ಲೋಕಾರೂಢಿ

ಸಮರ್ಥ ನಾಯಕತ್ವಕ್ಕಾಗಿ ಜವಾಬ್ದಾರಿ ನಿರ್ವಹಣೆ

Published

on

ಕೇಂದ್ರ ಸರ್ಕಾರದ ಸಾಧನೆ ಶೂನ್ಯ” ಎಂದು ಬೊಬ್ಬಿರಿಯುವವರ ಮಾತುಗಳಿಗೆ ನನ್ನ ಸಹಮತವಿಲ್ಲ. ಸಾಧನೆಯನ್ನು ಅಭಿವೃದ್ಧಿ ಎಂದು ಬಣ್ಣಿಸಬಹುದಾದರೆ ಖಂಡಿತವಾಗಿಯೂ ಹಲವಾರು ಅಭಿವೃದ್ಧಿ ಕಾರ್ಯಗಳು ಕಳೆದ ಐದು ವರ್ಷಗಳಲ್ಲಿ ಆಗಿದೆ. ಅದೇ ರೀತಿ ಈ ಹಿಂದಿನ ಸರ್ಕಾರ ಸಾಧನೆಗಳನ್ನು ಮಾಡಿಲ್ಲವಾ? ಅದಕ್ಕೂ ಮೇಲಿನದೇ ಉತ್ತರ ನನ್ನದು.

ಅಭಿವೃದ್ಧಿಗಳಾಗುವುದು ಇದ್ದಕ್ಕಿದ್ದಂತೆ ಅಲ್ಲ, ಹಿಂದಿನ ಸರ್ಕಾರಗಳೂ ಒಂದಷ್ಟು ಪ್ರಯತ್ನ ಮಾಡಿದ್ದನ್ನು ಮುಂದುವರೆಸಿ ಈಗಿನ ಸರ್ಕಾರ ಅದಕ್ಕೊಂದು ರೂಪು ಕೊಟ್ಟಿರುತ್ತದೆ. ಪ್ರತಿಯೊಂದು ಸರ್ಕಾರದ ಕೆಲಸ ದೇಶದ ಸಮಗ್ರ ಕಟ್ಟುವಿಕೆ. ಅದರಲ್ಲಿ ನಿಷ್ಕ್ರಿಯವಾಗಿದ್ದ ಸರ್ಕಾರಗಳು ಯಾವುದೂ ಇಲ್ಲ.

ಮೇಲಿನ ವಿಷಯವನ್ನು ಪಕ್ಕಕ್ಕಿಟ್ಟು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಬರುವುದಾದರೆ, ಪ್ರತಿಯೊಂದು ಲೋಕಸಭಾ ಕ್ಷೇತ್ರಗಳ ಜನಪ್ರತಿನಿಧಿಯಾಗಿ ಆಯ್ಕೆಯಾಗುವ ವ್ಯಕ್ತಿಯು ಆಯಾ ಪ್ರದೇಶದ ಜನರ ಆಶೋತ್ತರಗಳಿಗೆ, ಸಮಸ್ಯೆಗಳಿಗೆ ಧನಿಯಾಗಬೇಕಾದವನು. ಚುನಾವಣೆ ಎದುರಿಸುವ ಪೂರ್ವದಲ್ಲಿ ತನ್ನ ಕನಸುಗಳೇನು, ಪ್ರದೇಶದ ಅಭಿವೃದ್ಧಿಗೆ ತನ್ನ ಚಿಂತನೆಗಳೇನು, ಇಲ್ಲಿಂದ ಪ್ರಮುಖವಾಗಿ ಹೊರಡಿಸಬೇಕಾದ ಧ್ವನಿಯೇನು ಎಂಬೆಲ್ಲ ಮಾಹಿತಿಗಳನ್ನು ಜನರೆದುರು ತೆರೆದಿಡಬೇಕು.

ಅದನ್ನು ಹೊರತುಪಡಿಸಿ, ತನ್ನ ಮುಖಂಡರ-ನಾಯಕರ ಹೆಸರನ್ನು ಹೇಳಿ, ರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಬಿಂಬಿಸಿ ತನಗೆ ಮತ ನೀಡಿ ಎಂದು ಕೇಳುವುದಿದೆಯಲ್ಲ, ಅದು ತನ್ನಲ್ಲಿರುವ ಜೊಳ್ಳನ್ನು ತಾನೇ ತೆರೆದಿಟ್ಟಂತೆ. ಬಿಜೆಪಿಯವರಾದರೆ ಮೋದಿಯ ಹೆಸರನ್ನು ಹೇಳುತ್ತಾ, ಕಾಂಗ್ರೆಸ್‍ನವರಾದರೆ ರಾಹುಲ್ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಎಂದು ಬಡಬಡಿಸುತ್ತಾ, ಇನ್ಯಾವುದೋ ಪಕ್ಷದವರಾದರೆ ಕೇಂದ್ರದಲ್ಲಿರುವವರನ್ನು ಸೋಲಿಸಬೇಕೆಂದು ಹೇಳುತ್ತಾ ಮತಯಾಚನೆ ಮಾಡುವುದು ನಿಜಕ್ಕೂ ಬಾಲಿಶ. ಅದರಲ್ಲೂ ಎದುರಾಳಿಯನ್ನು ಹೀನಾಮಾನವಾಗಿ ಬಯ್ಯುತ್ತಾ, ತಮ್ಮ ಕೊಳಕು ನಾಲಿಗೆಯನ್ನು ಚಾಚುವ ಅಭ್ಯರ್ಥಿಗಳು ತಮ್ಮ ‘ನಾಯಕತ್ವ’ದ ಗುಣವನ್ನು ಹರಾಜಿಗಿಟ್ಟುಬಿಡುತ್ತಾರೆ.

ನಾಳೆಯ ದಿವಸ ಕೇಂದ್ರಕ್ಕೆ ಸ್ಥಳೀಯ ಸಮಸ್ಯೆಗಳು ಅರಿವಾಗಬೇಕಾದಲ್ಲಿ ಅದನ್ನು ಸಮರ್ಥವಾಗಿ ತಲುಪಿಸಬೇಕಾದದ್ದು ಸಂಸದರ ಕೆಲಸ. ಆದರೆ ಸಂಸದರಿಗೇ ಸ್ಥಳೀಯ ಸಮಸ್ಯೆಗಳ ಬಗ್ಗೆ ಯೋಚನೆ ಇಲ್ಲವೆಂದಾದಲ್ಲಿ ಇನ್ನೆಲ್ಲಿಯ ಮಾತು? ರಾಷ್ಟ್ರೀಯ ನಾಯಕರ ಹೆಸರನ್ನು ಹೇಳಿ ಆರಿಸಿ ಬಂದಮೇಲೆ ಅಷ್ಟರ ಮಟ್ಟಿಗೆ ಅಧಿಕಾರ ವಹಿಸಿಕೊಂಡ ನೆಮ್ಮದಿ ಜನಪ್ರತಿನಿಧಿಗಳನ್ನು ನಿರಾಳ ಮಾಡಿಬಿಡುತ್ತದೆ. ಇನ್ನೈದು ವರ್ಷ ಹಾಗೇ ಹೀಗೇ ತಳ್ಳಿದಲ್ಲಿ ಮತ್ತೆ ಚುನಾವಣೆಗೆ ಸಿದ್ಧರಾದರಾಯಿತು.

ಮತದಾರರು ಮಾಡುವ ತಪ್ಪು ಇದು. ಕೇವಲ ಪಕ್ಷದ ಬೆಂಬಲಕ್ಕೋಸ್ಕರವೋ ಅಥವಾ ರಾಷ್ಟ್ರೀಯ ನಾಯಕರೊಬ್ಬರಿಗೋಸ್ಕರವೋ ಸ್ಥಳೀಯ ಪ್ರತಿನಿಧಿಗಳನ್ನು ಪ್ರಶ್ನೆ ಮಾಡುವುದನ್ನು ನಿರ್ಲಕ್ಷಿಸಿಬಿಡುತ್ತಾರೆ. ಮತಯಾಚನೆಗೆ ಬಂದವರಲ್ಲಿ “ನಿಮ್ಮ ಯೋಚನೆಗಳೇನು?” ಎಂದು ಕೇಳುವುದನ್ನು ಮರೆತುಬಿಡುತ್ತಾರೆ. ಈ ತಪ್ಪು ಮುಂದಿನ ಐದು ವರ್ಷಗಳವರೆಗೆ ಮತದಾರರ ಗೊಣಗುವಿಕೆಗೆ ಕಾರಣವಾಗುತ್ತದೆ. ಕೇಂದ್ರದಲ್ಲಿ ಯಾವುದೇ ಒಂದು ಪಕ್ಷ ಬಹುಮತದಿಂದ ಆಯ್ಕೆಯಾಗುವುದು ಎಷ್ಟು ಮುಖ್ಯವೋ, ಅದೇ ರೀತಿ ಸ್ಥಳೀಯ ನಾಯಕರೂ ಸಮರ್ಥರಾಗಿರುವುದು ಕೂಡ ಅಷ್ಟೇ ಮುಖ್ಯ. ನಾಳೆಯ ದಿನ ಸಮಸ್ಯೆಗಳನ್ನು ಮತದಾರ ಹೇಳಿಕೊಳ್ಳಬೇಕಾಗಿರುವುದು ಸ್ಥಳೀಯ ಸಂಸದರಲ್ಲಿ. ಮತದಾನ ನಮ್ಮ ಕರ್ತವ್ಯ, ಕರ್ತವ್ಯ ಲೋಪವಾಗದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬ ಮತದಾರರ ಜವಾಬ್ದಾರಿ. ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ ಸಮರ್ಥ ನಾಯಕತ್ವವನ್ನು ಪಡೆಯುವುದು ನಮ್ಮೆಲ್ಲರ ಹಕ್ಕು.

ಕಿರಣ್ ಭೈರುಂಬೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version