ದಿನದ ಸುದ್ದಿ

ಈವರೆಗಿನ ಪ್ರಮುಖ ಸುದ್ದಿಗಳು

Published

on

ಈವರೆಗಿನ ಪ್ರಮುಖ ಸುದ್ದಿಗಳು

 

  1. ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಅಕ್ರಮವಾಗಿ ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸುವುದರ ಜೊತೆಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಎಚ್ಚರಿಕೆ ನೀಡಿದ್ದಾರೆ.
  2. ಚಾಮರಾಜನಗರ ಜಿಲ್ಲೆಯಲ್ಲಿ ಇಂಧನ ಇಲಾಖೆ ಪರಿವರ್ತಕ ಕೇಂದ್ರಗಳ ನಿರ್ವಹಣೆ ಅಭಿಯಾನ ಆರಂಭವಾಗಿದೆ. ಮೇ 5ರಿಂದ ಆರಂಭಗೊಂಡಿರುವ ಅಭಿಯಾನ 15ರವರೆಗೆ ನಡೆಯಲಿದೆ ಎಂದು ಮೈಸೂರು ವಲಯದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮುಖ್ಯ ಅಭಿಯಂತರ ಉಮೇಶ್ ಚಂದ್ರ ತಿಳಿಸಿದ್ದಾರೆ.
  3. ದೇಶ ಸ್ವಾತಂತ್ರ್ಯ ಹೊಂದುವ ಮೊದಲು, ನಂತರ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಬದಲಾವಣೆಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರು ವಹಿಸಿದ್ದ ಪಾತ್ರ ಮಹತ್ವದ್ದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
  4. ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿಯನ್ನು ಹೊಂದಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ದಾವಣಗೆರೆಯಲ್ಲಿಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
  5. ಭಾರತ ತನ್ನೆಲ್ಲಾ ಸಾಮರ್ಥ್ಯದೊಂದಿಗೆ ಪ್ರಗತಿಯತ್ತ ಸಾಗುತ್ತಿರುವುದು ಹಾಗೂ ಜಗತ್ತಿನ ಕಲ್ಯಾಣದ ಉದ್ದೇಶದೊಂದಿಗೆ ಮುಂದುವರಿಯುತ್ತಿರುವ ಬಗ್ಗೆ ವಿಶ್ವದ ಪ್ರತಿಯೊಬ್ಬರು ಆಸಕ್ತಿಯಿಂದ ನೋಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತದ ದೂರದೃಷ್ಟಿ ಸ್ಪಷ್ಟವಾಗಿದೆ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣ ಮಾಡುವುದು ನಮ್ಮ ಭವಿಷ್ಯದ ಕಾರ್ಯಕ್ರಮ ಹಾಗೂ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
  6. ಭಾರತದಲ್ಲಿ ಕೋವಿಡ್ ಸಾವು ಪ್ರಕರಣಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಅಂಕಿ-ಅಂಶಗಳ ನೈಜತೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಂ ಭಾರ್ಗವ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಭಾರ್ಗವ, ಕೋವಿಡ್ ಸಾವುಗಳು ಸಂಭವಿಸುತ್ತಿದ್ದಾಗ ಅವುಗಳನ್ನು ವ್ಯಾಖ್ಯಾನಿಸುವುದು ಕಷ್ಟಸಾಧ್ಯ. ವಿಶ್ವ ಆರೋಗ್ಯ ಸಂಸ್ಥೆಗೂ ಇದು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
  7. ಎಲ್ಲಾ ರೀತಿಯ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದರ ಜತೆಗೆ ಕೈಗೆಟಕುವ ದರದಲ್ಲಿ ಪೂರೈಸಲು ಭಾರತ ಬದ್ಧವಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ಬಹು ಭಾಗೀದಾರರ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ನಾವಿನ್ಯತೆ ಕುರಿತ ೭ನೇ ವಾರ್ಷಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಸಮಾನತೆಯ ತತ್ವವನ್ನು ಭಾರತ ಬಲವಾಗಿ ಪ್ರತಿಪಾದಿಸುತ್ತಾ ಬಂದಿದೆ ಎಂದರು.
  8. ರಾಜ್ಯದಲ್ಲಿ ನಿಗದಿಯಂತೆ ಇದೇ 16ರಿಂದ ಶಾಲೆಗಳು ಪ್ರಾರಂಭವಾಗಲಿವೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್ ಬೆಂಗಳೂರಿನಲ್ಲಿಂದು ಸ್ಪಷ್ಟಪಡಿಸಿದ್ದಾರೆ. ಕೆಲಭಾಗದಲ್ಲಿ ಬಿಸಿಲಿನ ತಾಪಮಾನ ಏರುತ್ತಿರುವುದರಿಂದ ಶಾಲೆಗಳ ಆರಂಭ ಮುಂದೂಡುವ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಹೇಳಿದರು.
  9. ರಾಗಿ ಖರೀದಿ ಕೇಂದ್ರಗಳಲ್ಲಿ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳು ಕಂಡು ಬಂದರೆ, ಅವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ಹಾಸನ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಪಡೆದು, ರಾಗಿ ಖರೀದಿಯನ್ನು ಪುನಃ ಆರಂಭಿಸಲಾಗಿದ್ದು, ಇದು ರೈತರಿಗೆ ತಲುಪಬೇಕು ಎಂಬುದು ರಾಜ್ಯ ಸರ್ಕಾರದ ಗುರಿಯಾಗಿದೆ ಎಂದರು.
  10. ಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಯಶಸ್ವಿನಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಹಕಾರ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆ ಸಂಬಂಧ ಆರ್‌ಬಿಐ ನಿಯಮಾವಳಿ ಅನುಸಾರ ಅಗತ್ಯ ದಾಖಲೆ ಸಲ್ಲಿಸುವ ಕಾರ್ಯ ಒಂದು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
  11. ರಾಜ್ಯದಲ್ಲಿರುವ 13ಶಾಖೋತ್ಪನ್ನ ಘಟಕಗಳು ಪೂರ್ಣಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡುತ್ತಿವೆ. ಈ ಘಟಕಗಳಿಗೆ ಅಗತ್ಯವಾದ ಕಲ್ಲಿದ್ದಲು ಸರಬರಾಜು ಆಗುತ್ತಿದೆ ಎಂದು ಇಂಧನ ಸಚಿವ ವಿ.ಸುನೀಲ್‌ಕುಮಾರ್ ಹೇಳಿದ್ದಾರೆ.
  12. ರಾಜ್ಯದಲ್ಲಿ ಪ್ರಸ್ತುತ 6 ಲಕ್ಷ 83 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಯಾವುದೇ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಅಭಾವ ಉಂಟಾಗುವುದಿಲ್ಲವೆಂದು ಕೃಷಿ ಖಾತೆ ಸಚಿವ ಬಿ.ಸಿ. ಪಾಟೀಲ ಹಾವೇರಿಯಲ್ಲಿ ಹೇಳಿದ್ದಾರೆ.
  13. ದೈಹಿಕ ಆರೋಗ್ಯಕ್ಕೆ ಎಷ್ಟು ಮಹತ್ವ ಸಿಗುತ್ತದೆಯೋ ಅಷ್ಟೇ ಮಹತ್ವ, ಮಾನಸಿಕ ಆರೋಗ್ಯಕ್ಕೂ ಸಿಗವೇಕು. ಆಧುನಿಕ ಜೀವನ ಶೈಲಿಯಿಂದ ಜನರು ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಕೇವಾಡಿಯಾದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version