ಅಂಕಣ
ಕವಿತೆ | ನಟಿಸುತ್ತೇನೆ ಈ ಚಿತ್ರಶಾಲೆಯಲ್ಲಿ
- ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು
ದುಗುಡದ ದನಿಗಳೆಲ್ಲ
ಹುದುಗಿ ಹೋಗಲಿ
ನನ್ನೊಳಗೆ
ದುಃಖದ ನದಿಗಳೆಲ್ಲ
ಹಾದು ಹೋಗಲಿ..
ನಾನು ಕೂಡ ನಿನ್ನಂತೆ
ನಗೆಯ ನಟಿಸುತ್ತೇನೆ..
ನಿರಾಕಾರ ಕ್ಯಾನ್ವಾಸಿನ ಮೇಲೆ
ಬೇಕಾದ್ದನ್ನು ಗೀಚಿಕೊಳ್ಳುತ್ತೇನೆ
ಒಮ್ಮೊಮ್ಮೆ ಬೇಡದ್ದೂ..
ಯಾರ್ಯಾರದ್ದೊ ಇಷ್ಟಾನಿಷ್ಟದಂತೆ!
ಗತದ ಘೋರ ಪಾತಕವನ್ನು
ತರಚು ಗಾಯವೆಂದು ಕರೆದು,
ಹೋದಲ್ಲಿ, ಬಂದಲ್ಲಿ
ಅದನ್ನೇ ಜಪಿಸಿ ತಳವೂರುತ್ತೇನೆ…
ಹುಸಿ ನೆಮ್ಮದಿಯ ನಿಟ್ಟುಸಿರ
ಹೊರಸೂಸಿ..
ಅತ್ಯಾಸೆಯ ರೆಕ್ಕೆಗಳ
ಮುರಿದುಕೊಳ್ಳುತ್ತೇನೆ
ದಿಗಂತದೆಡೆಗೆ ಹಾರುವ
ಕನಸುಗಳ ಸುಟ್ಟು,
ಅದರ ಬೂದಿಯನ್ನೆ
ವಿಭೂತಿಯಾಗಿ ಬಳಿದು,
ವೈರಾಗ್ಯದ
ಮಾತುಗಳನುದುರಿಸುತ್ತಾ..
ಸುತ್ತಲಿನ ಸತ್ತ ಮೆದುಳುಗಳೊಳಗೆ ನಿರಾಕಾರವಾದವುಗಳೆನೇನೋ ಮೊಳೆತು,
ಬೇರು ಬಿಟ್ಟು, ಆಳಕ್ಕಿಳಿದು
ಕೈಕೊಡಲಿಗಳಾಗಿ
ಕತ್ತು ಕತ್ತರಿಸುವ ಫರ್ಮಾನು
ಹೊರಡಿಸುವಾಗಲೂ
ನಿಶ್ಚಿಂತೆಯ ನಟಿಸುತ್ತೇನೆ!
ಮಹನೀಯನ ಚಿತ್ರಗಳು
ಬೇಕಾದಂತೆ ಬರೆಯಲ್ಪಡುವ,
ಬಿಕರಿಯಾಗುವ, ಚಿತ್ರಶಾಲೆಯಲ್ಲಿ;
ಜೀ..ಹುಜೂರ್..ಉಸುರುತ್ತಾ,
ನಿಂತ ಮೂಢರ ಗುಂಪುಗಳೊಳಗೆ
ಕಾಲ ಸವೆಸುತ್ತೇನೆ. (ಕವಿ:ಉದಯ್ ಕುಮಾರ್. ಎಂ, ಬಸವನತ್ತೂರು-ಕೊಡಗು)
ಸುದ್ದಿದಿನ.ಕಾಂ|ವಾಟ್ಸಾಪ್|9980346243