ಅಂಕಣ
ಕವಿತೆ | ಅವಳೀಗ ಕಾಯುವುದಿಲ್ಲ
- ಶಮೀಮ ಕುತ್ತಾರ್, ಮಂಗಳೂರು
ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.
ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.
ಬಲದ ಬಲೆಯಾಗಿ
ಬಗಲಲ್ಲಿ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.
ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.
ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.
ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…
ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..
ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)
ಸುದ್ದಿದಿನ.ಕಾಂ|ವಾಟ್ಸಾಪ್|9980346243