ದಿನದ ಸುದ್ದಿ

ಶುಶ್ರೂಷಕ ಇಲಾಖಾ ಸಿಬ್ಬಂದಿಗಳಿಗೆ ಅಪಾಯದ ಭತ್ಯೆ ಇಲ್ಲ ಏಕೆ..? : ಮಾನ್ಯ ಮುಖ್ಯಮಂತ್ರಿಗಳೊಂದು ಪತ್ರ

Published

on

ಸಾಮಾಜಿಕ ಕಾರ್ಯಕರ್ತ, ರಾಘು ದೊಡ್ಡಮನಿ, ದಾವಣಗೆರೆ, ರಾಜ್ಯ ಕಾರ್ಯದರ್ಶಿ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ, ಕರ್ನಾಟಕ, ಇವರು “ಶುಶ್ರೂಷಕ ( ನರ್ಸಿಂಗ್ ) ಇಲಾಖಾ ಸಿಬ್ಬಂದಿಗಳಿಗೆ ಅಪಾಯದ ಭತ್ಯೆ ( Risk allowance ) ಇಲ್ಲ ಏಕೆ..?” ಎಂದು ಶುಶ್ರೂಷಕರ ಸಮಸ್ಯೆಗಳ‌ ಪರಿಹಾರಕ್ಕಾಗಿ ಪತ್ರವೊಂದನ್ನು ಬರೆದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರವಾದ ಸ್ಪಂದನೆ ದೊರೆತಿದೆ. ಪತ್ರ ಈ ಕೆಳಕಂಡಂತಿದೆ.

ಇವರಿಗೆ,

ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ, ಬೆಂಗಳೂರು

ವಿಷಯ: ಶುಶ್ರೂಷಕ ( ನರ್ಸಿಂಗ್ ) ಇಲಾಖಾ ಸಿಬ್ಬಂದಿಗಳಿಗೆ ಅಪಾಯದ ಭತ್ಯೆ ( Risk allowance ) ಇಲ್ಲ ಏಕೆ..?

ಮಾನ್ಯರೇ,

ಳೆದ ನಾಲ್ಕು ತಿಂಗಳುಗಳಿಂದ ಯಾವುದೇ ರೀತಿಯ ರಜೆಗಳನ್ನು ಪಡೆಯದೇ ಲಾಕ್ ಡೌನ್, ಸರ್ಕಾರಿ ರಜೆ, ಭಾನುವಾರದ ದಿನಗಳಲ್ಲೂ ಸಹ ಸತತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಾ ಅಧಿಕಾರಿಗಳ ಸೇವೆಗಳನ್ನು ಗುರುತಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಕೋವಿಡ್ ನಿಯಂತ್ರಣದ ಆರಂಭದ ದಿನಗಳಲ್ಲಿ ವೈದ್ಯರುಗಳಿಗೆ ಕೇಂದ್ರದ ಸಮಾನ ವೇತನ ನೀಡಲು ಒಪ್ಪಿದ ಸರ್ಕಾರ ನಂತರದ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಸ್ಟೈ ಫಂಡ್ ಅನ್ನು ಏರಿಸಿತು, ಕೆಲವೇ ದಿನಗಳ ಹಿಂದೆ ಕೋವಿಡ್ ರೋಗಿಗಳ ಆರೈಕೆ ನೀಡುವ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಗ್ರೂಪ್ ಡಿ ನೌಕರರಿಗೂ ತಿಂಗಳಿಗೆ ತಲಾ 10000 ರೂಪಾಯಿಗಳ ಭತ್ಯೆಯನ್ನು ನೀಡುವುದಾಗಿ ಘೋಷಿಸಿರುವ ಸರ್ಕಾರದ ನಡೆ ನಿಜಕ್ಕೂ ಅಭಿನಂದನೀಯ, ಆದರೆ ರೋಗಿಗಳ ಆರೈಕೆಯಲ್ಲಿ ನೇರವಾಗಿ ಭಾಗಿಯಾಗುವ ಶುಶ್ರೂಷಾ ಇಲಾಖಾ ಸಿಬ್ಬಂದಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಅವರುಗಳಿಗೆ ತುಂಬಾ ನೋವನ್ನು ನೀಡುವ ಸಂಗತಿ ಇದಾಗಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ಕುಟುಂಬವನ್ನು ನೋಡದೆ ರಜೆಗಳನ್ನು ಪಡೆಯದೇ ತಮ್ಮ ಪ್ರಾಣವನ್ನೇ ಲೆಕ್ಕಿಸದೇ ಹಗಲಿರುಳು ರೋಗಿಗಳ ಆರೈಕೆಯಲ್ಲಿ ತೊಡಗಿರುವ ಈ ಶುಶ್ರೂಷಾ ಸಿಬ್ಬಂದಿಗಳಿಗೆ ಅಪಾಯ ಭತ್ಯೆಯನ್ನು ನೀಡಿ ಪ್ರೋತ್ಸಾಹಿಸುವುದು ಸರ್ಕಾರದ ಆದ್ಯ ಕರ್ತವ್ಯವೆಂದು ಭಾವಿಸುತ್ತೇನೆ. ಇದಲ್ಲದೇ ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶುಶ್ರೂಷಾ ಸಿಬ್ಬಂದಿಗಳಿಗೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ನೂತನ ಪಿಂಚಣಿ, KGID, GPF ಮುಂತಾದ ಎಲ್ಲಾ ರೀತಿಯ ಸೌಲಭ್ಯಗಳಿಂದ ವಂಚಿತವಾಗಿರುವ ಇವರುಗಳಿಗೆ ಕನಿಷ್ಟ ಅವರ ಕುಟುಂಬಸ್ಥರಿಗೆ ಏನಾದರೂ ಅರೋಗ್ಯದ ಸಮಸ್ಯೆ ಎದುರಾದರೆ ಚಿಕಿತ್ಸೆ ನೀಡಲು ಸರ್ಕಾರಿ ನೌಕರರಿಗೆ ಇರುವ ಆರೋಗ್ಯ ಸಂಜೀವಿನಿ ಎಂಬ ಸೌಭ್ಯಗಳಿಂದ ಕೂಡಾ ವಂಚಿತರಾಗಿದ್ದಾರೆ.

ಇದಲ್ಲದೇ ನಿರ್ದಿಷ್ಟ ವರ್ಗಾವಣೆ ನಿಯಮಗಳು , ಬಡ್ತಿ ನಿಯಮಗಳು ಇಲ್ಲದೇ ಈ ಇಲಾಖೆಯಡಿ ಬರುವ ನೌಕರರು ಪರದಾಡುವಂತಾಗಿದೆ. ಇನ್ನು ವರ್ಷ ಪೂರ್ತಿ ಗೆಜೆಟೆಡ್ ರಜಾ ದಿನಗಳಲ್ಲಿ ಕರ್ತವ್ಯ ನಿರ್ವಹಿಸುವ ಇವರುಗಳಿಗೆ ಪೊಲೀಸ್ ಇಲಾಖೆ ನೌಕರರಿಗೆ ನೀಡುವ ಕನಿಷ್ಟ ಒಂದು ತಿಂಗಳ ವೇತನವನ್ನು ನೀಡಬೇಕೆಂಬ ಬೇಡಿಕೆಯು ಹಲವಾರು ವರ್ಷಗಳಿಂದ ಬೇಡಿಕೆಯಾಗಿಯೇ ಉಳಿದಿದೆ.

ಇಷ್ಟೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡಾ ರೋಗಿಗಳ ಆರೈಕೆಯಲ್ಲಿ ಯಾವುದೇ ರೀತಿಯಲ್ಲಿ ತೊಡಕಾಗದಂತೆ ಸೇವೆ ಸಲ್ಲಿಸುತ್ತಿರುವ ರಾಜ್ಯದ ಈ ನರ್ಸಿಂಗ್ ಸಿಬ್ಬಂದಿಗಳಿಗೆ ಇನ್ನಾದರೂ ನಮ್ಮ ರಾಜ್ಯ ಸರ್ಕಾರ ಎಚ್ಚೆತ್ತು ಈ ಎಲ್ಲಾ ನ್ಯಾಯಯುತ ಬೇಡಿಕೆಗಳನ್ನು ಮತ್ತು ಸಮಸ್ಯೆಗಳನ್ನು ಈ ಕೂಡಲೇ ಈಡೇರಿಸಬೇಕೆಂದು ಈ ಮನವಿಯೊಂದಿಗೆ ಈ ಮೂಲಕ ತಮ್ಮಗಳನ್ನು ಒತ್ತಾಯಿಸುತ್ತೇನೆ.

ವಂದನೆಗಳೊಂದಿಗೆ

ರಾಘು ದೊಡ್ಡಮನಿ, ದಾವಣಗೆರೆ
ರಾಜ್ಯ ಕಾರ್ಯದರ್ಶಿ, ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗ, ಕರ್ನಾಟಕ
( ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ )
ಮೊ: 9844363474

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version