ದಿನದ ಸುದ್ದಿ

ಪೇಯ್ಡ್ ನ್ಯೂಸ್, ಸೋಶಿಯಲ್ ಮಿಡಿಯಾದ ಮೇಲೆ ಹದ್ದಿನ ಕಣ್ಣು..!

Published

on

ಸುದ್ದಿದಿನ,ಬಳ್ಳಾರಿ : ಕಾಸಿಗಾಗಿ ಸುದ್ದಿಗಳ ಮೇಲೆ ಹಾಗೂ ಸೋಶಿಯಲ್ ಮಿಡಿಯಾಗಳಲ್ಲಿ ಪ್ರಕಟವಾಗುವ ರಾಜಕೀಯ ಪ್ರೇರಿತ ಜಾಹೀರಾತುಗಳ ಮೇಲೆ ತೀವ್ರ ನೀಗಾ ವಹಿಸಿ, ಆ ರೀತಿ ಏನಾದರೂ ಕಂಡುಬಂದಲ್ಲಿ ಕೂಡಲೇ ಕ್ರಮ ಜರುಗಿಸಿ ಸಂಬಂಧಿಸಿದವರ ವೆಚ್ಚಕ್ಕೆ ಜಮಾಗೊಳಿಸಿ ಚುನಾವಣಾ ವೆಚ್ಚ ಕೋಶಕ್ಕೆ ವರದಿ ಸಲ್ಲಿಸಿ ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಅನಿತಾ ಮಹಾದಾಸ್ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಹಾಗೂ ಮಾಧ್ಯಮ ಪ್ರಮಾಣೀಕರಣ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳಾದ ಫೇಸಬುಕ್, ಟ್ವೀಟರ್ ಸೇರಿದಂತೆ ಇನ್ನೀತರ ಜಾಲತಾಣಗಳಲ್ಲಿ ಅಭ್ಯರ್ಥಿಗಳು ರಾಜಕೀಯ ಸಂಬಂಧಿತ ಜಾಹೀರಾತು ಪೋಸ್ಟ್ ಮಾಡುವುದರ ಮೂಲಕ ಪ್ರಚಾರ ಮಾಡುತ್ತಿರುವುದು ಕಂಡುಬರುತ್ತಿದ್ದು,ಅದರ ಮೇಲೆ ನಿಗಾವಹಿಸಿ ಅವುಗಳನ್ನು ಪರಿಶೀಲಿಸಿ ಸಂಬಂಧಿಸಿದ ಅಭ್ಯರ್ಥಿಗಳ ವೆಚ್ಚಕ್ಕೆ ಜಮಾಗೊಳಿಸಬೇಕು ಎಂದರು.

ಪೇಯ್ಡ್ ನ್ಯೂಸ್ ಎನ್ನುವುದು ದೊಡ್ಡ ಮಹಾರೋಗವಿದ್ದಂತೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ನಡೆಸುವ ದೃಷ್ಟಿಯಿಂದ ಇದನ್ನು ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯುನ್ಮಾನ ವಾಹಿನಿಗಳ ಜತೆಗೆ ಕೇಬಲ್‍ಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳು ಮತ್ತು ಸುದ್ದಿಗಳ ಮೇಲೆಯೂ ನಿಗಾವಹಿಸಿ ಎಂದರು.

ಪತ್ರಿಕಾ ತುಣುಕುಗಳ ಬುಕ್‍ಲೇಟ್, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬಳ್ಳಾರಿ ಜಿಲ್ಲೆಯ ಸುದ್ದಿಗಳು ಬಂದಾಗ ರಿಕಾರ್ಡಿಂಗ್ ಮಾಡುವ ವ್ಯವಸ್ಥೆ, ಸೋಶಿಯಲ್ ಮಿಡಿಯಾ ಕಾರ್ಯವೈಖರಿ, ಮಾಧ್ಯಮಗಳಿಗೆ ಜಾಹೀರಾತು ಅನುಮತಿ ನೀಡುವ ವ್ಯವಸ್ಥೆ, ವಿವಿಧ ಚರ್ಚಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವುದು, ಕರಪತ್ರಗಳ ವೆಚ್ಚದ ಮಾಹಿತಿ ಸೇರಿದಂತೆ ಎಂಸಿಎಂಸಿಯಲ್ಲಿ ಕಾರ್ಯಚಟುವಟಿಕೆಗಳನ್ನು ಈ ಸಂದರ್ಭದಲ್ಲಿ ತಿಳಿದುಕೊಂಡರು.
ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ ಅವರು ಎಂಸಿಎಂಸಿ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ವೆಚ್ಚ ವೀಕ್ಷಕರ ಮೇಲ್ವಿಚಾರಣಾಧಿಕಾರಿ ದೇವರಾಜ್ ಹಾಗೂ ಎಂಸಿಎಂಸಿ ಸಮಿತಿ ಸದಸ್ಯರಾದ ರವಿ ರಾಠೋಡ, ಹೊನ್ನುರಪ್ಪ, ಶಿವಕುಮಾರ ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.

Trending

Exit mobile version