ದಿನದ ಸುದ್ದಿ
ಭಾರತವು ವಿಶ್ವದ ಆತ್ಮಹತ್ಯೆಗಳ ರಾಜಧಾನಿಯಾಗಿ ಬಿಂಬಿತವಾಗುತ್ತಿದೆ : ಡಾ. ಮೋಹನ್ ಕಳವಳ
ಸುದ್ದಿದಿನ, ಮೈಸೂರು : ದಿ ಚೇಂಜ್ ಮೇಕರ್ಸ್ ಟಾಕ್ ಶೋ “ವೀ ದಿ ಸೊಸೈಟಿ” ವತಿಯಿಂದ, ಅಕ್ಟೋಬರ್ 10 ರಂದು, ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ನಗರದ ಹೋಟೆಲ್ ಕಲ್ಯಾಣಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯ ವಾಣಿಜ್ಯ ಹಾಗೂ ವ್ಯವಹಾರ ನಿರ್ವಹಣಾ ಶಾಸ್ತ್ರ ನಿಕಾಯದ ಡೀನ್ ಅವರಾದ ಪ್ರೊಫೆಸರ್ ಆನಂದ್ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೇರಳದ, ಕಾಸರಗೋಡಿನಲ್ಲಿರುವ ಕೇಂದ್ರ ವಿಶ್ವವಿದ್ಯಾನಿಲಯದ, ಸಮಾಜ ಕಾರ್ಯ ವಿಭಾಗದ ಡೀನ್ ಆಗಿರುವ ಡಾ. ಮೋಹನ್ ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನ ಹಾಗೂ ತಂತ್ರಜ್ಞಾನ ನಿಕಾಯದ ಡೀನ್ ಅವರಾದ ಡಾ. ಜಿ ವೆಂಕಟೇಶ್ ಕುಮಾರ್ ಅವರು ಪಾಲ್ಗೊಂಡಿದ್ದರು.
ಮುಖ್ಯ ಅತಿಥಿ ಭಾಷಣ ಮಾಡಿದ ಡಾ. ಮೋಹನ್ ಮಾತನಾಡಿ. “ಇಂದು ವಿಶ್ವದಾದ್ಯಂತ ‘ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸುತ್ತಿದ್ದರೆ, ಇತ್ತ ನಮ್ಮ ದೇಶದಲ್ಲಿ ಆತ್ಮಹತ್ಯೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಭಾರತವು ವಿಶ್ವದ ಆತ್ಮಹತ್ಯೆಗಳ ರಾಜಧಾನಿ ಎಂದೇ ಬಿಂಬಿತವಾಗಿರುವುದು ನಮ್ಮನ್ನೆಲ್ಲಾ ತುಂಬಾ ಚಿಂತೆಗೀಡು ಮಾಡುವ ವಿಷಯವಾಗಿದೆ.
ಇಂದಿನ ಯುವ ಸಮೂಹಕ್ಕೆ ಸರಿಯಾದ ಮಾರ್ಗದರ್ಶನ ಇಲ್ಲದೇ ಖಿನ್ನತೆಗೆ ಒಳಗಾಗುತ್ತಿದೆ. ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಂತೂ, ಹಲವಾರು ಜನ ಸಾಮಾಜಿಕ ಹಾಗೂ ಆರ್ಥಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಇದನ್ನು ತಡೆಯುವುದು ನಮ್ಮೆಲರ ಜವಾಬ್ದಾರಿಯಾಗಿದ್ದು, ನಾವೆಲ್ಲರೂ ಕಾರ್ಯಪ್ರವೃತಃರಾಗಬೇಕು ಎಂಬ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ “ಪರಿಣಾಮಕಾರಿ ಕಾರ್ಯಕ್ಷಮತೆಗಾಗಿ ಮಾನಸಿಕ ಯೋಗಕ್ಷೇಮದ ಮಾರ್ಗಗಳು” ಎಂಬ ವಿಷಯದ ಕುರಿತು ಡಾ. ಜಿ ವೆಂಕಟೇಶ್ ಕುಮಾರ್ ಅವರು ಉಪನ್ಯಾಸ ನೀಡಿದರು. “ಇಂದಿನ ಯುವಕರು ಬೇಡದ ವಿಷಯಗಳಿಗೆ ತಲೆಕೆಡಿಸಿಕೊಂಡು ತಮ್ಮ ಜೀವನವನ್ನು ಒತ್ತಡದಲ್ಲಿ ಸಿಲುಕಿಸಿಕೊಳ್ಳುತ್ತಿದ್ದಾರೆ. ಜ್ಞಾನಕ್ಕೆ ಹೆಚ್ಚು ಒತ್ತು ಕೊಡಬೇಕಾದ ವಯಸ್ಸಿನಲ್ಲಿ, ದಾರಿ ತಪ್ಪಿ ಮನರಂಜನೆಗೆ ಹೆಚ್ಚು ಸಮಯ ಹಾಗೂ ಹಣವನ್ನು ವೆಚ್ಚ ಮಾಡಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಇದರ ಹೊಣೆಯನ್ನು ಪೋಷಕರು, ಶಿಕ್ಷಕರು, ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹೊತ್ತುಕೊಳ್ಳಬೇಕಾಗುತ್ತದೆ. ಯುವಕರು ಈ ದೇಶದ ಆಸ್ತಿಯಾಗಿದ್ದು, ಅವರಿಗೆ ಮಾನಸಿಕ ಸ್ವಾಸ್ಥದ ಬಗ್ಗೆ ತಿಳುವಳಿಕೆ ನೀಡಿ, ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕಾದ ಜವಾಬ್ಧಾರಿ ನಮ್ಮೆಲ್ಲರದು. ಎಲ್ಲರೂ ಜೀವನದ ಸರಿಯಾದ ಅರ್ಥ ಮನಗಂಡರೆ, ಸುಖವಾದ ಜೀವನ ನೆಡೆಸಬಹುದು” ಎಂದು ಸಭಿಕರಲ್ಲಿ ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು, ದಿ ಚೇಂಜ್ ಮೇಕರ್ಸ್ ಟಾಕ್ ಶೋ ವೇದಿಕೆಯ ಮುಖ್ಯ ಮಾರ್ಗದರ್ಶಕ, ಕ್ರಾಂತಿರಾಜ್ ಒಡೆಯರ್ ನಿರ್ವಹಿಸಿದರು. ವೇದಿಕೆಯ ಸಂಸ್ಥಾಪಕ ಸತ್ಯಕೀರ್ತಿ, ಸಹ ಸಂಸ್ಥಾಪಕ ರವಿಕುಮಾರ್ ಜೆ, ಸಂಯೋಜಕ ತೇಜಸ್ ಹಾಗೂ ಕಾರ್ಯದರ್ಶಿ ಸಂದೀಪ್ ಈಶ್ಯಾನ್ಯ ಸಂದರ್ಭದಲ್ಲಿ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243