ದಿನದ ಸುದ್ದಿ
ಕವಿತೆ | ನಾನೊಲಿದೆನಯ್ಯಾ
- ರಮ್ಯ ಕೆ ಜಿ, ಮೂರ್ನಾಡು
ಅಲೆಯುತ್ತಿದೆ ಈ ರೂಹು
ನನ್ನೊಳಗಿಂದ ಚಿಗಿದು
ನಿನ್ನ ತುದಿಬೆರಳಲಿ ಕುಣಿದು
ಗಾಳಿತುಟಿಯ ಸೋಕಿದಾಕ್ಷಣ
ಬೆವೆತು,
ಮಳೆ ಹೊಯ್ಯಿಸಿ
ಮಣ್ಣ ಘಮದೊಳಗೆ
ಲೀನವಾಗುವಂತೆ.
ಹೊಳೆಯುತ್ತದೆ ನಿನ್ನ
ಕಣ್ಣಬೊಂಬೆಯೊಳಗೆ,
ಎಷ್ಟೋ ನೋವು ಕುಡಿದ
ನದಿಯೆದೆಯೊಳಗೆ,
ನೆನಪ ಮೀಟುವ ಘಳಿಗೆಗೆಲ್ಲ
ಪಾರಿಜಾತದ ಪರಿಮಳವುಳಿವಂತೆ.
ಕಲೆಯುತ್ತದೆ ಮತ್ತೆ,
ನಿನ್ನ ಮಾತು ಜೀವವಾಗುವಂತೆ
ನಗೆಬೆಳಕು ಕೈಹಿಡಿದು
ಜೊತೆ ನಡೆಯುವಂತೆ
ಅನಂತ ಬಾನು-
ಪ್ರೇಮಗಡಲಿಗೆ ಬಾಗುವಂತೆ
ತಿರುವುಗಳಲಿ ಹೊರಳಿ,
ಕವಲಾಗುವಾಗ
ಹಾಡೊಂದು ಕಾಡುವಂತೆ
ಜಪಮಣಿ ಎಣಿಸುವ
ಬೆರಳು, ಲೆಕ್ಕ ಮರೆತು
ಉಸಿರ ಪಲುಕನು
ಚಿತ್ರವಾಗಿಸುವಂತೆ.
ಕವಿತೆ : ರಮ್ಯ ಕೆ ಜಿ, ಮೂರ್ನಾಡು
ಸುದ್ದಿದಿನ.ಕಾಂ|ವಾಟ್ಸಾಪ್|9980346243