ನೆಲದನಿ
ನುಡಿಯ ಒಡಲು-06 : ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಭಾಗ-02
ಈ ಬರಹದ ಮೊದಲ ಭಾಗದಲ್ಲಿ ಮನುಷ್ಯ ಘನತೆ ಮತ್ತು ಭಾಷಿಕ ಕ್ರಿಯೆ ಎಂಬೀ ಎರಡೂ ಪರಿಕಲ್ಪನೆಗಳ ನಡುವಣ ನಂಟಸ್ತಿಕೆಯನ್ನು ಕುರಿತು ಕೆಲವು ತಾತ್ವಿಕ ಸಂಗತಿಗಳನ್ನು ಚರ್ಚಿಸಲಾಗಿದೆ. ಈ ಭಾಗದಲ್ಲಿ ಮನುಷ್ಯ ಘನತೆಯ ಪ್ರಾಥಮಿಕ ನೆಲೆಗಳನ್ನು ಭಾಷಿಕ ಆಯಾಮಗಳ ಮೂಲಕ ವಿಶ್ಲೇಷಿಸುವ ಪ್ರಯತ್ನವನ್ನು ಮಾಡೋಣ.
ಮನುಷ್ಯ ಘನತೆಯ ಪ್ರಶ್ನೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವ್ಯಾಪಕವಾಗಿ ಚರ್ಚೆಯಾಗುವುದು, ಪ್ರಮುಖವಾಗಿ ಕಾನೂನು ದಾಖಲೆಗಳಲ್ಲಿ. ಅಂದರೆ ಕಾನೂನು ಪರಿಭಾಷೆ ಮತ್ತು ಪರಿಕಲ್ಪನೆಗಳಲ್ಲಿ ಪ್ರಕಟಗೊಳ್ಳುತ್ತದೆ. ಕೆಲವು ನಿರ್ದಿಷ್ಟ ಕಾನೂನಾತ್ಮಕ ವಿವರಗಳ ಮೂಲಕ ಈ ಮನುಷ್ಯ ಘನತೆ ಎನ್ನುವ ಪರಿಕಲ್ಪನೆಯನ್ನು ಯಾವುದೇ ಒಂದು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಮರ್ಥನೆಗಳನ್ನು ಮಂಡಿಸಲು ಬಳಸಲಾಗುತ್ತದೆ.
ಸಹಜವಾಗಿಯೇ ಆಯಾ ಸಂದರ್ಭಕ್ಕೆ ಅನುಸಾರವಾಗಿ ಈ ಪರಿಕಲ್ಪನೆಯ ವಿನ್ಯಾಸಗಳು ಕಾನೂನಾತ್ಮಕ ದಾಖಲೆಗಳಲ್ಲಿ ವ್ಯತ್ಯಾಸವಾಗುತ್ತವೆ. ಆದರೆ ಈ ಎಲ್ಲ ನಿಬಂಧನೆಗಳಿಗೆ ಮನುಷ್ಯ ಘನತೆಯನ್ನು ಎತ್ತಿಹಿಡಿಯುವ ಉದ್ದೇಶವೇ ಮುಖ್ಯವಾಗುತ್ತದೆ. ಉದಾಹರಣೆಗಾಗಿ ರಾಷ್ಟ್ರ-ಅಂತರ್ರಾಷ್ಟ್ರ ಮಟ್ಟದ ಕಾನೂನು ಪರಿಕರ ಮತ್ತು ದಾಖಲೆಗಳ ಪರಿಭಾಷೆ ಹಾಗೂ ಭಾಷಿಕ ಕ್ರಿಯೆಯನ್ನು ಪರಿಶೀಲಿಸಿದರೆ, ಭಾಷಿಕ ಕ್ರಿಯೆಯ ವ್ಯಾಪಕತೆ ಎಂತಹದು ಅನ್ನುವುದು ನಮಗೆಲ್ಲ ಅರ್ಥವಾಗುತ್ತದೆ.
ನಮ್ಮ ಸಂವಿಧಾನದ ಪೀಠಿಕೆಯಲ್ಲಿ ಉಲ್ಲೇಖಿಸಿರುವ ‘ನಾವು ಭಾರತೀಯರು...’ ಎಂಬ ಉದ್ಗಾರದಿಂದ ಶುರುವಾಗುವ ಈ ಹೇಳಿಕೆಯ ಮೊದಲ ಉದ್ದೇಶವೇ ನಮ್ಮೆಲ್ಲರ ನಡುವಣ ಘನತೆ ಮತ್ತು ಸಂಬಂಧವನ್ನು ಸೂಚಿಸುವುದಾಗಿದೆ. ಹಾಗಾಗಿ ಜಾತ್ಯತೀತತೆ, ಧರ್ಮನಿರಪೇಕ್ಷತೆ ಎಂಬೆಲ್ಲ ಪದಗಳನ್ನು ನೆಲೆಗೊಳಿಸಲು ಕಾರಣವೇ ಮನುಷ್ಯ ಘನತೆಯನ್ನು ಮನಗಾಣಲು ನಮಗೆ ಬೇಕಾಗಿರುವುದು ಕೇವಲ ನಾವು ಮನುಷ್ಯರು ಮತ್ತು ಆ ಅಸ್ತಿತ್ವದಲ್ಲಿ ಯಾವುದೇ ಭೇದಭಾವ ಇರಕೂಡದು ಎಂಬ ತಿಳಿವಳಿಕೆ ಮಾತ್ರ ಸಾಕು ಅನ್ನುವುದಾಗಿದೆ.
ಹೊರತು ನಮ್ಮ ಅಸ್ತಿತ್ವ, ಅಸ್ಮಿತೆ, ಘನತೆಗಳನ್ನು ಅರಿಯಲು ಯಾವುದೇ ಜಾತಿ, ಧರ್ಮ, ಪ್ರದೇಶ, ಭಾಷೆ, ಲಿಂಗ ಇತ್ಯಾದಿ ಸಂಗತಿಗಳ ಮಹತ್ವದ ಮೇಲೆ ವ್ಯಕ್ತಿಗಳ ಘನತೆಯನ್ನು ಅಳಿಯುವುದಾಗಲೀ ಇಲ್ಲವೇ ಮೌಲ್ಯನಿರ್ಣಯ ಮಾಡುವುದಾಗಲೀ ಕೊನೆಯಪಕ್ಷ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿ ಪರಿಭಾವಿಸಕೂಡದು ಅನ್ನುವ ತಾತ್ಪರ್ಯವನ್ನು ಇಲ್ಲಿ ಕಾಣುತ್ತೇವೆ.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮನುಷ್ಯ ಘನತೆಯನ್ನು ಪ್ರತಿಪಾದಿಸುವ ದಾಖಲೆಗಾಗಿ, ದಿ ಚಾರ್ಟರ್ ಆಫ್ ಯುನೈಟೆಡ್ ನೇಶನ್ಸ್ (1945) ಪೀಠಿಕೆಯಲ್ಲಿ ನಿರೂಪಿಸಲಾದ ಹೇಳಿಕೆಗಳನ್ನು ಇಲ್ಲಿ ಗಮನಿಸಬಹುದು. ‘ಮುಂಬರುವ ಪೀಳಿಗೆಗಳನ್ನು ಯುದ್ಧದ ಭೀಕರತೆ ಮತ್ತು ದುಖದಿಂದ ರಕ್ಷಿಸಬೇಕು.
ಇಂತಹ ಯುದ್ಧಗಳಿಂದ ಈಗಾಗಲೇ ನಾವು ಕೇಳರಿಯದ ದುಖವನ್ನು ನಮ್ಮ ಬದುಕಿನವಧಿಯಲ್ಲಿ ಎರಡುಸಲ ಕಂಡಿದ್ದೇವೆ. ಮಾನವ ಹಕ್ಕು ಮತ್ತು ಮನುಷ್ಯ ಘನತೆಯಲ್ಲಿ ನಂಬಿಕೆಯನ್ನು ಮರುಪ್ರತಿಪಾದಿಸಬೇಕಿದೆ.ಯಾವುದರ ಮೂಲಕ ಮನುಷ್ಯ ಘನತೆ, ಗಂಡು-ಹೆಣ್ಣುಗಳ ನಡುವಣ ಸಮಾನ ಹಕ್ಕುಗಳು ಹಾಗೂ ದೊಡ್ಡ ಮತ್ತು ಚಿಕ್ಕ ದೇಶಗಳು ಎಂಬ ಭೇದವಿಲ್ಲದ ವಾತಾವರಣವನ್ನು ಸೃಷ್ಟಿಸಬೇಕೆಂದು ನಾವು ಯುನೈಟೆಡ್ ರಾಷ್ಟ್ರಗಳ ಜನತೆ ನಿರ್ಧರಿಸಿದ್ದೇವೆ’. ಈ ಘೋಷಣೆಯ ಹಿಂದಿನ ತಾತ್ವಿಕ ಮತ್ತು ನೈತಿಕ ಹೊಣೆಗಾರಿಕೆಯನ್ನು ಇಲ್ಲಿ ಬಳಸಲಾದ ಪದಗಳ ಮೂಲಕ ಅರಿಯಲು ಸಾಧ್ಯ.
ಇಲ್ಲಿಯ ಯಾವುದೇ ಪದವು ನಿಶ್ಚಿತವೂ ಮತ್ತು ನಿರಂತರವೂ ಆಗಿರುವ ಅರ್ಥವನ್ನು ಹೊಂದಿರುವುದಿಲ್ಲ. ಆದರೆ ಆಯಾ ಸನ್ನಿವೇಶಗಳ ಮೂಲಕ ನಾವು ಘನವಾದ ಮತ್ತು ತೆಳುವಾದ ಅರ್ಥಗಳನ್ನು ಪರಿಭಾವಿಸುತ್ತೇವೆ. ಇದು ಕೇವಲ ಯಾದೃಚ್ಛಿಕವಾಗಿ (ದಿಟ, ಪ್ರಾಥಿಮಿಕ ಅರ್ಥಗಳು ಯಾದೃಚ್ಛಿಕವಾಗಿಯೇ ಇರುತ್ತವೆ) ನಡೆಯುವುದಲ್ಲ. ಸನ್ನವೇಶಗಳು ಅಗಾಧವಾದ ಪಾತ್ರವನ್ನು ವಹಿಸುತ್ತವೆ. ಇದಕ್ಕೆ ಪ್ರಮುಖ ಕಾರಣವೇ ಭಾಷಿಕ ಕ್ರಿಯೆಗಳು ಎಂಬುದು ಇಲ್ಲಿ ನಿರ್ವಿವಿವಾದ.
ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (1948) ಪೀಠಿಕೆಯಲ್ಲಿಯೂ ಈ ಬಗೆಯ ಸಂಗತಿಗಳನ್ನೇ ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಅಂದರೆ ಈ ಜಗತ್ತಿನ ಮನುಷ್ಯರೆಲ್ಲರಲ್ಲಿ ಅಂತರ್ನಿಹಿತವಾದ ಘನತೆ ಮತ್ತು ಮನುಷ್ಯ ಸಮೂಹಗಳಿಗೆ ಸಮಾನ ಮತ್ತು ಆತ್ಯಂತಿಕವಾದ ಹಕ್ಕುಗಳನ್ನು ಮಾನ್ಯಗೊಳಿಸಬೇಕು.
ಈ ಜಗತ್ತಿನಲ್ಲಿ ಸ್ವಾತಂತ್ರ್ಯ, ನ್ಯಾಯ ಹಾಗೂ ಶಾಂತಿಯನ್ನು ನೆಲೆಗೊಳಿಸಲು ಇವುಗಳು ಅಡಿಪಾಯವಾಗಿವೆ. ಆದರೆ ಈ ಮಾನವ ಹಕ್ಕುಗಳ ಬಗೆಗೆ ನಿರ್ಲಕ್ಷ್ಯ ಹಾಗೂ ತಿರಸ್ಕಾರವು ಅನಾಗರಿಕ ಕೃತ್ಯಗಳಿಗೆ ಕಾರಣವಾಗಿವೆ. ಇದು ಮಾನವಕುಲದ ಆತ್ಮಸಾಕ್ಷಿಯನ್ನೇ ಕೆರಳಿಸಿದೆ. ಇಡೀ ಜಗತ್ತಿನ ಮನುಷ್ಯರಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ನಂಬಿಕೆ ಹಾಗೂ ಭಯದಿಂದ ಬಿಡುಗಡೆಯನ್ನು ನೆಲೆಗೊಳಿಸಲು ಇದು ಒತ್ತಾಸೆಯಾಗುತ್ತದೆ.
ಸಾಮಾನ್ಯ ಜನರ ಆಶೋತ್ತರಗಳನ್ನು ಎತ್ತಿಹಿಡಿಯುವ ಮಹತ್ತರವಾದ ಘೋಷಣೆ ಇದಾಗಿದೆ. ಮನುಷ್ಯ ಘನತೆ ಮತ್ತು ಮಾನವ ಹಕ್ಕುಗಳು ಎಂಬೀ ಎರಡೂ ಪರಿಕಲ್ಪನೆಗಳು ಪ್ರತ್ಯೇಕ ಮತ್ತು ಪರಸ್ಪರ ಅವಲಂಬಿತವೆಂದು ಯಾರಾದರೂ ಹೇಳಬಹುದು. ಆದರೆ ಇದುವರೆಗೂ ಯಾರು ಕೂಡ ಈ ಎರಡೂ ಪರಿಕಲ್ಪನೆಗಳ ನಡುವಣ ಪರಸ್ಪರ ಅವಲಂಬನೆಯನ್ನು ಯಾವುದೇ ವ್ಯವಸ್ಥಿತ ಮತ್ತು ಸ್ಪಷ್ಟ ಸೂತ್ರಗಳ ಮೂಲಕ ವ್ಯಾಖ್ಯಾನಿಸಿಲ್ಲ ಅನ್ನುವುದು ಗಮನಾರ್ಹ.
ವಿಶ್ವಸಂಸ್ಥೆಯ ಇನ್ನೆರಡು ನಡೆಗಳನ್ನು ಅವಲೋಕಿಸಿದರೆ, ಈ ಪರಿಕಲ್ಪನೆಗಳ ನಡುವಿನ ನಂಟಸ್ತಿಕೆಯನ್ನು ಇನ್ನಷ್ಟು ನಿಚ್ಚಳಗೊಳಿಸುತ್ತವೆ. ವಿಶ್ವಸಂಸ್ಥೆಯ ಚಾರ್ಟರ್ನಲ್ಲಿ ಘೋಷಿಸಲಾದ ತತ್ವಗಳಿಗೆ ಪೂರಕವಾಗಿ, ಮನುಷ್ಯನ ಅಂತರ್ಗತ ಘನತೆಯನ್ನು ಮತ್ತು ಇಡೀ ಜಗತ್ತಿನ ಮನುಷ್ಯರಲ್ಲಿ ಸಮಾನ ಹಾಗೂ ಆತ್ಯಂತಿಕ ಹಕ್ಕುಗಳನ್ನು ಮಾನ್ಯ ಮಾಡುವುದರಿಂದ ಈ ಲೋಕದ ಜನರ ಸ್ವಾತಂತ್ರ್ಯ, ನ್ಯಾಯ ಮತ್ತು ಶಾಂತಿಯನ್ನು ನಿರಂತರಗೊಳಿಸುವಲ್ಲಿ ಇವು ಅಡಿಪಾಯವಾಗುತ್ತವೆ.
ಮನುಷ್ಯನ ಅಂತರ್ಗತ ಘನತೆಯಿಂದಲೇ ರೂಪಿಸಲಾಗುವ ಈ ಹಕ್ಕುಗಳನ್ನು ಮಾನ್ಯಗೊಳಿಸುವುದು ಮುಖ್ಯ. ವಿಶ್ವಸಂಸ್ಥೆಯ ಈ ದಾಖಲೆಗಳು ಹೇಳುವಂತೆ, ಮನುಷ್ಯ ಘನತೆ ಎಂಬುದು ಅತ್ಯಂತ ಶ್ರೇಷ್ಠವಾದ ಮೌಲ್ಯವಾಗಿದೆ ಎಂದು ಪರಿಗಣಿಸುತ್ತವೆ. ಇದು ಮಾನವ ಹಕ್ಕುಗಳಿಂದ ಮಾತ್ರ ಪ್ರತ್ಯೇಕಗೊಳ್ಳುವುದಷ್ಟೆಯಲ್ಲ, ಆ ಪರಿಕಲ್ಪನೆಯನ್ನೇ ಪಲ್ಲಟಗೊಳಿಸಿದೆ. ಮನುಷ್ಯ ಘನತೆಯಿಂದಲೇ ಮೈದಾಳಿದ ಈ ಮಾನವ ಹಕ್ಕುಗಳ ಪರಿಕಲ್ಪನೆ ಆ ನಂತರದಲ್ಲಿ ತನ್ನದೆಯಾದ ಗುಣಲಕ್ಷಣಗಳನ್ನು ಮೈಗೂಡಿಸಿಕೊಂಡಿದೆ.
ಎಷ್ಟೋ ಸನ್ನಿವೇಶಗಳಲ್ಲಿ ಈ ಮನುಷ್ಯ ಘನತೆಯ ಗುಣಗಳು ಎಂತಹವು ಎನ್ನುವುದನ್ನು ಸ್ಪಷ್ಟಪಡಿಸದೇ ಕೇವಲ ಒಂದು ಕಾನೂನಿನ ಪದವನ್ನಾಗಿ ಬಳಸಲಾಗುತ್ತದೆ. ಮನುಷ್ಯ ಘನತೆಯ ಮೂಲತತ್ವಗಳಾವವು? ಅನ್ನುವುದನ್ನು ಈ ಕಾನೂನು ಪದಕೋಶವು ನಿಚ್ಚಳಗೊಳಿಸದು. ಹಾಗಾಗಿ ಭಾಷಿಕ ನಿರೂಪಣೆಗಳು ನಮ್ಮ ಸಾಮಾಜಿಕ ವಿವೇಕವನ್ನು ಹೇಗೆ ಪ್ರಕಟಿಸುತ್ತವೆ ಎಂಬ ಸಂವೇದನೆಯನ್ನು ಹೊಂದುವುದು ಅವಶ್ಯ.
ಸಾಮಾಜಿಕ ಅಂತಸ್ತಿಗೆ ಅನುಗುಣವಾಗಿ ಮನುಷ್ಯ ಘನತೆಯನ್ನು ಸೂಚಿಸುವ ಭಾಷಿಕ ಕ್ರಿಯೆಗಳೇ ನಮ್ಮನಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಸಮರ್ಥಿಸುತ್ತವೆ. ಹೀಗೆ ಏರ್ಪಡುವ ಅಸಮಾನತೆ ಇಲ್ಲವೇ ತಾರತಮ್ಯವನ್ನು ಅಳಿಸಲು ಬೇಕಾಗುವ ಪರಿಕರವೇ, ಈ ಮನುಷ್ಯ ಘನತೆ.
ಆದ್ದರಿಂದ ಭಾರತೀಯ ಸಂವಿಧಾನವು ತನ್ನೆಲ ನಾಗರಿಕರಲ್ಲಿ ಸಹೋದರತ್ವ/ಭ್ರಾತೃತ್ವವನ್ನು ಉತ್ತೇಜಿಸುವ ಮೂಲಕ ವ್ಯಕ್ತಿಯ ಘನತೆ ಮತ್ತು ರಾಷ್ಟ್ರದ ಏಕತೆ ಹಾಗೂ ಐಕ್ಯತೆಯನ್ನು ಸಾಧಿಸಲು ಆಶಿಸುತ್ತದೆ. ಹಾಗಾಗಿಯೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ವ್ಯಕ್ತಿ ಘನತೆಯ ಮಹತ್ವವನ್ನು ಆಳವಾಗಿ ಬಲ್ಲವರಾದ್ದರಿಂದ, ಸ್ವಾತಂತ್ರ್ಯ (ಲಿಬರ್ಟಿ), ಸಮಾನತೆ (ಇಕ್ವಿಟಿ) ಹಾಗೂ ಸಹೋದರತ್ವ (ಫ್ರೆಟರ್ನಿಟಿ) ಎಂಬೀ ತ್ರಿಕೂಟ (ಟ್ರಿನಿಟಿ) ಪರಿಕಲ್ಪನೆಗಳನ್ನು ರೂಪಿಸಿದರು ಹಾಗೂ ಅವುಗಳಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನೂ ಕೊಟ್ಟರು.
ಒಟ್ಟಿನಲ್ಲಿ ಈ ತ್ರಿಕೂಟ ಪರಿಕಲ್ಪನೆಗಳ ತಾತ್ಪರ್ಯವೇನೆಂದರೆ, ಮನುಷ್ಯ ಘನತೆಯನ್ನು ಉಲ್ಲಂಘಿಸಲಾಗದು ಅನ್ನುವುದಾಗಿದೆ. ಈ ಎಲ್ಲ ವಿಶ್ಲೇಷಣೆಗಳ ಮೂಲಕ ಸ್ವಾತಂತ್ರ್ಯ, ದೇಶದ ಐಕ್ಯತೆ, ನ್ಯಾಯಸಮ್ಮತ ಸಮಾಜ, ಒಗ್ಗಟ್ಟು ಮೊದಲಾದ ಶ್ರೇಷ್ಠ ಮೌಲ್ಯಗಳ ಜೊತೆಗೆ ಮನುಷ್ಯ ಘನತೆಯನ್ನು ಅತ್ಯಂತ ಶ್ರೇಷ್ಠ ಮೌಲ್ಯವೆಂದು ಮನಗಾಣಲಾಗಿದೆ. ನೈತಿಕತೆಯ ಪ್ರಶ್ನೆಯೂ ಇಲ್ಲಿ ಮುಖ್ಯವಾಗುತ್ತದೆ. ಸಂವಿಧಾನದ ಆಶಯವೇ ಇದಾಗಿರುತ್ತದೆ.
ಆದರೆ ಈ ಎಲ್ಲ ಮೌಲ್ಯಗಳನ್ನು ಕೇವಲ ಕಾನೂನಾತ್ಮಕ ಪದಕೋಶದಂತೆ ಪರಿಗಣಿಸಿದಾಗ, ನೈತಿಕತೆಯೂ ಇರುವುದಿಲ್ಲ ಹಾಗೂ ಮನುಷ್ಯ ಘನತೆ ಎಂಬುದು ನೆಲೆಗೊಳ್ಳಲು ಸಾಧ್ಯವಾಗುವುದಿಲ್ಲ. ಆವಾಗ ನಮ್ಮ ಸಂವಿಧಾನದ ಆದರ್ಶ ಮತ್ತು ಆಚರಣೆಗಳ ನಡುವೆ ಅಗಾಧವಾದ ಕಂದಕ ಏರ್ಪಡುತ್ತದೆ.
ಇದುವರೆಗೂ ಗಮನಿಸಿದಂತೆ, ಮನುಷ್ಯ ಘನತೆಯ ಭಾಷಿಕ ರೂಪಗಳು ಕಾನೂನಾತ್ಮಕ ಪರಿಕರಗಳಲ್ಲಿ ಕರ್ತವ್ಯ ಮತ್ತು ಹೊಣೆಗಾರಿಕೆಯನ್ನು ಹೇಗೆ ಸಮರ್ಥಿಸುವ ಕ್ರಿಯೆಯಾಗಿದೆ ಅನ್ನುವುದನ್ನು ನೋಡಿದೆವು. ಅಂದರೆ ಮನುಷ್ಯ ಘನತೆ ಎನ್ನುವುದು ಕೇವಲ ಕಾನೂನಾತ್ಮಕ ಪರಿಕಲ್ಪನೆಯಲ್ಲ ಬದಲಾಗಿ ಬದುಕಿನ ಕೆಲವು ನಿರ್ದಿಷ್ಟ ತತ್ವಗಳನ್ನು ವ್ಯಕ್ತಪಡಿಸುತ್ತದೆ.
ವಾಸ್ತವದಲ್ಲಿ, ಈ ಮನುಷ್ಯ ಘನತೆ ಎಂಬುದು ನೈತಿಕ-ತಾತ್ವಿಕ ಪರಿಕಲ್ಪನೆಯೂ ಆಗಿರುತ್ತದೆ. ಇತರೆ ನೈತಿಕ ಪರಿಕಲ್ಪನೆಗಳಿಗೆ ಇರುವಂತೆ ಹಲವು ಬಗೆಯ ಅರ್ಥ ವಿನ್ಯಾಸ ಹಾಗೂ ಸಾಧ್ಯತೆಗಳು ಸಂದರ್ಭಕ್ಕೆ ಅನುಗುಣವಾಗಿ ಈ ಪರಿಕಲ್ಪನೆಯ ಸನ್ನಿವೇಶದಲ್ಲಿಯೂ ಹಲವು ಭಾಷಿಕ ಕ್ರಿಯೆಗಳ ಮೂಲಕ ಏರ್ಪಡುತ್ತವೆ. ಹಾಗಾಗಿ ಈ ಪರಿಭಾಷೆಯನ್ನು ಘನವಾದ ಮತ್ತು ತೆಳುವಾದ ಅರ್ಥಗಳಲ್ಲಿ ಬಳಸಲಾಗುತ್ತದೆ. ‘ನೈತಿಕ ಪದಗಳು ಸಂಕುಚಿತ ಮತ್ತು ವ್ಯಾಪಕವಾದ ಅರ್ಥಗಳನ್ನು ಹೊಂದಿರುತ್ತವೆ.ಆಯಾ ಸನ್ನಿವೇಶಗಳ ಪ್ರಮಾಣಕ್ಕೆ ಅನುಗುಣವಾಗಿ ಈ ಎರಡೂ ಸಾಂದರ್ಭಿಕ ಅರ್ಥಗಳನ್ನು ನಾವು ಬಳಸುತ್ತೇವೆ. ವಿಭಿನ್ನ ಸನ್ನಿವೇಶದಲ್ಲಿ ಇವುಗಳು ಅತ್ಯಂತ ಸೂಕ್ತವಾಗಿರುತ್ತವೆ ಮತ್ತು ವಿಭಿನ್ನ ಉದ್ದೇಶಗಳನ್ನು ಪೊರೈಸುತ್ತವೆ’ (1994,2) ಎಂದು ಮೈಕಲ್ ವಾಲ್ಜರ್ ಸ್ಪಷ್ಟವಾಗಿ ಹೇಳುತ್ತಾರೆ. ಇದನ್ನು ಇನ್ನಷ್ಟು ವಿಷದೀಕರಿಸಿ ನೋಡಿದರೆ, ಮನುಷ್ಯ ಘನತೆಯೊಂದಿಗೆ ಹೆಣೆದುಕೊಂಡಿರುವ ಭಾಷಿಕ ಕ್ರಿಯೆಗಳ ನಡುವಣ ಮುಖ್ಯವಾದ ವ್ಯತ್ಯಾಸಗಳನ್ನು ಈ ನೈತಿಕ ಅರ್ಥಗಳು ಪ್ರತಿಬಿಂಬಿಸುತ್ತವೆ.
ವ್ಯಾಪಕ ಅರ್ಥದಲ್ಲಿ ಇದನ್ನೊಂದು ನೈತಿಕ ಪರಿಕಲ್ಪನೆಯನ್ನಾಗಿ ಬಳಸಿದರೆ, ಮನುಷ್ಯ ಘನತೆಯು ‘ಮಾನವ’ ಮತ್ತು ‘ಘನತೆ’ ಎಂಬ ಎರಡೂ ಮೂಲಭೂತ ಹಾಗೂ ಪರಸ್ಪರ ಅಂತರ್ಸಂಬಂಧವನ್ನು ಹೊಂದಿರುವ ಆಯಾಮಗಳನ್ನು ಸೂಚಿಸುತ್ತದೆ. ವಾಸ್ತವದಲ್ಲಿ ಘನತೆಯ ಪ್ರಜ್ಞೆಯು ಈ ಲೋಕ ಮತ್ತು ಲೋಕದ ಜನರನ್ನು ನಾವು ಪರಿಭಾವಿಸುವ ವಿಧಾನದಲ್ಲಿಯೇ ಅಂತರ್ಗತವಾಗಿರುತ್ತದೆ.
ಆದರೆ ಮಾನವ ಎಂಬ ಪದವು ನಮ್ಮ ಪ್ರಜ್ಞೆ ಇಲ್ಲವೇ ಸೂಪ್ತಪ್ರಜ್ಞೆಯ ಮೂಲಕ ಮನುಷ್ಯ ಸ್ವಭಾವದ ಗ್ರಹಿಕೆಗಳಿಗೆ ಸಂಬಂಧಿಸಿರುತ್ತದೆ. ಲೋಕದ ವರ್ತನೆ, ಮೌಲ್ಯ ಹಾಗೂ ಪ್ರಾಪಂಚಿಕ ಬದುಕಿನ ಗುಣಲಕ್ಷಣಗಳನ್ನು ಮೌಲ್ಯ ನಿರ್ಣಯವನ್ನು ಮಾಡುವಲ್ಲಿ ಈ ಪ್ರಜ್ಞೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಒಟ್ಟಂದದಲ್ಲಿ ಮನುಷ್ಯ ಘನತೆ ಎಂಬೀ ವ್ಯಾಪಕ ಅರ್ಥವು ನೈತಿಕ ದೃಷ್ಟಿಕೋನಗಳನ್ನು ರೂಪಿಸುತ್ತದೆ. ಅಂದರೆ ಮನುಷ್ಯ ಬದುಕಿನ ಅಸ್ತಿತ್ವವೇ ಪ್ರಧಾನ ವಿನ್ಯಾಸವಾಗಿ, ಜಾತಿ, ಮತ, ಧರ್ಮ, ಭಾಷೆ, ಲಿಂಗ, ಪ್ರದೇಶಗಳು ಕೇವಲ ಸಾಮಾಜಿಕ ಭಿನ್ನತೆಯ ವಿನ್ಯಾಸಗಳಾಗುತ್ತವೆ.
ಮನುಷ್ಯ ಸಮೂಹದ ಘನತೆಯನ್ನು ಎತ್ತಿಹಿಡಿಯುವ ಇಂತಹ ಹಲವು ಸನ್ನಿವೇಶಗಳನ್ನು ನಮ್ಮ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿಯೂ ಕಾಣುತ್ತೇವೆ. ಉದಾ.ಗೆ ಕುವೆಂಪು ಅವರು ತಮ್ಮ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಪೀಠಿಕೆಯನ್ನಾಗಿ ಬಳಸಿಕೊಂಡಿರುವ ಈ ಮಾತುಗಳ ತಾತ್ಪರ್ಯವೂ ಮನುಷ್ಯ ಘನತೆಯ ಮಹತ್ವವನ್ನು ಕಂಡರಿಯುವ ಬಗೆಯಾಗಿದೆ.
“ಯಾರೂ ಮುಖ್ಯರಲ್ಲ ಅಮುಖ್ಯರೂ ಅಲ್ಲ,
ಯಾವುದೂ ಯಃಕಷ್ಚಿತವಲ್ಲ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದೂ ಇಲ್ಲ
ಕೊನೆ ಮುಟ್ಟುವುದೂ ಇಲ್ಲ,
ಕೊನೆ ಮುಟ್ಟುವುದೂ ಇಲ್ಲ,
ಎಲ್ಲಕ್ಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲ ಊ ತೀರ್ಥ”.
–ಕುವೆಂಪು
ಈ ಪೀಠಿಕೆಯ ಮೂಲಕ ಮೈದಾಳಬಹುದಾದ ಭಾಷಿಕ ಕ್ರಿಯೆಗಳು ಮತ್ತು ಅರ್ಥಗಳನ್ನು ಯಾವುದೇ ಸೀಮಿತ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿ ಹೇಳಲು ಸಾಧ್ಯವಿಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ನಿರೂಪಿಸಿದ ಪಾತ್ರಗಳನ್ನು ಇಡೀಯಾಗಿ ಅವಲೋಕಿಸಿದರೆ, ಕುವೆಂಪು ಅವರ ಈ ಮಾತುಗಳಿಗೆ ನಿಶ್ಚಿತವಾಗಿಯೂ ಒಂದು ಮಹತ್ವ ದೊರೆಯುತ್ತದೆ.
ಅಂದರೆ ಇಡಿಯಾಗಿ ಮನುಷ್ಯ ಘನತೆಯ ಮಹತ್ವವನ್ನು ಸಾರುವ ನುಡಿಗಳಾಗಿ ಈ ಮಾತುಗಳು ಇಲ್ಲಿ ಸಾಕ್ಷಿಯಾಗುತ್ತವೆ. ಇದಕ್ಕೆ ಪೂರಕವಾಗಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ಸಮಾಜವಾದಿ ತತ್ವವನ್ನು ಕುವೆಂಪು ಅವರು ಅತ್ಯಂತ ಬಲವಾಗಿ ನಂಬಿದ್ದರು.
ಇವರ ಗ್ರಹಿಕೆ ಮತ್ತು ಅಭಿವ್ಯಕ್ತಿಯಲ್ಲಿ ನೈತಿಕ ಮತ್ತು ತಾತ್ವಿಕ ಸ್ಪಷ್ಟತೆಯನ್ನು ನೋಡುತ್ತೇವೆ ಹಾಗೂ ಮನುಷ್ಯ ಘನತೆಯನ್ನು ಪರಿಪೂರ್ಣವಾಗಿ ನಂಬಿದ್ದ, ಕುವೆಂಪು ಅವರ ಕಾದಂಬರಿಗಳ ಬಗೆಗೆ ಪ್ರೊ. ಬಿ ಕೃಷ್ಣಪ್ಪನವರು ‘ಕುವೆಂಪು ಕಾದಂಬರಿಗಳಲ್ಲಿ ದಲಿತ ಜೀವನಕ್ರಮ’ ಎಂಬ ಮಹತ್ವದ ಲೇಖನವನ್ನು ಬರೆದಿರುವರು. ಈ ಲೇಖನದಲ್ಲಿ ಇವರು ಎತ್ತಿರುವ ಪ್ರಶ್ನೆಗಳು ತಾತ್ವಿಕವಾಗಿ, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ನ್ಯಾಯದ ಪ್ರಶ್ನೆಗಳಾಗಿ ಸರಿಯಾಗಿವೆ.
ಏಕೆಂದರೆ ಮನುಷ್ಯ ಘನತೆಯ ಪ್ರಶ್ನೆಯನ್ನೇ ವಿಶೇಷವಾಗಿ ದಲಿತ ಮತ್ತು ವಂಚಿತ ಸಮುದಾಯಗಳನ್ನು ಕೇಂದ್ರವಾಗಿಟ್ಟುಕೊಂಡ ಈ ಘನತೆಯ ಪ್ರಶ್ನೆಗಳು ಇಲ್ಲಿ ಮಹತ್ವವನ್ನು ಪಡೆಯುತ್ತವೆ. ಹಾಗಾದರೆ ಮನುಷ್ಯ ಘನತೆ ಕುರಿತ ಕುವೆಂಪು ಮತ್ತು ಕೃಷ್ಣಪ್ಪನವರ ನಡುವಣ ಗ್ರಹಿಕೆಗಳು ಪರಸ್ಪರ ಭಿನ್ನವಾಗಿವೆಯೇ? ಅಥವಾ ಸಾಹಿತ್ಯ ನಿರೂಪಣೆಗಳ ಬಗೆಗೆ ಈ ತರಹದ ಪ್ರಶ್ನೆಯನ್ನು ಕೇಳುವುದೇ ತಪ್ಪೇ? ಎನ್ನುವ ಅನುಮಾನಗಳೂ ಇಲ್ಲಿ ತಲೆಯೆತ್ತುತ್ತವೆ.
ಕನ್ನಡ ಸಾಹಿತ್ಯ ವಿಮರ್ಶೆಯ ಲೋಕ ಕೃಷ್ಣಪ್ಪವರ ಪ್ರಶ್ನೆಯೊಳಗೆ ಅಂತರ್ಗತವಾಗಿರುವ ಮನುಷ್ಯ ಘನತೆಯ ಪ್ರಶ್ನೆಯನ್ನೇ ನಗಣ್ಯಗೊಳಿಸಿವೆ. ಸಮಾಜ ವಿಜ್ಞಾನದ ಪ್ರಶ್ನೆಯನ್ನಾಗಿ ಪರಿಗಣಿಸಿ ಕೃಷ್ಣಪ್ಪನವರ ಪ್ರಶ್ನೆಯ ಘನತೆಯನ್ನು ಸಾಹಿತ್ಯ ವಿಮರ್ಶೆಯಲ್ಲಿ ತಳ್ಳಿಹಾಕಲಾಗಿದೆಯೇ? ಕುವೆಂಪು ಮತ್ತು ಕೃಷ್ಣಪ್ಪನವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾಳಜಿಗಳ ನಡುವೆ ಇಂತಹದೊಂದು ಕಂದಕವನ್ನು ಸಾಹಿತ್ಯ ವಿಮರ್ಶೆಯಲ್ಲಿ ಯಾಕೇ ಸೃಷ್ಟಿಸಲಾಗಿದೆ? ಅಂದರೆ ಕೃಷ್ಣಪ್ಪನವರ ಪ್ರಶ್ನೆಯನ್ನು ಕನ್ನಡ ವಿಮರ್ಶೆ ನಿಭಾಯಿಸಿದ ಬಗೆಯಲ್ಲಿಯೇ ಸಮಸ್ಯೆಗಳಿವೆ ಎನ್ನುವುದನ್ನು, ಈ ಕುರಿತ ವಾಗ್ವಾದಗಳಿಂದ ಗ್ರಹಿಸಬಹುದು. ಒಟ್ಟಿನಲ್ಲಿ ಮನುಷ್ಯ ಘನತೆಯನ್ನು ನಿರ್ವಹಿಸಿದ ಚರ್ಚೆಗಳೂ ಒಂದು ಸಾರ್ವತ್ರಿಕ ತಾತ್ವಿಕ ಚೌಕಟ್ಟನ್ನು ರೂಪಿಸಿ ಆ ಮೂಲಕ ಮನುಷ್ಯ ಘನತೆಯ ಸವಾಲುಗಳನ್ನು ನಾವು ಎದುರುಗೊಂಡಿಲ್ಲ ಅನ್ನುವುದು ಈಗಲಾದರೂ ನಮಗೆ ಮನವರಿಯಾಗುತ್ತದೆ ಅಂದುಕೊಂಡಿರುವೆ.
ಈ ಸಮಸ್ಯೆಗಳನ್ನು ಅತ್ಯಂತ ವ್ಯಾಪಕವಾಗಿ ಕನ್ನಡ ಸಾಹಿತ್ಯ ಪರಂಪರೆಯಲ್ಲಿಯೇ ನೋಡುತ್ತೇವೆ. ಉದಾ.ಗೆ ನಡೆ, ನುಡಿ, ಉಡಿಗೆ, ಆಹಾರ, ಜಾತಿ, ಧರ್ಮ, ಲಿಂಗ ಮೊದಲಾದ ವಿದ್ಯಮಾನಗಳನ್ನು ಕುರಿತ ವಚನಕಾರರ ನಿಲುವುಗಳ ಆಶಯವು ಮನುಷ್ಯ ಘನತೆಯನ್ನು ನೆಲೆಗೊಳಿಸುವುದೇ ಆಗಿರುತ್ತದೆ. ಇಲ್ಲಿಯೂ ಇಂತಹದೇ ಕಂದಕವನ್ನು ಹಲವು ವಚನಕಾರರಲ್ಲಿ ಕಾಣುತ್ತೇವೆ.
ಕಾರಣವೇನೆಂದರೆ, ವಚನಕಾರರ ಪೂರ್ವಾಶ್ರಮದ ವಾಸನೆ ಮತ್ತು ಕಳಂಕ, ಈ ಮನುಷ್ಯ ಘನತೆಯನ್ನು ಪಡೆದುಕೊಳ್ಳುವಲ್ಲಿ ಹೇಗೆ ಬಿಕ್ಕಟ್ಟುಗಳನ್ನು ರೂಪಿಸಿವೆ ಅನ್ನುವುದನ್ನು ವಚನ ವಾಂಜ್ಞಮಯದಲ್ಲಿ ಕಾಣುತ್ತೇವೆ. ಈ ಕುರಿತು ಸಾಕಷ್ಟು ಚರ್ಚೆಗಳನ್ನು ಬೆಳಸಬಹುದು ಆದರೆ ಈ ಬರಹದ ವ್ಯಾಪ್ತಿಯಲ್ಲಿ ಅದು ಸಾಧ್ಯವಾಗುತ್ತಿಲ್ಲ.
ಈ ಟಿಪ್ಪಣಿಯ ಚರ್ಚೆಗಳ ತಲೆಬರಹವು ‘ಭಾಷಿಕ ಕ್ರಿಯೆ ಮತ್ತು ಮನುಷ್ಯ ಘನತೆ’ ಎಂದಾಗಿದೆ. ಆದರೆ ಪಗಗಳನ್ನೋ ಇಲ್ಲವೇ ವಾಕ್ಯಗಳನ್ನೋ ಉಲ್ಲೇಖಿಸಿ ಪ್ರತಿಯೊಂದಕ್ಕೂ ಇದು ಈ ಅರ್ಥ ಅದು ಆ ಅರ್ಥ ಎಂದು ವಿವರಣಾತ್ಮಕ ನಿದರ್ಶನಗಳನ್ನು ಕೊಡದೆ, ಇಡೀ ಭಾಷಿಕ ಸಂಕಥನದಲ್ಲಿ ಹಾಗೂ ನಾವು ನಮ್ಮ ಬದುಕಿನಲ್ಲಿ ರೂಪಿಸುವ ಸಂಕಥನಗಳ ಮೂಲಕ ಮನುಷ್ಯ ಘನತೆಯ ಪ್ರಶ್ನೆಯನ್ನು ಹೇಗೆ ನಿರ್ವಹಿಸುತ್ತೇವೆ? ಮತ್ತು ನಿಭಾಯಿಸಿದ್ದೇವೆ? ಪರಿಣಾಮವಾಗಿ ಸಾಮಾಜಿಕ-ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ಇಂದಿನ ಪ್ರಜಾಸತ್ತಾತ್ಮಕ ಸನ್ನಿವೇಶದಲ್ಲಿಯೂ ನಾವು ಹೇಗೆ ಅನುಭವಿಸುತ್ತೇವೆ.
ಹಾಗೂ ಮನುಷ್ಯ ಅಸ್ತಿತ್ವ ಮತ್ತು ಸ್ವಭಾವಗಳೊಡನೆ ತಳುಕು ಹಾಕಿಕೊಂಡಿರುವ ಈ “ಮನುಷ್ಯ ಘನತೆ”ಯೆಂಬ ಮೂಲಭೂತ ಪರಿಕಲ್ಪನೆಯನ್ನು ಅರಿಯದೇ, ಅದು ಹೇಗೆ ಪ್ರಜಾಸತ್ತಾತ್ಮಕ ಹಾಗೂ ನ್ಯಾಯಸಮ್ಮತ ಬದುಕನ್ನು ನಾವು ಬದುಕಲು ಸಾಧ್ಯ?
ಸುದ್ದಿದಿನ.ಕಾಂ|ವಾಟ್ಸಾಪ್|9980346243