ಭಾವ ಭೈರಾಗಿ
ಧೋ..ಎಂದು ಸುರಿವ ಮಳೆ; ನಿಲ್ದಾಣವೆಂಬ ಸೂರು..!
- ಕೆ.ಶ್ರೀಧರ್ (ಕೆ.ಸಿರಿ), ಯುವಸಾಹಿತಿ
‘ಮಳೆ‘ಎಂದರೆ ಅದೊಂತರಹದ ವಿಶೇಷ ಪ್ರಕ್ರಿಯೆ ಮಡಿ-ಮೈಲಿಗೆ ಆಚರಿಸುವವರ ಆಚರಿಸದೆ ಇರುವವರ ಈರ್ವರ ಮಡಿ-ಮೈಲಿಗೆಗಳನ್ನ ಸ್ವಚ್ಛಗೊಳಿಸುತ್ತದೆ. ಒಂಥರಾ ಲೋಕದ ಸ್ನಾನ ಎಂದರೂ ತಪ್ಪಾಗಲಾರದು.
ಸೂರ್ಯನನ್ನು ಮಣಿಸುವ ಶಕ್ತಿ ಇರುವುದು ಮೋಡಗಳಿಗೆ ಮಾತ್ರ ಸೂರ್ಯನನ್ನು ಯಾವುದರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ ಆದರೆ ಮೋಡಗಳು ಸೂರ್ಯನನ್ನು ಮುಚ್ಚಿಬಿಡುತ್ತವೆ. ಮೋಡಗಟ್ಟಿದಾಗ, ಗಾಳಿ ಸುಳಿಯುವಾಗ, ಹಕ್ಕಿ ಪಕ್ಷಿಗಳು ತಂತಮ್ಮ ಗೂಡುಗಳಿಗೆ ಮಳೆ ಬಂತೆಂದು ನೂಕುನುಗ್ಗಲಾಗಿ ಓಡುತ್ತಿರುವಾಗ ಚಂಗನೆ ಕತ್ತಲಾವರಿಸಿ ಎಲ್ಲೋ ದೂರದಲ್ಲಿ ಮಳೆಯಾದಂತೆ ನಮಗೆ ಭಾಸವಾಗಿ ಬಿಡುತ್ತದೆ.
ಮಳೆ ಬರುವ ಸೂಚನೆ ಅರಿವಾಗುವುದೆ ಒಂಥರಾ ಚೆಂದಾ ಆ ಮಳೆಯ ಗಾಳಿಯ ಸ್ಪರ್ಷ ಎಷ್ಟೇ ದುಡ್ಡು ಕೊಟ್ಟು ಪಂಕಾದಿಂದ ಬೀಸುವ ಗಾಳಿಯಲ್ಲಿ ದೊರೆಯಲಾರದು. ಮಳೆಯ ಜೊತೆ ಬೀಸುವ ಗಾಳಿ ಇಂದ್ರ ಲೋಕದ ನಂದನವನದಲ್ಲಿ ಸುಯ್ಯುವ ಗಾಳಿಯಿದ್ದಂತೆ. ಆ ಒಲವ ಶೃತಿಯ ಭಾವಕ್ಕೆ ಮೈಯ್ಯಲ್ಲಿ ಒಂಥರಾ ತಣ್ಣನೆಯ ಭಾವ ಹೊಮ್ಮಿ ಮನೋಲ್ಲಾಸವಾಗುತ್ತದೆ ಆ ಭಾವ ಮಳೆಯಲ್ಲದೆ ಬೇರಿನ್ನೆಲ್ಲೂ ದೊರೆಯಲಾರದು ನಗರ ನಿವಾಸಿಗಳಾದ ನಮಗೆ ಈ ನಿಸರ್ಗದ ರುಚಿ ಎಲ್ಲಿ ತಿಳಿಯುತ್ತದೆ.
ಸುಡು ಸುಡುವ ಬಿಸಿಲು ಮೈಯ್ಯಲ್ಲಿ ಹೊಮ್ಮುವ ಬೆವರು, ಆ ಧಗೆಗೆ ಒಂದನಿ ನೀರು ಮುಖಕ್ಕೆ ರಾಚಿದರೆ ಸಾಕು ಸ್ವರ್ಗ ಸಮೀಪದಲ್ಲಿಯೇ ಇದೆ ಎನಿಸಿಬಿಡುತ್ತದೆ. ಒಮ್ಮೆಲೆ ಏಕಾಏಕಿ ಸುಡುವ ಬಿಸಿಲಿನ ವೇಗವನ್ನು ಬದಿಗೆ ಸರಿಸಿ ಅತ್ತಿಂದಿತ್ತ ಇತ್ತಿಂದಿತ್ತ ಗಾಳಿ ಬೀಸಿ, ಬಿಸಿಲೆಲ್ಲಾ ಮಾಯವಾಗಿ ಒಂಥರ ಹಗಲು ಕಳೆದು ಇರುಳು ಬಂದಂತನಿಸಿಬಿಡುತ್ತದೆ.
ಚದುರುವ ಆ ಮೋಡಗಳ ಮೋಡಿಗೆ ಭೂತಾಯಿಯೋ ಸದಾ ಒಂದೊಂದನಿ ಮಳೆ ನೀರಿಗಾಗಿ ಕಾದು ಕುಳಿತ ಬಕಪಕ್ಷಿಯಂತಿಹಳು ಸಿಕ್ಕಷ್ಟು ಹನಿಗಳ ಹೀರಿ ತಾ ತಣಿದ ಮೇಲೆ ಝರಿಗಳಾಗಿ,ಗುಂಡಿಗಳಾಗಿ,ತೊರೆಗಳಾಗಿ, ಹಳ್ಳಗಳಾಗಿ, ಕಟ್ಟೆಗಳ ತುಂಬಿ ಕೋಡಿ ಬಿದ್ದು ಕೆರಗಳ ಸೇರಿ ಕೆರೆಗಳು ತುಂಬಿ ನದಿಗಳ ಸೇರಿ, ನದಿಗಳು ತುಂಬಿಯರಿದು ಸಮುದ್ರವ ಸೇರಿ ಆಕಾಶ ಸಮುದ್ರವಾಗಿ ಸಮುದ್ರ ಆಕಾಶವಾಗಿ ಅನಂತವಾಗಿ ಗೋಚರಿಸುತ್ತವೆ. ಮಳೆ ಬರುವಿಕೆಗೆ ಯಾವ ಸಮಯವೂ ಇಲ್ಲ ತನಗನಿಸಿದಾಗ ಧೋ….ಎಂದು ಸುರಿದುಬಿಡುತ್ತದೆ. ಮಳೆಯ ಪ್ರಪಂಚವೇ ಬೇರೆ ಇಡೀ ಪ್ರಕೃತಿಯನ್ನೆ ಬದಲಾಯಿಸಿ ಬಿಡುತ್ತದೆ. ಎಲೆಗಳ ಮೇಲೆ ಬೆಳ್ಳಿ ಗುಳ್ಳೆಗಳಂತೃ, ಕೆಂಪು ಮಣ್ಣಿನ ಮೇಲೆ ಕಾಫಿಯಂತೆ, ಕಪ್ಪು ಮಣ್ಣಲ್ಲಿ ತಿಳಿಯಾದ ಎಳನೀರಿನಂತೆ, ಒಂದೊಂದು ತರಹದಲ್ಲಿ ಕಾಣ ಸಿಗುತ್ತದೆ.
ಇಂದಾದದ್ದು ಹಾಗೆಯೇ ಗಕ್ಕನೆ ಗಾಳಿ ಮಳೆ ಎದುರಾಯಿತು ಏನೋ ಒಂದು ಜಡಿ ಸೋನೆ ಸುರಿಯಬಹುದೆಂಬ ನನ್ನ ಅಂದಾಜನ್ನು ಮಳೆರಾಯ ಬುಡಮೇಲು ಮಾಡಿದ. ನೋಡ ನೋಡುತ್ತಿದ್ದಂತೆಯೆ ರಪ, ರೆಪನೆ ಮುಖಕ್ಕೆ ಮಳೆಯ ಹನಿಗಳು ರಾಚತೊಡಗಿದವು. ಆ ಮಳೆಯ ಹನಿಯ ಜಡಿತಕ್ಕೆ ಬೇಗ ಎಲ್ಲಾದರೂ ಒಂದು ಸೂರು ಮಳೆಯಿಂದ ರಕ್ಷಿಸಲು ರೊಯ್ಯನೆ ದ್ವಿಚಕ್ರವಾಹನವನ್ನು ಚಲಾಯಿಸಿದೆ ಸಿಕ್ಕಿದ್ದೆ ಹಳೇಪುರದ ತಂಗುದಾಣ ಯಾವ ಬೇಲ್ದಾರ ಕಟ್ಟಿದನೋ ಯಾರ ಕಾಲದಲ್ಲಿ ಕಟ್ಟಿಸಲಾಯಿತೋ ಕಾಣೆ ಆದರೆ ಆ ಒಂದು ಪುಟ್ಟ ತಂಗುದಾಣದಲ್ಲಿ ಹಲವು ಜನ ತಂಗಿದ್ದರು ಇಲ್ಲಿ ಯಾವ ಕುಲ ಇಲ್ಲ ಯಾವ ಧರ್ಮ ಇಲ್ಲ ಬಂದವರು ಮಳೆಯ ಹನಿಗಳಿಂದ ನೆನೆಯದೆ ಒಂದಷ್ಟು ಕ್ಷಣ ಅಂದರೆ ಮಳೆ ನಿಲ್ಲುವವರೆಗೂ ಎಂದು ಒಬ್ಬೊಬ್ಬರದು ಒಂದೊಂದು ಮಾತು ಹೆಣ್ಣುಮಕ್ಕಳು ಮದುವೆ ಮುಂಜಿ ಧಾರಾವಾಹಿ, ಅಡುಗೆಯ ಮಾತಾದರೆ, ವ್ಯಾಪಾರಿಗೆ ಮಳೆಯಿಂದ ನಷ್ಟವಾಯಿತೆಂಬ ಮಾತು, ಕುರಿಗಾಹಿಗೆ ಮಳೆಯಿಂದ ಕುರಿಗಳಿಗೆ ಇಂದು ನಿದ್ದೆ ಇಲ್ಲ ಎಂಬ ಮಾತು, ಪ್ರಯಾಣಿಕರಿಗೆ ಈ ಹಾಳಾದ ಮಳೆ ಯಾವಾಗ ನಿಲ್ಲುವುದೋ ಎಂಬ ಮಾತು, ತುಂಡೈಕಳಿಗೆ ಮೊಬೈಲು ಇನ್ಸ್ಟಾ ಗ್ರಾಂ, ರೀಲ್ಸ್ ನೋಡಿ ಚರ್ಚಿಸುವ ಮಾತು, ಮುದುಕರಿಗೆ ಬೀಡಿ ಸೀದಿ ಗೂಡಿಸಿಕೊಂಡು ಕೂತುಕೊಳ್ಳುವ ಗತ್ತು.
ಔಷಧಿ ಒಡೆದರಿಗೆ ಈಗ ತಾನೆ ಔಷದಿ ಹೊಡೆದೆನೆಂಬ ಚಿಂತೆ, ಉತ್ತು ಬಿತ್ತುವವನಿಗೆ ನಾಳೆಯ ಚಿಂತೆ ಈ ಎಲ್ಲಾ ಚಿಂತೆಗಳ ಮಧ್ಯೆ ನನಗೆ ಧೋ…ಸುರಿಯುವ ಮಳೆಯ ಶೃತಿಯು ಚೆಂದವಾಗಿ ಕೇಳುತ್ತಿತ್ತು, ಮಳೆ ಗಾಳಿ ಸಮೇತ ಜಯ್ಯನೆ ಬಂದಾಗ ಆ ಕರ್ರನೆ ಡಾಂಬರು ರಸ್ತೆಯ ಮೇಲೆ ಮರಳು, ಮರಳುವ ಚಹಾ ಕುದಿವಂತೆ ಭಾಸವಾಯಿತು, ಮಳೆ ನಿಂತು ಸೋನೆ ಸುರಿಯುವಾಗ ನಿಂತ ನೀರಲ್ಲಿ ಚಿಟಪಟನೆ ಹನಿ ಬೀಳುವಾಗ ಯಾರೋ ಚಿತ್ರ ಬರೆಯುತ್ತಿದ್ದಾರೆನಿಸಿತು. ಊರು ಕೇರಿ, ಮನೆ ಮಾರು, ಕೆಲಸ ಬಗಿಸಿ ಬಿಟ್ಟು ಬಂದ ಜನರಿಗೆ ಈ ಪುಟ್ಟ ಬಸ್ ತಂಗುದಾಣ ಧೋ….ಎಂದು ಸುರಿವ ಮಳೆಗೆ ಸಾರ್ವಜನಿಕ ವಸತಿಗೃಹದಂತೆ ಕಾಣಿಸಿತು. ಇಷ್ಟೊಂದು ಸುಂದರ ಘಳಿಗೆಗೆ ಸಾಕ್ಷಿಯಾದ ಈ ದಿನದ ಮಳೆ ಗಾಳಿಗೆ ಹಳೇಪುರ ನಿಲ್ದಾಣಕ್ಕೆ ಋಣಿಯಾಗಿರುವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243