ದಿನದ ಸುದ್ದಿ
ಇಂದಿರಾ ಕ್ಯಾಂಟೀನ್‍ನಲ್ಲಿ ಶೀಘ್ರ ರಾಗಿ ಮುದ್ದೆ
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಇಂದಿರಾ ಕ್ಯಾಂಟಿನ್‍ಗಳಲ್ಲಿ ಬರುವ ತಿಂಗಳಿನಿಂದ ರಾಗಿ ಮುದ್ದೆ ಸವಿಯಬಹುದು.
ಮೈಸೂರಿನ ಸಿಎಫ್‍ಟಿಆರ್‍ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ಮಾಡುವ ಮಷಿನ್‍ಗಳನ್ನು ರಾಜಧಾನಿಯ ಎಂಟು ಇಂದಿರಾ ಕ್ಯಾಂಟಿನ್‍ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಆಗಸ್ಟ್‍ನಲ್ಲಿ ಇದು ನೆರವೇರಲಿದೆ.
ಮುದ್ದೆ ಮಾಡುವ ಮಷಿನ್‍ಗಳ ಅಳವಡಿಕೆ ಮಾಡಿದ ನಂತರ ಇಂದಿರಾ ಕ್ಯಾಂಟಿನ್ ಮೆನುವಿನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮುದ್ದೆ ಸಿಗಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ .
ಬೆಂಗಳೂರಿನಲ್ಲಿ ಈಗಾಗಲೇ ಜೆಡಿಎಸ್ ಪಕ್ಷ ನಡೆಸುತ್ತಿರುವ ಅಪ್ಪಾಜಿ ಕ್ಯಾಂಟಿನ್‍ನಲ್ಲಿ ಮುದ್ದೆ ಸಿಗುತ್ತಿದೆ. ಇಲ್ಲಿ ಮುದ್ದೆಗೆ ವ್ಯಕ್ತವಾಗುತ್ತಿರುವ ಭಾರಿ ಬೇಡಿಕೆಯನ್ನು ಮನಗಂಡು ಇಂದಿರಾ ಕ್ಯಾಂಟಿನ್‍ನಲ್ಲೂ ಅಳವಡಿಸುವ ನಿರ್ಧಾರಕ್ಕೆ ಬರಲಾಗಿದೆ.
ಇಂದಿರಾ ಕ್ಯಾಂಟಿನ್‍ನಲ್ಲಿ ಆಗಬೇಕಿರುವ ಇನ್ನಷ್ಟು ಬದಲಾವಣೆಗಳ ಕುರಿತು ಈಗಾಗಲೇ ಜನಾಭಿಪ್ರಾಯ ಸಂಗ್ರಹ ಮಾಡಲಾಗುತ್ತಿದ್ದು, ಅಗತ್ಯ ಬೇಡಿಕೆಗಳನ್ನು ಗುರುತಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.