ದಿನದ ಸುದ್ದಿ

ಈ ಆನ್ ಲೈನ್ ಶಿಕ್ಷಣ ಇನ್ನೆಷ್ಟು ಮಕ್ಕಳನ್ನು ಬಲಿ ತೆಗೆದುಕೊಳ್ಳಬೇಕೋ..!

Published

on

  • ಪಂಜು ಗಂಗೊಳ್ಳಿ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್ ನಗರ್ ದ ಮೋಟಾರ್ ಸೈಕಲ್ ಮೆಕಾನಿಕ್ ಶ್ರೀನಿವಾಸ್ ರೆಡ್ಡಿ ಮಾರ್ಚ್ ತಿಂಗಳಲ್ಲಿ ತನ್ನ ಸ್ವಂತದ ರಿಪೇರಿ ಅಂಗಡಿಯನ್ನು ತೆರೆದಿದ್ದರು. ಕೆಲವೇ ದಿನಗಳಲ್ಲಿ ಲಾಕ್ ಡೌನ್ ಹೇರಲ್ಪಟ್ಟು ಅಂಗಡಿಯನ್ನು ಮುಚ್ಚಿ ಮನೆಯಲ್ಲಿರಬೇಕಾಯಿತು.

ಕಲಿಕೆಯಲ್ಲಿ ಬಹಳ ಜಾಣೆಯಾಗಿರುವ ಅವರ ಹಿರಿ ಮಗಳು ಐಶ್ವರ್ಯಾ ರೆಡ್ಡಿ 12 ನೇ ತರಗತಿಯಲ್ಲಿ97% ಮಾರ್ಕ್ ಪಡೆದು ದೆಹಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ಪ್ರವೇಶ ಸಿಕ್ಕಾಗ ಶ್ರೀನಿವಾಸ್ ತಮ್ಮ ಮನೆಯ ಮೇಲೆ 2 ಲಕ್ಷ ರುಪಾಯಿ ಸಾಲ ಎತ್ತಿ ಅವಳನ್ನು ಅಲ್ಲಿ ಸೇರಿಸಿದ್ದರು. ಅದು ಸಾಲದೆ ಒಡವೆಗಳನ್ನು ಅಡವಿಟ್ಟು 7 ನೇ ತರಗತಿಯಲ್ಲಿ ಕಲಿಯುತ್ತಿದ್ದ ಎರಡನೇ ಮಗಳು ವೈಷ್ಣವಿಯ ಶಿಕ್ಷಣವನ್ನು ನಿಲ್ಲಿಸಿದ್ದರು.

ದೆಹಲಿಯಲ್ಲಿ ಕಾಲೇಜಿನ ಹಾಸ್ಟೇಲಿನಲ್ಲಿದ್ದು ಎರಡನೇ ವರ್ಷದ ಬಿಎಸ್ಸಿ ಮ್ಯಾಥಮ್ಯಾಟಿಕ್ಸ್ ಮಾಡುತ್ತಿದ್ದ ಐಶ್ವರ್ಯಾ ಫೆಭ್ರವರಿಯಲ್ಲಿ ತೆಲಂಗಾಣಕ್ಕೆ ಬಂದ ಕೆಲವು ವಾರಗಳಲ್ಲಿ ಹೇರಲ್ಪಟ್ಟ ಲಾಕ್ ಡೌನ್ ಕಾರಣ ಮೊಬೈಲ್ ಫೋನ್ ಮೂಲಕ ಆನ್ ಲೈನ್ ಕಲಿಕೆ ಮಾಡುತ್ತಿದ್ದಳು.

ಲಾಕ್ ಡೌನ್ ಸಡಿಲಿಸಲ್ಪಟ್ಟು ಶ್ರೀನಿವಾಸ್ ರಿಪೇರಿ ಅಂಗಡಿಯನ್ನು ಪುನಃ ತೆರೆದರೂ ಸಂಪಾದನೆ ಚೆನ್ನಾಗಿರಲಿಲ್ಲ. ಅಕ್ಟೋಬರ್ ತಿಂಗಳಲ್ಲಿ ಐಶ್ವರ್ಯಾ ತನಗೆ ಮೊಬೈಲ್ ಫೋನಲ್ಲಿ ಆನ್ ಲೈನ್ ಕ್ಲಾಸ್ ಕಷ್ಟವಾಗುತ್ತಿದೆ ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಆದರೂ ಖರೀದಿಸಬಹುದೇ ಎಂದು ಕೇಳಿದಳು. ಇತ್ತ ಸಂಪಾದನೆಯೂ ಇಲ್ಲದೆ ಅತ್ತ ಮನೆ ಮೇಲಿನ ಸಾಲದ ಕಂತು ಕಟ್ಟುತ್ತಿರುವ ಶ್ರೀನಿವಾಸ್ ಕೆಲವು ದಿನ ತಡೆ ಎಂದು ಮಗಳಿಗೆ ಹೇಳಿದ್ದರು.

ಐಶ್ವರ್ಯಾ ಕೇಂದ್ರ ಸರ್ಕಾರದ ಸಯನ್ಸ್ ಆಂಡ್ ಟೆಕ್ನಾಲಜಿ ಮಿನಿಸ್ಟ್ರಿಯ INSPIRE ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿದ್ದಳಾದರೂ ಅದರ ಹಣ ಇನ್ನೂ ಬಂದಿರಲಿಲ್ಲ. ಕಾಲೇಜಿನ ಹಾಸ್ಟೇಲ್ ಸೌಲಭ್ಯ ಮೊದಲ ವರ್ಷದ ವಿದ್ಯಾರ್ಥಿನಿಯರಿಗೆ ಮಾತ್ರವೇ ಎಂಬ ನಿಯಮ ಇದ್ದುದರಿಂದ ಐಶ್ವರ್ಯ ತಾನಿದ್ದ ಹಾಸ್ಟೇಲ್ ಕೋಣೆಯನ್ನು ಬಿಟ್ಟುಕೊಡಬೇಕಾಯಿತು. ಮುಂದೆ ದೆಹಲಿಗೆ ಹೋದಾಗ ತಿಂಗಳಿಗೆ 15 ಸಾವಿರ ರುಪಾಯಿಗೂ ಹೆಚ್ಚು ಕೊಟ್ಟು ಬಾಡಿಗೆ ರೂಮು ಮಾಡಬೇಕಿತ್ತು.

ನವೆಂಬರ್ 2 ರಂದು ಐಶ್ವರ್ಯ ತನ್ನ ಕೈಯಾರೆ ಅಪ್ಪನಿಗೆ ಉಣ್ಣಿಸಿ ಕೊಣೆಗೆ ಹೋಗಿ ‘ನನ್ನಿಂದಾಗಿ ನನ್ನ ಕುಟುಂಬ ಆನೇಕ ಆರ್ಥಿಕ ಕಷ್ಟಗಳನ್ನು ಅನುಭವಿಸುತ್ತಿದೆ. ನಾನು ನನ್ನ ಕುಟುಂಬಕ್ಕೊಂದು ಹೊರೆಯಾಗಿದ್ದೇನೆ. ನನ್ನ ಶಿಕ್ಷಣವೂ ಹೊರೆಯಾಗಿದೆ. ನನಗೆ ಕಲಿಯಲು ಸಾಧ್ಯವಿಲ್ಲದಿದ್ದರೆ, ಬದುಕಲು ಸಾಧ್ಯವಿಲ್ಲ’ ಎಂದು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು!

ಒಬ್ಬಳು ಐಏಎಸ್ ಅಧಿಕಾರಿಯಾಗುವುದು ಐಶ್ವರ್ಯಾಳ ಕನಸಾಗಿತ್ತು. ಏನೆನೋ ಕನಸುಗಳನ್ನು ಕಟ್ಟಿಕೊಳ್ಳುವ ಮಕ್ಕಳು ಕೇವಲ ಶಾಲಾ ಕಲಿಕೆಯಲ್ಲಷ್ಟೇ ಗಟ್ಟಿಗರಾಗಿದ್ದರೆ ಸಾಲದು, ಬದುಕಿನ ಕಲಿಕೆಯಲ್ಲೂ ಗಟ್ಟಿಗರಾದರೆ ಮಾತ್ರವೇ ಅವರೂ ಅವರ ತಂದೆತಾಯಂದಿರು ಇಂತಹ ದುರಂತಗಳಿಂದ ಪಾರಾಗಬಹುದೋ ಏನೋ…ಸ್ಸಾರಿ, ಮಗುವೇ!

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version