ ನಡುವೆ ಸಮತೋಲವನ್ನು ಕಾಯ್ದುಕೊಳ್ಳುವ ಮೂಲಕ ವಿಕಾಸದೆಡೆಗೆ ಸಾಗಬೇಕಾದ ಜವಬ್ದಾರಿಯು ಮಹಿಳೆಯರ ಮೇಲಿತ್ತು.
ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಮಹಿಳೆಯರಿಗಿಂತ ಸ್ವಾತಂತ್ರ್ಯೋತ್ತರ ಕಾಲದ ಮಹಿಳೆಯರ ಬದುಕಿನಲ್ಲಿ ಹೊಸ ಸಂಚಲನವೊಂದು ಮೂಡಿತು. “ಸ್ವಾತಂತ್ರ್ಯೋತ್ತರ ಕಾಲದಲ್ಲಿ ಮಹಿಳೆಯರಲ್ಲಿ ಭರವಸೆಯನ್ನು ಉಂಟುಮಾಡಿದ ಎರಡು ಮುಖ್ಯವಾದ ಬೆಳವಣಿಗೆಗಳನ್ನು ಗುರುತಿಸಬಹುದು. ಒಂದು- ಪ್ರಜಾಸತ್ತಾತ್ಮಕವಾದ ಆಡಳಿತ. ಇದು ಮಹಿಳೆಯರಿಗೆ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡುವುದರೊಂದಿಗೆ ಅದನ್ನು ಮೂಲಭೂತ ಹಕ್ಕನ್ನಾಗಿಸಿದ ಸಂವಿಧಾನವನ್ನೂ ಕಟ್ಟಿತು.
ಎರಡನೆಯದಾಗಿ, ಸಂವಿಧಾನದಲ್ಲಿ ಮಂಡಿಸಲಾದ ‘ಯೂನಿಫಾರಂ ಸಿವಿಲ್ ಕೋಡ್’ ಹಲವರ ಗಮನವನ್ನು ಸೆಳೆದರೂ, ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಅದನ್ನು ಅರಗಿಸಿಕೊಳ್ಳಲು ಆಗಲಿಲ್ಲ; ಆದ್ದರಿಂದ ಅದರ ಚರ್ಚೆಗಳು ಮುಂದಕ್ಕೆ ಹಾಕಲ್ಪಟ್ಟವು.” (ಮಹಿಳಾ ಸಬಲೀಕರಣವೆಂಬುದೇ ರಾಜಕಾರಣ (ಸಂ), ಎಚ್.ಡಿ.ಪ್ರಶಾಂತ್, ಪು-3) ಮಹಿಳೆಯರ ಪರವಾದ ಇಂತಹ ಮಾನವೀಯ ಅಂಶಗಳನ್ನು ಸಹಿಸಿಕೊಳ್ಳುವುದು ಸನಾತನವಾದಿ ಮನಸ್ಸುಗಳಿಗೆ ಕಷ್ಟವಾಗಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಮಹಿಳೆಯರ ಪ್ರಗತಿಯಿಂದ ಮಾತ್ರ ದೇಶದ ಅಭಿವೃದ್ದಿಯಾಗಲು ಸಾಧ್ಯ ಎಂದು ನಂಬಿದವರು. ಜಗತ್ತಿನ ಯಾವ ದೇಶ ಹೆಣ್ಣನ್ನು ನಿಕೃಷ್ಟವಾಗಿ ನಡೆಸಿಕೊಂಡಿದೆಯೋ ಆ ರಾಷ್ಟ್ರವು ಪ್ರಗತಿಯಲ್ಲಿ ಹಿನ್ನಡೆಯನ್ನು ಕಂಡುಕೊಂಡಿದೆ ಎಂಬುದಾಗಿ ಅರಿತವರು. ಈ ಕಾರಣಕ್ಕಾಗಿಯೇ ಅವರು ಮಹಿಳೆಯರನ್ನು ಸಮಾನವಾಗಿ ಕಾಣುವಂತಹ ‘ಹಿಂದೂ ಕೋಡ್‍ಬಿಲ್’ ಎನ್ನುವಂತಹ ಹೊಸ ಮಸೂದೆಯನ್ನು ಮಂಡಿಸಿದಾಗ ಸಾಕಷ್ಟು ವಿರೋಧಗಳು ಕೇಳಿಬಂದವು. ‘ಯೂನಿಫಾರಂ ಸಿವಿಲ್ ಕೋಡ್’ ಅನ್ನು ಸಂವಿಧಾನ ಸಭೆಯಲ್ಲಿ ಮಂಡಿಸಿದಾಗ ಅದು ಎಷ್ಟು ತೀವ್ರವಾದ ವಿರೋಧವನ್ನು ಪಡೆದುಕೊಂಡಿತೆಂದರೆ, ಸಭೆಯಲ್ಲಿದ್ದ ಮಹಿಳೆಯರು ಕೂಡ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಶತಮಾನಗಳ ಕಾಲ ದಾಸ್ಯದಿಂದ ಬಳಲುತ್ತಿದ್ದ ಬ್ರಾಹ್ಮಣ ವರ್ಗದಿಂದ ಅಸ್ಪøಶ್ಯ ಸಮುದಾಯದವರೆಗಿನ ಎಲ್ಲ ಹೆಣ್ಣಿಗೂ ಸ್ವಾಭಿಮಾನ ಮತ್ತು ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟಿದ್ದು ಸಂವಿಧಾನ. ಭಾರತೀಯ ಸ್ತ್ರೀ ಕುಲವೇ ಸಂವಿಧಾನಕ್ಕೆ ಮತ್ತು ಸಂವಿಧಾನದ ನಿರ್ಮಾತೃವಿಗೆ ಋಣಿಗಳಾಗಿರಬೇಕು. “ಸ್ವಾತಂತ್ರ್ಯಾನಂತರವೂ ಮಹಿಳೆಯರು ಘನತೆ ಮತ್ತು ಸ್ವಾತಂತ್ರ್ಯದಿಂದ ಬದುಕಲು ದಿನನಿತ್ಯ ಹೋರಾಡಬೇಕಾಗಿದೆ. ದೈಹಿಕವಾಗಿ, ಮಾನಸಿಕವಾಗಿ ಎಲ್ಲ ಹಂತಗಳಲ್ಲೂ ಸೆಣಸಬೇಕಾಗಿದೆ.
ನಮ್ಮ ಸಂವಿಧಾನದ ಪೀಠಿಕಾ ಭಾಗದಲ್ಲಿ, ರಾಜ್ಯ ನಿರ್ದೇಶಕ ತತ್ವಗಳಲ್ಲಿ, ಮೂಲಭೂತ ಹಕ್ಕುಗಳಲ್ಲಿ ಮತ್ತು ಕಾನೂನಾತ್ಮಕವಾಗಿ ನೀಡಲ್ಪಟ್ಟ ಅವಕಾಶಗಳಲ್ಲಿ ಭಾರತೀಯ ಮಹಿಳೆಯರು ಎದುರಿಸುವ ತಾರತಮ್ಯ, ಅವಕಾಶಹೀನತೆಗೆ ಪರಿಹಾರಗಳಿವೆ. ಅದು ಮಹಿಳೆಯರನ್ನುಸಶಕ್ತೀಕರಣಗೊಳಿಸುವುದಲ್ಲದೆ, ಅವಶ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವನ್ನೂ ನೀಡಿದೆ.” (ಸಂವಿಧಾನ ಮತ್ತು ಮಹಿಳೆ, ಎಚ್.ಎಸ್.ಅನುಪಮಾ, ಪು-50) ಆ ಮೂಲಕ ದಾಸ್ಯಕ್ಕೆ ಒಳಗಾದ ಪುರುಷ ಪ್ರಧಾನ ಸಮಾಜದಲ್ಲಿ ಸ್ವಾಭಿಮಾನದ ವೇದಿಕೆಯನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ.
ಭಾರತೀಯ ಸಂವಿಧಾನದಲ್ಲಿ ಮಹಿಳೆಯ ಅಸ್ತಿತ್ವ ಹಾಗೂ ಸಬಲೀಕರಣಕ್ಕಾಗಿಯೇ ರೂಪಿತವಾಗಿರುವ ಸಂವಿಧಾನಾತ್ಮಕ ಹಕ್ಕುಗಳು ಈ ಮುಂದಿನಂತಿವೆ.
- ಅನುಚ್ಚೇದ-14, ಇದು ಭಾರತೀಯ ಪ್ರಜೆಗಳೆಲ್ಲರೂ ಸಮಾನರು ಎಂಬುದನ್ನು ಎತ್ತಿಹಿಡಿದಿದೆ.
- ಅನುಚ್ಚೇದ-15, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಸ್ಥಳಗಳಿಗೆ ಮುಕ್ತವಾದ ಅವಕಾಶ ನೀಡಿದೆ. ಆದರೆ ಇಂದಿಗೂ ಧಾರ್ಮಿಕತೆಯ ನೆಪದಲ್ಲಿ ಕೆಲವೊಂದು ಪ್ರದೇಶಗಳಿಗೆ ಅವಕಾಶವನ್ನು ನಿರಾಕರಿಸಲಾಗಿದೆ.
- ಅನುಚ್ಚೇದ-16(2), ಇದು ಲಿಂಗದ ಕಾರಣಕ್ಕಾಗಿ ಯಾರಿಗೂ ಉದ್ಯೋಗ ನಿರಾಕರಣೆ, ಉದ್ಯೋಗದಲ್ಲಿ ತಾರತಮ್ಯ ಮಾಡುವಂತಿಲ್ಲ ಎಂಬುದಾಗಿ ಪ್ರತಿಪಾದಿಸುತ್ತದೆ.ಆದರೆ ಈ ಲಿಂಗ ತಾರತಮ್ಯದ ಬೇರುಗಳನ್ನು ಇಂದಿಗೂ ಕೀಳಲು ಸಾಧ್ಯವಾಗುತ್ತಿಲ್ಲ. ಈ ತಾರತಮ್ಯದ ಫಲವಾಗಿ ಇಂದಿಗೂ ಹೆಣ್ಣುಶಿಶುಗಳು ಹತ್ಯೆ ನಿರಂತರವಾಗಿ ನಡೆಯುತ್ತಿದೆ.
- ಅನುಚ್ಚೇದ-19, ಇದು ಸ್ವಾತಂತ್ರ್ಯದ ಹಕ್ಕುಗಳನ್ನು ಕಲ್ಪಿಸಿಕೊಟ್ಟಿದೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ, ಓಡಾಡುವ ಸ್ವಾತಂತ್ರ್ಯ, ವ್ಯಾಪಾರ, ವೃತ್ತಿ ನಡೆಸುವ ಸ್ವಾತಂತ್ರ್ಯವನ್ನು ಎಲ್ಲರಿಗೂ ಮುಕ್ತವಾಗಿ ಕಲ್ಪಿಸಲಾಗಿದೆ. ಆದರೆ ಭಾರತೀಯ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಹೆಣ್ಣು ಎಂಬ ಕಾರಣಕ್ಕಾಗಿ ಈ ಎಲ್ಲಾ ಸ್ವಾತಂತ್ರ್ಯಗಳನ್ನು ಇಂದಿಗೂ ಹತ್ತಿಕ್ಕುವಂತಹ ಸಂದರ್ಭಗಳು ನಮ್ಮ ಮುಂದಿವೆ.
- ಅನುಚ್ಚೇದ-21, ಇದು ಸ್ತ್ರೀ ಪುರುಷರೆಲ್ಲರಿಗೂ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬದುಕುವ ಸಮಾನ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.
- ಅನುಚ್ಚೇದ-32, ತನ್ನ ಹಕ್ಕಿಗೆ ಚ್ಯುತಿ ಬಂದರೆ ಸುಪ್ರಿಂಕೋರ್ಟಿಗೆ ಸಂವಿಧಾನಿಕ ಪರಿಹಾರಕ್ಕಾಗಿ ಮೊರೆ ಹೋಗುವ ಅವಕಾಶ ನೀಡಿದೆ.
- ಅನುಚ್ಚೇದ-39(ಎ.ಡಿ.ಇ), ಇವು ಸ್ತ್ರೀ ಪುರುಷರು ಸಮಾನವಾಗಿ ಬದುಕುವ ಅವಕಾಶ, ಸಮಾನ ಕೆಲಸಕ್ಕೆ ಸಮಾನ ವೇತನ, ಮಹಿಳಾ ಉದ್ಯೋಗಿಗಳ ಆರೋಗ್ಯ ಮತ್ತು ಸಾಮಥ್ರ್ಯ ಕುಂದುವಂತಹ ಅತಿಕೆಲಸ ಹಾಗೂ ಆರ್ಥಿಕ ಅವಶ್ಯಕತೆಯ ಕಾರಣವಾಗಿ ತಮ್ಮ ಸಾಮಥ್ರ್ಯಕ್ಕೆ ಹೊಂದದ ಉದ್ಯೋಗ ಮಾಡುವುದು ಅನಿವಾರ್ಯ ಆಗದಂತೆ ಪ್ರಭುತ್ವ ನೋಡಿಕೊಳ್ಳಬೇಕು ಎಂಬುದಾಗಿ ಪ್ರತಿಪಾದಿಸುತ್ತದೆ.
- ಅನುಚ್ಚೇದ-42, ಇದು ಮಹಿಳಾ ಉದ್ಯೋಗಿಗಳಿಗೆ ಬಾಣಂತಿ ಸವಲತ್ತು ಒದಗಿಸುವುದು, ಉದ್ಯೋಗ ಸ್ಥಳದಲ್ಲಿ ನ್ಯಾಯಯುತ, ಮಾನವೀಯ ಪರಿಸರ ಇರುವಂತೆ ನೋಡಿಕೊಳ್ಳುವುದಾಗಿ ನಿಯಮ ರೂಪಿಸಿದೆ.
- ಅನುಚ್ಚೇದ-243, ಇದರ ಅಡಿಯಲ್ಲಿ ಮಹಿಳೆಯರ ರಾಜಕೀಯ ಮೀಸಲಾತಿಯನ್ನು ಕುರಿತಂತೆ ಕಾನೂನು ರೂಪಿಸಲಾಗಿದೆ. ಹಾಗೆಯೇ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಪೂರಕವಾದ ಹಲವಾರು ಕಾನೂನುಗಳು ಕೂಡ ಸಂವಿಧಾನಾತ್ಮಕವಾಗಿ ರೂಪಿಸಲ್ಪಟ್ಟಿವೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಮೂಡಿದ ಸಂವಿಧಾನದ ಅಡಿಯಲ್ಲಿ ಶತಮಾನಗಳ ಕಾಲ ಸ್ವಾಭಿಮಾನ ಮತ್ತು ಸ್ವಾತಂತ್ಯದಿಂದ ವಂಚಿತವಾಗಿದ್ದ ಸ್ತ್ರೀ ಸಮೂಹಕ್ಕೆ ವಿಮೋಚನೆ ಲಭಿಸಿತು. ಆದರೆ ಈ ಸಮಾನತೆಯನ್ನು ಸಹಿಸದ ಮನುವಾದಿ ಮನಸ್ಸುಗಳು ನಿರಂತರವಾಗಿ ಅಸಮಾನತೆಯನ್ನು ಎತ್ತಿಹಿಡಿಯುವ ಮನುವಾದವನ್ನು ಮತ್ತೇ ಪ್ರತಿಪಾದಿಸಲು ಹೆಣಗಾಡುತ್ತಿವೆ.
ಲಿಂಗ ತಾರತಮ್ಯದ ಪ್ರತೀಕವಾಗಿದ್ದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರವೇಶಕ್ಕೆ ಸುಪ್ರಿಂಕೋರ್ಟ್ ಮೊರೆ ಹೋಗಿ ನ್ಯಾಯ ಪಡೆದುಕೊಂಡಾಗಲೂ ಭಾರತೀಯ ಸನತನವಾದಿಗಳು ಸಂವಿಧಾನ ವಿರೋಧಿ ಚಟುವಟಿಕೆಗಳ ಮೂಲಕ ಲಿಂಗ ತಾರತಮ್ಯವನ್ನು ಮೆರೆಯುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ಮಾನವೀಯ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾರೆ.
ಶಬರಿಮಲೆಗೆ ಹೋಗಬಾರದೆಂದು ಯಾವ ಶಾಸ್ತ್ರ ವಿಧಿಸದಿದ್ದರೂ ಸನಾತವಾದಿಗಳು ದೇವಸ್ಥಾನದ ಬಾಗಿಲ ಬಳಿ ಮಾರಕಾಸ್ತ್ರಗಳನ್ನು ಹಿಡಿದು ತಮ್ಮ ಪುಂಡಾಟಿಕೆಯನ್ನು ಮೆರೆದಿದ್ದಾರೆ. ಸ್ವಾಭಿಮಾನದಿಂದ ಪೋಲಿಸರ ರಕ್ಷಣೆಯೊಂದಿಗೆ ದೇವಸ್ಥಾನ ಪ್ರವೇಶ ಮಾಡಿದ ಮಹಿಳೆಯರ ಮೇಲೆ ಹಲ್ಲೆ ಮತ್ತು ದೌರ್ಜನ್ಯಗಳನ್ನು ನಡೆಸಿದ್ದಾರೆ. ಸ್ವತಃ ಮಹಿಳೆಯರೇ ನಾವು ಹೋಗುವುದು ಬೇಡವೆಂದು ತಮ್ಮನ್ನು ತುಳಿಯುತ್ತಿರುವ ಮೌಢ್ಯತೆಯ ರಕ್ಷಕರಾಗಿ ನಿಂತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243