ದಿನದ ಸುದ್ದಿ
ಬೆಂಬಲ ಬೆಲೆ | 185 ಲಕ್ಷ ಟನ್ ಭತ್ತ, 124 ಲಕ್ಷ ಟನ್ ಅಕ್ಕಿ ಸಂಗ್ರಹಿಸುವ ಯೋಜನೆ : ಸಚಿವ ಪ್ರಲ್ಹಾದ್ ಜೋಶಿ
ಸುದ್ದಿದಿನಡೆಸ್ಕ್:ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಲೆ – ಎಂಎಸ್‌ಪಿ ಹೆಚ್ಚಿಸುವ ಮೂಲಕ ಭತ್ತ ಬೆಳೆಯುವ ರೈತರ ಬೆಂಬಲಕ್ಕೆ ನಿಂತಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ನಿನ್ನೆ ದೆಹಲಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಮಾಹಿತಿ ನೀಡಿದ್ದಾರೆ.
2013-14ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 1 ಸಾವಿರದ 310 ಇದ್ದ ಬೆಂಬಲ ಬೆಲೆಯನ್ನು ಈಗ 2 ಸಾವಿರದ 300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮವು ಪ್ರಸಕ್ತ ಮುಂಗಾರು ಹಂಗಾಮಿನ 185 ಲಕ್ಷ ಟನ್ ಭತ್ತ ಮತ್ತು 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಯೋಜನೆ ಸಹ ಹಾಕಿಕೊಂಡಿದೆ ಎಂದರು. ಭತ್ತದ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಮುಂಗಾರು ಹಂಗಾಮು ಭತ್ತ ಸಂಗ್ರಹಕ್ಕೆ ಸಾಕಷ್ಟು ಸ್ಥಳವಿದೆ. ಪ್ರಸ್ತುತ 14 ಎಲ್ ಎಂಟಿ ಭತ್ತ ಸಂಗ್ರಹಕ್ಕೆ ಸ್ಥಳಾವಕಾಶವಿದೆ. ಪಂಜಾಬಿನಲ್ಲಿ ಸಂಗ್ರಹಿಸಿರುವ ಅಕ್ಕಿಯನ್ನು ತ್ವರಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ಟೋಬರ್ 1 ರಿಂದ 2 ಸಾವಿರದ 700 ಮಂಡಿಗಳಲ್ಲಿ ಭತ್ತ ಸಂಗ್ರಹಣೆ ಪ್ರಾರಂಭಿಸಿದ್ದು, ಇಂದಿಗೆ ಒಟ್ಟು 50 ಎಲ್‌ಎಂಟಿ ಭತ್ತವನ್ನು ಸಂಗ್ರಹಿಸಲಾಗಿದೆ ಎಂದರು. ನಾಮನಿರ್ದೇಶನದ ಆಧಾರದ ಮೇಲೆ ಸಿಡಬ್ಲ್ಯೂಸಿ/ಎಸ್‌ಡಬ್ಲ್ಯೂಸಿ ಗೋದಾಮುಗಳನ್ನು ಬಾಡಿಗೆಗೆ ತೆಗೆದುಕೊಂಡು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಗೋಧಿ ದಾಸ್ತಾನು ತ್ವರಿತ ಸ್ಥಳಾಂತರ ಜೊತೆಗೆ ಪಿಇಜಿ ಯೋಜನೆಯಡಿ 31 ಎಲ್‌ಎಂಟಿ ಶೇಖರಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಕ್ಕಿ ಗಿರಣಿದಾರರಿಗೆ ದೂರು ಪರಿಹಾರಕ್ಕಾಗಿ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದೂ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಅಕ್ಟೋಬರ್ 24ಕ್ಕೆ 34.75 ಎಲ್‌ಎಂಟಿನ ಅಖಿಲ ಭಾರತ ಚಾಲನಾ ಯೋಜನೆಯಿಂದ ಪಂಜಾಬ್‌ಗೆ ಸುಮಾರು ಶೇಕಡ 40 ಪಾಲನ್ನು ಹಂಚಲಾಗಿದೆ. ಚಾಲನಾ ಯೋಜನೆ ಮತ್ತು ಶೇಖರಣಾ ಸಾಮರ್ಥ್ಯ ರಚನೆ ವಾರಕ್ಕೊಮ್ಮೆ ಮೇಲ್ವಿಚಾರಣೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸಲಾಗಿದೆ. 15 ದಿನಗಳ ಕಾಯುವ ಅವಧಿಯನ್ನು ಮೀರಿ ಗೊತ್ತುಪಡಿಸಿದ ಡಿಪೋಗಳಲ್ಲಿ ಖಾಲಿ ಜಾಗದ ಲಭ್ಯತೆಯಿಲ್ಲದ ಸಂದರ್ಭದಲ್ಲಿ ಹೆಚ್ಚುವರಿ ಸಾರಿಗೆ ಶುಲ್ಕಗಳನ್ನು ಅನುಮತಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243