ರಾಜಕೀಯ

ಶಾಸಕ‌ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಿಂದ ಹಲ್ಲೆ | ಮನನೊಂದು ವ್ಯಕ್ತಿ ಆತ್ಮಹತ್ಯೆ

Published

on

ಆತ್ಮಹತ್ಯೆಗೆ ಶರಣಾದ ನಾಗೇಂದ್ರ

ಸುದ್ದಿದಿನ ಡೆಸ್ಕ್ | ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಮಾತನಾಡಿದ್ದಕ್ಕೆ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವ್ಯಕ್ತಿ ಒಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗೊಬ್ಬರಗಾಲ ಗ್ರಾಮದಲ್ಲಿ ನಡೆದಿದೆ.

ಗೊಬ್ಬರಗಾಲ ಗ್ರಾಮದ ನಾಗೇಂದ್ರ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದು, ರಾತ್ರಿ ಬಾರ್ ವೊಂದರಲ್ಲಿ ಮದ್ಯಪಾನ ಮಾಡುವ ವೇಳೆ ನಾಗೇಂದ್ರ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಮಾತನಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ಶಾಸಕರ ಬೆಂಬಲಿಗರು ಕೋಪಗೊಂಡು ನಾಗೇಂದ್ರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕರು ಶಾಸಕರ ಬೆಂಬಲಿಗರನ್ನ ಸಾಮಾಧಾನ ಪಡಿಸಿ ನಾಗೇಂದ್ರನನ್ನ ಊರಿಗೋಗುವಂತೆ ಕಳುಹಿಸಿದ್ದಾರೆ. ಆದ್ರೆ, ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಗೊಬ್ಬರಗಾಲಕ್ಕೆ ಹೋಗಿ ಅಲ್ಲೂ ಕೂಡ ಹಲ್ಲೆ ಮಾಡಿದ್ದಾರೆ. ಗ್ರಾಮಸ್ಥರು ಮಧ್ಯ ಪ್ರವೇಶಿಸಿ ಅಲ್ಲೂ ಕೂಡ ಶಾಸಕರ ಬೆಂಬಲಿಗರನ್ನ ಸಮಾಧಾನಿಸಿ ವಾಪಸ್ ಕಳುಹಿಸಿದ್ದಾರೆ. ಗ್ರಾಮದಿಂದ ತೆರಳಿದ ಶಾಸಕರ ಬೆಂಬಲಿಗರ ಮತ್ತೆ ನಾಗೇಂದ್ರನಿಗೆ ಕರೆ ಮಾಡಿ ತಮ್ಮಲ್ಲಿಗೆ ಕರೆಸಿಕೊಂಡು, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಇದ್ರಿಂದ ಭಯಗೊಂಡ ನಾಗೇಂದ್ರ ಗ್ರಾಮದ ಹೊರವಲಯದ ಮರವೊಂದಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬೆಂಬಲಿಗರಾದ ಮಧು, ದಿಲೀಪ, ರವಿ ಸೇರಿದಂತೆ ಏಳು ಮಂದಿ ವಿರುದ್ಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತ ಕ್ರಮವಾಗಿ ಗ್ರಾಮಕ್ಕೆ ಒಂದು ಡಿ.ಆರ್. ತುಕುಡಿ ನಿಯೋಜಿಸಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9886715401

Leave a Reply

Your email address will not be published. Required fields are marked *

Trending

Exit mobile version