ದಿನದ ಸುದ್ದಿ
ಷಕೀಬ್ ಎಸ್ ಕಣದ್ಮನೆ ಅವರಿಗೆ ಪಿಎಚ್ ಡಿ ಪದವಿ
ಸುದ್ದಿದಿನ,ದಾವಣಗೆರೆ : ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯದ ಸಂಶೋಧನಾರ್ಥಿ ಷಕೀಬ್ ಎಸ್ ಕಣದ್ಮನೆ ಅವರು ಮಂಡಿಸಿದ ‘ಸಂತೇಬೆನ್ನೂರು ಪರಿಸರದ ಸಾಂಸ್ಕೃತಿಕ ಸಂಕಥನ’ (‘environmental Cultural Narration Of Santebennur’) ಎಂಬ ಮಹಾ ಪ್ರಬಂಧಕ್ಕೆ ದಿನಾಂಕ : 12-04-2022ರಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ 30ನೆಯ ನುಡಿಹಬ್ಬ (ಘಟಿಕೋತ್ಸವ) ದಲ್ಲಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ ಗೆಹ್ಲೋಟ್ ರವರು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದರು.
ಕನ್ನಡ ವಿಶ್ವವಿದ್ಯಾಲಯ ಹಂಪಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಲ್ಲಿಕಾರ್ಜುನ ಎಂ. ರವರ ಮಾರ್ಗದರ್ಶನದಲ್ಲಿ ದಿನಾಂಕ: 01-04-2022 ರಂದು ಮಂಡಿಸಿದ ಪ್ರೌಢ ಪ್ರಬಂಧಕ್ಕೆ ‘ಡಾಕ್ಟರ್ ಆಫ್ ಫಿಲಾಸಫಿ’ (ಪಿ.ಎಚ್.ಡಿ) ಪದವಿಯನ್ನು ಪಡೆದುಕೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ನವಿಲೇಹಾಳ್ ಗ್ರಾಮದ ಶ್ರೀ ಷಂಷು ಕೆ ಬಿ, ಶ್ರೀಮತಿ ಪರ್ವೀನ್ ಹೆಚ್ ದಂಪತಿಯ ಮೊದಲ ಮಗನಾಗಿ ರೈತ ಕುಟುಂಬದಲ್ಲಿ ಜನಿಸಿದ ಷಕೀಬ್ ಎಸ್ ಕಣದ್ಮನೆರವರು ತನ್ನ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ನವಿಲೇಹಾಳ್ ನಲ್ಲಿ ಮುಗಿಸಿ, ಸಿರಿಗೆರೆಯ ಬಿ ಎಲ್ ಆರ್. ಎಸ್ ಎಲ್ ವಿ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಮತ್ತು ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಸಿರಿಗೆರೆಯಲ್ಲಿ ತರ್ಕಶಾಸ್ತ್ರ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ ಗಳಿಸಿದರು.
ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಬಿ.ಎ. ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಶಿವಗಂಗೋತ್ರಿಯಿಂದ ಬಿ. ಇಡಿ ಮತ್ತು ಎಂ.ಎ. ಪದವಿಗಳನ್ನು ಪ್ರಥಮ ಶ್ರೇಣಿಯೊಂದಿಗೆ ಪಡೆದಿದ್ದಾರೆ.
ನೂರ ಅರವತ್ತಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಮಿನಾರ್‌ಗಳಲ್ಲಿ ಭಾಗವಹಿಸಿದ ಡಾ. ಷಕೀಬ್ ಎಸ್ ಕಣದ್ಮನೆರವರು, ಅನೇಕ ವೇದಿಕೆಗಳಲ್ಲಿ ಕವನ ವಾಚನ, ಮತ್ತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ವಿದ್ವತ್ ವಲಯದ ಗಮನ ಸೆಳೆದಿದ್ದಾರೆ. 2019 ರಲ್ಲಿ ಮೊಹದ ಮೋಡಗಳು ಎಂಬ ಚೊಚ್ಚಲ ಕವನ ಸಂಕಲನವು ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಯಾಗಿ ಮುದ್ರಣಗೊಂಡು ಪ್ರಕಟಣೆಯಾಗಿದೆ, ಇವರು ತಮ್ಮ ವಿಶಿಷ್ಟ ಶೈಲಿಯ ವಿಷಯ ಮಂಡನೆ, ಸಾಹಿತ್ಯ ಸೇವೆಗಾಗಿ ಕುವೆಂಪು ರತ್ನ, ಸಾಹಿತ್ಯ ಸೇವ ರತ್ನ, ಡಾ. ಎಂ. ಎಂ. ಕಲ್ಬುರ್ಗಿ, ಸಾಧನಕೇರಿಯ ಸಾಧಕ ರತ್ನ ರಾಜ್ಯ ಪ್ರಶಸ್ತಿ ಒಳಗೊಂಡಂತೆ ಹಲವು ಪ್ರಶಸ್ತಿ-ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ.
ತಂದೆ-ತಾಯಿ, ಅನುಜರಾದ ಮಹಮ್ಮದ್ ಗೌಸ್, ಮನ್ಸೂರ್ ಜತೆ ನವಿಲೇಹಾಳ್ ನಲ್ಲಿ ವಾಸಿಸುವ ಇವರು
ಗ್ರಾಮೀಣ ಪ್ರದೇಶದ ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ ಶೈಕ್ಷಣಿಕವಾಗಿ ಮತ್ತು ಸಾಹಿತ್ಯಕವಾಗಿ ಅತ್ಯಧ್ಬುತ ಸಾಧನೆ ಮಾಡುವ ಮೂಲಕ ನವಪೀಳಿಗೆಯ ಯುವಜನತೆಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243