ಅಂತರಂಗ
ಮುಟ್ಟು ಮತ್ತು ಮಗು
ಜ್ಯೋತಿ ಹಿಟ್ನಾಳ್, ಮಂಜುಶ್ರೀ ಕಡಕೋಳ ಮೊದಲಾದವರು ಮುಟ್ಟಿನ ಬಗೆಗೆ ಜನರಲ್ಲಿ ಎಚ್ಚರ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಕೆಲಸಗಳಿಗೆ ಬೆಂಬಲವಾಗಿ ನನ್ನ ಬಾಲ್ಯದ ನೆನಪೊಂದನ್ನು ಹಂಚಿಕೊಳ್ಳುತ್ತಿದ್ದೇನೆ. ಇದು ನನ್ನ ಬರಲಿರುವ ಆತ್ಮ ಚರಿತ್ರೆಯ ಆರಂಭಿಕ ಭಾಗವೂ ಹೌದು.
ಪಶ್ಚಿಮ ಘಟ್ಟಗಳ ಭಾಗವಾದ ಬಂಟಮಲೆಯೊಳಗೆ ಜುಳು ಜುಳನೆ ಹರಿಯುವ ಒಂದು ಕಿರು ತೊರೆಯಿದೆ. ಎಲ್ಲೋ ಕಿರಿದಾಗಿ ಹುಟ್ಟಿ, ನನ್ನ ಮನೆಯಿದ್ದ ವಾಟೆಕಜೆಯ ಬಳಿ ಸ್ವಲ್ಪ ದೊಡ್ಡದಾಗಿ ಹರಿದು, ಪಂಜ ಪೇಟೆಯ ಬಳಿ ಅದು ಪಂಜದ ಹೊಳೆಯೆಂಬ ಹೆಸರು ಪಡೆದು, ಕುಮಾರಧಾರಾ ನದಿಯನ್ನು ಸೇರಿದಲ್ಲಿಗೆ ಈ ಕಿರುತೊರೆಯ ಕತೆ ಮುಗಿಯುತ್ತದೆ. ಅಥವಾ ನಮಗೆ ಗೊತ್ತಿದ್ದ ಕಥೆ ಅಷ್ಟೆ. ಈ ಕಿರುತೊರೆಯೊಂದಿಗೇ ನಡೆದರೆ ಕಡಲು ನೋಡಬಹುದೆಂಬ ಕಲ್ಪನೆ ನಮಗಿದ್ದರೂ ಅಂಥ ಸಾಹಸ ನಮ್ಮಿಂದಾದೀತೆಂಬ ವಿಶ್ವಾಸ ನಮಗ್ಯಾರಿಗೂ ಇರಲಿಲ್ಲ.
ತೊರೆಯ ನೀರಲ್ಲಿ ಮೂಲೆಯಿಂದ ಮೂಲೆಗೆ ವೇಗವಾಗಿ ಅಡ್ಡಾಡುವ ತೆಳ್ಳಗಿನ ಪುಟ್ಟ ಕೀಟವೊಂದನ್ನು ಹಿಡಿಯುವಲ್ಲಿಯೇ ವಿಫಲರಾಗುವ ನಾವು ಕಡಲು ಕಾಣುವುದುಂಟೇ? ಪಂಜದಲ್ಲಿ ಯಕ್ಷಗಾನವಿದ್ದರೆ ರಾತ್ರಿಯಾಗುತ್ತಲೇ ಓಡುತ್ತಾ ಓಡುತ್ತಾ ಕಾಡಿಳಿದು, ಕೂತ್ಕುಂಜದ ಬಳಿ ಅದೇ ಕಿರುತೊರೆಯನ್ನು ದಾಟಿ, ಮುಂದೆ ಹೋಗಬೇಕು. ಇಡೀ ರಾತ್ರಿ ಆಟ ನೋಡಿ ತೇಲುತ್ತಾ ತೇಲುತ್ತಾ ಕಾಲೆಳೆದುಕೊಂಡು ಹಿಂದೆ ಬರುವಾಗ ಮತ್ತೆ ಅದೇ ಕಿರುತೊರೆಯನ್ನು ದಾಟಬೇಕು. ಆದರೆ ಅದರ ತಣ್ಣನೆಯ ನೀರು ಕಾಲು ತಾಕುತ್ತಲೇ ನಿದ್ದೆಯಿಲ್ಲದ ಒಂದು ರಾತ್ರಿಯು ನೂರಾರು ನಿದ್ದೆಗಳಿಲ್ಲದ ರಾತ್ರಿಗಳಾಗಿ ಮಾರ್ಪಟ್ಟು, ನಯವಾದ ಬಂಡೆಯ ಹಾಸಿನ ಮೇಲೆ ಮಧ್ಯಾಹ್ನದವರೆಗೆ ನಿದ್ದೆ ಮಾಡಿಬಿಡುತ್ತಿದ್ದೆ.
ಹೀಗೆ ನನ್ನ ಬಾಲ್ಯದ ಒಡನಾಡಿಯಾಗಿದ್ದ ಕಿರುತೊರೆ ಮುಂದೆ ಶಾಲೆ ಸೇರಿದಾಗ ತೊಂದರೆ ನೀಡತೊಡಗಿತು. ಮಳೆಗಾಲದಲ್ಲಿ ಅದನ್ನು ದಾಟಿ ಶಾಲೆಗೆ ಹೋಗುವುದು ಅಸಾಧ್ಯ. ಬೇಸಗೆಯಲ್ಲಿ ತೆಳ್ಳಗೆ ಹರಿಯುತ್ತಿದ್ದ ಅದು ಮಳೆಗಾಲದಲ್ಲಿ ಆರ್ಭಟಿಸಿ ಧುಮ್ಮುಕ್ಕುತ್ತಿತ್ತು. ಬಂಟಮಲೆ, ಕರಿಮಲೆ, ವಾಟೆಕಜೆ, ಮೊದಲಾದೆಡೆಗಳಲ್ಲಿ ಬಿದ್ದ ಮಳೆನೀರು ಈ ಕಿರುತೊರೆಯನ್ನು ಸೇರಿದಾಗ ಅದರ ಮೈಯೆಲ್ಲಾ ಕೆಂಪು. ಬಂಡೆಗಳೆಡೆಯಿಂದ ಚಿಮ್ಮಿ, ರಭಸದಿಂದ ಮುಂದೆ ಸಾಗುವಾಗ ಎಲ್ಲಿಯ ಕಿರುತೊರೆ? ಎಲ್ಲಿಯ ಭಯಾನಕ ರುದ್ರ ನರ್ತನ?
ಮಳೆಗಾಲದಲ್ಲಿ ಶಾಲೆಗೆ ಹೋಗುವಾಗ ಈ ತೊರೆ ದಾಟಿಸಲು ಅಮ್ಮ ಬರುತ್ತಿದ್ದರು. ಅಮ್ಮನ ಕೈ ಹಿಡಿದು ಹೊಳೆದಾಟುವುದರಲ್ಲಿ ಏನೋ ಸುಖ. ನನ್ನ ಚೀಲ, ಬುತ್ತಿ ಪಾತ್ರ, ಮತ್ತು ಗೊರಬೆಯನ್ನು ಅಮ್ಮ ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ನನ್ನನ್ನು ಹಿಡಿದುಕೊಂಡು ಹೊಳೆದಾಟುವಾಗ, ಅಮ್ಮ ದಿನಾ ಹೇಳುತ್ತಿದ್ದ ಮಾತೆಂದರೆ, ‘ಕಾಲನ್ನು ನೆಲದಿಂದ ಬಿಡಬೇಡ’ ಅಂತ. ಆದರೆ ಚೋಟುದ್ದದ ನಾನು ಮುಳುಗಲು ಎಷ್ಟು ನೀರು ಬೇಕು? ನೀರು ಚಡ್ಡಿಯನ್ನು ಒದ್ದೆ ಮಾಡಿ, ಸೊಂಟದ ವರೆಗೆ ಏರುತ್ತಲೇ ನಾನು ನೆಲವನ್ನು ಬಿಟ್ಟು ಬಿಡುತ್ತಿದ್ದೆ. ಆಮೇಲೆ ಅರ್ಧ ದೇಹ ನೀರಲ್ಲಿ, ಅರ್ಧ ಅಮ್ಮನ ಕೈಯಲ್ಲಿ. ಆಚೆ ದಡ ತಲುತ್ತಲೇ ಅಮ್ಮನ ಬೈಗುಳಗಳಿಗೆ ತಯಾರಾಗಬೇಕಿತ್ತು. ಆದರೆ ಅಷ್ಟರಲ್ಲಿ ನೀರಲ್ಲಿ ತೇಲಿದ ಸುಖ ಸಿಕ್ಕಿದ್ದರಿಂದ ಬೈಗಳು ನಾಟುತ್ತಿರಲಿಲ್ಲ.
1961ನೇ ಇಸವಿಯ ಜುಲಾಯಿ ತಿಂಗಳ ಮಳೆಗಾಲದ ಒಂದು ದಿನ. ಶಾಲೆಗೆ ಹೊರಟಿದ್ದೆ. ನಾನು ಮುಂದೆ, ಅಮ್ಮ ಹಿಂದೆ. ಮಳೆಗಾಲದ ತೊರೆ ಸ್ವಲ್ಪ ಕೆಂಪಾಗಿ ಅಕರಾಳ ವಿಕರಾಳವಾಗಿ ಹರಿಯುತ್ತಿತ್ತು. ತೊರೆ ದಾಟಿಸಿದ ಮೇಲೆ ಅಮ್ಮ ಹಿಂದಿರುಗಿದರು. ಹೋಗುವಾಗ ‘ಸಾಯಂಕಾಲ ಜಾಗೃತೆ ಬಾ, ನಾನು ಇಲ್ಲಿಯೇ ಕಾದಿರುತ್ತೇನೆ, ಹೊಳೆದಾಟುವ ಸಾಹಸ ಮಾಡಬೇಡ’ ಎಂದು ಎಂದಿನಂತೆ ಕೂಗಿ ಹೇಳಿ ಕರಿಮಲೆಯ ಗರ್ಭದಲ್ಲಿ ಸರಕ್ಕನೇ ಮರೆಯಾದರು. ಸಾಯಂಕಾಲ ಮತ್ತೆ ಹಿಂದುರಿಗಿದೆ. ಪಿರಿ ಪಿರಿ ಮಳೆ ಬೀಳುತ್ತಿತ್ತು. ತೊರೆಯ ದಡ ಸೇರಿದಾಗ ನೀರು ತುಂಬಿ ಹರಿಯುತ್ತಿತ್ತು. ಅಮ್ಮ ಕಾಣಲಿಲ್ಲ. ಈಗ ಬಂದಾರು ಅಂತ ಯೋಚಿಸುತ್ತ ಹೊಳೆಯಲ್ಲಿ ಹರಿದು ಹೋಗುತ್ತಿರುವ ಕರಿಮಲೆಯ ಕಸ ಕಡ್ಡಿ, ಮರ, ಬಳ್ಳಿ, ತರಗೆಲೆಗಳನ್ನು ನೋಡುತ್ತಾ ಕಾಲ ಕಳೆದೆ.
ಕರಿಮಲೆಯಲ್ಲಿ ಬಹಳ ಬೇಗ ಕತ್ತಲಾಗುತ್ತದೆ, ಮಳೆ ಬಿದ್ದರಂತೂ ಇನ್ನೂ ಬೇಗ. ನೋಡು ನೋಡುತ್ತಿರುವಂತೆ ಕತ್ತಲಾಗತೊಡಗಿತು. ಯಾಕೋ ಅಮ್ಮ ಬರಲೇ ಇಲ್ಲ. ಮೆಲ್ಲನೇ ಬೀಳುತ್ತಿರುವ ಮಳೆಯ ಹನಿಯೊಂದಿಗೆ ಕಣ್ಣೀರು ನಿಧಾನವಾಗಿ ಸೇರಿಕೊಂಡಿತ್ತು. ಆದರೆ ಕರಿಮಲೆಯ ಕತ್ತಲೆಯ ಗರ್ಭದಲ್ಲಿ ಸುರಿಯುವ ಕಣ್ಣೀರು ಮತ್ತು ಅಳುವ ಧ್ವನಿಗೆ ಕಿವಿಗೊಡುವವರು ಯಾರೂ ಇರಲಿಲ್ಲ. ನನ್ನ ಪ್ರೀತಿಯ ಕಿರುತೊರೆಯೂ ಕಿವುಡಾಯಿತೇ?
ನಿಜಕ್ಕೂ ನಾನು ಕಂಗಾಲಾಗಿದ್ದೆ. ಹಿಂದೆ ಹೋಗಲು ಹಾದಿ ಕಾಣದು. ಮುಂದೆ ಹೋಗಲು ತೊರೆ ಬಿಡದು. ಮೆಲ್ಲನೆ ಅನತಿ ದೂರದಲ್ಲದ್ದ ಒಂದು ಹೆಮ್ಮರದ ಬಳಿಗೆ ಸರಿದೆ. ಅದರ ಬುಡದಲ್ಲಿ ಅಗಲವಾಗಿದ್ದ ಜಾಗವೊಂದರ ಪೊಟರೆಯತ್ತ ಜಾರಿಕೊಂಡೆ. ಎರಡು ಬೇರುಗಳ ನಡುವಿನ ವಿಶಾಲವಾದ ಜಾಗದಲ್ಲಿ ಗೊರಬೆಯನ್ನು ಮುಖಕ್ಕೆ ಮುಚ್ಚಿಕೊಂಡು ಮುದುರಿ ಕುಳಿತೆ. ತೊರೆಯ ಆರ್ಭಟ ಮತ್ತು ಮರದಿಂದ ಗೊರಬೆಯ ಮೇಲೆ ತೊಟ್ಟಿಕ್ಕುವ ಮಳೆಹನಿಗಳು ಉಂಟು ಮಾಡುವ ಸದ್ದು ಬಿಟ್ಟರೆ ಅಲ್ಲಿ ಮತ್ತೇನೂ ಇರಲಿಲ್ಲ.
ಬೆಳಗ್ಗೆ ಯಾರೋ ಅಲ್ಲಾಡಿಸಿದಾಗಲಷ್ಟೇ ಎಚ್ಚರ. ಕಣ್ಣು ಬಿಟ್ಟು ನೋಡಿದರೆ, ಬಾಚಿ ತಬ್ಬಿಕೊಂಡಿದ್ದ ಅಮ್ಮ.
ರಾತ್ರಿ ಕಾಣೆಯಾಗಿದ್ದ ಬೆಳಕು ಮರದೆಡೆಗಳಿಂದ ನೆಲಕ್ಕಿಳಿದು ಅಮ್ಮನ ಕಣ್ಣೀರನ್ನು ಕಿರುತೊರೆಗೆ ಜೋಡಿಸಿದಂತೆ ಭಾಸವಾಯಿತು. ಅಮ್ಮ ಮೆಲ್ಲನೆ ಕೈ ಹಿಡಿದೆಬ್ಬಿಸಿ, ತೊರೆ ದಾಟಿಸಿ ಮನೆ ಕಡೆ ನಡೆದರು. ಆಗ ಅಮ್ಮ ಮುಂದೆ, ನಾನು ಹಿಂದೆ. ಸರಕ್ಕನೆ ಅಮ್ಮನ ಸೆರಗು ಹಿಡಿದೆಳೆದು ನಿಲ್ಲಿಸಿ ಕೇಳಿದೆ-‘ನಿನ್ನೆ ರಾತ್ರಿ ಹಳ್ಳ ದಾಟಿಸಲು ಯಾಕೆ ಬರಲಿಲ್ಲ?. ಆಮ್ಮ ಹೇಳಿದರು-‘ ನಿನ್ನೆ ಸಾಯಂಕಾಲ ನನ್ನನ್ನು ಕಾಗೆ ಮುಟ್ಟಿತ್ತು. ಕಾಗೆ ಮುಟ್ಟುವಾಗ ಕಾಡಲ್ಲಿ ನಡೆದರೆ, ಕರಿಮಲೆಯ ಪಿಶಾಚಿಗಳೆಲ್ಲಾ ದೇಹದ ರಕ್ತವನ್ನೆಲ್ಲಾ ಹೀರಿ ಸಾಯಿಸಿಬಿಡುತ್ತವೆ. ಹಾಗೆ ಆಗಿ ಬಿಟ್ಟರೆ ನಿಂಗೆ ಅಮ್ಮ ಇಲ್ಲಾ …….’
ಈ ಘಟನೆ ನಡೆದು ಸುಮಾರು 59 ವರ್ಷಗಳು ಕಳೆದು ಹೋದುವು. ಈಗಲೂ ಊರಿಗೆ ಹೋದಾಗ, ಕಿರುತೊರೆಯ ಬಳಿಯಿರುವ ಮರವನ್ನೊಮ್ಮೆ ನೋಡುತ್ತೇನೆ. ಒಬ್ಬನೇ ಕಿರುತೊರೆಯನ್ನು ದಾಟುತ್ತೇನೆ. ನಾನೇ ಮಲಗಿದ ಬಂಡೆಯ ಮೇಲೆ ಅಮ್ಮ ಕುಳಿತಿರುವುದನ್ನು ಕಾಣುತ್ತೇನೆ. ಒಂದೆರಡು ತೊಟ್ಟು ಕಣ್ಣೀರು ಹೊಳೆನೀರಿನಲ್ಲಿ ಬಿದ್ದು ಯಾರಿಗೂ ಕಾಣದಂತೆ ಎಲ್ಲಿಯೋ ಮಾಯವಾಗುತ್ತದೆ.
–ಪುರುಷೋತ್ತಮ ಬಿಳಿಮಲೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243