ದಿನದ ಸುದ್ದಿ
ಶ್ರೀಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ನಾಡಿಗೆ ಇನ್ನಷ್ಟು ಕಾಲ ಸಿಗಬೇಕಿತ್ತು : ಸಿದ್ದರಾಮಯ್ಯ ಕಂಬನಿ
ಸುದ್ದಿದಿನ, ಬೆಂಗಳೂರು : 1938ರ ಡಿಸೆಂಬರ್ 3ರಂದು 8ನೇ ವಯಸ್ಸಿನ ವೆಂಕಟರಾಮ ಪೇಜಾವರ ಮಠದ 32ನೇ ಯತಿಯಾಗಿ ವಿಶ್ವೇಶ ತೀರ್ಥ ಎಂಬ ಹೆಸರಿನೊಂದಿಗೆ ಪೀಠವೇರಿದ ಶ್ರೀಗಳು, ಅಂದಿನಿಂದಲೂ ಕೇವಲ ಧಾರ್ಮಿಕ ಕಾರ್ಯಗಳಲ್ಲಷ್ಟೇ ಅಲ್ಲದೆ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲೂ ನಿರಂತರ ಸೇವೆ ಸಲ್ಲಿಸುತ್ತಾ ಬಂದಿದ್ದರು. ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಡುಪಿ ಮಠ ಪರಂಪರೆಯಲ್ಲಿ 5 ಬಾರಿ ಪರ್ಯಾಯ ಸ್ವೀಕರಿಸಿದ ಶ್ರೇಯಸ್ಸು ವಿಶ್ವೇಶ ತೀರ್ಥ ಶ್ರೀಗಳದ್ದು. ಒಂದು ಮಠಕ್ಕೆ 14 ವರ್ಷಕ್ಕೊಮ್ಮೆ ಪರ್ಯಾಯ ಬರುತ್ತದೆ. ವಿಶ್ವೇಶ ತೀರ್ಥರಿಗೆ 1954ರಿಂದ ಪ್ರಾರಂಭಗೊಂಡು 2016ರವರೆಗೆ ಇಂಥ 5 ಪರ್ಯಾಯ ನಡೆಸುವ ಅವಕಾಶ ಸಿಕ್ಕಿದೆ. ಶ್ರೀಗಳು ಧಾರ್ಮಿಕವಾಗಿಯಷ್ಟೇ ಅಲ್ಲ, ಸಾಮಾಜಿಕವಾಗಿಯೂ ಚಟುವಟಿಕೆಗಳಿಂದ ಕೂಡಿದ್ದರು. ಹಲವು ಸಮಾಜ ಸೇವಾ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡವರ್ಗದವರ ಏಳ್ಗೆಗೆ ಶ್ರಮಿಸಿದವರು. ಪೂರ್ಣ ಪ್ರಜ್ಞಾ ವಿದ್ಯಾಪೀಠ, ಅಖಿಲ ಭಾರತ ಮಾಧ್ವ ಮಹಾ ಮಂಡಲ ಇತ್ಯಾದಿ ಅವರು ಸ್ಥಾಪಿಸಿದ ಪ್ರಮುಖ ಸಂಘ ಸಂಸ್ಥೆಗಳು ಎಂದಿದ್ದಾರೆ.
ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದಕ್ಕೆ ಶ್ರೀಗಳ ವಿರೋಧವಿತ್ತು. ದಲಿತ ಕೇರಿಗೆ ಭೇಟಿ ನೀಡಿ, ದಲಿತರಿಂದ ಆತಿಥ್ಯ ಸ್ವೀಕರಿಸಿ ಮಾದರಿಯಾದರು. ಈ ವರ್ಷ ಕೂಡ ಅನಾರೋಗ್ಯದ ನಡುವೆಯೂ ಮೈಸೂರಿನ ದಲಿತ ಕೇರಿಗೆ ಶ್ರೀಗಳು ಭೇಟಿ ನೀಡಿದ್ದರು. ಇದಕ್ಕೆ ವ್ಯಕ್ತವಾದ ಟೀಕೆಗಳನ್ನೂ ಸಮರ್ಥವಾಗಿ ಎದುರಿಸಿದರು. ಜನರಿಗೆ, ಸಮಾಜಕ್ಕೆ ಸಲ್ಲಿಸುವ ಸೇವೆ ನಾವು ದೇವರಿಗೆ ಸಲ್ಲಿಸಬೇಕಾದ ಸುಂಕ. ಇದು ನಮ್ಮ ಹಿರಿಯರು ನೀಡಿದ ಸಂದೇಶ ಎಂದು ನಂಬಿದ್ದ ಶ್ರೀಗಳು, ಅದನ್ನು ತಮ್ಮ ಜೀವನದಲ್ಲಿ ಅಕ್ಷರಶಃ ಅಳವಡಿಸಿಕೊಂಡಿದ್ದರು. ಮಠದ ಆವರಣದಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಿದ್ದ ಶ್ರೀಗಳ ನಡೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ಗಳಿಸಿತ್ತು ಎಂದು ಹೇಳಿದ್ದಾರೆ.
ಶ್ರೀಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ನಾಡಿಗೆ ಇನ್ನಷ್ಟು ಕಾಲ ಸಿಗಬೇಕಿತ್ತು. ದುರಾದೃಷ್ಟವಶಾತ್ ಇಂದು ಶ್ರೀಗಳು ನಮ್ಮನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ, ಅವರ ಅನುಯಾಯಿಗಳಿಗೂ ಹಾಗೂ ಸಂಬಂಧಿಕರಿಗೂ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಅಂತಿಮ ನಮನ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243