ದಿನದ ಸುದ್ದಿ

ರಾಯಚೂರಿಗೆ 8 ಲಕ್ಷ ಕ್ಯೂಸೆಕ್ ನೀರು : ಹೆಚ್ಚಾಯ್ತು ಪ್ರವಾಹದ ಭೀತಿ, ಗ್ರಾಮಗಳ ಸ್ಥಳಾಂತರ..!

Published

on

ಸುದ್ದಿದಿನ, ರಾಯಚೂರು : ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ ಮುಂದುವರಿದಿದ್ದು, ರಾಯಚೂರಿನಲ್ಲಿ ನೀರಿನ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿದೆ. ಭೀಮಾನದಿಯಿಂದ 3.40 ಲಕ್ಷ ಕ್ಯೂಸೆಕ್, ಕೃಷ್ಣಾ ನದಿಯಿಂದ 92 ಸಾವಿರ ಕ್ಯೂಸೆಕ್ ಸೇರಿದಂತೆ ಎರಡೂ ನದಿಗಳಿಂದ 4.32 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಇದರ ಜೊತೆಗೆ ಸೊನ್ನಾ ಬ್ಯಾರೇಜಿನಿಂದ ಬಿಟ್ಟ 8 ಲಕ್ಷ ಕ್ಯೂಸೆಕ್ ಗೂ ಅಧಿಕ ನೀರು ಇಂದು ರಾಯಚೂರು ತಾಲೂಕಿಗೆ ಬಂದು ಸೇರುವ ನಿರೀಕ್ಷೆ ಇದೆ. ಹೀಗಾಗಿ ಪ್ರವಾಹ ಮತ್ತೆ ಹೆಚ್ಚಲಿದೆ.

ಪ್ರವಾಹ ಏದುರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ಒಂದು ಸೇನಾ ಹಾಗೂ ಎನ್‍ಡಿಆರ್‍ಎಫ್ ತಂಡಗಳು ಶಕ್ತಿನಗರದಲ್ಲಿ ಬೀಡು ಬಿಟ್ಟಿವೆ. ನೀರಿನ ಹರಿವು ಹೆಚ್ಚಾದರೆ ಮೂರು ಗ್ರಾಮಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರ್ಜಾಪುರ, ಬೂರ್ದಿಪಾಡ ಹಾಗೂ ಡಿ ರಾಂಪುರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ.

ಭೀಮಾ ನದಿಯಿಂದ ಭಾರೀ ಪ್ರಮಾಣದ ನೀರು ಕೃಷ್ಣಾ ನದಿಗೆ ಸೇರುತ್ತಿರುವುದರಿಂದ ರಾಯಚೂರಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ನದಿಪಾತ್ರದ ಗುರ್ಜಾಪುರ ಗ್ರಾಮದ ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಎರಡು ದಿನಗಳಿಂದ ಗ್ರಾಮದಲ್ಲಿ 13 ಬಸ್ ಗಳನ್ನು ನಿಲ್ಲಿಸಲಾಗಿದೆ.

ಆದರೆ ಗ್ರಾಮಸ್ಥರು ಮಾತ್ರ ಊರು ಬಿಟ್ಟು ಬರುತ್ತಿಲ್ಲ. ನದಿಯಲ್ಲಿ ನೀರಿನ ಪ್ರಮಾಣ ಇನ್ನೂ ಹೆಚ್ಚಾದ ಮೇಲೆ ಬರುತ್ತೇವೆ ಎನ್ನುತ್ತಿದ್ದಾರೆ. ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಸೇನಾ ಪಡೆ ಹಾಗೂ ಎನ್‍ಡಿಆರ್‍ಎಫ್ ತಂಡಗಳನ್ನು ಕರೆಯಿಸಿಕೊಂಡಿದೆ. ಗ್ರಾಮಸ್ಥರು ಮಾತ್ರ ಸದ್ಯಕ್ಕೆ ನಮಗೆ ಭಯವಿಲ್ಲ ಎಂದು ಗ್ರಾಮದಲ್ಲೇ ಉಳಿದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version