ದಿನದ ಸುದ್ದಿ
ಪೌರತ್ವ ಕಾಯಿದೆ ಮತ್ತು ಎನ್ ಆರ್ ಸಿ : ನೀವೆಲ್ಲಿದ್ದೀರಿ ನೋಡಿಕೊಳ್ಳಿ
ಪಾಕ್, ಬಾಂಗ್ಲಾ, ಅಫ್ಘಾನ್ ಗಳಿಂದ ಡಿಸೆಂಬರ್ 31, 2014ರೊಳಗೆ ಅಕ್ರಮವಾಗಿ ಭಾರತದೊಳಕ್ಕೆ ನುಸುಳಿದ ಮುಸ್ಲಿಮೇತರರು ಕೇವಲ 5 ವರ್ಷ ಇಲ್ಲಿದ್ದರೆ ಅವರೆಲ್ಲರನ್ನು ಭಾರತೀಯ ಪೌರರನ್ನಾಗಿ ಮಾಡಲಾಗುತ್ತದೆ. ಇದು ಮೋದಿ-ಶಾ ಅವರ ಪೌರತ್ವ ಕಾಯಿದೆಯ ಕೊಡುಗೆ.
ಆದರೆ ಸಾವಿರಾರು ವರ್ಷಗಳಿಂದ ಇಲ್ಲೇ ಸಕ್ರಮವಾಗಿ ವಾಸಿಸುತ್ತಾ, ಈ ಮೋದಿ-ಶಾ ಅವರನ್ನು ಅಧಿಕಾರಕ್ಕೇರಿಸಲು ಓಟನ್ನೂ ಕೊಟ್ಟ ~135 ಕೋಟಿ ಭಾರತೀಯರು ಇಲ್ಲಿನ ಪೌರರು ಹೌದೋ ಅಲ್ಲವೋ ಎಂಬುದನ್ನು ಸದ್ಯದಲ್ಲೇ ಎನ್ ಆರ್ ಸಿ ಪ್ರಕ್ರಿಯೆ ಆರಂಭಿಸಿ ಮೋದಿ-ಶಾ ತಿಳಿಸಲಿದ್ದಾರೆ; ಆ ಮೊದಲ ಪಟ್ಟಿಯನ್ನು ಪ್ರಕಟಿಸುವವರೆಗೆ ಎಲ್ಲ ಭಾರತೀಯರೂ ತಾವು ಭಾರತೀಯರು ಹೌದೋ ಅಲ್ಲವೋ ಎಂದು ತಿಳಿಯಲು ಉಸಿರು ಬಿಗಿ ಹಿಡಿದು ಕಾಯುತ್ತಿರಬೇಕು; ಆ ಪಟ್ಟಿಯಲ್ಲಿ ತನ್ನ ಹೆಸರು ಖಂಡಿತಕ್ಕೂ ಇರಲಿದೆ ಎಂದು ಯಾವ ಭಾರತೀಯನಾದರೂ (ಹಿಂದೂ ಇರಲಿ, ಬೇರೆ ಯಾವುದೇ ಮತದವನಾದರೂ ಇರಲಿ) ಈಗಲೇ ಹೇಳಲು ಸಾಧ್ಯವೇ?
ಅಂದರೆ ಮುಸ್ಲಿಮೇತರ ಅಕ್ರಮ ವಿದೇಶಿ ನುಸುಳುಕೋರರಿಗೆ ಭಾರತೀಯ ಪೌರತ್ವ ಖಚಿತವಾಯಿತು, ~135 ಕೋಟಿ ಭಾರತೀಯರು ತಮ್ಮ ಪೌರತ್ವದ ಸ್ಥಾನಮಾನವನ್ನು ಅರಿಯಲು ಎನ್ಆರ್ ಸಿ ಮೊದಲ ಪಟ್ಟಿಯು ಪ್ರಕಟವಾಗುವವರೆಗೆ ಕಾಯಬೇಕು.
ಯಾರದಾದರೂ ಭಾರತೀಯರ ಹೆಸರುಗಳು ಇನ್ನಷ್ಟೇ ಬರಬೇಕಾದ ಆ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ ಅಂಥವರು ತಾವು ಅಥವಾ ತಮ್ಮ ಹಿರಿಯರು 1971ಕ್ಕೂ ಹಿಂದಿನಿಂದ ಇಲ್ಲೇ ನೆಲಸಿದ್ದೆವು ಎಂಬುದಕ್ಕೆ ಈ ಮೋದಿ-ಶಾ ಸರಕಾರಕ್ಕೆ ಪುರಾವೆ ಸಲ್ಲಿಸಬೇಕಾಗುತ್ತದೆ, ಅದನ್ನು ಪರಿಶೀಲಿಸಿದ ಸರಕಾರಿ ಅಧಿಕಾರಿಗಳು ಭಾರತೀಯರ ಭಾರತೀಯತೆಯನ್ನು ನಿರ್ಧರಿಸಲಿದ್ದಾರೆ.
ವಾಹ್ ವಾಹ್ ವಾಹ್!
ವಿದೇಶಗಳಿಂದ ಓಡಿ, ಅಕ್ರಮವಾಗಿ ಭಾರತಕ್ಕೆ ನುಸುಳಿದವರು ಐದೇ ವರ್ಷ ಇಲ್ಲಿದ್ದರೆ ಭಾರತೀಯರಾಗಿಬಿಡುತ್ತಾರೆ.
ಭಾರತೀಯರಾಗಿ, ಸಕ್ರಮವಾಗಿ ಇಲ್ಲೇ ಬದುಕುತ್ತಿರುವವರು, ಅದರಲ್ಲೂ, ಸಾವಿರಾರು ವರ್ಷಗಳಿಂದ ಇಲ್ಲೇ ಇರುವ ಆದಿವಾಸಿ ಬುಡಕಟ್ಟುಗಳವರು, ಬಡವರು, ನಿರ್ಗತಿಕರು, ಅಲೆಮಾರಿಗಳು, ಇದುವರೆಗೂ ಮತದಾರರ ಪಟ್ಟಿಯಲ್ಲಿ ಸೇರದೇ ಹೋದವರು, ಸಂತೃಸ್ತ ಮಹಿಳೆಯರು, ತಾವು ಇಲ್ಲೇ ಜೀವಿಸುತ್ತಿದ್ದವರು ಎಂದು ಸರಕಾರಕ್ಕೆ ಒಪ್ಪಿಗೆಯಾಗಬಲ್ಲ ಲಿಖಿತ ದಾಖಲೆಗಳಲ್ಲಿ ತೋರಿಸಲಾಗದಿದ್ದರೆ ಅಕ್ರಮ ವಲಸಿಗರಾಗಿ ಬಹಿಷ್ಕೃತರಾಗಲಿದ್ದಾರೆ, ಕೂಡು ಶಿಬಿರಗಳಿಗೋ, ಜೈಲುಗಳಿಗೋ ತಳ್ಳಲ್ಪಡಲಿದ್ದಾರೆ. ಅದರಲ್ಲಿ ಹಿಂದೂ, ಮುಸ್ಲಿಂ ಇತ್ಯಾದಿ ಮತಭೇದವಿರುವುದಿಲ್ಲ, ಯಾರ ಪೌರತ್ವ ದೃಢಗೊಳ್ಳುವುದಿಲ್ಲವೋ ಅವರು ಕೂಡು ಶಿಬಿರಕ್ಕೆ ಹೋಗಲು ಅಣಿಯಾಗಬೇಕು. ಎಲ್ಲ 135 ಕೋಟಿ ಭಾರತೀಯರೂ ಕಾಯೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243