ದಿನದ ಸುದ್ದಿ

ಅ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಗೆ ವೈಯಕ್ತಿಕವಾಗಿ 5 ಲಕ್ಷ ರೂ ಸಹಾಯಧನ :ಸಚಿವ ಡಾ.ಸುಧಾಕರ್

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಬೆಂಗಳೂರು : ಸುಂಕದಕಟ್ಟೆ ಬಳಿ ಅ್ಯಸಿಡ್ ದಾಳಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಸೆಂಟ್ ಜಾನ್ ಆಸ್ಪತ್ರೆಗೆ ಇಂದು ಸಚಿವ ಡಾ.ಸುಧಾಕರ್ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಕೃತ ಮನಸ್ಸುಗಳ ಈ ಅಮಾನುಷ ದುಷ್ಕೃತ್ಯದಿಂದ ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಾಗಿದ್ದು, ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕಠಿಣ ಕ್ರಮ ಕೈಗೊಳ್ಳಲಿದೆ.
ಫಾಸ್ಟ್ ಟ್ರ್ಯಾಕ್ ಕೋರ್ಟ್ ಮೂಲಕ ಈ ಪ್ರಕರಣದ ತ್ವರಿತ ವಿಚಾರಣೆ ನಡೆಸಿ ಆದಷ್ಟು ಶೀಘ್ರದಲ್ಲಿ ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸುವ ಮೂಲಕ ಸಮಾಜ ಘಾತುಕರಿಗೆ ಎಚ್ಚರಿಕೆಯ ಸಂದೇಶ ನೀಡುವ ಅಗತ್ಯವಿದೆ ಎಂದರು.

ಈ ನಿಟ್ಟಿನಲ್ಲಿ ಈ ಪ್ರಕರಣಕ್ಕೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ.
ಸಂತ್ರಸ್ತ ಯುವತಿಗೆ ಶೇ.35% ಸುಟ್ಟ ಗಾಯಗಳಾಗಿದ್ದು ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಯುವತಿಗೆ ಅಗತ್ಯವಿರುವ ಚರ್ಮ ಕಸಿ ಸೇರಿದಂತೆ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ನಾನು ವೈಯಕ್ತಿಕವಾಗಿ 5 ಲಕ್ಷ ರೂ. ಸಹಾಯಧನ ನೀಡಲು ನಿರ್ಧರಿಸಿದ್ದೇನೆ ಎಂದರು.

ಯುವತಿಯ ಚಿಕಿತ್ಸೆ ಅಷ್ಟೇ ಅಲ್ಲದೆ ಆಕೆಯ ಮುಂದಿನ ಭವಿಷ್ಯಕ್ಕೆ ನೆರವಾಗಲು ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಪುನರ್ವಸತಿ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಈ ರೀತಿಯ ಅಮಾನವೀಯ ದುಷ್ಕೃತ್ಯಗಳು ಮರುಕಳಿಸದಂತೆ ವಿಕೃತ ಮನಸ್ಸುಗಳಿಗೆ ಕಡಿವಾಣ ಹಾಕಿ, ಯುವತಿಯರಿಗೆ ಸುರಕ್ಷಿತ ಸಮಾಜ ನಿರ್ಮಿಸುವತ್ತ ಇಡೀ ಸಮಾಜ ಕಾರ್ಯೋನ್ಮುಖವಾಗಬೇಕಿದೆ ಎಂದು ಕರೆ ನೀಡಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version