ದಿನದ ಸುದ್ದಿ
NRC ಬೇಡ ಅನ್ನುವುದಕ್ಕೊಂದು ತಾಜಾ ಉದಾಹರಣೆ, ಮಿಸ್ ಮಾಡ್ದೆ ಓದಿ..!
- ಉದಯ್ ಗಾವ್ಕರ್
ಪಾರ್ಬತಿದೇವಿ.ಆಸ್ಸಾಂನ ಚಿರಾಂಗ್ ಜಿಲ್ಲೆಯ ಹಂಚರಾ ಪೋಲಿಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈಕೆಯ ಮನೆಯಿದೆ. ಕಳೆದ ಎರಡು ವರ್ಷ ಎಂಟು ತಿಂಗಳಿಂದ detention camp ಎಂದು ಕರೆದುಕೊಳ್ಳುವ ಜೈಲಿನಲ್ಲಿ ಇದ್ದಾಳೆ. ಈಕೆಯ ಹತ್ತಿರ ಆಧಾರ್ ಇದೆ. ವೋಟರ್ ಕಾರ್ಡ್ ಇದೆ. ರೇಷನ್ ಕಾರ್ಡ್ ಇದೆ.
ಆದರೆ, ಈ ದಾಖಲೆಗಳು ಆಕೆಯನ್ನು ಇದೇ ದೇಶದವಳು ಎಂದು ಸಾಬೀತುಮಾಡಲು ಸಾಧ್ಯವಾಗಲಿಲ್ಲ. ಆಕೆಯ ಮಗ ಬಿಶ್ವನಾಥ ಸದ್ಯ ಎಲ್ಲ ಪ್ರಯತ್ನಗಳನ್ನು ಕೈಬಿಟ್ಟು ಜೈಲಿನಲ್ಲಿ ಮೂರು ವರ್ಷಗಳ ಅವಧಿ ಮುಗಿದ ನಂತರ ಆಕೆ ಬಿಡುಗಡೆಯಾಗುವುದನ್ನು ಕಾಯುತ್ತಿದ್ದಾನೆ. ತನ್ನಮ್ಮ ತನ್ನ ಕೊನೆಯ ದಿನಗಳನ್ನು ಜೈಲಿನಲ್ಲಿ ಕಳೆಯಬಾರದು ಎಂಬುದು ಅವನಾಸೆ.
ಆತ ಮಾಡಬಹುದಾದ ಪ್ರಯತ್ನಗಳನ್ನೆಲ್ಲ ಮಾಡಿದ್ದಾನೆ. ಅಮ್ಮ ಹುಷಾರಿಲ್ಲದಾಗ ಬೇಲ್ ಸಿಗಬಹುದೆಂದು ವಕೀಲರನ್ನು ಗೊತ್ತುಮಾಡಿಕೊಂಡು ಹೈಕೋರ್ಟ್ ವರೆಗೆ ಅಲೆದಿದ್ದಾನೆ. ಫೊರೆನರ್ಸ್ ಟ್ರಿಬ್ಯುನಲ್ಲಿನಲ್ಲಿಗೂ ಸೆಣಿಸಿದ್ದಾನೆ. ರಿಕ್ಷಾ ಚಲಾಯಿಸಿ ಜೀವನ ನಿರ್ವಹಣೆ ಮಾಡುವ ಬಿಶ್ವನಾಥ ವಕೀಲರಿಗೆ ಕೊಟ್ಟಿದ್ದೇ ಹತ್ತಿರ ಹತ್ತಿರ ಎರಡು ಲಕ್ಷ ರೂಪಾಯಿಗಳಾಗಿವೆ.
ಫಾರಿನರ್ಸ್ ಟ್ರಿಬ್ಯುನಲ್ ನ ಮೊದಲ ಕೆಲವು ಕಲಾಪಗಳನ್ನು ಪಾರ್ಬತಿ ತಪ್ಪಿಸಿಕೊಂಡಿದ್ದರು. ಆ ನಂತರ ತನ್ನ ತಂದೆಯ 1949 ರ ರೇಷನ್ ಕಾರ್ಡ್ ಮತ್ತು ಅವರ ಹೆಸರಿರುವ 1970 ರ ಮತದಾರರ ಪಟ್ಟಿಯನ್ನು ಸಂಪಾದಿಸಿ ಟ್ರಿಬ್ಯುನಲ್ ಗೆ ಕೊಟ್ಟರೂ ಪ್ರಯೋಜನವಾಗಲಿಲ್ಲ.
ತಾನು ಕೊಟ್ಟ ದಾಖಲಾತಿಯಲ್ಲಿರುವ ವ್ಯಕ್ತಿ ತನ್ನ ತಂದೆ ಎಂಬುದನ್ನು ಆಕೆಯಿಂದ ಸಾಬೀತುಪಡಿಸಲಾಗಲಿಲ್ಲ. ಪಂಚಾಯತ್ ಕಾರ್ಯದರ್ಶಿ ತನ್ನಿಂದ ನೀಡಬಹುದಾದ ಪ್ರಮಾಣ ಪತ್ರಗಳನ್ನೆಲ್ಲ ನೀಡಿ ತಮ್ಮೂರಿನ ವೃದ್ಧ ತಾಯಿಯನ್ನು ಊರಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದ್ದು ಫಲ ನೀಡಲಿಲ್ಲ.
ಇದು ಪಾರ್ಬತಿಯ ಕತೆ ಮಾತ್ರವಲ್ಲ. ಕಡಿಮೆ ಆದಾಯವಿರುವ ಮತ್ತು ಸಾಮಾಜಿಕ ಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಬಹುತೇಕ ವಿವಾಹಿತ ಹೆಂಗಸರಿಗೆ ತಮ್ಮ ತಂದೆಯ ಕುಟುಂಬದೊಂದಿಗೆ ಸಂಬಂಧ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ.
ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಆಕೆಯ ಜೈಲಿನ ಅವಧಿಯನ್ನು ಮುಂದಿನ ನಾಲ್ಕು ತಿಂಗಳಿಗೆ ಮೊಟಕುಗೊಳಿಸಿದೆ. ಅಲ್ಲಿಯವರೆಗೂ ಆಕೆ ಬದುಕಿರಲಿ, ಜೀವಂತ ಮನೆ ತಲುಪಲಿ ಮತ್ತು ತನ್ನ ಮನೆಯಲ್ಲೇ ಕೊನೆಯ ದಿನಗಳನ್ನು ಆಕೆ ಕಳೆಯಲಿ ಎಂದು ಹಾರೈಸೋಣ!
ಸುದ್ದಿದಿನ.ಕಾಂ|ವಾಟ್ಸಾಪ್|9980346243