ಬಹಿರಂಗ
ಅಸಹನೆಯಿಂದ ಕಂಗೆಟ್ಟರುವ ಪಾಕಿಸ್ತಾನ ಮತ್ತು ಅದರ ಮುಖ್ಯಸ್ಥ ಇಮ್ರಾನ್ ಖಾನ್
ಒಂದು ನಿಮಿಷ, ಇದಕ್ಕಾಗಿ ಯಾರೂ ಸಂಭ್ರಮಪಡುವ ಅವಶ್ಯಕತೆ ಇಲ್ಲ. ಏಕೆಂದರೆ ಹತಾಶ ಮನಸ್ಥಿತಿಯ ಮತ್ತೊಂದು ಮುಂದುವರಿದ ಭಾಗವೇ ಅಪಾಯಕಾರಿ ಚಟುವಟಿಕೆ. ಭಾರತದ ಬೃಹತ್ ಸೈನಿಕ ಶಕ್ತಿಯ ಮುಂದೆ ಪಾಕಿಸ್ತಾನದ ಶಕ್ತಿ ಕಡಿಮೆ ಎಂಬುದು ನಿಜ. ಆದರೆ ಯುದ್ಧ ಎಂಬ ವಿನಾಶಕಾರಿ ಆಟದಲ್ಲಿ ಶಕ್ತಿಯ ಜೊತೆಗೆ ದುಷ್ಟತನ ಸಹ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕಿದೆ.
ಒಂದು ಹಂತದವರೆಗೆ ಹೊಡೆದಾಟ ಬಡಿದಾಟ ಎಲ್ಲವೂ ನಡೆಯುತ್ತದೆ. ಆದರೆ ಒಂದು ವೇಳೆ ಭಾರತ ಪಾಕಿಸ್ತಾನದ ಮೇಲೆ ಅಥವಾ ಪಾಕಿಸ್ತಾನ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಿದ್ದೇ ಆದರೆ ಮೊದಲು ಪ್ರಯೋಗಸಿದ ದೇಶವನ್ನು ಇಡೀ ವಿಶ್ವದ ಮಾನವ ಸಂಕುಲ ಕ್ಷಮಿಸುವುದಿಲ್ಲ ಎಂಬುದನ್ನು ಮರೆಯದಿರೋಣ.
ಜಪಾನಿನ ಹಿರೋಷಿಮಾ ನಾಗಸಾಕಿ ನಗರಗಳ ಮೇಲೆ ಅಮೆರಿಕ ಅಣು ಬಾಂಬ್ ಪ್ರಯೋಗಿಸಿ ಈಗಲೂ ಬಲಾಡ್ಯವಾಗಿ ಉಳಿದಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು.ಹೌದು, ಅಮೆರಿಕ ಪರ್ಲ್ ಹಾರ್ಬರ್ ದ್ವೀಪದ ಮೇಲೆ ಜಪಾನಿನ ದಾಳಿಗೆ ವಿರುದ್ದವಾಗಿ ಹಿರೋಷಿಮಾ ಮತ್ತು ನಾಗಸಾಕಿ ನಗರಗಳಲ್ಲಿ ಅತ್ಯಂತ ಅಮಾನವೀಯ ಕೃತ್ಯವನ್ನು ಎಸಗಿಯೂ ಅದನ್ನು ಸಮರ್ಥಿಸಿಕೊಂಡು ಯಶಸ್ವಿಯಾಗಿದೆ. ಅದಕ್ಕೆ ಕಾರಣ ಅಮೆರಿಕಾದ Extraordinary ಎಂದು ಹೇಳಬಹುದಾದ ಆರ್ಥಿಕ ಮತ್ತು ಸೈನಿಕ ಶಕ್ತಿ. ಅಷ್ಟು ಶಕ್ತಿ ಅಥವಾ ಆ ಉದಾಹರಣೆಯನ್ನುಭಾರತ ಪಾಕಿಸ್ತಾನದ ವಿಷಯದಲ್ಲಿ ಅಳವಡಿಸಿಕೊಳ್ಳುವುದು ಸೂಕ್ತವಲ್ಲ.
ನೀವೇ ಯೋಚಿಸಿ ನೋಡಿ. ಭಾರತ ಪಾಕಿಸ್ತಾನದ ಮೇಲೆ ಅಣು ಬಾಬ್ ಹಾಕಿದರೆ ಬಹುಶಃ 10 ಲಕ್ಷ ಜನ ನೇರವಾಗಿ ಇನ್ನೊಂದು ಹತ್ತು ಲಕ್ಷ ಜನ ಪರೋಕ್ಷವಾಗಿ ಸಾಯುತ್ತಾರೆ. ಕೆಲವು ಚದರ ಕಿಲೋಮೀಟರ್ ಗಳಷ್ಟು ಭೂಮಿ ವಾಸಿಸಲು ಅಯೋಗ್ಯವಾಗುತ್ತದೆ.
ಅದೇರೀತಿ ಭಾರತದ ಮೇಲೆ ಪಾಕಿಸ್ತಾನ ಬಾಂಬ್ ಹಾಕಿದರು ಪರಿಣಾಮ ಅಷ್ಟೇ ತೀವ್ರವಾಗಿ ಇರುತ್ತದೆ.
ಇದು ಬೇಕೆ ? ತಡೆಯುವ ಮಾರ್ಗಗಳು ಇಲ್ಲವೇ ? ಭಾರತ ಮತ್ತು ಪಾಕಿಸ್ತಾನದಲ್ಲಿ ಒಳ್ಳೆಯ, ಹೃದಯವಂತ, ಬುದ್ದಿವಂತ ಜನರಾರು ಇಲ್ಲವೇ ? ಎಲ್ಲರೂ ಸತ್ತು ಹೋಗಿದ್ದಾರೆಯೇ ? ಯಾರೋ ಕೆಲವು ಮೂಲಭೂತವಾದಿ ಭಯೋತ್ಪಾದಕರ ಹುಚ್ಚಾಟಕ್ಕೆ ಅಮಾಯಕ 20 ಲಕ್ಷ ಜನ ಸಾಯಬೇಕೆ ?
ಭಾರತದ ಸರ್ವೋಚ್ಚ ನಾಯಕ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಸರ್ವೋಚ್ಚ ನಾಯಕ ಇಮ್ರಾನ್ ಖಾನ್ ಗೆ ಇದು ತಿಳಿದಿಲ್ಲವೇ ? ಇಬ್ಬರ ನಡುವೆ ಸಣ್ಣ ಪ್ರದೇಶ ಕಾಶ್ಮೀರದ ಬಗ್ಗೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುವಷ್ಟು ಇಬ್ಬರಿಗೂ ಸಾಮರ್ಥ್ಯ ಇಲ್ಲವೇ ?
ಹಾಗಾದರೆ ಸರ್ವೋತ್ಕೃಷ್ಟ ಶಾಂತಿ ಸಹನೆ ಪ್ರೀತಿ ಹೇಳುತ್ತದೆ ಎನ್ನುವ ನಂಬಿಕೆಯ ಹಿಂದೂ ಮತ್ತು ಇಸ್ಲಾಂ ಧರ್ಮದ ತಿರುಳುಗಳು ಸುಳ್ಳೆ ? ಧರ್ಮ ಇರುವುದು ಕೇವಲ ಭೋದಿಸಲು ಮಾತ್ರ ಅನುಸರಿಸಲು ಅಲ್ಲ ಎಂದು ಭಾವಿಸೋಣವೇ ? ನಿಮ್ಮ ನಿಮ್ಮ ದೇವರು ಧರ್ಮಗಳು ಕೇವಲ ಒಂದು ಸಣ್ಣ ಜಾಗದ ವಿಷಯ ಪರಿಹರಿಸುವಷ್ಟು ತಿಳಿವಳಿಕೆ, ಸಹನೆ, ತ್ಯಾಗ ಕಲಿಸುವುದಿಲ್ಲ ಅದಕ್ಕಾಗಿ ದಶಕಗಳ ಕಾಲ ರಕ್ತಪಾತ ನಡೆಸಬೇಕು ಎನ್ನುವುದಾದರೆ ಧರ್ಮ ದೇವರುಗಳ ಅವಶ್ಯಕತೆ ಇದೆಯೇ ?
ಚಿಕ್ಕ ಮಕ್ಕಳು ಗೋಲಿ ಆಡುವಾಗ ನಿನ್ನದು ತಪ್ಪು ನನ್ನದು ಸರಿ ಎನ್ನುವ ಬಾಲಿಶ ವರ್ತನೆ ಒಂದು ದೇಶದ ಮುಖ್ಯಸ್ಥರಿಗೆ ಇದ್ದರೆ ಹೇಗೆ ? ಸಮಸ್ಯೆ ಇರುವುದು ನಿಜ. ಕಾರಣ ಏನೇ ಇರಲಿ ಬಗೆಹರಿಸಿಕೊಳ್ಳಿ. ಇಲ್ಲದಿದ್ದರೆ ನಿಮ್ಮ ಎಲ್ಲಾ ಪ್ರವಚನ, ಭೋದನೆ, ಮಂದಿರ, ಮಸೀದಿ ಗ್ರಂಥಗಳನ್ನು ಕಟ್ಟಿ ಮೂಲೆಗೆ ಬಿಸಾಕಿ.
” ಬಲವೇ ನ್ಯಾಯ ” ಎಂಬುದನ್ನು ಜನರಿಗೆ ಹೇಳಿ.ತಾಖತ್ತು ಇದ್ದವರು ಉಳಿಯಲಿ ದುರ್ಬಲರು ಸಾಯಲಿ. ಇದೇ ಕಾಡಿನ ನ್ಯಾಯ.ಇದು ಖಂಡಿತ ಆದರ್ಶದ ಮಾತಲ್ಲ. ಈಗಲೂ ಕಾಶ್ಮೀರದ ಸಮಸ್ಯೆಗೆ ಒಂದು ಪರಿಹಾರವಿದೆ.
ಮುಖ್ಯವಾಗಿ ಈ 6 ಜನ 15 ದಿನಕ್ಕೆ ಒಮ್ಮೆ 10 ಬಾರಿ 3 ಗಂಟೆಯಷ್ಟು ಪ್ರತಿಸಲ ಕುಳಿತು ಚರ್ಚಿಸಿದರೆ ಖಂಡಿತ ಭಯೋತ್ಪಾದನೆ ಹೊರತುಪಡಿಸಿದ ಎಲ್ಲಾ ಸಮಸ್ಯೆಗಳು ಪರಿಹಾರಗುತ್ತದೆ. ಅದರ ನಂತರ ಒಮ್ಮೆ ವಿಶ್ವಾಸ ಮೂಡಿದರೆ ಭಯೋತ್ಪಾದನೆಯ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ಜಂಟಿ ಕಾರ್ಯಾಚರಣೆ ಪ್ರಾರಂಭ ಮಾಡಬಹುದು.
ಆ 6 ಜನರೆಂದರೆ
- ಭಾರತದ ಪ್ರಧಾನಿ ನರೇಂದ್ರ ಮೋದಿ.
- ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್
- ಭಾರತ ಸೈನ್ಯದ ಮುಖ್ಯಸ್ಥ.
- ಪಾಕಿಸ್ತಾನ ಸೈನ್ಯದ ಮುಖ್ಯಸ್ಥ.
- ಈ ಕ್ಷಣದ ಭಾರತದ ಬಹು ದೊಡ್ಡ ಸಂಘಟನೆ ಮತ್ತು ಪಾಕಿಸ್ತಾನದ ಕಡು ವಿರೋಧಿ ಹಾಗೂ ಕಾಶ್ಮೀರದ ಬಗ್ಗೆ ಕಠಿಣ ನಿಲುವು ತಳೆದಿರುವ RSS ಮುಖ್ಯಸ್ಥ.
- ಪಾಕಿಸ್ತಾನದ ಇಸ್ಲಾಂ ಧರ್ಮದ ಅತ್ಯಂತ ಹೆಚ್ಚು ಪ್ರಭಾವಿ ನಾಯಕ.
ಇವರ ಜೊತೆಗೆ ಸರ್ಕಾರಗಳ ಉನ್ನತ ಮಟ್ಟದ ಅಧಿಕಾರಿ ವರ್ಗ. ಈ ಚರ್ಚೆಯನ್ನು ಎರಡೂ ದೇಶದ ಎಲ್ಲಾ ರೀತಿಯ ಮಾಧ್ಯಮಗಳು ಯಾವುದೇ ಎಡಿಟಿಂಗ್ ಮಾಡದೆ ನೇರ ಪ್ರಸಾರ ಮಾಡಬೇಕು. ಆಗ ಜನರಿಗೆ ಯಾವ ದೇಶ ಕೆಟ್ಟ ವರ್ತನೆ ತೋರುತ್ತಿದೆ, ಯಾವ ದೇಶ ನಿಜವಾಗಿಯೂ ಸಮಸ್ಯೆಯನ್ನು ಹುಟ್ಟು ಹಾಕುತ್ತಿದೆ ಎಂದು ತಿಳಿಯುತ್ತದೆ.
ಈ ಸಂದರ್ಭದಲ್ಲಿ ಈ ವಿಷಯಗಳ ಬಗ್ಗೆ ಚರ್ಚೆ ಮಾಡಲು ಯಾವುದೇ ಮಾಧ್ಯಮಗಳಿಗೆ ಅವಕಾಶ ನೀಡಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದರೂ ಈ ಮಾಧ್ಯಮಗಳು ಕೊಡು ಕೊಳ್ಳುವಿಕೆಯ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಜನರನ್ನು ರೊಚ್ಚಿಗೆಬ್ಬಿಸುವ ಸಾಧ್ಯತೆ ಇದೆ.
ಮೇಲೆ ಹೇಳಿದ ಆರು ಜನರ ಟೀಮ್ ಸೇರಿ ಒಂದು ತೀರ್ಮಾನಕ್ಕೆ ಬಂದು ಜಂಟಿ ಒಪ್ಪಂದ ಘೋಷಿಸಿದರೆ ಒಂದಷ್ಟು ವಿರೋಧದ ನಡುವೆಯೂ ಎರಡೂ ದೇಶದ ಬಹುತೇಕ ಜನ ಒಪ್ಪಬಹುದು.
ಏಕೆಂದರೆ ಸಾಮಾನ್ಯ ಜನರಿಗೆ ಯುದ್ಧ ಬೇಕಿಲ್ಲ. ಮೇಲೆ ಹೇಳಿದ ನಾಯಕರು ಮತ್ತು ಅವರ ಸಂಘಟನೆಗಳೇ ಈ ಘರ್ಷಣೆಯ ಮೂಲ ಪ್ರೇರೇಪಿತರು. ಅವರೇ ಒಂದು ನಿರ್ಧಾರ ಕೈಗೊಂಡರೆ ಹೆಚ್ಚಿನ ಪ್ರತಿರೋಧ ಇರುವುದಿಲ್ಲ.
ಯುದ್ದೋತ್ಸಾಹಿ ಜನರೇ ದಯವಿಟ್ಟು ಅರ್ಥಮಾಡಿಕೊಳ್ಳಿ ,
ಒಂದು ವೇಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಪಾಕಿಸ್ತಾನ ಸೋಲು ಖಚಿತ. ಆ ಭಯದಲ್ಲಿ ಅವರೇ ಮೊದಲು ಅಣು ಬಾಂಬ್ ಪ್ರಯೋಗಿಸುತ್ತಾರೆ. ನಾವು ನಂತರ ಪ್ರಯೋಗಿಸಬಹುದು. ಆದರೆ ಏನೂ ಇಲ್ಲದ ಪಾಕಿಸ್ತಾನಕ್ಕಿಂತ ಹೆಚ್ಚು ಇರುವ ನಾವೇ ಕಳೆದುಕೊಳ್ಳುವುದು ಜಾಸ್ತಿ.
ಅಲ್ಲದೆ ಈ ಯುದ್ಧದ ಸಂದರ್ಭಕ್ಕಾಗಿ ಕಾಯುತ್ತಿರುವ ಚೀನಾ ಕೆಲವೇ ದಿನಗಳಲ್ಲಿ ನಮ್ಮ ಅರುಣಾಚಲ ಪ್ರದೇಶವನ್ನು ಆಕ್ರಮಿಸುವ ಸಾಧ್ಯತೆ ಇದೆ. ಶಾಂತಿ ಸಮಯದಲ್ಲಿಯೇ ದೋಖ್ಲಾಂ ಪ್ರವೇಶಿಸುವ ಚೀನಾ ಅನುಕೂಲಕರ ವಾತಾವರಣದಲ್ಲಿ ಸುಮ್ಮನಿರುವುದಿಲ್ಲ.
ಜೊತೆಗೆ ಒಂದು ನೆನಪಿಡಿ. ಅದು ಯಾವ ದೇಶವೇ ಆಗಿರಲಿ, ವ್ಯಕ್ತಿಯೇ ಆಗಿರಲಿ, ಅಮೆರಿಕ ಚೀನಾ ಪಾಕಿಸ್ತಾನ ಭಾರತ ಆಫ್ರಿಕಾವೇ ಆಗಿರಲಿ ಯುದ್ಧದ ಬಗ್ಗೆ ಭಯವಿರುತ್ತದೆ ನಿಜ. ಆದರೆ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಯಾವ ಹಂತಕ್ಕೆ ಹೋಗಲು ಸಿದ್ದವಾಗುತ್ತಾರೆ. ಪಾಕಿಸ್ತಾನ ಸಹ ಮಿತಿಮೀರಿದಾಗ ಯಾವ ಹಂತಕ್ಕೆ ಹೋಗಲೂ ಹೇಸುವುದಿಲ್ಲ.ಇದು ಬೇಕೆ ? ” ಗೆದ್ದವನು ಸೋತ ಸೋತವನು ಸತ್ತ ” ಎಂಬುದು ತಿಳಿದಿದ್ದರೂ ದುರಹಂಕಾರ ಒಳ್ಳೆಯದಲ್ಲ.
ಇದು ನನ್ನ ಅಭಿಪ್ರಾಯ. ಇದಕ್ಕಿಂತ ಉತ್ತಮ ಅಭಿಪ್ರಾಯ ದೇಶದ ಹಿತದೃಷ್ಟಿಯಿಂದ ನಿಮ್ಮದಾಗಿದ್ದರೆ ಸಂತೋಷ ಮತ್ತು ಸ್ವಾಗತಾರ್ಹ.ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,ಮನಸ್ಸುಗಳ ಅಂತರಂಗದ ಚಳವಳಿ.
–ವಿವೇಕಾನಂದ. ಹೆಚ್.ಕೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243