ಅಂತರಂಗ

ಪ್ರೇಮ ವಿರಾಗಿಯ ಕಾತುರದ ಕವಿತೆಗಳು

Published

on

  • ಪರಶುರಾಮ್. ಎ

ಪ್ರೇಮ ವಿರಾಗಿಯ ನಡುಗತ್ತಲ ಕವಿತೆಗಳು” ಎಮ್.ಜಿ. ಕೃಷ್ಣಮೂರ್ತಿ ಇಂಡ್ಲವಾಡಿಯವರ ಪ್ರೇಮಿಯೊಬ್ಬನ ಕಾತುರದ ಕವಿತೆಗಳು. ಈ ಸಂಕಲನದಲ್ಲಿ ಒಟ್ಟು 53 ಕವನಗಳಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದ ಕೃತಿಯಾಗಿದೆ. ಕೆ.ವೈ. ನಾರಾಯಣಸ್ವಾಮಿಯವರು ಮುನ್ನುಡಿ ಬರೆದು ಕವಿಗೆ ಮುನ್ಸೂಚನೆಯನ್ನು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕವನ ಸಂಕಲನದ ಬಹುತೇಕ ಕವನಗಳು ಹೆಣ್ಣಿನ ಸ್ಪರ್ಶ ಮತ್ತು ದೈಹಿಕ ಸಾಮೀಪ್ಯದಿಂದ ಪ್ರಾಪ್ತವಾಗುವ ರೋಮಾಂಚನ ತಲ್ಲಣ ಮತ್ತು ಅನುಭವಗಳಿಂದ ತಾನು ಪಡೆದ ಹೊಸ ಅರಿವುಗಳನ್ನು ನಿರೂಪಿಸಿರುವ ರಚನೆಗಳೇ ಈ ಸಂಕಲನದ ತುಂಬಾ ತುಂಬಿಕೊಂಡಿವೆ ಎನ್ನುತ್ತಾ, ಪ್ರೇಮಿಯಾಗಿ ಗೆದ್ದಿರುವ ಹಾಗೇ ಕವಿಯಾಗಿ ಗೆಲ್ಲುವ ದಾರಿ ಗುರಿಯನ್ನು ಕ್ರಮಿಸಬೇಕು. ಕವಿಗೆ ತಾನು ಬರೆಯುತ್ತಿರುವ ಮಾತು ಒಂದು ಪರಂಪರೆ ಸಂಸ್ಕೃತಿಯ ಮುಂದುವರಿಕೆ ಎಂಬ ಎಚ್ಚರ ಮತ್ತು ಭಯಗಳಿರಬೇಕು ಎಂಬ ಎಚ್ಚರಿಕೆ ಸಹ ನೀಡಿದ್ದಾರೆ._

ಒಬ್ಬ ಪ್ರೇಮಿಗೆ ಇರಬಹುದಾದ ನೈಜ ಕಾತುರತೆ, ತುಡಿತಗಳು, ಭ್ರಮೆಗಳು, ಹುಚ್ಚುತನವೆಲ್ಲವೂ ಕವಿತೆಗಳ ಮೂಲಕ ಹೊರಹೊಮ್ಮಿದೆ. ಓದುಗರನ್ನು ಒಬ್ಬ ಪ್ರೇಮಿಯಾಗಿಸಲು ಅಣಿಗೊಳಿಸುವಂತಿದೆ ಈ ವಿರಾಗಿಯ ನಡುಗತ್ತಲ ಕವಿತೆಗಳು.

ಅವಳಿಗಾಗಿ one time story ಕವನದಲ್ಲಿ

ಪ್ರೇಮ ನಿವೇದನೆ ಅದೆಷ್ಟು ಕಷ್ಟ
ಮೈನಡುಗಿಸುವುದು
ಅವಳ ನೋಟ, ಮಾತು
ಅಪ್ಪಾ ಇನ್ನೇನು ಯಾವುದೊ ಸಿಡಿಲು
ಬಡಿಯುವ ಭಾಸ
ಇವೆಲ್ಲವುಗಳಿಂದ ಮೈದಡವಿ
ಮೇಲೇಳುವಷ್ಟರಲ್ಲಿ ಬಾಯಿಂದ ಮಾತೇ ಬಾರದು

ಎನ್ನುತ್ತಾ ಎಲ್ಲಾ ಪ್ರೇಮಿಯೊಳಗೆ ಇರಬಹುದಾದ ಹುಚ್ಚು ಭಯ, ಹುಸಿಭರವಸೆಯನ್ನು ನಂಬುತ್ತಲೇ ಕವನ ಬರೆದಿದ್ದಾರೆ. ಸಂಕಲನದ ಒಂದೊಂದು ಕವನದಲ್ಲಿ ಪ್ರೇಮಿಯೊಬ್ಬನ ಆತಂಕ, ತುಮುಲ, ನಗು, ಕಲ್ಪನಾ ಲೋಕದ ವಿಲಾಸಿಯಾಗಿ ತೇಲುವುದು ಕಾಣಬಹುದು.

“ನನ್ನಮ್ಮ” ಕವನದಲ್ಲಿ ತನ್ನ ತಾಯಿ ಕಂಡ ಜೀವನದ ಬೇಗುಧಿಯ ಜೊತೆಗೆ ಬದುಕಿನ ಸಂಘರ್ಷದಲ್ಲಿ ಸೆಣೆಸುತ್ತ ಸಂತಸವ ಲೆಕ್ಕವನ್ನಿಟ್ಟು ಮಕ್ಕಳ ಭವಿಷ್ಯದ ಒಳಿತಿಗಾಗಿ ಕಾಯುವ ತಾಳ್ಮೆ ಎದ್ದು ತೋರುತ್ತದೆ.

ಮನೆಯ ಗುಬ್ಬಿಮರಿಗಳ
ಗಿಡುಗ ಕದ್ದೊಯ್ಯದಂತೆ
ಹದ್ದಾಗಿ ಕಾಯುತ್ತಿರುವುದನ್ನು ಕವಿಯ ಕಣ್ಣಂಚಿನಿಂದಲೆ ಎಲ್ಲವನ್ನೂ ಗ್ರಹಿಸಬಹುದಾಗಿದೆ.

ಪುಸ್ತಕದ ಮುಖಪುಟ ವಿನ್ಯಾಸ ಹಾಗೂ ಒಳಪುಟದಲ್ಲಿನ ಚಂದ್ರು ಕನಸು, ದಿವಾಕರ ಕೆನ್ ರವರ ರೇಖಾಚಿತ್ರ ಕಲೆಗಳು ಪುಸ್ತಕಕ್ಕೆ ಮತ್ತಷ್ಟು ಮೆರುಗನ್ನು ಹೆಚ್ಚಿಸಿದೆ. ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಕೃಷ್ಣಮೂರ್ತಿಯವರು ಕವಿತೆಗಳಿಂದ ಗೆದ್ದಿದ್ದಾರೆ. ಪ್ರೇಮಿಯೊಬ್ಬ ಕಾಪಿಟ್ಟುಕೊಳ್ಳಲೆ ಬೇಕಾದ ಪುಸ್ತಕವಾಗಿ ಹೊರಹೊಮ್ಮಲಿದೆ ಈ ಪುಸ್ತಕ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version