ದಿನದ ಸುದ್ದಿ
ಭತ್ತ ನಾಟಿ ಮಾಡಲಿದ್ದಾರೆ ಎಚ್.ಡಿ.ಕೆ
ಸುದ್ದಿದಿನ ಡೆಸ್ಕ್ | ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಅರಳುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಗದ್ದೆಯಲ್ಲಿ ಮುಖ್ಯಮಂತ್ರಿಯವರು ಆಗಸ್ಟ್ 11 ರಂದು ಭತ್ತ ನಾಟಿ ಮಾಡಲಿರುವ ಹಿನ್ನೆಲೆ ಇಂದು ಸಣ್ಣ ನೀರಾವರಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಸೀತಾಪುರ ಗ್ರಾಮಕ್ಕೆ ಭೇಟಿ ಸ್ಥಳ ಪರಿಶೀಲಿಸಿದರು.
ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮುನ್ನ ಮುಖ್ಯಮಂತ್ರಿಯವರು ಇಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ನಂತರ ರೈತರೊಂದಿಗೆ ಸೇರಿ, ಮಹದೇವಮ್ಮ ಎಂಬುವರ 5 ಎಕರೆ ಜಮೀನಿನಲ್ಲಿ ಭತ್ತ ನಾಟಿ ಮಾಡಲಿದ್ದಾರೆ. ಸಂಪೂರ್ಣವಾಗಿ 5 ಎಕರೆ ಜಮೀನಿನಲ್ಲಿ ಭತ್ತದ ಕಾರ್ಯ ಪೂರ್ಣಗೊಳ್ಳುವ ವರೆಗೆ ಇದ್ದು, ಮುಖ್ಯಮಂತ್ರಿಯವರು ರೈತರೊಂದಿಗೆ ಊಟ ಮಾಡಲಿದ್ದಾರೆ ಎಂದು ತಿಳಿಸಿದರು.
ರೈತರನ್ನು ಕೃಷಿ ಚಟುವಟಿಕೆಯಲ್ಲಿ ಪ್ರೋತ್ಸಾಹಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನಾಟಿ ಕಾರ್ಯದಲ್ಲಿ ತೊಡಗಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ನಾಲ್ಕು ವರ್ಷಗಳಿಂದ ಸಂತೃಪ್ತರಾಗಿ ಭತ್ತವನ್ನು ನಾಟಿ ಮಾಡಲು ಸಾಧ್ಯವಾಗಿರುವುದಿಲ್ಲ. ರಾಜ್ಯ ಎಲ್ಲಾ ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಜಲಾಶಯಗಳು ಭರ್ತಿಯಾಗಿದ್ದು, ರೈತರು ಸಂತಸ ಪಡುವಂತಾಗಿದೆ ಎಂದರು.
ಜಿಲ್ಲಾಧಿಕಾರಿ ಎನ್.ಮಂಜುಶ್ರೀ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರಾದ ಬಸವರಾಜೇಗೌಡ, ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401