ದಿನದ ಸುದ್ದಿ
ಕವಿತೆ | ಚರಗ ಚಲ್ಲುತ್ತಿದ್ದಾರೆ..!
- ಸುರೇಶ ಎನ್ ಶಿಕಾರಿಪುರ
ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ,
ಅವಳ ನಾಲಗೆ ಕತ್ತರಿಸಿ ಎಸೆದರು.
ಅವಳು ತಮ್ಮ ಹೆಸರು ಬರೆಯಬಾರದಲ್ಲ?
ಅದಕ್ಕೇ,
ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು.
ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,
ಅವಳ ಕಾಲುಗಳನ್ನು ಒಣ ಕಟ್ಟಿಗೆಯಂತೆ ಲಡ್ಡನೆ ಮುರಿದರು.
ಅವಳ ಕೊರಳು ಸ್ವರ ಹೊರಡಿಸಬಾರದಲ್ಲ?
ಅದಕ್ಕೇ,
ಅವಳ ಗೋಣನ್ನು ತಿರುಪಿ ಮುರಿದರು.
ಅವಳು ಮಿಸುಕಲೂ ಬಾರದಲ್ಲ? ಅದಕ್ಕೇ,
ಬೆನ್ನ ಮೂಳೆ ಮುರಿದು ಬೆನ್ನ ಹುರಿ ಹರಿದರು..
ದೇಶವು ಹೊತ್ತಿ ಉರಿಯಬಾರದಲ್ಲ?
ಆಳುವವನ ಗದ್ದುಗೆಯು ಅಲ್ಲಾಡಬಾರದಲ್ಲ?
ಶ್ರೇಷ್ಟ ಹಿಂದೂ ಧರ್ಮದ ಮಾನ ಉಳಿಯಬೇಕಲ್ಲ?
ಅದಕ್ಕೇ ಅಧಿಕಾರಿಗಳು ಸೂರ್ಯ ಹುಟ್ಟುವ ಮುನ್ನ ಅವಳನ್ನು ಸುಟ್ಟು ಬೂದಿ ಮಾಡಿದರು.
ಹಿಂದೂ ಧರ್ಮದ ಶವ ಸಂಸ್ಕಾರವನ್ನು
ಶಾಸ್ತ್ರೋಕ್ತ ಮಾಡಿ ಮುಗಿಸಿದರು
ಮೂಳೆ, ಮಾಂಸ, ವೀರ್ಯಮಾದರಿ, ಸಾಕ್ಷಿ ಎಲ್ಲವೂ..
ಪಂಚಭೂತಗಳಲ್ಲಿ ಲೀನ.
ವಿಶ್ವಗುರುವಿನ ಜೋಳಿಗೆಯ ತುಂಬಾ
ಹೆಣ್ಣಿನ ತುಟಿ ಕೊರಳು ಮೊಲೆ ಯೋನಿಯಿಂದ ಹರಿದ ರಕ್ತದ ಮಜಗಟ್ಟಿದ ಉಂಡೆಗಳು ತುಂಬಿವೆ.
ದಾನಮ್ಮ, ಆಸಿಫಾ, ಮನೀಷಾ, ಅವಳಿವಳೆಲ್ಲರ
ಬಿಸಿರಕ್ತ ಬಸಿದು ಪುಂಡರು ಚರಗ ಚೆಲ್ಲುತ್ತಿದ್ದಾರೆ
ತಮ್ಮ ರಾಕ್ಷಸ ಸಂತಾನ ಹುಲುಸಾಗಿ ಬೆಳೆಯಲೆಂದು.
ಚೌಕಿದಾರ ಕಾಯುತ್ತಿದ್ದಾನೆ,
ಯಾರನ್ನ? ಏನನ್ನ?
ಸುದ್ದಿದಿನ.ಕಾಂ|ವಾಟ್ಸಾಪ್|9980346243