ಅಂತರಂಗ

ಮುಟ್ಟದಿರು, ಮುಟ್ಟಿ ಕೆಡದಿರು..!

Published

on

  • ವರ್ಷಿಣಿ .ಎಂ.ತೇಜ್, ಪತ್ರಿಕೋದ್ಯಮ ವಿಭಾಗ , ಪ್ರಥಮ ಬಿ.ಎ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ

ಹೆಣ್ಣು…ತಾಯಿಯಾಗಿ,ಅಕ್ಕನಾಗಿ,ಮಡದಿಯಾಗಿ,ಮಗಳಾಗಿ, ಸ್ನೇಹಿತೆಯಾಗಿ, ಹಲವಾರು ಪಾತ್ರ ನಿಭಾಯಿಸುತ್ತಾಳೆ. ಹೆಣ್ಣಿಲ್ಲದ ಮನೆ ಸ್ಮಶಾನಕ್ಕಿಂತಲೂ ಕೀಳು.ಅವಳಿದ್ದರೇನೇ ಮನೆ ದೇವಾಲಯದಂತಿರುವುದು. ಆದರೂ ಹೆಣ್ಣಿಗೆ ಗೌರವ ದೊರತೇ ಇಲ್ಲ. ಹೆಣ್ಣಿನ ಮೇಲೆ ದೌರ್ಜನ್ಯ ಅತ್ಯಾಚಾರ ನಡೆಯುತ್ತಲೇ ಇವೆ. ಬಹುಶಃ ಮುಂದಿನ ದಿನಗಳಲ್ಲೂ ನಡೆಯಲಿವೆ. ಮಹಿಳಾ ದಿನದಂದು ಮಾತ್ರ ಹೆಣ್ಣೆಂದು ನೆನಪಾಗುವುದೇನೋ? ಹೆಣ್ಣೆಂದರೆ ಬಳಸಿ ಬೀಸಾಡುವ ಕರ ವಸ್ತ್ರವೇ? ಅವಳಿಗೂ ಇಷ್ಟ ಕಷ್ಟಗಳು ಇವೆ ಎಂಬುದನ್ನು ಮರೆತುಬಿಟ್ಟಿದ ಈ ಸಮಾಜ,

ಅತ್ಯಾಚಾರವೆಂಬುದು ಸಾಮಾಜಿಕ ಪಿಡುಗಾಗಿ ಬಂದಿದೆ. ಇದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲವೇ? ನಮ್ಮ ದೇಶಕ್ಕೆ 1947ರಂದು ಸ್ವಾತಂತ್ರ ದೊರಕಿರುವುದು ಸತ್ಯವಾಗಿದ್ದರೆ, ಮಹಿಳೆಯರಿಗೆ ಇನ್ನೂ ಸ್ವಾತಂತ್ರ್ಯ ದೊರಕಿಲ್ಲವೆಂಬುದು ಅಷ್ಟೇ ಕಟ್ಟು ಸತ್ಯ.ಗಾಂಧೀಜಿ ಹೇಳಿದ್ದರಂತೆ, “ಯಾವಾಗ ನಮ್ಮ ದೇಶದಲ್ಲಿ ಮಹಿಳೆಯರು ರಾತ್ರಿ 12 ಗಂಟೆಗೆ ಓಡಾಡುವರು ಅಂದು ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದೊರಕುವುದೆಂದು”.ಈ ಮಾತು ನೂರಕ್ಕೆ ನೂರು ಸತ್ಯ.ಹಾಗಾದರೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕುವುದು ಯಾವಾಗ? ಮಹಿಳೆ ಒಬ್ಬಂಟಿಯಾಗಿ ಹೊರ ಹೋಗುವುದು ಯಾವಾಗ?…

ಹೆಣ್ಣಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಎಲ್ಲಿ ನೋಡಿದರೂ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಮಾನಭಂಗಗಳು ನಡೆಯುತ್ತಲೇ ಇವೆ. ನೆನಪಿಟ್ಟುಕೊಳ್ಳಿ ನಾವು ಬ್ರಿಟಿಷರ ಆಡಳಿತದಿಂದ ಮಾತ್ರ ಬಿಡುಗಡೆ ಹೊಂದಿದ್ದೇವೆ. ನರಭಕ್ಷಕ, ಕಾಮುಕರಿಂದ ಬಿಡುಗಡೆ ಪಡೆದಿಲ್ಲ. “ಜನನಿ ಜನ್ಮ ಭೂಮಿ ಸ್ವರ್ಗಾದಪಿ ಗರಿಯಸಿ” ಎಂಬ ಮಾತೆಲ್ಲವೂ ಬರಿ ಆಡು ಮಾತುಗಳಾಗಿ ಉಳಿದುಬಿಟ್ಟಿವೆ. ಹೆಣ್ಣನ್ನು ಮುಟ್ಟುವುದಾದರೂ ಏಕೆ? ಮುಟ್ಟಿ ಕೆಡುವುದಾದರೂ ಏಕೆ? ಆಕೆಯನ್ನು ಸಂತೋಷದಿಂದ ಬಾಳಲು ಬಿಡಿ,

ಈ ಅತ್ಯಾಚಾರ, ದೌರ್ಜನ್ಯ, ಮಾನಭಂಗ ಇವುಗಳಿಂದ ಹೆಣ್ಣು ಮತ್ತೊಬ್ಬರನ್ನು ಪ್ರೀತಿಸಲು ಭಯಪಡುವಳು. ಇವುಗಳಿಂದ ದೂರವಿರಲು ಆಕೆ ಮತ್ತೆ ಅದೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಬೇಕೆ? ಎಷ್ಟು ದಿನ ಆ ಗೋಡೆಗಳೊಂದಿಗೆ ಜೀವಿಸಬೇಕು? ಹೆಣ್ಣನ್ನು ಲಕ್ಷ್ಮಿ,ದುರ್ಗ, ಸರಸ್ವತಿಯರಿಗೆ, ಹೋಲಿಸಿ ಹೇಳುವುದಾದರೆ ದೇವರ ಮೇಲೆ ಕಾಮುಕ ಕಣ್ಣು ಹಾಕುವುದು ಅದೆಷ್ಟು ಸರಿ?…

ಇತ್ತೀಚಿನ ನೈಜ ಘಟನೆಗಳಂತೂ ಕಣ್ಣಿಗೆ ಕಟ್ಟಿದಂತಾಗಿದೆ. ಉದಾಹರಣೆಗೆ, ಮಂಡ್ಯ ಜಿಲ್ಲೆಯಲ್ಲಿ ನಡೆದಂತಹ ದುರ್ಘಟನೆ. ವಿದ್ಯಾರ್ಥಿನಿಯರನ್ನು ತಮ್ಮ ಮಕ್ಕಳಂತೆ ಕಾಣಬೇಕಾದ ಶಿಕ್ಷಕನೇ ಈ ನೀಚ ಕೆಲಸಕ್ಕೆ ಮುಂದಾಗಿದ್ದಾನೆ. ಆತನೇ ಆ ಮಕ್ಕಳನ್ನು ಈ ಸಮಾಜಕ್ಕೆ ಉತ್ತಮ ಪ್ರಜೆ ಮಾಡಬೇಕಾದವನು. ಆದರೂ ಇಂತಹ ಮನಸ್ಥಿತಿ ಬೆಳೆಸಿಕೊಂಡಿರುವುದು ಸರಿಯೇ.

ಕೊನೆಯದಾಗಿ ಆಕೆ ಹೆಣ್ಣೆಂದು ಗೌರವಿಸದಿದ್ದರೂ ಪರವಾಗಿಲ್ಲ. ಕೊನೆ ಪಕ್ಷ ಆಕೆ ಈ ಸಮಾಜದಲ್ಲಿ ಬದುಕಬೇಕಾದ ಒಬ್ಬ ಮನುಷ್ಯಳಂದು ಭಾವಿಸಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version