ದಿನದ ಸುದ್ದಿ

ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ; ಶೀಘ್ರದಲ್ಲೇ ಚಾಲನೆ : ಸಚಿವ ಆರ್.ಅಶೋಕ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಉತ್ತರಕನ್ನಡ : ರಾಜ್ಯದಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ ತಲುಪಿಸುವ ನೂತನ ಕಾರ್ಯಕ್ರಮಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಅಚವೆ ಗ್ರಾಮದಲ್ಲಿಂದು ಹಮ್ಮಿಕೊಳ್ಳಲಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಹಾಗೂ ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮನೆ ಬಾಗಿಲಿಗೆ ಪಿಂಚಣಿ ಸವಲತ್ತು ಕಲ್ಪಿಸಲು ನೂತನ ಸಹಾಯವಾಣಿ ಆರಂಭಿಸಲಾಗುತ್ತಿದೆ ಎಂದರು.

ಫಲಾನುಭವಿಗಳು ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದರೆ 72 ಗಂಟೆಯೊಳಗೆ ಕಂದಾಯ ಸಿಬ್ಬಂದಿ ಅವರ ಮನೆಗೆ ತೆರಳಿ, ಪ್ರಮಾಣಪತ್ರ ನೀಡಲಿದ್ದಾರೆ. ಬಳಿಕ ಅವರಿಗೆ ಪಿಂಚಣಿ ವಿತರಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಿಂದ ಇದುವರೆಗೆ ರಾಜ್ಯದಲ್ಲಿ 50 ಲಕ್ಷದಷ್ಟು ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿಗಳು ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ಸರ್ಕಾರಿ ಶಾಲೆ, ಸರ್ಕಾರಿ ವಸತಿ ನಿಲಯಗಳಲ್ಲೇ ವಾಸ್ತವ್ಯ ಮಾಡುವಂತೆ ಸೂಚಿಸಲಾಗಿದೆ. ಗ್ರಾಮ ವಾಸ್ತವ್ಯ ಮಾಡಲಾದ ಗ್ರಾಮಗಳ ಅಭಿವೃದ್ಧಿಗೆ 1 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಲಾಗುವುದು ಎಂದು ತಿಳಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಿವರಾಮ ಹೆಬ್ಬಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version