ನೆಲದನಿ
ನೆಲಮೂಲ ಬದುಕಿನ ತತ್ವಾನುಸಂಧಾನ: ನಾಗತಿಹಳ್ಳಿ ರಮೇಶ್ ಅವರ ‘ಜೀವಜೀವದ ಹಾಡು’
ಸಾಹಿತ್ಯವು ನಿಂತ ನೀರಲ್ಲ, ಅದು ಸದಾ ಪ್ರವಹಿಸುವ ನದಿಯಿದ್ದಂತೆ. ಅದು ವಿವಿಧ ಪ್ರಕಾರದಲ್ಲಿ ತನ್ನ ಅಸ್ಮಿತೆಯನ್ನು ಪ್ರದರ್ಶಿಸುತ್ತ ಬಂದಿರುವುದು ಚಾರಿತ್ರಿಕ ಸತ್ಯ. ಇಂತಹ ಸಾಹಿತ್ಯವನ್ನು ಪ್ರಮುಖ ಕೇಂದ್ರವಾಗಿಟ್ಟುಕೊಂಡು ಹಲವರು ಕೃಷಿ ಮಾಡಿದ್ದಾರೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಬಹುಬೇಗ ಜನತೆಯ ಮನತಟ್ಟುವ, ಅತ್ಯಂತ ವೇಗವಾಗಿ ಮನ ಮಿಡಿಯುವ ಕಾವ್ಯ ಪ್ರಕಾರವನ್ನು ಮುಖ್ಯವಾಗಿಟ್ಟುಕೊಂಡು ಹಲವು ಕವಿ ಮನಸುಗಳು ಕಾವ್ಯ ಪ್ರಯೋಗ ಮಾಡಿವೆ. ಇದಕ್ಕೆ ಕನ್ನಡ ಕಾವ್ಯ ಶ್ರೀಮಂತಿಕೆಯು ಜ್ವಲಂತ ಸಾಕ್ಷಿಯಾಗಿ ಕಂಡುಬರುತ್ತದೆ.
ಕಾವ್ಯ ಕೇವಲ ಅಕ್ಷರ ರೂಪದಲ್ಲಿದ್ದಾಗ ಸಾಹಿತ್ಯಾಸಕ್ತ ಓದುಗ ವರ್ಗ ಮಾತ್ರ ಅದನ್ನು ಸವಿಯಬಹುದು. ಇಂದಿನ ಯಾಂತ್ರಿಕ ಮತ್ತು ಜಾಗತಿಕ ಒತ್ತಡದ ಕಾರಣದಿಂದಾಗಿ ಓದುವವರ ಪ್ರಮಾಣವು ಕಡಿಮೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಆದರೆ ಕಾವ್ಯವನ್ನು ಆಸ್ವಾಧಿಸುವ ಮನಸುಗಳಿಗೆ ಬರವಂತು ಇಲ್ಲ. ಬಹುಮುಖಿ ಪ್ರತಿಭೆಯಾಗಿರುವ ನಾಗತಿಹಳ್ಳಿ ರಮೇಶ್ ಅವರು ಈ ವಾಸ್ತವವನ್ನು ಅರಿತು, ತಮ್ಮ ಕಾವ್ಯಕ್ಕೆ ಸಂಗೀತ ಮತ್ತು ರಾಗ ಸಂಯೋಜನೆಯೊಂದಿಗೆ ಹೊಸದೊಂದು ಸ್ವರೂಪವನ್ನು ನೀಡಿ ಸಮಾಜಕ್ಕೆ ಸಮರ್ಪಿಸಿದ್ದಾರೆ. ಇದುವೆ ‘ಜೀವಜೀವದ ಹಾಡು’. ಎಂಬ ಧ್ವನಿ ಹೊತ್ತಿಗೆ. ಈ ಜೀವಜೀವದ ಹಾಡಿನ ಅಡಿಯಲ್ಲಿ ವ್ಯಕ್ತವಾಗಿರುವ ಕವಿತೆಗಳು ಬರೀ ಪ್ರೇಮ ಕವಿತೆಗಳಲ್ಲ, ಸರಸ ಸಲ್ಲಾಪ, ಪ್ರಣಯ ಪ್ರಸಂಗಗಳನ್ನು ಸೆರೆಹಿಡಿದ ಪದಗುಚ್ಚವಲ್ಲ. ಈ ನಾಡಿನ ಶ್ರಮಿಕ ವರ್ಗವು ತನ್ನ ದಿನನಿತ್ಯದ ಜೀವನದಲ್ಲಿ ಅನುಭವಿಸುವ ಸಂಕಷ್ಟ, ನೋವು, ಯಾತನೆ, ಶೋಷಣೆ ದಬ್ಬಾಳಿಕೆಗಳಿಂದ ಆರಂಭವಾಗಿ, ಈ ಎಲ್ಲಾ ವೇದನೆಗಳಾಚೆಗಿನ ಸಂವೇದನೆಗಳನ್ನು ಚಿತ್ರಿಸುವ ಕಾವ್ಯಗುಚ್ಚ ಜೀವಜೀವದ ಹಾಡು. ಶ್ರಮಿಕ ಬದುಕು ಮತ್ತು ಪ್ರಾಕೃತಿಕ ತತ್ವಗಳನ್ನು ಅನುಸಂಧಾನಗೊಳಿಸುವ ಈ ಕಾವ್ಯಗುಚ್ಚವು ಬರುಡ ನೆಲೆದಲ್ಲಿ ಚಿಗುರಿದ ಗರಿಕೆಯಂತೆ ಹೊಸ ಬದುಕಿಗೆ ನಾಂದಿಯಾಡುತ್ತದೆ. ಇಲ್ಲಿ ಕಡುಕಷ್ಟದ ನಡುವೆಯೂ ತನ್ನ ಕನಸುಗಳನ್ನು ಜೀವಂತಗೊಳಿಸುವ ಮನುಷ್ಯನ ಬದುಕಿನ ಚಿತ್ರಣವನ್ನು ಸಾರುವ ಕವಿತೆಯೊಂದು ಹೀಗಿದೆ:
ಸುಡುವ ಭೂಮಿಯ ಮೇಲೆ
ಮೋಡ ಕಣ್ಣ ಹಾಯಿಸಿ
ಹೊಲಗದ್ದೆ ಬಯಲಲ್ಲಿ
ಜೀವ ಜೀವದ ಹಾಡು
ಎಂದು ಆರಂಭವಾಗುವ ಕವಿತೆಯು ಮಾನವನ ಬದುಕಿನ ವಿವಿಧ ಸ್ತರಗಳನ್ನು ಅನುಸಂಧಾನಗೊಳಿಸುತ್ತ, ಯಾಂತ್ರಿಕೃತ ವಲಯದಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸ್ವರೂಪವನ್ನು ಅನಾವರಣಗೊಳಿಸುತ್ತಲೆ, ಹೊಸ ಕನಸೊಂದಕ್ಕೆ ಮುನ್ನುಡಿಯನ್ನು ಬರೆಯುವ ಕ್ರಮವೊಂದು ಹೀಗಿದೆ;
ಮನುಜ ಮನುಜರ ನಡುವೆ
ಕೊಳೆತಿರುವ ಪ್ರೀತಿ ಬೇರೂರಿ
ಚಿಗುರೊಡೆದು ಜೀವ ಜೀವದ ಹಾಡು
ಎಂಬಲ್ಲಿ ಹೊಸ ಬದುಕಿನ ಆಶಾ ಗೋಪುರದ ನಿರ್ಮಾಣದ ಕನವರಿಕೆ ಈ ಕವಿತೆಯಲ್ಲಿ ವೇದ್ಯವಾಗುತ್ತದೆ. ಇಲ್ಲಿನ ಬಹುತೇಕ ಕವಿತೆಗಳಲ್ಲಿ ತಳಸಮುದಾಯದ ಶ್ರಮಿಕರ ಬದುಕನ್ನು ಪ್ರಕೃತಿಯೊಂದಿಗೆ ಅನುಸಾಂಧಾನಗೊಳಿಸುವ ಕ್ರಮವು ವಿಶಿಷ್ಟಯಿಂದ ಕೂಡಿದೆ. ಆ ಮೂಲಕ ಜೀವಪರ ನಿಲುವುಗಳನ್ನು ಪ್ರತಿಪಾದಿಸುವುದು ಕಂಡುಬರುತ್ತದೆ. ಪ್ರಕೃತಿಯ ಮಡಿಲಿನಲ್ಲಿ ಶ್ರೇಷ್ಟ ಕನಿಷ್ಟವೆಂಬ ಪರಿಕಲ್ಪನೆಗಳು ಎದುರಾಗುವುದಿಲ್ಲ. ಇದು ಮಾನವ ನಿರ್ಮಿತ ತಂತ್ರ. ಈ ತಂತ್ರಗಾರಿಕೆಯನ್ನು ಪ್ರಾಕೃತಿಕ ತತ್ವದ ಅಡಿಯಲ್ಲಿ ಮೀರುವ ಪ್ರಯತ್ನವೊಂದು ಜೀವಜಲದಂತೆ ಕವಿತೆಯ ಮೂಲಕ ಪ್ರವಹಿಸುತ್ತದೆ.
ಯಾರು ಬಡವ ಯಾರು ದನಿಕ
ಹುಟ್ಟು ಸಾವಿನೆದುರಲಿ
ಗಾಳಿ ಬೆಳಕು ಯಾರ ಸ್ವತ್ತು
ಎಂದು ಪ್ರಶ್ನೆ ಮಾಡುವ ಕವಿ, ಪ್ರಕೃತಿಯ ಮಡಿಲಿನಲ್ಲಿ ಮಾನವ ಜಗತ್ತೆಲ್ಲ ಒಂದೆ ಎಂಬುದನ್ನು ಪ್ರತಿಪಾದಿಸಲು ಮುಂದಾಗಿದ್ದಾರೆ. ಗಾಳಿ ಅಲೆಯುವುದಕ್ಕಾಗಲಿ, ನೀರು ಹರಿಯುವುದಕ್ಕಾಗಿ ಹಾಗೆಯೇ ಬೆಂಕಿ ಉರಿಯುವುದಕ್ಕೆ ಯಾರ ಅಪ್ಪಣೆಯ ಅಗತ್ಯವಿಲ್ಲ ಎಂಬ ಸಾರ್ವತ್ರಿಕ ಸತ್ಯವನ್ನು ಪ್ರತಿಪಾದಿಸುವಾಗ ಒಬ್ಬ ಸಂತನಾಗಿ, ತತ್ವಪದಕಾರನಾಗಿ ಲೋಕ ನೀತಿಯನ್ನು ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಾರೆ. ಹಾಗೆಯೇ ಪ್ರಕೃತಿ ಮತ್ತು ಮಾನವ ಸಂಬಂಧದ ಸರಪಳಿಯು ವಿವಿಧ ಆಯಾಮಗಳಲ್ಲಿ ಕಾವ್ಯ ಸ್ವರೂಪವನ್ನು ಪಡೆದುಕೊಂಡಿದೆ. “ಆ ಬೆಟ್ಟದ ಮೇಲೆ ಕಾಡೆಲ್ಲ ಬರಡು, ಹೊಂಗೆಯ ಹೂವರಳಿ ಕೆಳಗೆ ಚೆಲ್ಲಿದೆ ನೆರಳು” ಎಂದು ಆರಂಭವಾಗುವ ಕವಿತೆಯು ಬೆಟ್ಟ ಗುಡ್ಡ, ನದಿ ಕಣಿವೆಗಳಲ್ಲಿ ಜೀವತಳೆದ ಜೀವರಾಶಿಗಳ ಜೀವನ ಕ್ರಮವನ್ನು ದರ್ಶಿಸುತ್ತಲೆ, ಆ ಪರಿಸರದಲ್ಲಿನ ಪರಸ್ಪರಾವಲಂಭಿ ಆಹಾರ ಕ್ರಮದಲ್ಲಿ “ಹಾವು ಕಪ್ಪೆಯ ಹಿಡಿದು ನುಂಗಲು ಕಾಯುತಿದೆ, ಕಪ್ಪೆಯು ತಲೆಯ ಮೇಲಿನ ನೊಣಕೆ ಬೇಸರಿಸಿದೆ” ಎಂಬ ಪ್ರಾಕೃತಿಕ ತತ್ವವನ್ನು ಅನಾವರಣಗೊಳಿಸುತ್ತದೆ.
ಜೀವ ಭಾವಗಳ ಬೆಸೆಯುವ ಸೇತುವೆಯಂತೆ ಸಿದ್ಧಗೊಂಡ ನಾಗತಿಹಳ್ಳಿ ರಮೇಶ್ ಅವರ ಕಾವ್ಯಗಳು ಸದಾ ತುಡಿತ ಮಿಡಿತವನ್ನು ಹೊರ ಸೂಸುತ್ತವೆ. ಎರಡು ಜೀವಗಳ ಭಾವಸೆಲೆಗಳನ್ನು “ನಾನೊಂದು ಮರ ನೀನೊಂದು ಮರ, ಒಂದೆ ತಾವು ನಮಗೆ” ಎಂಬ ಕವಿತೆಯ ಮೂಲಕ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಬಿಸಿಲ ಬೇಗೆಗೆ ಧಣಿದ ಮನಗಳೆರಡು ಮಳೆ ಹನಿಯಿಂದ ತಂಪಾಗುವ ಕ್ರಿಯೆಗೆ ಪರಿತಪಿಸುವ ಬಗೆಯು ಜೀವ ಕಾರುಣ್ಯದಿಂದ ಕೂಡಿದೆ. “ಯಾಕೊ ಹನಿಯ ಸುಳಿವಿಲ್ಲ, ಮುಗಿಲೆಡೆಗೆ ನಮ ಧ್ಯಾನ” ಎಂಬ ಕಾತರದ ನುಡಿಗಳು ಹಸಿವು ಮತ್ತು ಹಂಬಲಿಕೆಯ ಪ್ರತಿರೂಪವಾಗಿ ಕಂಡುಬರುತ್ತವೆ. ಹೀಗೆ ಪರಿತಪಿಸುವ ಮನಗಳಿಗೆ ಯಾರೋ ಇಬ್ಬರು ಬಂದು ನೀರೆರೆಯುವ ಬಗೆಯನ್ನು ಜ್ಯಾತ್ಯಾತೀತ ನೆಲೆಯ ಮೂಲಕ ವ್ಯಕ್ತಪಡಿಸುತ್ತಾರೆ. ‘ಯಾರೋ’ ಎನ್ನುವ ರೂಪಕವೆ ಜಾತಿ, ಮತ, ಪಂಥಗಳನ್ನು ಮೀರಿದ ಜೀವ ಜಗತ್ತಾಗಿದೆ. ಮಣ್ಣು, ನೀರು ಮಿಲನವಾಗಿ ಪ್ರಕೃತಿಯು ಮರುಜೀವ ಪಡೆಯುವ ದೃಷ್ಟಿಕೋನ ಇಲ್ಲಿ ಜೀವಂತಿಕೆಯಿಂದ ಕೂಡಿದೆ. ಈ ಮಿಲನದ ಅಡಿಯಲ್ಲಿ ಜೀವ ಭಾವಗಳು ಅನುಸಂಧಾನಗೊಳ್ಳುವ ಕ್ರಮ ಹೀಗೆ ಮುಂದುವರೆಯುತ್ತದೆ;
ಮುತ್ತು ಮುತ್ತಿಗೂ ಅರಳಿದೆ ಮಡಿಲು
ಬೆವರು ಮಳೆಯಾಗಿ ಸೇರಿದೆ ಕಡಲು
ತುಟಿಯಲಿ ಬೆಸೆದ ಆ ಕನಸು
ಚಿಪ್ಪಲಿ ಮುತ್ತಾಯ್ತು, ಮುತ್ತೆಲ್ಲ ಒಲವಾಯ್ತು
ಹೀಗೆ ಹಸಿವಿನಿಂದ ಬರಡಾದ ಜೀವಗಳೆರಡನ್ನು ಸಾಮರಸ್ಯದ ನೆಲೆಯಲ್ಲಿ ಬೆಸೆಯುವ ಮತ್ತು ಪ್ರಕೃತಿಯೊಂದಿಗೆ ಅನುಸಂಧಾನಗೊಳಿಸುವ ವಿಶಿಷ್ಟ ಆಯಾಮವೊಂದು ಇಲ್ಲಿ ಜೀವ ಭಾವಗಳ ಬಂಧವಾಗಿ ಮುಂದುವರೆಯುತ್ತದೆ.
ನಾಗತಿಹಳ್ಳಿ ರಮೇಶ್ ಅವರು ಸದಾ ಕ್ರಿಯಾಶೀಲರಾಗಿ ಒಂದಿಲ್ಲೊಂದು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ದೇಶ ಸುತ್ತುವ ಮೂಲಕ ಸಂವೇದನೆಗಳನ್ನು ಸೆರೆಹಿಡಿಯುವ ಮೋಡಿಗಾರ. ಇವರದು ನನ್ನದು ಸಾಮಾಜಿಕ ಜಾಲತಾಣದ ಸಂಬಂಧ. ಮುಖಪುಟದಲ್ಲಿ ಗೆಳೆಯನಾಗಿ ಅವರ ಎಲ್ಲಾ ಜೀವಪರ ಕಾಳಜಿಯನ್ನು ಸೂಕ್ಷ್ಮವಾಗಿ ಅರಿತಿದ್ದೇನೆ. ಅವರ ಈ ಜೀವಪರ ಮತ್ತು ಜೀವ ಕಾರುಣ್ಯದ ತುಡಿತ ಹೀಗೆ ಸಾಗಲಿ. ‘ಜೀವಜೀವದ ಹಾಡು’ ಮಾಧುರ್ಯದಿಂದ ಹೊರಬರಲು ಕಾರಣೀಭೂತರಾದ ಸಂಗೀತ ನಿರ್ದೇಶಕರಾದ ಎಸ್.ಆರ್.ರಾಮಕೃಷ್ಣ ಹಾಗೂ ಎಲ್ಲಾ ಹಿನ್ನೆಲೆ ಗಾಯಕರ ಶ್ರಮವು ಮಹತ್ವದ್ದಾಗಿದೆ. ಎಸ್.ಆರ್.ರಾಮಕೃಷ್ಣ ಬಹುಮುಖಿ ಕಲಾವಿದರಾಗಿದ್ದು ಒಬ್ಬ ನಿಷ್ಠಾವಂತ ಪತ್ರಕರ್ತರು, ಚಿಂತಕರು, ಭಾಷಾಂತರಕಾರರಾಗಿಯೂ ಸೇವೆ ಸಲ್ಲಿಸಿದ್ದು, ಸದಾ ಜೀವಪರವಾಗಿ ತುಡಿಯುವ ಸ್ವಭಾವದವರಾಗಿದ್ದಾರೆ. ಇವರ ಒತ್ತಾಸೆಯ ಫಲವಾಗಿ ನಾಗತಿಹಳ್ಳಿ ರಮೇಶ್ ಅವರ ಕವಿತೆಗಳು ಸಂಗೀತ ಮಾಧುರ್ಯದೊಂದಿಗೆ ಮರುಹುಟ್ಟು ಪಡೆದುಕೊಂಡಿವೆ. ಹಾಗೆಯೇ ನಾಗತಿಹಳ್ಳಿ ರಮೇಶ್ ಅವರ ಧ್ವನಿ ಹೊತ್ತಿಗೆಯು ಸಿದ್ಧಗೊಳ್ಳಲು ಅವರ ಆಪ್ತ ವಲಯವು ಹೆಗಲೊಡ್ಡಿ ದುಡಿದಿದೆ. ಇಲ್ಲಿ ಬಹು ಮನುಸುಗಳ ಶ್ರಮವಿದೆ. ಆ ಮನಸುಗಳು ಈ ಸಮಾಜಕ್ಕೊಂದು ಮಹತ್ತರವಾದ, ಜೀವಪರವಾದ ಸಂದೇಶವನ್ನು ನೀಡಬೇಕೆಂಬ ತುಡಿತವನ್ನು ವ್ಯಕ್ತಪಡಿಸಿವೆ. ಈ ಎಲ್ಲ ಜೀವಪರ ಮನಸುಗಳು ಜೇನುಗೂಡಿನಂತೆ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯ ಹಾಗೂ ಸಂಗೀತ ಲೋಕಕ್ಕೆ ಮತ್ತಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಭಾವನೆಗಳನ್ನು ಬಡಿದೆಬ್ಬಿಸುವ ಈ ಧ್ವನಿ ಹೊತ್ತಿಗೆಯನ್ನು ನೀಡಿದ ಎಲ್ಲರಿಗೂ ಕನ್ನಡ ಸಹೃದಯರ ಪರವಾಗಿ ನಮಿಸುತ್ತೇನೆ.
(ಲೇಖಕರು: ಡಾ.ಕೆ.ಎ. ಓಬಳೇಶ್, ಸಂಶೋಧಕರು. ಇಮೇಲ್: eakantagiri@gmail.com. ಮೊ:
9538345639/ 9591420216 )