ಕ್ರೀಡೆ
ಬೆಳಗಿನ ಪ್ರಮುಖ ಸುದ್ದಿಗಳು
ಬೆಳಗಿನ ಪ್ರಮುಖ ಸುದ್ದಿಗಳು
- ಚೆನ್ನೈನಲ್ಲಿರುವ ರಿಪಬ್ಲಿಕ್ ಆಫ್ ಸಿಂಗಾಪುರ್‌ನ ಕಾನ್ಸುಲ್ ಜನರಲ್ ಎಡ್ಗರ್ ಹಾಂಗ್ ಅವರು ನಿನ್ನೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇದೊಂದು ಸೌಜನ್ಯದ ಭೇಟಿಯಾಗಿತ್ತು ಎಂದು ರಾಜಭವನದ ಪ್ರಕಟಣೆ ತಿಳಿಸಿದೆ.
- ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಗಣೇಶ ಹಬ್ಬವನ್ನು ಸರ್ಕಾರದ ಮಾರ್ಗಸೂಚಿ ಪಾಲನೆಯೊಂದಿಗೆ ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮನವಿ ಮಾಡಿದ್ದಾರೆ.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಗಾಲ್ಯಾಂಡ್‌ಗೆ ನಿನ್ನೆಯಿಂದ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಕೋಹಿಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗಾಲ್ಯಾಂಡ್, ಸಾಮಾಜಿಕ, ಸಾಂಸ್ಥಿಕ ಹೊಣೆಗಾರಿಕೆ ಮತ್ತು ಹೂಡಿಕೆ ಸಮ್ಮೇಳನದಲ್ಲಿ ಅವರು ಭಾಗವಹಿಸಿದರು. ಇಂದು ಅವರು, ಮಾನ್ ಜಿಲ್ಲೆಗೆ ಭೇಟಿ ನೀಡಲಿದ್ದು, ಅಲ್ಲಿ ನೂತನವಾಗಿ ಆರಂಭಿಸಿರುವ ಆಕ್ಸಿಸ್ ಬ್ಯಾಂಕ್ ಶಾಖೆಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
- ಇಂದಿನಿಂದ ಎರಡು ದಿನಗಳ ಕಾಲ ಪಶ್ಚಿಮ ಮಧ್ಯ ಪ್ರದೇಶ, ಪೂರ್ವ ರಾಜಸ್ಥಾನ್ ಹಾಗೂ ಉತ್ತರ ಗುಜರಾತ್ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಭಾಗಗಳ ಕೆಲವೆಡೆ 200 ಮಿಲಿಮೀಟರ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
- ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಸೂಚನೆ ನೀಡಿದೆ. ಈ ಸಂಬಂಧ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಯನ್ನು ಹೊರಡಿಸಿದ್ದು, ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
- ಪದ್ಮ ಸರಣಿಯ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಪ್ರಶಸ್ತಿಗಳಿಗೆ ಆನ್‌ಲೈನ್ ಮೂಲಕ ನಾಮನಿರ್ದೇಶನ ಮಾಡಲು ಮೇ 1 ರಿಂದ ಕಾಲಾವಕಾಶ ಕಲ್ಪಿಸಲಾಗಿದೆ. ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್‌ನಲ್ಲಿ ನಾಮನಿರ್ದೇಶನಗಳನ್ನು ಅಪ್‌ಲೋಡ್ ಮಾಡಬಹುದಾಗಿದೆ.
- ತೀವ್ರ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾಗೆ ಭಾರತ 21 ಸಾವಿರ ಟನ್ ರಸಾಯಿನಿಕ ರಸಗೊಬ್ಬರವನ್ನು ಹಸ್ತಾಂತರಿಸಿದೆ. ಶ್ರೀಲಂಕಾದಲ್ಲಿರುವ ಭಾರತದ ರಾಯಭಾರಿ ಅವರು ಶ್ರೀಲಂಕಾಗೆ ಈ ನೆರವನ್ನು ಹಸ್ತಾಂತರಿಸಿದರು. ಕಳೆದ ತಿಂಗಳು 44 ಸಾವಿರ ಟನ್ ರಸಗೊಬ್ಬರವನ್ನು ಪೂರೈಸಲಾಗಿತ್ತು. ಈ ವರ್ಷ ಒಟ್ಟಾರೆ 4 ಶತಕೋಟಿ ಡಾಲರ್ ಮೊತ್ತದ ನೆರವು ನೀಡಲಾಗಿದೆ.
- ಮಹಿಳೆಯರು ಸೂಕ್ತ ತರಬೇತಿ ಪಡೆದು ಯಶಸ್ವಿ ಉದ್ಯಮಿಗಳಾಗಬೇಕೆಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಹಾಗೂ ಐಐಎಂ ಜಂಟಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಿನ್ನೆ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳಾ ಪದವೀಧರರಿಗೆ ಉದ್ಯಮ ಶೀಲತಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
- ಮತದಾರರ ಪಟ್ಟಿಯ ಜೊತೆ ಆಧಾರ್ ಜೋಡಿಸುವ ಕುರಿತಾದ ನಮೂನೆ 6ಬಿ ಅಡಿಯಲ್ಲಿ ಆಧಾರ್ ಸಲ್ಲಿಕೆ ಮಾಡುವುದು ಅವರವರ ವಿವೇಚನೆಗೆ ಬಿಟ್ಟಿದ್ದು ಎಂದು ಚುನಾವಣಾ ಆಯೋಗ ಇಂದು ಪುನರುಚ್ಚರಿಸಿದೆ. ಆಧಾರ್ ಸಲ್ಲಿಕೆ ಮಾಡಿಲ್ಲ ಎಂಬ ಕಾರಣಕ್ಕಾಗಿ ಮತದಾರರ ಪಟ್ಟಿಯಲ್ಲಿ ಇರುವ ಯಾವುದೇ ಹೆಸರನ್ನು ತೆಗೆಯುವುದಿಲ್ಲ ಎಂದು ಆಯೋಗ ಟ್ವೀಟ್‌ನಲ್ಲಿ ತಿಳಿಸಿದೆ.
- ಡಿಜಿಟಲ್ ಪಾವತಿ ಸೇವೆ – ಯುಪಿಐ ಸೇವೆಗಳ ಮೇಲೆ ಯಾವುದೇ ರೀತಿಯ ಸುಂಕ ವಿಧಿಸುವ ಉದ್ದೇಶ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಹಣಕಾಸು ಸಚಿವಾಲಯ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದು ಹಾಗೂ ದೇಶದ ಆರ್ಥಿಕತೆಗೆ ಕೊಡುಗೆ ನೀಡಬೇಕೆಂಬ ಏಕೈಕ ಉದ್ದೇಶದಿಂದ ಡಿಜಿಟಲ್ ರೂಪದಲ್ಲಿನ ಯುಪಿಐ ಸೇವೆಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದೆ.
- ಪ್ರಧಾನಮಂತ್ರಿ ನರೇಂದ್ರಮೋದಿ ನಾಳೆಯಿಂದ ಹರಿಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಭೇಟಿ ನೀಡಲಿದ್ದು, ಹರಿಯಾಣದ ಫರೀದಾಬಾದ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಅಮೃತ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. ಮೊಹಾಲಿಯಾ ಮುಲ್ಲಾನ್ ಪುರದಲ್ಲಿ ನಿರ್ಮಿಸಿರುವ ಹೋಮಿಬಾಬಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
- 2022-23ನೇ ಸಾಲಿನ 2ನೇ ಸರಣಿಯ ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ನಿನ್ನೆಯಿಂದ ಚಂದಾದಾರಿಕೆಗಾಗಿ ತೆರೆಯಲಾಗುತ್ತದೆ. ಇದು ಶುಕ್ರವಾರದವರೆಗೂ ಮುಂದುವರಿಯಲಿದೆ. ಈ ಅವಧಿಯಲ್ಲಿ ಬಾಂಡ್‌ನ ವಿತರಣೆಯ ಬೆಲೆ, ಪ್ರತಿ ಗ್ರಾಂಗೆ ಐದು ಸಾವಿರದ ನೂರ ತೊಂಬತ್ತೇಳು ರೂಪಾಯಿಗಳಾಗಿರುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243