ಬಹಿರಂಗ

ಈ ಸರಕಾರಕ್ಕೆ ತಾಕತ್ತಿದ್ದರೆ ನುಸುಳುಕೋರರನ್ನು ಹಿಡಿಯಲಿ

Published

on

  • ಶ್ರೀನಿವಾಸ ಕಕ್ಕಿಲ್ಲಾಯ

ನಿನ್ನೆ ಮತ್ತೊಬ್ಬ ಮಹಾಶಯರು ಸಿಕ್ಕಿದ್ದರು. ಸಿಎಎ ಬೋಡುಯೇ, ಏತ್ ಜನ ನುರ್ಕ್ ದ್ ಬೈದೆರ್, ಮಾತ ಪಿದಾಯಿ ಪಾಡೊಡ್ಚಾ (ಸಿಎಎ ಬೇಕಪ್ಪಾ, ಎಷ್ಟು ಜನ ನುಸುಳಿ ಬಂದಿದ್ದಾರೆ, ಅವರನ್ನೆಲ್ಲ ಹೊರಗೆ ಹಾಕಬೇಡವಾ) ಎಂದರು.

‘ಓ, ಖಂಡಿತ’ ಎಂದೆ. ಮುಂದುವರಿದು, ಅಲ್ಲ ಮಾರ್ರೆ, ಅಷ್ಟೊಂದು ನುಸುಳುಕೋರರು ಇದ್ದಾರೆ ಅಂತೀರಿ, ನಿಮ್ಮ ಕಣ್ಣಿಗೆ ಯಾರಾದರೂ ಬಿದ್ದಿದ್ದಾರಾ ಅಂತ ಕೇಳಿದೆ.

ಮತ್ತೆ, ಈ ಟೈಲ್ಸ್ ಹಾಕುವವರು, ಪೈಂಟ್ ಬಳಿಯುವವರು, ಎಲ್ಲಾ ಅವರೇ ಮಾರ್ರೆ ಎಂಬ ಉತ್ತರ ಬಂತು.

ಓ, ಅವರಾ, ಅವರನ್ನು ಕರೆಸಿ ಕೆಲಸ ಕೊಟ್ಟದ್ದು ಯಾರು ಮಾರ್ರೆ ಅಂತ ಕೇಳಿದೆ.

ಏನು ಮಾಡುವುದು ಹೇಳಿ, ನಮ್ಮವರಿಗೆ ಸಂಕಟ, ಈ ಕೆಲಸ ಎಲ್ಲ ಮಾಡುವುದಿಲ್ಲ, ಮತ್ತೇನು ಮಾಡುವುದು, ಅದಕ್ಕೆ ಅವರನ್ನು ಕರೆದು ಕೆಲಸ ಕೊಟ್ಟಿರಬೇಕು ಎಂದರವರು.

ಓ, ಹಾಗಾದ್ರೆ ಒಳ್ಳೆದೇ ಆಯ್ತಲ್ಲಾ, ಅವರಿಲ್ಲದೆ ಕಟ್ಟಡದ ಕೆಲಸ ಸಾಧ್ಯವೇ ಇಲ್ಲ ಅಂತಾಯಿತು ಎಂದೆ.

ಗೋಣಾಡಿಸಿದರು.

ಮತ್ತೆ ಕೇಳಿದೆ: ಅತ್ತಿಯೇ, ಅಕುಲು ನುರ್ಕುದು ಬೈದಿನಕುಲು ಪಂಡ್ ದ್ ಇರೆಗ್ ಎಂಚ ಗೊತ್ತಾನ್ಡ್ ಮಾರ್ರೆ?
(ಅಲ್ಲ, ಅವರು ನುಸುಳಿದವರು ಅಂತ ನಿಮಗೆ ಹೇಗೆ ಗೊತ್ತಾಯ್ತು)

ಅಷ್ಟೂ ಗೊತ್ತಾಗುವುದಿಲ್ಲವಾ, ಅವರ ಭಾಷೆಯೇ ಬೇರೆ ಎಂದರು.

ಓ, ಹಾಗಾ, ಯಾವ ಭಾಷೆ ಮಾರ್ರೆ?

ಕೆಲವರು ಹಿಂದಿ, ಕೆಲವರು ಅದೆಂಥದೋ ಬಾಂಗ್ಲಾ ಭಾಷೆ

ಓ, ಇವರಲ್ಲಿ ನುಸುಳಿದವರು ಯಾರು, ಹಿಂದಿಯವರಾ, ಬಾಂಗ್ಲಾ ಭಾಷೆಯವರಾ ಅಂತ ಕೇಳಿದೆ.

ಹಿಂದಿಯವರು ಇರಲಿಕ್ಕಿಲ್ಲ, ಬಾಂಗ್ಲಾ ಭಾಷೆಯವರು ಖಂಡಿತಕ್ಕೂ ನುಸುಳಿದವರೆ ಎಂದರು.

ಸಾರ್, ಬಾಂಗ್ಲಾ ಭಾಷೆ ಭಾರತದಲ್ಲೂ ಉಂಟಲ್ವಾ, ಬಾಂಗ್ಲಾ ಭಾಷೆ ಮಾತಾಡುವವರು ನಮ್ಮ ಪಶ್ಚಿಮ ಬಂಗಾಲದಲ್ಲೂ ಇದ್ದಾರಲ್ಲಾ, ಅಲ್ಲಿನ ಭಾಷೆಯೇ ಬಂಗಾಲಿ, ಬಾಂಗ್ಲಾ; ಆ ಭಾಷೆ ಮಾತಾಡಿದವರೆಲ್ಲ ಬಾಂಗ್ಲಾ ದೇಶದವರು ಅಂತ ನೀವು ಹೇಗೆ ಹೇಳ್ತೀರಿ ಅಂತ ಮತ್ತೆ ಪ್ರಶ್ನಿಸಿದೆ.

ಸ್ವಲ್ಪ ಪಿಳಿ ಪಿಳಿ ಆಯಿತು.

ಎಂತದ್ದಾ ಮಾರ್ರೆ, ನುಸುಳಿದವರ ಹಾಗೆ ಕಾಣ್ತಾರೆ ಅಂತ ಕುಗ್ಗತೊಡಗಿದರು.

ಅಲ್ಲ ಸಾರ್, ಅವರು ಬಾಂಗ್ಲಾದೇಶದವರೇ ಅಂತಾದರೆ ಅವರನ್ನು ಒಳಗೆ ಬಿಟ್ಟದ್ದು ಯಾಕೆ, ಯಾರು, ಇಲ್ಲಿ ಇರಲಿಕ್ಕೆ ಬಿಟ್ಟದ್ದು ಯಾಕೆ, ಯಾರು? ಅದೆಲ್ಲ ತಡೆಯುವುದು ಪೊಲೀಸರು, ಸರಕಾರದ ಕೆಲಸ ಅಲ್ಲವಾ? ಅವರ ತಪ್ಪಿಗೆ ಈಗ 132 ಕೋಟಿ ಜನ ಸಾಲು ನಿಂತು ನಾವು ನುಸುಳುಕೋರರಲ್ಲ ಅಂತ ಈ ಸರಕಾರಕ್ಕೆ ತೋರಿಸಬೇಕಾ? ಈ ಸರಕಾರಕ್ಕೆ ತಾಕತ್ತಿದ್ದರೆ ನುಸುಳುಕೋರರನ್ನು ಹಿಡಿಯಲಿ, ಬರೆ ಬೈದುಕೊಂಡು ಭಾಷಣ ಮಾಡುವುದು ಆಡಳಿತವಾ? ಅಂತ ಹೇಳುತ್ತಲೇ ಹೋದೆ.

ಪಿಳಿ ಪಿಳಿ ಜೋರಾಗುತ್ತಾ ಹೋಯಿತು.

ಕೊನೆಗೆ ಕೇಳಿದೆ: ಅಲ್ಲ ಸಾರ್, ನಿಮ್ಮ ಮನೆ ಕಟ್ಟುವಾಗ ನಿಮ್ಮ ಸಂಶಯದಂತೆ ಇದೇ ಬಾಂಗ್ಲಾದವರು ಟೈಲ್ಸ್ ಹಾಕಿದ್ದಾದರೆ ನೀವು ಆಗಲೇ ಪೊಲೀಸ್ ಕಂಪ್ಲೇಂಟ್ ಕೊಟ್ಟಿರಾ? ಅದಾದರೆ ದೇಶಪ್ರೇಮ. ಅಂಥವರನ್ನು, ಶಂಕಿತ ಭಯೋತ್ಪಾದಕರನ್ನು, ಶಂಕಿತ ಬ್ಯಾಗುಗಳನ್ನು ಕಂಡ ಕೂಡಲೇ ಪೊಲೀಸರನ್ನು ಎಚ್ಚರಿಸುವುದು ದೇಶಪ್ರೇಮ. ನೀವು ಕಂಪ್ಲೇಂಟ್ ಕೊಟ್ಟಿಲ್ಲ ಅಂದ ಮೇಲೆ, ಯಾರೂ ಕಂಪ್ಲೇಂಟ್ ಕೊಟ್ಟಿಲ್ಲ ಅಂದ ಮೇಲೆ ಈಗ ಬಾಯಿಗೆ ಬಂದ ಹಾಗೆ ಮಾತಾಡಿ, ಅದರ ಮೇಲೆ ನೀವೇ ಈ ಸರಕಾರದ ಮುಂದೆ ನಿಂತು ‘ನಾನು ನುಸುಳುಕೋರ ಅಲ್ಲ, ನನ್ನನ್ನು ಬಿಟ್ಟುಬಿಡಿ’ ಅಂತ ಬೇಡಿಕೊಳ್ಳಲಿಕ್ಕೆ ತಯಾರಾಗ್ತಾ ಇದ್ದೀರಲ್ಲಾ, ಎಂಥ ದುರವಸ್ಥೆ ಮಾರ್ರೆ ನಿಮ್ಮದು?

ದಾದಾಂದ್ ಗೊತ್ತಾಪುಜ್ಜಿಯೇ, ಆಂಡಲಾ ಆತ್ ಸುಲಬೊಡು ಅಕ್ಲೆನ್ ಪತ್ತಿಯೆರೆ ಆವಂದ್ (ಏನು ಅಂತ ಗೊತ್ತಾಗುವುದಿಲ್ಲ ಅವರನ್ನು ಹಿಡಿಯುವುದು ಅಷ್ಟು ಸುಲಭ ಇಲ್ಲ)

ನೋಡಿ, ಕಳ್ಳರನ್ನು ಹುಡುಕಿ ಹಿಡಿಯುವುದಕ್ಕೆ ಅಷ್ಟು ಒದ್ದಾಡುವವರನ್ನು ಯಾಕೆ ಓಟು ಕೊಟ್ಟು ಗೆಲ್ಲಿಸಿದಿರಿ? ಅವರಿಗೆ ನುಸುಳುಕೋರರನ್ನು ಹಿಡಿಯಲಿಕ್ಕೆ ಆಗುವುದಿಲ್ಲ ಅಂತಾದರೆ ಹಾಗೆ ಹೇಳಿ ರಾಜೀನಾಮೆ ಕೊಟ್ಟು ಹೋಗಲಿ, ನಾವು ನೀವು ಈ ನಾಲಾಯಕರ ಮುಂದೆ ಸಾಲು ನಿಂತು ನಾವು ನುಸುಳುಕೋರರಲ್ಲ ಅಂತ ತೋರಿಸುವ ಅಗತ್ಯವೇ ಇಲ್ಲ. ಇನ್ನಾದರೂ ಸ್ವಲ್ಪ ತಲೆಯನ್ನು ಉಪಯೋಗಿಸಿ ಸಾರ್ ಅಂದೆ.

ಪಿಳಿ ಪಿಳಿ ನೋಡಿ ಚಪ್ಪೆ ಮೋರೆ ಮಾಡಿ ಹೊರಟರವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version