ದಿನದ ಸುದ್ದಿ
ಭಾಗ-1 | ದೆಹಲಿ ಹೋರಾಟದ ಕೆಲವು ಅಸಲೀ ಸಂಗತಿಗಳು; ಕಿಸಾನ್ ಮೋರ್ಚಾ ಏನು ಹೇಳುತ್ತಿದೆ..?
ದೆಹಲಿಯ ಸುತ್ತ ನಡೆಯುತ್ತಿರುವ ರೈತ ಹೋರಾಟದ ಎಲ್ಲಾ ವಿವರಗಳೂ, ಅದನ್ನು ಅಭಿಮಾನದಿಂದ ಬೆಂಬಲಿಸುವ ನಮ್ಮೆಲ್ಲರಿಗೆ ಗೊತ್ತಿರುವುದು ಸಾಧ್ಯವಿಲ್ಲ. ನಿಜ ಏನೆಂದರೆ, ಅಲ್ಲೇ ಹತ್ತಿರದಲ್ಲಿರುವವರಿಗೂ ಎಲ್ಲವೂ ಗೊತ್ತಾಗಿರುತ್ತದೆಂದು ಹೇಳುವುದು ಸಾಧ್ಯವಿಲ್ಲ. ಹೀಗಿರುವಾಗ ಮೊನ್ನೆ 26ರಂದು ನಡೆದ ಘಟನೆಯ ಕುರಿತೂ ಹಲವರಿಗೆ ಅನುಮಾನಗಳು, ಪ್ರಶ್ನೆಗಳು ಬರುವುದು ಸಹಜ.
ಹಾಗಾಗಿ ಕೆಲವು ಪ್ರಶ್ನೋತ್ತರಗಳ ಮುಖಾಂತರ ಸಂಪೂರ್ಣ ಮಾಹಿತಿಯನ್ನು ತಿಳಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಕಳೆದ ಒಂದು ತಿಂಗಳಿಂದ ದೆಹಲಿಯಲ್ಲಿರುವ ನಮ್ಮ ಮೂವರು ಮಾಧ್ಯಮ ಕಾರ್ಯಕರ್ತರು ನೀಡಿದ ಮಾಹಿತಿ, ಜನವರಿ 26ರಂದು ರೈತರ ಒಂದು ಗುಂಪು ಸಿಂಘು ಗಡಿಯಿಂದ ಪೂರ್ವನಿಗದಿತ ಸಮಯಕ್ಕಿಂತ ಮುಂಚೆಯೇ ಹೊರಟಾಗಿನಿಂದ ಕೆಂಪು ಕೋಟೆಯ ಬಳಿ ಧ್ವಜ ಹಾರಿಸುವತನಕವೂ ಅದನ್ನು ಫಾಲೋ ಮಾಡಿದ ಮೂವರು ಪತ್ರಕರ್ತರು ನೀಡಿದ ಮಾಹಿತಿ ಮತ್ತು ಈ ಹೋರಾಟದ ಮುಂಚೂಣಿಯಲ್ಲಿರುವ ದರ್ಶನ್ ಪಾಲ್, ಯೋಗೇಂದ್ರ ಯಾದವ್, ಜಗಮೋಹನ್ ಮುಂತಾದವರು ಹಾಗೂ ಅವರ ಸಂಗಾತಿಗಳಿಂದ ಪಡೆದ ಮಾಹಿತಿಯು ಇದಕ್ಕೆ ಆಧಾರವಾಗಿದೆ.
ಪ್ರಶ್ನೆ: ದೆಹಲಿಯಲ್ಲಿ ಬಂದು ಕುಳಿತ ಈ ರೈತ ಹೋರಾಟಕ್ಕೆ ಕರೆ ನೀಡಿದವರಾರು? ಇದರ ನೇತೃತ್ವ ಯಾರದ್ದು?
ಉತ್ತರ: 2018ರಿಂದಲೇ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಎಐಕೆಎಸ್ಸಿಸಿ-ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿ (ಆರಂಭವಾದಾಗಲೇ 170 ರೈತ ಸಂಘಟನೆಗಳು ಇದರ ಭಾಗವಾಗಿದ್ದವು, ಈಗ 300ಕ್ಕೂ ಹೆಚ್ಚಿವೆ) ನವೆಂಬರ್ 25 & 26ಕ್ಕೆ ದೆಹಲಿ ಚಲೋ ಎಂದು ಕರೆ ನೀಡಿತ್ತು. ಈ ಸಮನ್ವಯ ಸಮಿತಿಯ ಪ್ರಕ್ರಿಯೆಯನ್ನು ಆರಂಭಿಸಿದ್ದು ಯೋಗೇಂದ್ರ ಯಾದವ್ ಅವರಾದರೂ, ಇದರಲ್ಲಿ ಕರ್ನಾಟಕ ರಾಜ್ಯ ರೈತಸಂಘದ ಎರಡೂ ಗುಂಪುಗಳು, ಹಲವು ಬಿಕೆಯುಗಳು (ಭಾರತೀಯ ಕಿಸಾನ್ ಯೂನಿಯನ್), ಎಡಪಕ್ಷಗಳ ರೈತಸಂಘಗಳು ಸೇರಿದಂತೆ ಹಲವಾರು ಸಂಘಟನೆಗಳು ಇವೆ.
ಎಐಕೆಎಸ್ಸಿಸಿ ಕರೆ ನೀಡುವ ಹೊತ್ತಿಗೆ ಪಂಜಾಬಿನಲ್ಲಿ ಜೂನ್ ತಿಂಗಳಿಂದ ಶುರುವಾಗಿ ತೀವ್ರಗೊಳ್ಳುತ್ತಿದ್ದ ರೈತ ಹೋರಾಟವು ಆ ರಾಜ್ಯದ ಮಟ್ಟಿಗೆ ತಾರ್ಕಿಕ ಅಂತ್ಯ ಕಂಡಿತ್ತು. ಏಕೆಂದರೆ ಅಲ್ಲಿನ ರಾಜ್ಯ ಸಕರ್ಾರವು ವಿಧಾನಸಭೆಯಲ್ಲಿ ಒಕ್ಕೂಟ ಸಕರ್ಾರದ ಕಾಯ್ದೆಗಳಿಗೆ ವಿರುದ್ಧವಾಗಿ ಸರ್ವಾನುಮತದಿಂದ ಬೇರೆ ಕಾಯ್ದೆಗಳನ್ನು ಅಂಗೀಕರಿಸಿಯಾಗಿತ್ತು. ಹಾಗಾಗಿ ಇನ್ನು ಒಕ್ಕೂಟ ಸಕರ್ಾರದ ಮೇಲೆ ಒತ್ತಡ ತಂದರೆ ಮಾತ್ರ ಪರಿಹಾರ ಎಂಬುದು ಅವರಿಗೆ ಖಚಿತವಾಗಿತ್ತು.
ಜೂನ್ ತಿಂಗಳಿಂದ ನಡೆದ ಹೋರಾಟದಲ್ಲಿ ಪಂಜಾಬಿನ ಬಹುತೇಕ (32) ರೈತ ಸಂಘಟನೆಗಳು ಸಮನ್ವಯಕ್ಕೆ ಬಂದಾಗಿತ್ತು. ಅವರೆಲ್ಲರೂ ಇದೇ ನವೆಂಬರ್ 25, 26ಕ್ಕೇ ದೆಹಲಿಗೆ ದೊಡ್ಡ ಸಂಖ್ಯೆಯಲ್ಲಿ ಹೋಗಬೇಕು ಮತ್ತು ದೆಹಲಿಯಲ್ಲೇ ಉಳಿಯಲು ಬೇಕಾದ ವ್ಯವಸ್ಥೆ ಮಾಡಿಕೊಂಡೇ ಹೋಗಬೇಕೆಂದು ತೀಮರ್ಾನ ಮಾಡಿದರು. ಪಂಜಾಬಿನ ಸಮನ್ವಯ ಹಾಗೂ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯದ ಮಧ್ಯೆ (ಏನೇ ಕೊರತೆಗಳಿದ್ದರೂ) ಮಾತುಕತೆ, ಸಮನ್ವಯ ಸಮಿತಿಯೂ ಏರ್ಪಾಟಾಗಿತ್ತು.
ಆದರೆ ಏಐಕೆಎಸ್ಸಿಸಿಯ ಭಾಗವಾಗಿರದ ಹಲವು ಸಂಘಟನೆಗಳೂ ಪಂಜಾಬಿನಿಂದ ಬಂದಿದ್ದರಿಂದ, ಅಂತಿಮವಾಗಿ ಎಲ್ಲರನ್ನೂ ಪ್ರತಿನಿಧಿಸುವ ಸಂಯುಕ್ತ್ ಕಿಸಾನ್ ಮೋಚರ್ಾ ರೂಪಿತವಾಯಿತು. ಉತ್ತರ ಪ್ರದೇಶದ ಇನ್ನೊಂದು ದೊಡ್ಡ ಸಂಘಟನೆಯಾದ ಬಿಕೆಯು (ಟಿಕಾಯತ್) ಇದರಲ್ಲಿ ಇರಲಿಲ್ಲ. ಹಾಗೆಯೇ ಈಗ ಜನವರಿ 26ರಂದು ದೆಹಲಿಯ ಕೇಂದ್ರಭಾಗ ಮತ್ತು ಕೆಂಪುಕೋಟೆಯ ಬಳಿ ಹೋದ ಸಂಘಟನೆಯೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗ ಆಗಿರಲಿಲ್ಲ.
ಪ್ರಶ್ನೆ: ಹಾಗಾದರೆ ಈ ರೈತರು ದೆಹಲಿಗೆ ಬಂದಾಗ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವ ವಿಚಾರದಲ್ಲಿ ಗೊಂದಲವೇರ್ಪಟ್ಟಿದ್ದೇಕೆ?
ಉತ್ತರ: ಈ ಹೋರಾಟದ ನಾಯಕರು ಅತ್ಯಂತ ವಿನಮ್ರವಾಗಿ ಹೇಳುವುದೇನೆಂದರೆ ನಾಯಕತ್ವ ತಪ್ಪು ನಿರ್ಧಾರ ತೆಗೆದುಕೊಂಡಿತ್ತು, ಜನರು ದಾರಿ ತೋರಿಸಿದರು. ಹೌದು, ಪಂಜಾಬಿನಿಂದ ಹೊರಟ ರೈತರು ದಾರಿಯಲ್ಲಿ ಹಾಕಿದ್ದ ಬ್ಯಾರಿಕೇಡ್ಗಳನ್ನು ಪಕ್ಕಕ್ಕೆ ಸರಿಸಿ ಅಥವಾ ಕಂದಕಗಳನ್ನು ದಾಟಿ ಬಂದ ಚಿತ್ರ ನೀವು ನೋಡಿರುತ್ತೀರಿ. ಅದು ನಾಯಕತ್ವದ ತೀರ್ಮಾನವಾಗಿರಲಿಲ್ಲ. ಎಲ್ಲಿ ತಡೆಯುತ್ತಾರೋ ಅಲ್ಲೇ ಅನಿರ್ದಿಷ್ಟಾವಧಿ ಕೂರುವುದು ಮಾತ್ರ ಅವರ ತೀಮರ್ಾನವಾಗಿತ್ತು. ಆದರೆ ಪಂಜಾಬಿನ ರೈತರು ದೆಹಲಿಯ ಕಡೆಗೆ ಹೋಗಲೇಬೇಕೆಂದು ತೀರ್ಮಾನಿಸಿ ಅವನ್ನು ದಾಟಿದರು.
ಹಾಗೆಯೇ ಮೇಲೆ ಹೇಳಲಾದ ಸಮನ್ವಯ ಸಮಿತಿಯ ಸರ್ವಾ ನುಮತದ ತೀರ್ಮಾನವೇನೆಂದರೆ ದೆಹಲಿ ಪೊಲೀಸರು ಸೂಚಿಸಿದ ಮೈದಾನಕ್ಕೆ ಹೋಗುವುದು ಎಂದಾಗಿತ್ತು. ಟ್ರ್ಯಾಕ್ಟರ್ ಸಾಲಿನಲ್ಲಿ ಹಿಂದೆ ಉಳಿದಿದ್ದ ಪಂಜಾಬಿನ ರೈತ ನಾಯಕರ ಗಮನಕ್ಕೆ ಬಂದಂತೆ ದೆಹಲಿಯ ಗಡಿ ತಲುಪಿದ ರೈತರು ಮೈದಾನಕ್ಕೆ ಹೋಗಲು ನಿರಾಕರಿಸಿದರು. ಅವರು ದೆಹಲಿಯಲ್ಲಿದ್ದ ಯೋಗೇಂದ್ರ ಯಾದವ್ ಮತ್ತಿತರರನ್ನು ಗಡಿಗೆ ಹೋಗಿ ರೈತರ ಮನವೊಲಿಸಲು ಸೂಚಿಸಿದರು.
ಆದರೆ ಗಡಿಗೆ ಹೋದ ಅವರಿಗೆ ಗೊತ್ತಾದದ್ದೇನೆಂದರೆ ರೈತರನ್ನು ಮನವೊಲಿಸುವುದು ಸಾಧ್ಯವೇ ಇಲ್ಲ ಎಂದು. ಅಂತಿಮವಾಗಿ ರೈತರು ಹೇಳಿದ್ದೇ ಸರಿ ಎಂಬುದು ಈ ನಾಯಕರುಗಳ ಅಭಿಪ್ರಾಯ. ವಿವಿಧ ಗಡಿಗಳಲ್ಲಿ ಲಕ್ಷಗಟ್ಟಲೆ ರೈತರು ಕೂತರು. ಐತಿಹಾಸಿಕ ಹೋರಾಟವು ಆರಂಭವಾಯಿತು.
ಪ್ರಶ್ನೆ: ಬಹುತೇಕ ಪಂಜಾಬ್ ಮತ್ತು ಹರಿಯಾಣಗಳ ರೈತರೇ ಇಲ್ಲಿ ಹೆಚ್ಚಿದ್ದಾರೆ, ಆದರೆ ಇಡೀ ದೇಶದಲ್ಲಿ ಅಲ್ಲಲ್ಲಿ ಪೂರಕವಾದ ಪ್ರತಿಭಟನೆಗಳು ನಡೆಯುತ್ತಿವೆ ಎಂಬುದೇನೋ ಸರಿ. ಆದರೆ ಇಡೀ ದೇಶದ ಪರವಾಗಿ ಇದು ನಡೆಯುತ್ತಿದೆ ಎನ್ನುವುದಾದರೆ ಸರ್ಕಾರದ ಜೊತೆ ಮಾತುಕತೆಯಲ್ಲಿ ದೇಶದ ಉಳಿದ ಭಾಗಗಳ ಪ್ರತಿನಿಧಿಗಳು ಏಕಿಲ್ಲ?
ಉತ್ತರ: ಇದ್ದಾರೆ. ಈಗ ಬೆಂಗಳೂರಿನಲ್ಲಿ ವಾಸಿಸುವ, ಆಂಧ್ರದ ಆಶಾ ಕಿಸಾನ್ ಆಂದೋಲನದ ಕವಿತಾ ಕುರಗಂಟಿ ಹೆಚ್ಚಿನ ಮಾತುಕತೆಗಳ ಭಾಗವಾಗಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಹನ್ನನ್ ಮೊಲ್ಲಾ (ಇವರು ಪಶ್ಚಿಮ ಬಂಗಾಳದವರು), ಹರಿಯಾಣಾ ಮೂಲದವರಾದ, ಆದರೆ ಅಖಿಲ ಭಾರತ ರೈತ ಹೋರಾಟಗಳ ಸಮನ್ವಯ ಸಮಿತಿಯನ್ನು ಪ್ರತಿನಿಧಿಸುವ ಯೋಗೇಂದ್ರ ಯಾದವ್ ಈ ಹೋರಾಟದ 7 ಜನರ ಉನ್ನತ ಸಮಿತಿಯ ಭಾಗವಾಗಿದ್ದಾರೆ.
ಭಾಗ-2: ಮುಂದುವರಿದಿದೆ
ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243