ಅಂತರಂಗ
‘ಬಿಳಿಮಲೆ’ ಎಂಬ ಊರಿನಲ್ಲಿ ಒಂದು ದಿನ..!
- ಹರ್ಷಕುಮಾರ್ ಕುಗ್ವೆ
ಪ್ರೊ.ಪುರುಷೋತ್ತಮ ಬಿಳಿಮಲೆ ಸರ್ ಅವರ “ವಲಸೆ ಸಂಘರ್ಷ ಮತ್ತು ಸಮನ್ವಯ” ಸಂಶೋಧನಾ ಹೊತ್ತಗೆಯ ಬಿಡುಗಡೆ ಕಾರ್ಯಕ್ರಮ ಅವರ ಊರಾದ ಬಳಿಮಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ನಾನೂ ಹೋಗಿ ಬಂದೆ. ಈ ಒಂದು ದಿನದ ಕಾರ್ಯಕ್ರಮ ಮತ್ತು ಜರ್ನಿ ಬಹುಕಾಲ ನೆನಪಿನಲ್ಲಿ ಉಳಿಯುವ ಅನುಭವ ನೀಡಿದವು.
ನಾವು ನಮ್ಮ ಹುಟ್ಟೂರು ಬಿಟ್ಟು ಓದು-ಉದ್ಯೋಗ ಎಂದು ಬೇರೆ ಊರುಗಳಿಗೆ ವಲಸೆ ಹೋದಾಗ ಸಾಮಾನ್ಯವಾಗಿ ಏನು ಮಾಡ್ತಿರುತ್ತೇಬೆ ಎಂದು ನಮ್ಮ ಊರುಗಳ ಜನರಿಗೆ ನಮ್ಮ ಬಗ್ಗೆ ಏನೂ ತಿಳಿದಿರುವುದಿಲ್ಲ. ಆದರೆ ಹೊರಕ್ಕೆ ಹೋಗಿ ಸ್ವಲ್ಪ ಹೆಸರುಗಳಿಸಿಕೊಂಡ ಮೇಲೆ ಊರಿನ ಜನರಿಗೆ ನಮ್ಮ ಬಗ್ಗೆ ಒಂದು ಬಗೆಯ ಅಭಿಮಾನವಿರುತ್ತದೆ. ನಮಗೂ ಅಷ್ಟೇ, ಊರಿನ ಬಗ್ಗೆ ತುಸು ಹೆಚ್ಚೇ ಅಭಿಮಾನ ಪುಳಕಗಳಿರುತ್ತವೆ. ಇಂತಹುದೇ ಒಂದು ಪುಳಕದಿಂದ ಪುರುಷೋತ್ತಮ ಬಿಳಿಮಲೆ ಸರ್ ತಮ್ಮ ಸೋದರರೊಂದಿಗೆ ಸೇರಿಕೊಂಡು ಈ ಸಮಾರಂಭ ಏರ್ಪಡಿಸಿದ್ದರು. ಅವರ ಪುಸ್ತಕವನ್ನು ದೆಹಲಿಯಲ್ಲೋ ಅಥವಾ ಬೆಂಗಳೂರಿನಲ್ಲೋ ಜೋರಾಗಿಯೇ ಬಿಡುಗಡೆ ಮಾಡಬಹುದಿತ್ತು. ಆದರೆ ಬಿಳಿಮಲೆಯಲ್ಲೇ ಅವರ ಕುಟುಂಬ ವರ್ಗದವರೇ ಮುಂದೆ ನಿಂತು, ಉರಿನವರೆಲ್ಲಾ ತಮ್ಮದೇ ಕಾರ್ಯಕ್ರಮವೆಂಬಂತೆ ನಡೆಸಿದ ಅದ್ಭುತ ಕಾರ್ಯಕ್ರಮ ಅದಾಗಲು ಸಾಧ್ಯವೇ ಇರಲಿಲ್ಲ. ಒಂದು ಮದುವೆ ಕಾರ್ಯಕ್ರಮದಲ್ಲಿ ಇರಬಹುದಾದ ಸಂಭ್ರಮ, ಸಡಗರ, ಜವಾಬ್ದಾರಿ ಎಲ್ಲವೂ ಈ ಕೂಡುಕುಟುಂಬದ ಸಾಹಿತ್ಯಕ ಕಾರ್ಯಕ್ರಮದಲ್ಲಿದ್ದವು. ಮನೆಯ ಎಲ್ಲಾ ಸದಸ್ಯರೂ ಒಂದಿಲ್ಲೊಂದು ಜವಾಬ್ದಾರಿ ಹೊತ್ತು ಬಂದಿದ್ದ ಅತಿಥಿಗಳಿಗೆ ಯಾವುದಕ್ಕೂ ಕೊರತೆಯಾಗ ರೀತಿಯಲ್ಲಿ ನೋಡುತ್ತಿದ್ದರು. ಬಿಳಿ ಬಿಳಿಮಲೆ ಸರ್ ಅವರ ಬಾಳಸಂಗಾತಿ ಶೋಭನ ಮೇಡಂ ಅವರು ಪ್ರತಿಯೊಬ್ಬರನ್ನೂ ಪ್ರೀತಿ-ಕಾಳಜಿಯಿಂದ ಮಾತಾಡಿಸುತ್ತಿದ್ದರು. ಕರ್ನಾಟಕದ ದೂರ ದೂರದ ಊರುಗಳಿಂದ ಬಂದು ಈ ಕಾಡಿನ ನಡುವೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನೇಕರಿಗೆ ವಿಶೇಷ ಆತಿಥ್ಯ ಮತ್ತು ವಿಶಿಷ್ಟ ಅನುಭವ ದೊರಕಿದವು.
ಕುಟುಂಬ, ಊರಿನ ಜನರು ಮತ್ತು ಸಾಹಿತ್ಯಾಸಕ್ತರನ್ನು ಒಂದೆಡೆ ಕಲೆಯುವಂತೆ ಮಾಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾದಷ್ಟೂ ಒಳ್ಳೆಯ ಪರಿಣಾಮ ಪ್ರಭಾವವನ್ನು ಸಮಾಜದಲ್ಲಿ ಬೀರಬಹುದು ಎನಿಸಿತು.
ಸಮಾರಂಭದಲ್ಲಿ ಒಳ್ಳೆಯ ಊಟವಿತ್ತು. ಪಂದಿಕರಿ ಸಕತ್ ಟೇಸ್ಟಿಯಾಗಿತ್ತು. ಲೋಕೇಶ್ ಊರುಬೈಲು ಮತ್ತು ಸಂಗಡಿಗರ ಹಾಡುಗಾರಿಕೆ ಮುದ ನೀಡಿತು. ತುಳು ಪಾಡ್ದನ, ಕೋಲಾಟ ಪದ, ಅರೆಬಾಷೆಯ ಸೋಬಾನೆ ಹಾಡು, ಸಿದ್ದವೇಷದ ಹಾಡುಗಳು ತರತರದಲ್ಲಿ ರಂಜಿಸಿದವು. ಅದೇ ಹುರುಪಿನಲ್ಲಿ ಅವರ ಹಾಡಿಗೆ ಹೆಜ್ಜೆಯನ್ನೂ ಹಾಕಿದೆವು.
ರಾತ್ರಿಯಲ್ಲಿ ನಾವೊಂದಷ್ಟು ಜನ ಪುರುಷೋತ್ತಮ ಸರ್ ಜೊತೆಗೂಡಿ ನಡೆಸಿದ ಕತ್ತಲ ನಡಿಗೆ, ಆ ನಡಿಗೆಯ ಹರಟೆ, ನೀರವ ಮೌನ ಮತ್ತು ಹಾಡುಗಳು ನೆನಪಲ್ಲಿ ಉಳಿಯುವಂತವು.
ಮಾತಿಗೆ ಸಿಕ್ಕಿದ ಗೆಣೆಕಾರರು
ಈ ಒಂದು ದಿನದ ವಲಸೆಯಲ್ಲಿ ಹಲವಾರು ಗೆಳೆಯರು ಮಾತಿಗೆ ಸಿಕ್ಕಿದ್ದು ಖುಶಿ ನೀಡಿತು. ವಿಶೇಷವಾಗಿ ನಮ್ಮ ಶಿವಮೊಗ್ಗದ ಪುನೀತ್ ನನಗೆ ನಮ್ಮ ಭರತ್ ದಾಸರಹಳ್ಳಿಯನ್ನೇ ನೆನಪಿಸುತ್ತಿದ್ದ.. ಇಬ್ಬರನ್ನೂ ಅಕ್ಕಪಕ್ಕ ನಿಲ್ಲಿಸಿದ್ರೆ ಯಾರು ಭರತ್, ಯಾರು ಪುನೀತ್ ಎಂದು ಕನ್ಪೂಸ್ ಆಗಬಹುದು! ಇಲ್ಲಿ ಪರಿಚಯವಾದ ನವ್ಯ ನಮ್ಮ ತರಲೆ ದೋಸ್ಸ್ ನವ್ಯಾ ಕಡಮೆಯ ತಂಗಿಯೇನೋ ಅನ್ನಿಸುವಂತಿದ್ದಳು. ಆದ್ರೆ ಈ ಜ್ಯೂನಿಯರ್ ನವ್ಯಾಗೆ ನವ್ಯ ಕಡಮೆಯಷ್ಟು ಚೆನ್ನಾಗಿ ಫೋಟೋ ಪೋಸ್ ಕೊಡಲು ಬರ್ತಾ ಇರಲಿಲ್ಲ ಅಷ್ಟೇ! ಈ ಜ್ಯೂನಿಯರ್ ನವ್ಯಾಳ ಅಕ್ಕನ ಹೆಸರೂ ಕಾವ್ಯ! ಇನ್ನು ಕೊಟ್ಟೂರಿನ ಚಂದದ ಗೆಳೆಯ ಕೊಟ್ರೇಶ್ ಅಂತೂ ಒಂದೇ ದಿನಕ್ಕೆ ಬಹಳ ಆತ್ಮೀಯನಾಗಿಬಿಟ್ಟ. ನಮ್ ಬಾರುಕೋಲು ರಂಗಸ್ವಾಮಿಯವರ ಜೊತೆ ತಾಸಿಗೂ ಹೆಚ್ಚು ಮಾತುಕತೆಯಾಡಿದ್ವಿ. ನಡುವೆ ಸೇರಿಕೊಂಡ ಮೈಸೂರಿನ ಅಶ್ವಥ್ ಅವರು ನಮ್ಮ ಮಾತುಕತೆಗೆ ತಾಳಮದ್ದಲೆಯ ಮೆರುಗು ನೀಡಿದರು. ಆದರೆ ನಮ್ಮ ಮಾತುಕತೆಯ ವಿಷಯ ವಸ್ತು ಚಳುವಳಿ ಹೋರಾಟ, ಪತ್ರಿಕೆ ಕೆಲಸ ಇತ್ಯಾದಿಯಾಗಿತ್ತು. ಸ್ಥಳೀಯರಾದ ಚರುಂಬು ಮತ್ತು ಡೇವಿಡ್ ಚಾರ್ಲಿಯರೊಂದಿಗೆ ಸುಮಾರು ಹೊತ್ತು ಮಾತಾಡಿದೆ.
ಸುಮಾರು ಒಂದು ದಶಕದ ನಂತರ ಸಿಕ್ಕಿ ಆತ್ಮೀಯವಾಗಿ ಮಾತಾಡಿಸಿದ ಸುಕನ್ಯಾ ಕನಾರಳ್ಳಿ ಅವರನ್ನು ಮೊದಲಿಗೆ ನಾನು ಗುರುತೇ ಹಿಡಿಯಲಾಗಲಿಲ್ಲ. “ನೀವು ವಿಜಯ ನೆಕ್ಸ್ಟ್ ನಲ್ಲಿದ್ದಾಗ ಬಂದು ನನ್ನ ಸಂದರ್ಶನ ಮಾಡಿದ್ದಿರಿ, ಲಿವಿಂಗ್ ಟುಗೆದರ್ ಕುರಿತ ಲೇಖನಕ್ಕೆ” ಎಂದು ಅವರು ಹೇಳಿದಾಗ ಟಕ್ ಅಂತ ಫ್ಲಾಶ್ ಆಯಿತು. ಆಗ “ಓ ಸುಕನ್ಯಾ ಮೇಡಂ” ಅಂದಾಗ “ಹೌದೂ” ಎಂದರು. ಹೊರಡುವಾಗ ಅವರು ಇತ್ತೀಚೆಗೆ ಅನುವಾದಿಸಿರುವ “ಬರ್ತೀಯ…ಎಷ್ಟು? ಭಾರತೀಯ ಸೂಳೆಲೋಕದ ಕಥೆಗಳು” ಎಂಬ ಪುಸ್ತಕವನ್ನು ಕೊಟ್ಟರು. ಅದನ್ನು ಅನುವಾದಿಸುವಾಗಿನ ಅವರು ಪಟ್ಟ ಯಾತನೆಯನ್ನೂ ಸಹ ಹೇಳಿದರು. ಈ ಸಮಯದಲ್ಲಿ ತಾವು ಮಾನಸಿಕ ಖಿನ್ನತೆಗೆ ಜಾರಿ anti-depressant ತೆಗೆದುಕೊಳ್ಳಬೇಕಾಯಿತು ಎಂದರು. ಈ ಪುಸ್ತಕದ ಬಗ್ಗೆ ಮೊದಲೇ ಬಿಳಿಮಲೆ ಸರ್ ಕೂಡಾ ತಿಳಿಸಿ ಓದಲೇಬೇಕಾದ, ತೀರಾ disturb ಮಾಡುವ ಪುಸ್ತಕ ಎಂದಿದ್ದು ನೆನಪಾಯಿತು.
ಆತ್ಮೀಯರಾದ ಸುಂದರ್ ಕೆನಾಜೆ ಸರ್ ಅವರೊಂದಿಗೆ ಆಡಿದ ಚುಟುಕು ಮಾತುಕತೆ ಜಾನಪದ-ಪಾಡ್ದನ ಇತ್ಯಾದಿಗಳ ಕುರಿತಾಗಿತ್ತು. ಸಕಲೇಶಪುರದಿಂದ ಬಂದಿದ್ದ ಪ್ರಸಾದ್ ರಕ್ಷಿದಿ ಸರ್ ಹೀಗೇ ಅನೇಕ ಕಾರ್ಯಕ್ರಮಗಳಲ್ಲಿ ಸಿಗುತ್ತಿದ್ದರಾದರೂ ಈ ಸಲ ಸ್ವಲ್ಪ ಹೆಚ್ಚು ಕಾಲ ಅವರ ಮಾತನ್ನು ಕೇಳಿಸಿಕೊಳ್ಳುವ ಅವಕಾಶ ಸಿಕ್ಕಿತು. ಇನ್ನು ಗಿರಿಧರ್ ಕಾರ್ಕಳ, ದಿನೇಶ್ ಕುಕ್ಕುಜಡ್ಕ, ಭರತ್ ಕುಕ್ಕುಜಡ್ಕ, ಮಹಾಂತೇಶ್ ದೊಡ್ಮನಿಯವರು, ಉಷಾ ಕಟ್ಟೇಮನೆ, ಅವರ ಮಗ ಫಲ್ಗುಣ, ಹೇಮಾ ವೆಂಕಟ್, ಸತ್ಯಾ ಮೇಡಂ, ರೇಣುಕಾ ನಿಡಗುಂದಿ, ಕಾಂಚನಾ, ಶಿವಿ ಮಲ್ಲಿಕಾರ್ಜುನ ಇವರೆಲ್ಲರೊಂದಿಗೆ ಕೊಂಚ ಕಾಲ ಹೆಜ್ಜೆ ಹಾಕುವ ಅವಕಾಶವನ್ನೂ ಬಿಳಿಮಲೆ ನೀಡಿತ್ತು.
ರಾತ್ರಿ ಬಿಳಿಮಲೆಯಲ್ಲೇ ತಂಗುವ ವಿಚಾರ ಮಾಡುತ್ತಿದ್ದೆವು. ಪಕ್ಕದ ಮನೆಯವರು ಬಂದು ಉಳಿದುಕೊಳ್ಳುವವರು ಯಾರೇ ಇದ್ದರೂ ಬನ್ನಿ, ನಮ್ಮ ಮನೆಯಲ್ಲಿ ಜಾಗ ಇದೆ ಎಂದು ಆಹ್ವಾನಿಸಿದ್ದರು. ಆದರೆ ಈ ನಡುವೆ ವೀಣಾ ಸುಳ್ಯ ಅವರು ತಮ್ಮ ಸ್ಕೂಟಿಯನ್ನು ಪಂಜದ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿರುವುದಾಗಿ ಹೇಳುತ್ತಾ, “ಅಯ್ಯೋ ನನ್ ಗಾಡಿ, ಅದರಲ್ಲಿರೋ ಡಾಕ್ಯುಮೆಂಟ್ಸ್ ಯಾರಾದರೂ ಎತ್ತಿಕೊಂಡು ಹೋದ್ರೆ ಏನು ಗತಿ” ಅಂತ ಪರದಾಡಲು ಶುರು ಮಾಡಿದ್ದರು. ಈಗ ಒತ್ತಾಯ ಮಾಡಿ ಅವರನ್ನು ಉಳಿಸಿಕೊಂಡರೂ ಅವರಿಗೆ ರಾತ್ರಿ ಇಡೀ ನಿದ್ದೆ ಬರುವುದಿಲ್ಲ ಎಂದು ಖಾತ್ರಿಯಾಗಿತ್ತು. ಹೀಗಾಗಿ ಅವರ ಜೊತೆ ನವ್ಯಾ ಕೂಡಾ ಹೊರಟರು. ಇಬ್ಬರೇ ಆಗುತ್ತಾರೆ ಎಂದು ಹರೀಶ್ ಹೊರಟರು. ಕೊನೆಗೆ ಇಡೀ ಗುಂಪು ಪಂಜಕ್ಕೇ ಹೊರಟು ನಿಂತಿತ್ತು.
ರಾತ್ರಿ ಪಂಜದಲ್ಲಿ ಬಂದು ರೂಮು ಹಿಡಿದ ಮೇಲೆ ನಾವಿದ್ದ ರೂಮಿನಲ್ಲಿ ಪುನೀತ್, ಕೊಟ್ರೇಶಿಗೆ ಬಲುಬೇಗ ನಿದ್ರಾದೇವಿ ಆಲಂಗಿಸಿಕೊಂಡಳು. ನಾನು ಮತ್ತು ಹರೀಶ್ ಬಂಡ್ಸಾಲೆ ಇಬ್ಬರು ಮಾತ್ರ ಘನಗಂಭೀರ ಮಾತುಕತೆಯಲ್ಲಿ ತೊಡಗಿದೆವು. ರಾತ್ರಿ ಹನ್ನೊಂದುವರೆ ಗಂಟೆ ಸುಮಾರಿಗೆ ಸಾಮಾಜಿಕ ಮಾಧ್ಯಮದ ಕುರಿತು ಶುರುವಾದ ಮಾತುಕತೆ ಜಗತ್ತೆಲ್ಲಾ ಸುತ್ತಿಕೊಂಡು ಬರುವಾಗ ಟೈಮ್ ಎಷ್ಟಾಗಿದೆ ಎಂದು ನೋಡಿದರೆ ಸುಮಾರು ಬೆಳಗಿನ ಜಾವ ಮೂರೂವರೆ! ಮತ್ತೆ ಬೆಳಿಗ್ಗೆ ಬೇಗ ಹೊರಡಬೇಕಿದ್ದ ಕಾರಣಕ್ಕೆ ಮಲಗಿದೆವು.
ಮರುದಿನ ಬೆಳಿಗ್ಗೆ ಕೆಲವರು ಮತ್ತೆ ಬಿಳಿಮಲೆಗೆ ಹೋದರೆ ಇನ್ನುಳಿದವರು ನಾನಾ ದಿಕ್ಕುಗಳಿಗೆ ಹೋದರು. ಹೊರಡುವ ಸಮಯದಲ್ಲಿ ಎದುರಿಗೆ ಸಿಕ್ಕಿದ ಕುಮಾರ್ ಆರ್‌ಬಿ ಸರ್ ಮತ್ತು ಪಲ್ಲವ ವೆಂಕಟೇಶ್ ಅವರು ತುಂಬಾ ಪ್ರೀತಿಯಿಂದ ಮಾತಾಡಿಸಿದರು. ನಾನು ಉಡುಪಿ ಕಡೆ ಬರುವ ದಾರಿಯಲ್ಲಿ ಸಿಗುವ ಹಳೇ ಕಾಲದ ದೇವಸ್ಥಾನಗಳು, ದೈವ (ಬೂತ) ಸ್ಥಾನಗಳು, ಜೈನ ಬಸದಿಗಳನ್ನು ಹೊಕ್ಕು ಫೋಟೋ ತೆಗೆಯುತ್ತಾ ಬಂದೆ. ಕಡಪುನಲ್ಲಿನರುವ ಕಲ್ಕುಡ ಕಲ್ಲುರ್ಟಿ ಮೂಲ ದೈವಸ್ಥಾನ, ಬುಡೇರಿಯಾದಲ್ಲಿರುವ ಉಳ್ಳಾಲ್ತಿ, ಉಳ್ಳಾಕ್ಲು ದೈವಗಳ ಕ್ಷೇತ್ರ, ವೇಣೂರಿನಲ್ಲಿರುವ ಕಲ್ಲು ಬಸದಿ, ಮುಗುಳಿ ಎಂಬಲ್ಲಿರುವ ಜೈನ ಚೈತ್ಯಾಲಯ ವಿಶೇಷವೆನಿಸಿದವು. ಕೊಯಿಲಾದಲ್ಲಿರುವ ನೂರಾರು ಎಕರೆಗಳ ಬೃಹತ್ ಜಾನುವಾರು ಸಂವರ್ಧನ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿರುವ ಮುರ್ರ ತಳಿಯ ಎಮ್ಮೆಗಳು, ಮಲೆನಾಡು ಗಿಡ್ಡ ತಳಿಯ ದನಗಳನ್ನು ನೋಡಿ ಖುಷಿಯಾಯಿತು. ಅವುಗಳ ಸಾಕಣೆಗಾಗಿ ಆಧುನಿಕ ವ್ಯವಸ್ಥೆಗಳನ್ನು ಇಲ್ಲಿ ಮಾಡಲಾಗಿದೆ.
ಕಳೆದ ವಾರ ನಮ್ಮ ಮನುಜಮತ ಸಿನಿಯಾನದಿಂದ ಆಯೋಜಿಸಲಾಗಿದ್ದ ಚಿತ್ರದುರ್ಗದ ಸಿನಿಮಾ ಹಬ್ಬಕ್ಕೆ ಅನಿವಾರ್ಯವಾಗಿ ಹೋಗಲಾಗಿರಲಿಲ್ಲ. ಈ ವಾರ ಕುಪ್ಪಳ್ಳಿಯಲ್ಲಿ ನಡೆಯುತ್ತಿದ್ದ ಬೆಸಗರಹಳ್ಳಿ ರಾಮಣ್ಣ ಟ್ರಸ್ಟಿನ ಮೂರು ದಿನಗಳ ಕಮ್ಮಟಕ್ಕೂ ಹೋಗಲು ಆಸೆ ಇದ್ದರೂ ಆಗಿರಲಿಲ್ಲ. ಕೊನೆಗೆ ಬಿಳಿಮಲೆಯ ಒಂದು ದಿನದ ಪಯಣ ಹಲವಾರು ಅನುಭವಗಳನ್ನು ನೀಡಿತು. ಇಂತಹ ಬಹುಕಾಲ ನೆನಪಲ್ಲಿ ಉಳಿಯುವಂತಹ ಒಂದು ಅನುಭವಕ್ಕೆ ಅವಕಾಶ ಒದಗಿಸಿದ ಇಡೀ ಬಿಳಿಮಲೆಯ ಎಲ್ಲಾ ಕುಟಂಬಗಳಿಗೆ ಆಭಾರಿಯಾಗಿದ್ದೇನೆ.
ಬಿಳಿಮಲೆಯ ಪರಿಸರಕ್ಕೆ ಹೋಗಿ ಬಂದದ್ದು ಪುರುಷೋತ್ತಮ ಬಿಳಿಮಲೆ ಸರ್ ಅವರ ವಲಸೆ-ಸಂಘರ್ಷ ಮತ್ತು ಸಮನ್ವಯ ಪುಸ್ತಕ ಓದಲು ಒಳ್ಳೆಯ ಹಿನ್ನೆಲೆ ಒದಗಿಸಿದೆ ಎನ್ನಬಹುದು. ಈ ಪುಸ್ತಕವು ಸುಳ್ಯ ಪರಿಸರದಲ್ಲಿ ಹೆಚ್ಚಾಗಿರುವ ಅರೆಗೌಡ ಸಮುದಾಯ ಹಾಸನ ಕಡೆಯಿಂದ ಸುಮಾರು 500 ವರ್ಷಗಳ ಹಿಂದೆ ಬಂದು ಇಲ್ಲಿ ನೆಲೆ ನಿಂತ ಕುರಿತು ಹಾಗೂ ಸಮುದಾಯದ ಸಾಂಸ್ಕೃತಿಕ ವಿವರಗಳ ಕುರಿತದ್ದು. ಇಂತಹ ಜನ ಸಮುದಾಯಗಳ ವಲಸೆ, ಸಮುದಾಯಗಳ ನಡುವಿನ ಹಲವು ಮುಖಗಳ ಸಂಘರ್ಷ ಮತ್ತು ಅವು ಮಾಡಿಕೊಳ್ಳುವ ಹೊಂದಾಣಿಕೆಗಳು ನನಗಂತೂ ಬಹಳ ಆಸಕ್ತಿಯ ವಿಷಯ. ಅದರಲ್ಲೂ ಕರಾವಳಿಯ ಸಮುದಾಯಗಳನ್ನು, ಅವುಗಳ ಸಾಂಸ್ಕೃತಿಕ ವಿವರಗಳನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಂಡ ಮೇಲಂತೂ ಈ ಆಸಕ್ತಿ ಹಲವು ಪಟ್ಟು ಹೆಚ್ಚಾಗಿದೆ. ಈ ವಿಷಯವಾಗಿ ಸಂಗ್ರಹಿಸಿಕೊಂಡು ಓದಬೇಕೆಂದುಕೊಂಡಿರುವ ಪುಸ್ತಕಗಳ ದೊಡ್ಡ ರಾಶಿಯೇ ಇದೆ. ಪುರುಷೋತ್ತಮ ಬಿಳಿಮಲೆ ಸರ್ ಅವರ ಈ ಪುಸ್ತಕ ಆದಷ್ಟು ಬೇಗ ಓದಿ ಅದರ ಬಗ್ಗೆ ಅನಿಸಿದ್ದನ್ನು ಹಂಚಿಕೊಳ್ಳುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243