ದಿನದ ಸುದ್ದಿ

ಹಿಂದುತ್ವವನ್ನೂ ಹಿಂದಿಕ್ಕಿದ ಮೋದಿತ್ವ, ಹದಗೆಡುತ್ತಿರುವ ಮಾನವ ಸಂಬಂಧಗಳು

Published

on

ತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ ಎದುರೇ ಮಾತಾಡುವಾಗಲೂ ಅಸಹನೆಯ ಮಾತುಗಳು ವ್ಯಂಗ್ಯ ಕುಹಕ ಎಲ್ಲೆ ಮೀರುತ್ತದೆ. ಮೊನ್ನೆ ಚುನಾವಣೆಯದಿನ ನಮ್ಮ ಗ್ರಾಮದ ಬೂತ್ ಪಕ್ಕದಲ್ಲೇ ಇದ್ದ ಬಿಜೆಪಿಯ ಜಿಲ್ಲಾ ಕಾರ್ಯ ದರ್ಶಿಗಳಿಗೆ (ನಮ್ಮೂರಿನವರೇ) ತಮಾಷೆಯಾಗಿ ನಮಗೂ ಒಂದಷ್ಟು ಓಟು ಬಿಡಿ ಸಾರ್ ಖಾಲಿ ದಬ್ಬ ಮಾಡ್ಬೇಡಿ ಎಂದೆ. ಅದಕ್ಕವರು ನೀವು ಈಗೆ ಹೇಳಿಯೇ ನಮ್ಮಲ್ಲಿ ಖಾಲಿ ಮಾಡ್ತೀರಿ ಮಾರ್ರೆ ಏನೋ ಈಸಾರಿ ಕಷ್ಟಪಟ್ಟು ನಿಮ್ಮನ್ನ ಹಿಂದೆ ಹಾಕ್ತೀವಿ ಎಂದರು. ಇಬ್ಬರೂ ನಗುತ್ತ ಅಲ್ಲಿಂದ ಹೊರಟೆವು. ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿದ್ದ ಯುವಕನೊಬ್ಬ ಬೇರೆ ಕಡೆ ತಿರುಗಿ ನನಗೆ ಕೇಳುವಂತೆ (ಮೋದಿ ಚಿತ್ರದ ಬಟ್ಟೆಯನ್ನೂ ಹಿಡಿದಿದ್ದ) “ಈ ಸಲ ಇವರದ್ದೆಲ್ಲ ಮುಕುಳಿ ಬಾಯಿ ಬಂದ್ ಮಾಡ್ತೀವಿ” ಅಂದ. ಪಾಪ ಬಿಜೆಪಿ ನಾಯಕರೂ ಮುಖ ಸಣ್ಣಗೆ ಮಾಡಿಕೊಂಡರು.

ಇದು ಒಂದು ಉದಾಹರಣೆ ಅಷ್ಟೆ. ಸಾಮಾಜಿಕ ತಾಣಗಳಲ್ಲಿ ಇತ್ತೀಚಗೆ ನಾನೊಂದು ಸ್ಟೇಟಸ್ ಹಾಕಿದ್ದೆ ಅದು ನನ್ನ ಗೆಳಯರೊಬ್ಬರು ಕಳುಹಿಸಿದ್ದು ಅದು ಅವರಿಗೂ ಯಾರೋ ಕಳುಹಿಸಿದ್ದು ಅದರ ಬಗ್ಗೆ ನನಗೂ ಆಗ ಅರ್ಧಂಬರ್ಧ ತಿಳಿದಿತ್ತಷ್ಟೆ ಅದರಲ್ಲಿ ಏನು ಇತ್ತೋ ಅದೇ ಪದಗಳನ್ನು ನಾನು ಕನ್ನಡಕ್ಕೆ ಭಾಷಾಂತರಿಸಿ “ಓದಿದ್ದು” ಎಂದು ಟಿಪ್ಪಣಿ ಹಾಕಿದ್ದೆ. ಇದರ ಬಗ್ಗೆ ಚರ್ಚೆ ಆಗಲಿ ಎನ್ನುವುದು ನನ್ನ ಉದ್ದೇಶವಿತ್ತು. ಆದರೆ ಆದದ್ದೇ ಬೇರೆ ಕೆಲವರು ನಿಜವಾಗಿಯೂ ಆ ಬಗ್ಗೆ ನನಗೆ ವಿವರಿಸಲು ಪ್ರಯತ್ನ ಪಟ್ಟರು. ಆದರೆ ಅದಲ್ಲ ಕೂಡಲೇ ಮೋದಿ ಭಕ್ತರ ಕಾಟ ಶುರುವಾಯಿತು.

ಇದು ಸುಳ್ಳು ಎನ್ನುವವರು. ವ್ಯಂಗ್ಯ ಮಾಡುವವರು ಕುಹಕವಾಡುವವರು ನನ್ನವಾಲ್ ಗೇ ಬಂದು ನೇರವಾಗಿ ಬೈಯುವವರು ಪರೋಕ್ಷವಾಗಿ ಬೇರೆ ಕಡೆಗಳಲ್ಲಿಯೂ ಏನೇನೋ ಹೇಳುವವರು ಹುಟ್ಟಿಕೊಂಡರು. ಆದರೆ ತಮ್ಮ ವಾದವನ್ನು ಮಂಡಿಸಲೇ ಇಲ್ಲ. ಆದರೆ ನಿಧಾನವಾಗಿ ಆ ವಿಷಯದ ಬಗ್ಗೆ ತಿಳಿಯುತ್ತ ಹೋದೆ. ನಾನು ಅನುವಾದ ಮಾಡಿದ ಬರಹದ ಭಾಷೆ ಮತ್ತು ತಾಂತ್ರಿಕವಾಗಿ ಮೂಲದಲ್ಲೇ ತಪ್ಪಿತ್ತೇ ವಿನಃ ವಿಷಯ ನಿಜವಾದದ್ದೇ ಆಗಿತ್ತು.

ಇರಲಿ ಆದರೆ ಅದನ್ನು ವಿಷಯಾಧಾರಿತವಾಗಿ ವಿರೋಧಿಸಿದವರು ಕಡಿಮೆ. ಮೋದಿಯಾಧಾರಿತವಾಗಿ ವಿರೋಧಿಸಿದವರೇ ಹೆಚ್ಚು ಅವರು ಯಾರೂ ಸಾಮಾನ್ಯ ಜನರಲ್ಲ. ಅವರಲ್ಲಿ ಕಲಾವಿದರು, ವಿದ್ಯಾವಂತರು. ಪತ್ರಿಕಾಸಂಪಾದಕರು ಮುಂತಾದವರಿದ್ದರು. ಇದು ನಾನು ಅನುವಾದಿಸಿದ ಬರಹ “ಓದಿದ್ದು” ಮೊದಲೇ ಹಾಕಿದ್ದೇನೆ ಎಂದರೆ ಅದಕ್ಕೂ “ಈಗ ಪಲಾಯನ ವಾದ” ಎಂದು ಜರಿದರು. ಇವರೆಲ್ಲರೂ ಹಲವರು ಅನೇಕ ವರ್ಷಗಳಿಂದ ನನ್ನನ್ನು ಬಲ್ಲವರೂ ಆಗಿದ್ದರು. ಅಂದರೆ ಅವರು ಮೋದಿಯನ್ನು ನಂಬಿದಷ್ಟು ಪರಿಚಿತ ನನ್ನನ್ನು ನಂಬಲು ತಯಾರಿರಲಿಲ್ಲ.

ಮೊನ್ನೆ ಕೆ.ಎಸ್ . ಭಗವಾನ್ ಆಸ್ಪತ್ರೆಯಲ್ಲಿದ್ದಾಗ “ಅವನು ನರಳಿ ನರಳಿ ಸತ್ತು ನರಕಕ್ಕೆ ಹೋಗಲಿ” ಎಂದವರಲ್ಲಿ ಸಾಹಿತ್ಯದಲ್ಲಿ ಎಂ.ಎ ಮಾಡಿದ ಮಹಿಳೆಯೊಬ್ಬರಿದ್ದರು.ಇತ್ತೀಚೆಗೆ ನನ್ನ ಕಣ್ಣಮುಂದೆ ಬೆಳೆದ ನಮ್ಮೂರಿನ ಹುಡುಗನೊಬ್ಬ (ಈತನ ತಂದೆ ನನ್ನ ಸ್ನೇಹಿತರು) ನಿಮ್ಮಲ್ಲಿಗೇ ಬಂದು ಬುದ್ಧಿಕಲಿಸುತ್ತೇನೆ ಎಂದಿದ್ದಾನೆ!. ಪುಣ್ಯಾತ್ಮ ಕೊನೆಗೆ ಓಟು ಹಾಕಲೂ ಬರಲಿಲ್ಲ.

ಅನೇಕರಿಗೆ ತಮ್ಮ ತಂದೆ ತಾಯಿಯರನ್ನು ಬೈದರೂ ಸುಮ್ಮಿದ್ದಾರು ಮೋದಿಯ ಸಣ್ಣ ಟೀಕೆಯನ್ನೂ ಸಹಿಸಲಾರರರು. ಕಳೆದ ಶತಮಾನದ ಜರ್ಮನಿ, ರಷ್ಯಾ, ಚೈನಾ ಗಳಂತಾಗಿದ್ದೇವೆಯೆ?

ನಮ್ಮ ಇಂದಿನ ಮೋದೀಕೃತ ಸಮಾಜದಲ್ಲಿ ಮಾನವ ಸಂಬಂಧಗಳಿಗಿಂತ ಮೋದಿ ಸಂಬಂಧವೇ ಮುಖ್ಯವಾಗುತ್ತದೆ. ಯಾಕೆಂದರೆ ಸಬ್ ಕಾ ಸಾಥ್ ಎಂದಿದ್ದ ಮೋದಿ ಈಗ ಸಬ್ ಕಾ ವಿಶ್ವಾಸ್ ಎಂದಿದ್ದಾರೆ. ಯಾಕೋ ಆ ವಿಶ್ವಾಸವನ್ನು ನೆನೆದು ಭಯವಾಗುತ್ತದೆ.

ಪ್ರಸಾದ್ ರಾಕ್ಸಿಡಿ

(ಬರಹ ಕೃಪೆ – prasad Raxidi ಅವರ ಪೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version