ದಿನದ ಸುದ್ದಿ
ವಿಚಾರವಾದಿಗಳ ಬಂಧನ: ಆರೋಪ ಪಟ್ಟಿಯಲ್ಲಿ ಮೋದಿ ಹತ್ಯೆ ಸಂಚು ಉಲ್ಲೇಖವಿಲ್ಲ
ಸುದ್ದಿದಿನ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಸಂಚಿನ ಸಂಬಂಧ ದೇಶಾದ್ಯಂತ ಬಂಧನಕ್ಕೊಳಗಾದ ಐವರು ಎಡ ಪಂಥೀಯ ವಿಚಾರವಾದಿಗಳ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಮೋದಿ ಹತ್ಯೆ ಸಂಚು ಅಂಶದ ಉಲ್ಲೇಖವೇ ಇಲ್ಲ.
ಬಂಧನಕ್ಕೆ ಹದಿನಾರು ಕಾರಣಗಳನ್ನು ಉಲ್ಲೇಖಿಸಿ ಪೊಲೀಸರು ಸುಪ್ರೀಂ ಕೋರ್ಟ್‍ಗೆ ಆರೋಪ ಪಟ್ಟಿ ಸಲ್ಲಿಸಿದ್ದರು. ಆ ಪಟ್ಟಿಯು ಎನ್ ಡಿ ಟಿವಿ ಮೂಲಗಳಿಗೆ ಲಭ್ಯವಾಗಿದ್ದು. ಪೊಲೀಸರ ಕ್ರಮದ ಬಗ್ಗೆ ದೇಶಾದ್ಯಂತ ಇನ್ನಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.
ವರವರ ರಾವ್ ಸೇರಿದಂತೆ ಐವರು ಎಡಪಂಥೀಯರನ್ನು ಮೋದಿ ಹತ್ಯೆ ಸಂಚು ರೂಪಿಸಿರುವುದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಬಿಜೆಪಿ ಪರ ದಿನ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಗಳು ಪ್ರಕಟಗೊಂಡಿತ್ತು. ಆದರೆ, ಇದೀಗ ಎನ್ ಡಿ ಟಿವಿ ವರದಿಯಂತೆ, ಎಡಪಂಥೀಯರನ್ನು ತಮ್ಮ ವಶಕ್ಕೆ ಏಕೆ ನೀಡಬೇಕು ಎಂದು ಪೊಲೀಸರು ಸುಪ್ರೀಂ ಕೋರ್ಟ್ ಗೆ ನೀಡಿದ ಕಾರಣಗಳಲ್ಲಿ ಮೋದಿ ಹತ್ಯೆ ಸಂಚಿನ ಉಲ್ಲೇಖವೇ ಇರಲಿಲ್ಲ ಎಂದು ವರದಿಯಾಗಿದೆ.
ಎಡಪಂಥೀಯರ ಬಂಧನಕ್ಕೆ ಸಂಬಂಧಿಸಿಸಂತೆ ವಿಐಪಿಗಳ ಹತ್ಯೆಗೆ ಸಂಚು, ಮಾವೋವಾದಿಗಳ ಜತೆಗೆ ನಂಟು ಹಾಗೂ ಭೀಮಾ- ಕೋರೆಗಾಂವ್ ಹಿಂಸೆಗೆ ಕುಮ್ಮಕ್ಕು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ರೀತಿ ಹತ್ಯೆ ಮಾಡಲು ಸಂಚು ರೂಪಿಸಲು ಯತ್ನಿಸಿದ್ದೂ ಕಾರಣ ಇವೇ ಮೊದಲಾದ ಆರೋಪಗಳನ್ನು ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳು ಮಾಡಿದ್ದವು. ಆದರೆ ಇದೀಗ ಎನ್ ಡಿ ಟಿವಿ ಪೊಲೀಸರು ನೀಡಿರುವ 16 ಕಾರಣಗಳಲ್ಲಿ ಮೋದಿ ಹತ್ಯೆಯ ಸಂಚಿನ ಬಗ್ಗೆ ಯಾವುದೇ ಉಲ್ಲೇಖ ಇಲ್ಲ ಈ ಬಗ್ಗೆ ನಮ್ಮಲ್ಲಿ ದಾಖಲೆ ಇದೆ ಎಂದು ಹೇಳಿಕೊಂಡಿದೆ.
ಲೋಕಸಭಾ ಚುನಾವಣೆಯ ಬೆನ್ನಲ್ಲೇ ಬಿಜೆಪಿ ಮತ್ತು ಬಿಜೆಪಿ ಪರ ಸಂಘಟನೆಗಳು ನಿರಂತರವಾಗಿ ವದಂತಿಗಳನ್ನು ಹಬ್ಬಿಸುತ್ತಿದ್ದು, ಚುನಾವಣೆಗೆ ಸಂಬಂಧಿಸಿದಂತೆ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ. ಮೋದಿ ಹತ್ಯೆಯ ಸಂಚು ಎನ್ನುವುದೂ ಇದರ ಒಂದು ಭಾಗವಾಗಿದೆ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಚರ್ಚೆಗೀಡಾಗುತ್ತಲೇ ಇತ್ತು. ಇದೀಗ ಎನ್ ಡಿ ಟಿವಿ ಮಾಡಿರುವ ವರದಿಯು ಹೊಸ ಸಂಚಲನವನ್ನುಂಟು ಮಾಡಿದ್ದು, ಬಿಜೆಪಿಯ ಹೊಸ ಸುಳ್ಳುಗಳ ಸರಮಾಲೆಯಲ್ಲಿ ಮೋದಿ ಹತ್ಯೆಯ ಸಂಚು ಆರೋಪವೂ ಸೇರಿಕೊಂಡಿದೆ.