ದಿನದ ಸುದ್ದಿ

ನಿಮ್ಮ ಒತ್ತಡದಿಂದ ಕೈಕಟ್ಟಿಕೊಂಡು, ಸಿಐಡಿ ಕುದುರೆ ಕಣ್ಣಿನಂತೆ ಪಿಎಸ್ ಐ ಹಗರಣವನ್ನು ನೋಡುತ್ತಿದೆ : ಗೃಹ ಸಚಿವ ಅರಗ ಜ್ಞಾನೇದ್ರ ವಿರುದ್ಧ ಪ್ರಿಯಾಂಕ ಖರ್ಗೆ ಆರೋಪ

Published

on

ಸುದ್ದಿದಿನ ಡೆಸ್ಕ್ : ದಕ್ಷತೆಗೆ ಹೆಸರಾಗಿದ್ದ ಪೊಲೀಸ್ ವ್ಯವಸ್ಥೆ ನಿಮ್ಮ ಉಸ್ತುವಾರಿಯಲ್ಲಿ ಅನಗ್ಯವಾದ ಕಳಂಕ ಹೊತ್ತುಕೊಳ್ಳುತ್ತಿದೆ. ಸಾರ್ವಜನಿಕ ವಲಯದಲ್ಲಿರುವ ಆಡಿಯೋ ಕ್ಲಿಪ್ ನ ನೈಜ್ಯತೆಯನ್ನು ದೃಢಪಡಿಸಿಕೊಳ್ಳಲಾಗದಷ್ಟು ಮಟ್ಟಿಗೆ ಸಿಐಡಿ ದುರ್ಬಲವಾಗಿದೆ ಎಂದು ಅನಿಸುವುದಿಲ್ಲ. ನಿಮ್ಮ ಒತ್ತಡದಿಂದ ಕೈಕಟ್ಟಿಕೊಂಡು, ಕುದುರೆ ಕಣ್ಣಿನಂತೆ ಹಗರಣವನ್ನು ನೋಡುತ್ತಿದೆ ಎಂದು ಪ್ರಿಯಾಂಕ ಖರ್ಗೆ ಅವರು ಆರೋಪಿಸಿದ್ದಾರೆ.

ಗೃಹ ಸಚಿವ ಅರಗಜ್ಞಾನೇಂದ್ರ ಅವರಿಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪತ್ರ ಬರೆಯಯವ ಮೂಲಕ, ಗೃಹ ಸಚಿವರೇ, ಈಗಾಗಲೇ ನಡೆದಿರುವ ಪಿಎಸ್‍ಐನ 545 ಮತ್ತು ಮುಂದೆ ನಡೆಯಬೇಕಿರುವ 402 ಪಿಎಸ್‍ಐ ಹುದ್ದೆಗಳ ಅಕ್ರಮಗಳಿಂದ ಕಂಗಾಲಾಗಿರುವ ನೀವು ಹೊಣೆಗಾರಿಕೆ ತಪ್ಪಿಸಿಕೊಳ್ಳಲು ಪ್ರತಿಕ್ರಿಯಿಸುತ್ತಿದ್ದೀರಾ ಎನಿಸುತ್ತಿದೆ ಎಂದಿದ್ದಾರೆ.

ಹಗರಣದಲ್ಲಿ ವಸೂಲಿ ಮಾಡಲಾದ ಹಣ ಮರೆ ಮಾಚಲು ತನಿಖೆಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿದೆ. ಸಣ್ಣಪುಟ್ಟ ಆರೋಪಿಗಳನ್ನು ಹಿಡಿದು ಜಂಬ ಕೊಚ್ಚಿಕೊಳ್ಳಬೇಡಿ. ಪಿಎಸ್‍ಐ ಹುದ್ದೆ ಕೊಡಿಸಲು ಸಂಗ್ರಹಿಸಲಾದ ಹಣ ಎಲ್ಲೆಲ್ಲಿ ಹೋಗಿದೆ, ಯಾರಿಗೆಲ್ಲಾ ಹಂಚಿಕೆಯಾಗಿದೆ ಎಂದು ಪತ್ತೆ ಹಚ್ಚಿ, ವಶ ಪಡಿಸಿಕೊಳ್ಳಲು ಶುರು ಮಾಡಿಸಿ ಸಾಕು, ನಿಮ್ಮ ಸರ್ಕಾರ ತನ್ನಷ್ಟೆಕ್ಕೆ ತಾನೆ ಪತನಗೊಳ್ಳುತ್ತದೆ ಎಂಬ ಮಾತುಗಳಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸತ್ಯ ಕಹಿ, ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅದಕ್ಕಾಗಿ ಪ್ರತಿಪಕ್ಷಗಳತ್ತ ಬೆರಳು ತೋರಿಸಿ ತಮ್ಮನ್ನು ತಾವು ಸಾಚಾ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದೀರಾ. ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿವ್ಯಾ ಹಾಗರಗಿ ಅವರ ಕಾರು, ಆಕೆ ತಲೆ ಮರೆಸಿಕೊಂಡ ಕಾಲಾವಧಿಯಲ್ಲಿ ಯಾರ ಊರಿನಲ್ಲಿ ನಿಂತಿತ್ತು ಎಂಬ ವದ್ಧಂತಿಗಳು ಸಾರ್ವಜನಿಕವಾಗಿ ಹರಿದಾಡುತ್ತಿವೆ. ಜೆ.ಜೆ.ನಗರ ಕೊಲೆ ಪ್ರಕರಣದಲ್ಲಿ ವದ್ಧಂತಿಗಳನ್ನೇ ನಂಬಿ ಹೇಳಿಕೆ ನೀಡಿ, ಕೆಲವೇ ಗಂಟೆಗಳಲ್ಲಿ ಕ್ಷಮೆಯಾಚಿಸಿದ ನಿಮಗೆ, ಪಿಎಸ್‍ಐ ಹಗರಣದಲ್ಲಿನ ವದ್ಧಂತಿಗಳ ಬಗ್ಗೆ ಮಾಹಿತಿ ಇರುವುದಿಲ್ಲವೇ ? ಮೊದಲು ದಿವ್ಯ ಅವರ ಕಾರು ನಿಲುಗಡೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಒತ್ತಾಯಿಸಿದ್ದಾರೆ.

ಸಿಐಡಿ ತನಿಖೆಯಲ್ಲಿ ಪಿಎಸ್‍ಐ ಹಗರಣದ ಆರೋಪಿಗಳು ನೀಡಿರುವ ಎಲ್ಲಾ ಹೇಳಿಕೆಗಳನ್ನು ಪಾರದರ್ಶಕವಾಗಿ ಸಾರ್ವಜನಿಕಗೊಳಿಸಿ, ಚೆರಿ ಪಿಕ್ ನಡವಳಿಕೆ ಬಿಡಿ. ಯಾವುದರಲ್ಲೂ ನಿಮ್ಮ ತಪ್ಪಿಲ್ಲ ಎಂದಾದರೆ ಎಲ್ಲದಕ್ಕೂ ಯಾಕೆ ಮೈ ಪರೆಚಿಕೊಳ್ಳುತ್ತಿರಾ ? ಗೃಹ ಸಚಿವರ ಹುದ್ದೆಯ ಘನತೆಯಂತೆ ನಡೆದುಕೊಳ್ಳಿ ಎಂದು ಹಿರಿಯರಾದ ನಿಮಗೆ ಹೇಳಬೇಕೆ ?

ಸಿಐಡಿ ನನಗೆ ನೀಡಿರುವ ನೋಟಿಸ್‍ಗೆ ನಾನು ಲಿಖಿತವಾಗಿ ಉತ್ತರ ನೀಡಿದ್ದೇನೆ. ಎಲ್ಲಿಯೂ ಓಡಿ ಹೋಗಿಲ್ಲ, ‘ನನ್ನ ಕಡೆಯವರು ಅಥವಾ ನಾನು ಯಾರೇ ಭಾಗಿಯಾಗಿದ್ದರು ಮುಲ್ಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ಮೊದಲ ದಿನದ ಪತ್ರಿಕಾಗೋಷ್ಠಿಯಲ್ಲೇ ನಾನು ಹೇಳಿದ್ದೇನೆ.

ಇನ್ನೂ ಯಾಕೆ ಮೀನಾಮೇಶ ಎಣಿಸುತ್ತಿದ್ದೀರಿ ? ಸಾರ್ವಜನಿಕವಾಗಿ ಕೆಸರು ಎರಚಿ ನಿಮ್ಮ ಹುದ್ದೆಯ ಘನತೆಗೆ ಕುಂದುಂಟು ಮಾಡುವ ಬದಲು ದಿಟ್ಟತನ ಕ್ರಮ ಜರುಗಿಸಿ, ದುರ್ಬಲ ಗೃಹ ಸಚಿವ ಎಂಬ ಕಳಂಕದಿಂದ ಹೊರ ಬನ್ನಿ. ನಾವು ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್‍ನವರು ಹೇಳಿದಂತೆ, ಬಿಜೆಪಿಯವರು ಮತ್ತು ನಿಮ್ಮ ಸರ್ಕಾರದ ಸಚಿವರು ಹೇಳಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ.

“ನಾನು ಪ್ರಿಯಾಂಕ್ ಖರ್ಗೆ ನಿಮ್ಮ ಸರ್ಕಾರದ ಬಿಟ್ ಕಾಯಿನ್ ಹಗರಣದಿಂದ ಈವರೆಗೂ ಮಾತು ಬದಲಿಸಿಲ್ಲ. ನನ್ನ ಮಾತುಗಳು ಸುಳ್ಳು ಎಂದು ಸಾಬೀತು ಪಡಿಸಲು ನಿಮ್ಮಿಂದ ಆಗಿಲ್ಲ, ಈಗಲೂ ನಿಮ್ಮ ಮುಂದೆ ನನ್ನ ಆರೋಪಗಳ ಸವಾಲಿದೆ. ಮೊದಲು ಅದಕ್ಕೆ ಉತ್ತರಿಸಿ” ಎಂದು ಒತ್ತಾಯಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version