ಲೋಕಾರೂಢಿ
ಚುನಾವಣೆಯ ಹೊಸ್ತಿಲಲ್ಲಿ ಮಾಲೀಕ-ಸೇವಕ
ಇದೀಗ ಎಲ್ಲೆಡೆ ಚುನಾವಣೆಯ ಜ್ವರದ ಹೊತ್ತು. ಬೆಳಿಗ್ಗೆ ಎದ್ದು ವಾಕಿಂಗ್ ಹೊರಟಾಗ ಜೊತೆಯಾಗುವ ಗೆಳೆಯನಿಂದ ಹಿಡಿದು, ಸಂಜೆ ಆಫೀಸಿನಿಂದ ಮನೆಗೆ ಬರುವಾಗ ಬಸ್ಸಿನಲ್ಲಿ ಪಕ್ಕದಲ್ಲಿ ಕುಳಿತ ಅಪರಿಚಿತನ ಜೊತೆಗೂ ಕಾಲಹರಣ ಮಾಡಲು ಒಂದೊಳ್ಳೆಯ ವಿಷಯವಿದು.
ಚುನಾವಣೆ ಎಂದರೆ ರಾಜಕೀಯ ಕಚ್ಚಾಟಗಳ ಅಖಾಡವೇ ಹೊರತು ಬೇರೆನಲ್ಲ.
ಸುಮ್ಮನೇ ಹಾಗೇ ಚುನಾವಣೆಯ ಆಸುಪಾಸಿನ ಪತ್ರಿಕೆಗಳಲ್ಲಿ ಬಂದಿರುವ ವರದಿಗಳನ್ನು ಗಮನಿಸುತ್ತಾ ಹೋಗಿ; ಆ ಪಕ್ಷದವರು ಇವರ ಮೇಲೆ ಆರೋಪ ಮಾಡುವುದು, ಈ ಪಕ್ಷದವರು ತಾವೇನು ಕಮ್ಮಿ ಎನ್ನುತ್ತಾ ಆ ಪಕ್ಷದವರ ಮೇಲೆ ಜಗಳಕ್ಕಿಳಿಯುವುದು, ನಾವು ಆ ಪಕ್ಷಮುಕ್ತ ರಾಜ್ಯವನ್ನು ಮಾಡುತ್ತೇವೆ ಎನ್ನುವುದು… ಅಬ್ಬಬ್ಬಾ! ಚುನಾವಣೆ ಎಂದರೆ ಇಷ್ಟೇ- ರಾಜಕೀಯ ಮೇಲಾಟಗಳು.
ಇದಕ್ಕೆ ನಾವು ಹಳಿದುಕೊಳ್ಳಬೇಕಾದದ್ದು ನಮ್ಮನ್ನೇ. ಯಾಕೆಂದರೆ ಜನಸಾಮಾನ್ಯರ ದಡ್ಡತನದ ಮೊತ್ತವೇ ಈ ರಾಜಕಾರಣ ಗಳೆಂಬ ಮಹಾತ್ಮರು.
ನಮಗೆ ಎಷ್ಟೊಂದು ವಿಷಯಗಳು ಕಣ್ಣಿಗೆ ರಾಚುತ್ತಲೇ ಇರುತ್ತವೆ; ಉದಾಹರಣೆಗೆ – ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ರಾಜಕೀಯ ನಾಯಕರುಗಳ ಚಟುವಟಿಕೆಗಳು ಗರಿಗೆದರುತ್ತವೆ, ಅಷ್ಟೂ ವರ್ಷಗಳ ಕಾಲ ಕಳೆದುಹೋಗಿದ್ದ ಜನಪ್ರತಿನಿಧಿ ದಿನದಿನವೂ ಕಣ್ಣಿಗೆ ಕಾಣಸಿಕೊಳ್ಳುತ್ತಾನೆ, ದೆಹಲಿಯಿಂದ ರಾಷ್ಟ್ರನಾಯಕರುಗಳ ದಂಡೇ ಬಂದಿಳಿಯುತ್ತದೆ, ರಾಜಕಾರಣ ಗಳ ಮೈಯಲ್ಲಿ ಅತಿವಿನಯ ತುಂಬಿತುಳುಕಾಡುತ್ತದೆ…
ಯಾವುದೇ ಕಾರ್ಪೋರೇಟ್ ಉದ್ಯೋಗಿಗೆ ಕಡಿಮೆಯಿಲ್ಲದಂತೆ ಸವಲತ್ತುಗಳಿವೆಯವರಿಗೆ. ಇಷ್ಟೆಲ್ಲ ಇದ್ದರೂ ಸಹ ನಾವು ಪ್ರತಿ ಸಲ ಚುನಾವಣೆ ಬಂದಾಗ ಹಿಂದಿನ ಬಾರಿ ಉಸುರಿದ್ದ ಸಮಸ್ಯೆಗಳನ್ನೇ ಒದರುತ್ತೇವೆ. ಅದ್ಯಾಕೆ ಇಷ್ಟು ವರ್ಷವಾದರೂ ಸಮಸ್ಯೆಗಳು ಬಗೆಹರಿದಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಕೇಳಲು ಹೆಣಗಾಡುತ್ತೇವೆ. ನಮ್ಮ ದುರ್ಬಲತೆಯಲ್ಲೇ ತಮ್ಮ ಬೇಳೆ ಬೇಯಿಸಿಕೊಂಡು ರಾಜಕಾರಣ ಗಳು ಮುಂದಿನ ಚುನಾವಣೆಯ ಹೊತ್ತಿನಲ್ಲಿ ಮುಖ ತೋರಿಸುವ ಯೋಚನೆಯಲ್ಲಿ ಮುನ್ನಡೆದುಬಿಡುತ್ತಾರೆ.
ಪ್ರಪ್ರಥಮವಾಗಿ ನಾವು ಅರಿಯಬೇಕಾದದ್ದು, ಚುನಾವಣೆ ಎಂಬುದು ಜನಸೇವಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯೆಂಬುದು. ಪ್ರತೀ ಪಕ್ಷಗಳಿಗೂ ಅವರದ್ದೇ ಆದ ಸಿದ್ಧಾಂತಗಳಿವೆ ನಿಜ, ಆದರೆ ಜನಪ್ರತಿನಿಧಿಯಾಗುವವನು ಆ ಪಕ್ಷದ ವಕ್ತಾರನಾಗಿರುವುದಕ್ಕಿಂತ ಹೆಚ್ಚಾಗಿ ತನ್ನ ಕ್ಷೇತ್ರದ ಸಮಸ್ತ ಜನತೆಯ ಪ್ರತಿರೂಪವಾಗಿರುತ್ತಾನೆ.
ಈ ಹೊತ್ತು ನಾವದೆಷ್ಟೇ ಚರ್ಚೆ ಮಾಡಿದರೂ ನಮ್ಮ ಅಡಿಯಾಳು ಮನಃಸ್ಥಿತಿ ಬದಲಾಗುವುದಿಲ್ಲ. ನಾವೇ ಆರಿಸಿ ಕಳುಹಿಸಿದ ಮನುಷ್ಯನನ್ನು ಭೇಟಿ ಮಾಡಲು ದಿನಗಟ್ಟಲೇ ಕಾಯುತ್ತೇವೆ. ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಿರೆಂದು ಬೇಡಿಕೊಳ್ಳುತ್ತೇವೆ. ಯಾವಾಗ ನಮ್ಮ ಧ್ವನಿ ಜನಪ್ರತಿನಿಧಿಯನ್ನು ನಿದ್ದೆಗೆಡಿಸುತ್ತದೆಯೋ, ನಮ್ಮ ಸಮಸ್ಯೆಗಳು ನಾವು ಹೇಳುವ ಮೊದಲೇ ಕರಗಿಹೋಗುತ್ತವೆಯೋ ಆಗ ಮಾತ್ರ ಒಂದು ಆದರ್ಶ ಸಮಾಜ ಉದ್ಭವಿಸಲು ಸಾಧ್ಯ.
(ಲೇಖಕರು: ಕಿರಣ್ ಭೈರುಂಬೆ. ಮೊಬೈಲ್: 9482133340)