ದಿನದ ಸುದ್ದಿ
ಪಾಕ್ ಹೇಳೋದೊಂದು ಮಾಡೋದೊಂದು: ಬಿಎಸ್‌ಎಫ್ ಅಧಿಕಾರಿ ಕಿಡಿ
ಸುದ್ದಿ ದಿನ ಡೆಸ್ಕ್: ಭಾನುವಾರ ಪಾಕ್ ನಡೆಸಿರುವ ಗುಂಡಿನ ಕಾರ‌್ಯಾಚರಣೆಯಲ್ಲಿ ಇಬ್ಬರು ಯೋಧರ ಹುತಾತ್ಮರಾಗಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್‌ಎಫ್ ಅಧಿಕಾರಿಯೊಬ್ಬರು ಪಾಕಿಸ್ತಾನ ಹೇಳೋದೊಂದು ಮಾಡೋದೊಂದು ಎಂದು ಕೆಂಡಾಮಂಡಲರಾಗಿದ್ದಾರೆ.
ಪ್ರತಿಭಾರಿ ಸಭೆ ನಡೆದಾಗ ತಾನು 2003ರಲ್ಲಿ ಕೈಗೊಂಡ ನಿರ್ಣಯದಂತೆ ಕದನ ವಿರಾಮ ಘೋಷಿಸುವುದಾಗಿ ಪಾಕಿಸ್ತಾನ ಹೇಳುತ್ತದೆ. ಆದರೆ, ಅದನ್ನು ಪಾಲಿಸುವುದಿಲ್ಲ ಎಂದು ಜಮ್ಮು ವಿಭಾಗದ ಬಿಎಸ್‌ಎಫ್‌ನ ಇನ್ಸ್‌ಪೆಕ್ಟರ್ ಜನರಲ್ ರಾಮ್ ಅಥ್ವಾರ್ ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಅಕ್ನೂರ್, ಕಂಚಕ್ ಮತ್ತು ಖೌರ್‌ನಲ್ಲಿ ಭಾನುವಾರ ಪಾಕಿಸ್ತಾನ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಬಿಎಸ್‌ಎಫ್‌ನ ಎಎಸ್‌ಐ ಸತ್ಯನಾರಾಯಣ್ ಯಾದವ್ ಮತ್ತು ಪೇದೆ ವಿಜಯ್ ಕುಮಾರ್ ಪಾಂಡೆ ಹುತಾತ್ಮರಾಗಿದ್ದರು. ಅಲ್ಲದೇ 13 ನಾಗರಿಕರು ಗಾಯಗೊಂಡಿದ್ದರು.
2003ರ ಕದನ ವಿರಾಮ ಷರತ್ತುಗಳಿಗೆ ತಾನು ಬದ್ಧವಾಗಿರುವುದಾಗಿ ಪಾಕಿಸ್ತಾನವು ಭಾರತದ ಪತ್ರಕ್ಕೆ ಉತ್ತರ ಬರೆದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.
ಈಚೆಗೆ ನಡೆದಿರುವ ಘಟನೆಯಿಂದ ಪಾಕಿಸ್ತಾನ ತಾನು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಎಂದು ಮತ್ತೆ ನಿರೂಪಿಸಿದೆ. ಭಾರತ ಪಡೆಗಳು ಸುಮ್ಮನಿದ್ದಾಗ ಕೆಣಕಿರುವ ಪಾಕಿಸ್ತಾನ ಪಡೆಯನ್ನು ಸುಮ್ಮನೆ ಬಿಡುವುದಿಲ್ಲ ಎಂದೂ ಅವರು ಕಿಡಿ ಕಾರಿದ್ದಾರೆ.
ನಾಗರಿಕರೇ ಟಾರ್ಗೆಟ್
ಭಾರತ ಪಡೆಗಳು ಪಾಕಿಸ್ತಾನದ ಯಾವೊಂದು ಜನವಸತಿ ಪ್ರದೇಶಗಳ ಮೇಲೆ ಗುಂಡಿನ ದಾಳಿ ನಡೆಸಿಲ್ಲ. ಬದಲಾಗಿ ಪ್ರಚೋದಿತ ದಾಳಿ ಎದುರಿಸುವ ಸಲುವಾಗಿ ಎದುರಾಳಿಗಳನ್ನು ಗುರಿಯಾಗಿಸಿ ಗುಂಡು ಹಾರಿಸಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮಿಲಿಟರಿ ಸಮವಸ್ತ್ರ ಧರಿಸಿರಲಿಲ್ಲ
ಭಾರತದ ಯೋಧರ ಮೇಲೆ ದಾಳಿ ನಡೆಸಿದ ಪಾಕಿಸ್ತಾನದವರು ಸೇನಾ ಸಮವಸ್ತ್ರ ಧರಿಸಿದ್ದರು ಎಂಬ ವಾದಗಳು ಉದ್ಭವಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ಈ ಬಗ್ಗೆ ಸ್ಪಷ್ಟ ಚಿತ್ರಣವಿಲ್ಲ. ಒಂದು ತನಿಖೆ ನಡೆಸಿ ವರದಿ ನೀಡಲಾಗುವುದು ಎಂದು ತಿಳಿಸಿದರು.