ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version