ದಿನದ ಸುದ್ದಿ
ಟಿ.ನರಸೀಪುರ | ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ ಖಂಡಿಸಿ ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ಪ್ರತಿಭಟನೆ
ಸುದ್ದಿದಿನ,ಟಿ. ನರಸೀಪುರ: ಕೋವಿಡ್-19 ಲಾಕ್‍ಡೌನ್‍ನಿಂದಾಗಿ ದೇಶದ ಜನರ ಜೀವನ ತತ್ವಾರವಾಗಿದ್ದು, ಶ್ರೀಮಂತರು ಮತ್ತಷ್ಟು ಶ್ರೀಮಂತರಾದರೆ ಬಡವರು ಮತ್ತಷ್ಟು ಕಡು ಬಡವರಾಗುತ್ತಿದ್ದಾರೆಂದು ಭಾರತ ಪ್ರಜಾ ಸತ್ತಾತ್ಮಕ ಯುವ ಜನ ಫೆಡರೇಷನ್ ತಾಲ್ಲೂಕು ಅಧ್ಯಕ್ಷ ಆಲಗೂಡು ಸಿ. ಪುಟ್ಟಮಲ್ಲಯ್ಯ ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ತಹಶಿಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿ, ದೇಶದಲ್ಲಿ ಹಸಿವಿನ ಸೂಚಂಕ್ಯ 102ನೇ ಸ್ಥಾನದಲ್ಲಿದ್ದು, ಜನರು ಹಸಿವಿನಿಂದ ಪ್ರಾಣ ಬಿಡುವ ಸ್ಥಿತಿಗೆ ಬಂದಿದೆ. ಮಕ್ಕಳು-ಗರ್ಭಿಣಿ ಮಹಿಳೆಯರು ಪೌಷ್ಠಿಕಾಂಶದ ಕೊರತೆಯಿಂದ ಹಾಗೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ ಆಹಾರ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಇಂಧನ ಬೆಲೆಗಳ ಏರಿಕೆ, ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ವಿದ್ಯುತ್ ಖಾಸಗೀಕರಣ ಮಸೂದೆಗಳ ತಿದ್ದುಪಡಿ, ಸಾರ್ವಜನಿಕರ ಲಾಭದಾಯಕ ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕರ ಮಸೂದೆ ತಿದ್ದುಪಡಿಯಿಂದಾಗಿ ನಿರುದ್ಯೋಗಿಗಳನ್ನು ಸೃಷ್ಟಿಮಾಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ಖಂಡಿಸುವುದಾಗಿ ತಿಳಿಸಿದರು.
ಲಾಕ್‍ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು. ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಒಪ್ಪಂದದಲ್ಲಿನ ಮುಂದೂಡಿಕೆ ಕ್ರಮಗಳನ್ನು ನಿರ್ಬಂಧಿಸಿ 2020-21ನೇ ಸಾಲಿನ ವ್ಯತ್ಯಾಸ ತುಟ್ಟಿ ಭತ್ಯೆ ಮುಂದೂಡಿಕೆ ಆದೇಶ ರದ್ದು ಮಾಡಬೇಕು.
ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ರೂ.ಗಳ ಪರಿಹಾರ ಅಸಂಘಟಿತ ವಲಯದ 5 ವಿಭಾಗಗಳಿಗೆ ಮಾತ್ರ ಸಂಬಂಧ ಪಟ್ಟಿದ್ದು, ಇನ್ನು 125ಕ್ಕೂ ಹೆಚ್ಚು ವಲಯಗಳ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಲಾಕ್‍ಡೌನ್ ಅವಧಿಯ ಸಂಕಷ್ಟ ಪರಿಹಾರದ ಪ್ಯಾಕೇಜ್‍ನನ್ನು ಘೋಷಿಸುವುದರ ಜೊತೆಗೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ತಹಶಿಲ್ದಾರ್ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನವಿಪತ್ರ ಕೊಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್. ರವಿ, ನಾಗಮ್ಮ, ಮಂಜುಳ, ತಾರಾ, ರುಕ್ಮಿಣಿ, ಶುಭಾ, ಗೌರಮ್ಮ, ಉಮಾ, ಶಿವಮ್ಮ, ಪುಟ್ಟಮಾರಮ್ಮ, ನಾಗಮ್ಮ, ಮಹದೇವು, ಲಿಂಗಮಣಿ, ಪವಿತ್ರ, ಪ್ರೇಮ, ಲತಾ, ನಾಗಮ್ಮ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243