ದಿನದ ಸುದ್ದಿ
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕಾಗಿ ಮೇ 12ರಿಂದ ಆನ್‍ಲೈನ್ ಪಾಠ; ಲಾಕ್‍ಡೌನ್ ನಂತರ ಸ್ನಾತಕೋತ್ತರ ಪದವಿ ಪರೀಕ್ಷೆ: ಪ್ರೊ.ಹಲಸೆ
ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಗಂಗೋತ್ರಿ ಆವರಣ, ಚಿತ್ರದುರ್ಗದ ಸ್ನಾತಕೋತ್ತರ ಸೇರಿದಂತೆ ಎಲ್ಲ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳಲ್ಲಿ ಮೇ 12ರಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಪಾಠಗಳು ನಡೆಯಲಿವೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಜೊತೆ ಸೋಮವಾರ ಆನ್‍ಲೈನ್‍ನಲ್ಲಿ ಸಭೆ ನಡೆಸಿದ ಕುಲಪತಿ ಹಲಸೆ ಅವರು, ಕೋವಿಡ್ ಕಾರಣಕ್ಕಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಎರಡು ಮತ್ತು ನಾಲ್ಕನೇ ಸೆಮಿಸ್ಟರ್‍ಗೆ ಆನ್‍ಲೈನ್ ತರಗತಿ ಮುಂದುವರಿಸುವುದು ಅನಿವಾರ್ಯ. ಈ ನಿಟ್ಟಿನಲ್ಲಿ ಎಲ್ಲ ಪ್ರಾಧ್ಯಾಪಕರು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಒಂದು ಮತ್ತು ಮೂರನೇ ಸೆಮಿಸ್ಟರ್‍ಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಿದ್ದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಆರೋಗ್ಯದ ರಕ್ಷಣೆಯ ಉದ್ದೇಶದಿಂದ ಪರೀಕ್ಷೆ ಮುಂದೂಡಲಾಯಿತು. ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮತ್ತು ಸರ್ಕಾರದ ಸೂಚನೆಯನ್ನು ಆಧರಿಸಿ ಪಠ್ಯ ಮತ್ತು ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ | ದಾವಣಗೆರೆ | ಇಂದು-ನಾಳೆ ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ
ಬಹುತೇಕ ಪ್ರಾಧ್ಯಾಪಕರು ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತದ ನಿಯೋಜನೆ ಮನವಿ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆನ್‍ಲೈನ್ ತರಗತಿ ನಡೆಸಲು ಅವರಿಗೆ ತೊಂದರೆ ಆಗಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವರನ್ನು ಕೋವಿಡ್ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಕೋವಿಡ್-19ರ ಎರಡನೇ ಅಲೆ ತೀವ್ರವಾಗಿದೆ. ಈ ಸಂದರ್ಭದಲ್ಲಿ ಸರ್ಕಾರದ ಸೂಚನೆಗಳನ್ನು ಕೇಂದ್ರ ಸ್ಥಳದಲ್ಲಿದ್ದು ಎಲ್ಲ ಪ್ರಾಧ್ಯಾಪಕರೂ ಪಾಲಿಸುವುದು ಕಡ್ಡಾಯ. ಆದ್ದರಿಂದ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಯಾವ ಪ್ರಾಧ್ಯಾಪಕರೂ ಅನುಮತಿ ಇಲ್ಲದೆ ಕೇಂದ್ರ ಸ್ಥಳವನ್ನು ಬಿಟ್ಟು ಹೊರಗೆ ಹೋಗಬಾರದು. ತಪ್ಪಿದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಸೂಚಿಸಿದರು.
ವಿಶ್ವವಿದ್ಯಾನಿಲಯ ಮತ್ತು ಸಂಲಗ್ನ ಕಾಲೇಜುಗಳ ಎಲ್ಲ ಪ್ರಾಧ್ಯಾಪಕರು ಕೋವಿಡ್ ಸಂದರ್ಭದಲ್ಲಿ ತಮ್ಮ ಹಾಗೂ ವಿದ್ಯಾರ್ಥಿಗಳ ಸಂಚಾರ, ಆರೋಗ್ಯದ ಕುರಿತು ಟ್ರ್ಯಾಕ್ ವರದಿಯನ್ನು ಸಲ್ಲಿಸಬೇಕು. ಪ್ರತಿ ವಾರವೂ ವರದಿಯನ್ನು ವಿಭಾಗದ ಮುಖ್ಯಸ್ಥರ ಮೂಲಕ ಕುಲಸಚಿವರಿಗೆ ತಲುಪಿಸಬೇಕು ಎಂದು ಕುಲಪತಿ ಪ್ರೊ. ಹಲಸೆ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಪಿಎಚ್.ಡಿ ಪದವಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ. 31 ರವರೆಗೆ ವಿಸ್ತರಿಸಿದ್ದು, ಅರ್ಜಿ ಸಲ್ಲಿಸಲು ಬ್ಯಾಂಕ್ ಡಿಡಿ ತೆಗೆಸಲು ಕಷ್ಟವಾಗುತ್ತಿದೆ ಎಂಬ ಆಕ್ಷೇಪಗಳನ್ನು ಗಮನಿಸಿ, ಆನ್‍ಲೈನ್‍ನಲ್ಲಿ ಹಣ ಪಾವತಿಸಿ, ರಸೀದಿಯನ್ನು ಅರ್ಜಿ ಜೊತೆಗೆ ಲಗತ್ತಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ ಸ್ವಾಗತಿಸಿದರು. ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243