ಕ್ರೀಡೆ
ಮಧ್ಯಾಹ್ನದ ಪ್ರಮುಖ ಸುದ್ದಿಗಳು
ಸುದ್ದಿದಿನ ಕನ್ನಡ ನ್ಯೂಸ್ ಮಧ್ಯಾಹ್ನದ ಪ್ರಮುಖ ಸುದ್ದಿಗಳು
- ದೇಶದಲ್ಲಿ ಲೋಕಸಭಾ ಚುನಾವಣೆಯ 6ನೇ ಹಂತಕ್ಕಾಗಿ ಇಂದು ಮತದಾನ ಪ್ರಗತಿಯಲ್ಲಿದೆ. 11 ಗಂಟೆಯ ವೇಳೆಗೆ ಬಂದ ವರದಿಯ ಪ್ರಕಾರ ಒಟ್ಟಾರೆ 6ನೇ ಹಂತದ 58 ಕ್ಷೇತ್ರಗಳಲ್ಲಿ ಶೇಕಡ 25.76ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇಕಡ 23.67, ಹರಿಯಾಣದ ಶೇಕಡ 22.09, ಜಾರ್ಖಂಡ್‌ನಲ್ಲಿ ಶೇಕಡ 27.80, ಒಡಿಶಾದ ಶೇಕಡ 21.30, ಉತ್ತರಪ್ರದೇಶದ 27.06, ಪಶ್ಚಿಮಬಂಗಾಳದಲ್ಲಿ 36.88, ದೆಹಲಿಯಲ್ಲಿ 21.69 ಹಾಗೂ ಜಮ್ಮು-ಕಾಶ್ಮೀರದಲ್ಲಿ ಶೇಕಡ 23.11ರಷ್ಟು ಮತದಾನವಾಗಿದೆ.
- ದೆಹಲಿಯಲ್ಲಿಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಕರ್, ಕೇಂದ್ರ ಸಚಿವರಾದ ಡಾ. ಎಸ್. ಜೈಶಂಕರ್, ಹರ್‌ದೀಪ್ ಸಿಂಗ್ ಪುರಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಆಪ್ ನಾಯಕಿ ಅತೀಶಿ ಸಿಂಗ್ ಸೇರಿದಂತೆ ಹಲವು ಪ್ರಮುಖರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಸಾರ್ವಜನಿಕರನ್ನು ಮತದಾನದಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ.
- ಮಳೆಗಾಲ ಆರಂಭವಾಗಿದ್ದು, ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಹಾವೇರಿ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
- ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಉಂಟಾದ ಹಾನಿಗೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
- ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ – ಎನ್‌ಐಎ ಬಂಧಿಸಿದೆ. ಹುಬ್ಬಳ್ಳಿಯ 35 ವರ್ಷದ ಶೋಯಬ್ ಅಹಮದ್ ಮಿರ್ಜಾ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 5ನೇ ಆರೋಪಿಯಾಗಿದ್ದು, ಲಷ್ಕರ್ ಎ ತೊಯ್ಬಾದ ಭಯೋತ್ಪಾದನಾ ಸಂಚು ಪ್ರಕರಣದಲ್ಲಿ ಮಾಜಿ ಆರೋಪಿಯಾಗಿದ್ದಾನೆ ಎಂದು ಎನ್‌ಐಎ ತಿಳಿಸಿದೆ.
- ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ಸ್ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು, ವಿಶ್ವದ 20ನೇ ಶ್ರೇಯಾಂಕಿತ ಥೈಲ್ಯಾಂಡ್‌ನ ಬುಸಾನನ್ ಆಂಗ್‌ಬಾಮ್‌ರುಂಗ್‌ಫಾನ್ ವಿರುದ್ಧ ಫೈನಲ್ಸ್ ಪ್ರವೇಶಿಸಲು ಸೆಣಸಲಿದ್ದಾರೆ.
- ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 36 ರನ್‌ಗಳ ಗೆಲುವು ದಾಖಲಿಸಿದ್ದು, ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243