ಅಂತರಂಗ
ಆತ್ಮಕತೆ | ಮದುವೆಯ ಬಂಧ-ಸ್ನೇಹಿತರ ಮನೆಯಲ್ಲಿ ಔತಣ
- ರುದ್ರಪ್ಪ ಹನಗವಾಡಿ
ನನ್ನ ಹೆಂಡತಿ ಗಾಯತ್ರಿ 1979ನೇ ಬ್ಯಾಚಿನ ನನ್ನ ವಿಭಾಗದಲ್ಲಿಯೇ ವಿದ್ಯಾರ್ಥಿಯಾಗಿದ್ದವಳು. ವಿದ್ಯಾರ್ಥಿನಿಯಾಗಿ ಅವಳ ಶೈಕ್ಷಣಿಕ ಓದಿನ ಜೊತೆ ನಾಟಕ, ಸಂಗೀತ ಮತ್ತು ಸಾಹಿತ್ಯದಲ್ಲಿ ಆಸಕ್ತಿಯುಳ್ಳವಳಾಗಿದ್ದಳು. ಅವಳಿಗಿದ್ದ ತಮ್ಮ ಹಿರಿಯ/ಕಿರಿಯ ವಿದ್ಯಾರ್ಥಿನಿಗಳ ಜೊತೆಗಿನ ಸ್ನೇಹ ಸಂಬಂಧದ ಜೊತೆ, ಕೇಂದ್ರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಳು.
ನಮ್ಮ ಕೇಂದ್ರದಿಂದ 1978ರಲ್ಲಿ ಎಂ.ಎ. ಮುಗಿಸಿದ್ದ ಯಶೋಧ ಮತ್ತು ಶಾರದ ಎಂಬ ಇಬ್ಬರು ವಿದ್ಯಾರ್ಥಿನಿಯರು ಎಂ.ಎ., ಮುಗಿಸಿದ ನಂತರ, ಬೆಂಗಳೂರಿನಲ್ಲಿ ಯಶೋಧ ವಿ.ಕೆ.ಆರ್.ವಿ. ರಾವ್ ಇನ್ಸಿಟಿಟ್ಯೂಟ್‌ನಲ್ಲಿ ಸಂಶೋಧಕಿಯಾಗಿ ಕೆಲಸ ಮಾಡುತ್ತಿದ್ದಳು. ಶಾರದ ತನ್ನ ಸೋದರ ಸಂಬಂಧಿ ಡಾಕ್ಟರ್‌ರೊಬ್ಬರನ್ನು ಮದುವೆಯಾಗಿ ಗೃಹಿಣಿ ಯಾಗಿದ್ದಳು. ಇವರಿಬ್ಬರೂ ಮೊದಲು ಶಿವಮೊಗ್ಗದಿಂದ ದಿನವೂ ಬೆಳಿಗ್ಗೆ ಬರುತ್ತಿದ್ದ ಗಜಾನನ ಬಸ್ಸಿಗೆ ಗಾಯತ್ರಿ ಮತ್ತು ಇತರರೊಡನೆ ಕ್ಲಾಸಿಗೆ ಬರುತ್ತಿದ್ದರು. ಹಾಗಾಗಿ ಅವರಿಬ್ಬರ ಎಂ.ಎ., ಮುಗಿದ ನಂತರವೂ ಕೇಂದ್ರಕ್ಕೆ ಬಂದಾಗ ಗಾಯತ್ರಿಯನ್ನು ಜೊತೆಗೆ ಇದ್ದ ಸ್ನೇಹಿತರನ್ನು ಭೇಟಿ ಮಾಡಿ ಹೋಗುತ್ತಿದ್ದರು. ಹೀಗೆ ಹೋಗುವಾಗ ನಮ್ಮ ಜ್ಞಾನೇಂದ್ರ ಪ್ರಭು ಜೊತೆ ನಾನು ಶಿವಮೊಗ್ಗಕ್ಕೂ ಜೊತೆಗೆ ಹೋಗಿ ಅಲ್ಲಿನ ಮನೋಹರ ಕೆಫೆಯಲ್ಲಿ ಕಾಫಿ ಕುಡಿದು, ಹರಟೆ ಹೊಡೆದು ಹಿಂತಿರುಗುತ್ತಿದ್ದೆವು. ಆ ದಿನಗಳಲ್ಲಿಯೇ ನನಗೆ ಗಾಯತ್ರಿಯ ಪರಿಚಯವಾಗಿ ಒಬ್ಬರಿಗೊಬ್ಬರು ಆಸಕ್ತರಾಗಿದ್ದೆವು. ಅದೆಲ್ಲ ಪ್ರಭು, ದೇವರಾಜು ಮತ್ತು ಕೇಶವಮೂರ್ತಿಗಳ ನಮ್ಮ ಸ್ನೇಹ ವಲಯಕ್ಕೂ ತಿಳಿದಿತ್ತು.
ಗ್ರಾಮೀಣ ಪ್ರದೇಶಗಳಿಂದ ಬಹಳ ಹುಡುಗರು ಏನೆಲ್ಲ ಓದಿದ್ದರೂ ಹುಡುಗಿಯರೊಡನೆ ಸರಳವಾಗಿ ಮಾತಾಡಿಕೊಂಡು ಇರುವುದು ವಿರಳವಾಗಿದ್ದ ದಿನಗಳು. ನಾನಾದರೂ ಎಂ.ಎ. ಮುಗಿಸಿ 4-5 ವರ್ಷಗಳ ಪಾಠ ಮಾಡಿದ ಅನುಭವವಿದ್ದರೂ ಗ್ರಾಮೀಣ ಹಿನ್ನೆಲೆಯ ಸಾಮಾನ್ಯ ಹಿಂಜರಿಕೆ ಮತ್ತು ಸಂಕೋಚದ ಕಾರಣ ಹುಡುಗಿಯರಿಂದ ದೂರವೇ ಉಳಿಯುತ್ತಿದ್ದೆ.
ಓದಿನ ಜೊತೆಗೆ ಎಸ್‌ವೈಎಸ್, ಡಿ.ಎಸ್.ಎಸ್.ಗಳ ಹೋರಾಟಗಳಲ್ಲಿ ಭಾಗವಹಿಸಿ, ಬೀದಿ ಬೀದಿಗಳಲ್ಲಿ ಭಾಷಣ, ಮೆರವಣಿಗೆ ಅನೇಕ ಸಂದರ್ಭಗಳಲ್ಲಿ ಪೋಲೀಸ್ ಸ್ಟೇಷನ್‌ನಲ್ಲಿ ಬಂಧಿಯಾಗಿ ಹೊರಬಂದಿದ್ದರೂ ಪ್ರೀತಿಯ ಪ್ರೇಮಗಳ ವಿಷಯದಲ್ಲಿ ಹಿಂಜರಿಕೆ ಮತ್ತು ಸಂಕೋಚಗಳು ನನ್ನಲ್ಲಿ ಮನೆ ಮಾಡಿದ್ದವು. ನಾನು ಈ ಹಿಂದೆ ಸೋಷಿಯಾಲಜಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿದ್ದ ಮೂರು ಜನ ಹುಡುಗಿಯರಲ್ಲಿ ಒಬ್ಬಳು ತೋರಿದ ವಿಶೇಷ ಆಸಕ್ತಿ ಮತ್ತು ಮಾತುಕತೆಗೆ ಮಾರುಹೋಗಿ, ಅವಳು ವಿಶೇಷವಾಗಿ ತಂದು ಕೊಡುತ್ತಿದ್ದ ತಿಂಡಿ ಮತ್ತು ಪ್ರಸೆಂಟೇಷನ್‌ಗಳನ್ನು ನನ್ನ ಮೇಲಿನ ವಿಶೇಷ ಪ್ರೀತಿಯಿಂದಲೇ ಕೊಟ್ಟಿರಬೇಕೆಂದು ಭಾವಿಸಿಕೊಂಡಿದ್ದೆ. ಅದನ್ನೆಲ್ಲ ಆಗ ನನ್ನ ಜೊತೆಗಿದ್ದ ಬಸವಣ್ಯಪ್ಪನಿಗೆ ಹೇಳಿದಾಗ ಅವನು, `ಅವಳು ನಿನ್ನನ್ನು ಪ್ರೀತಿಸುತ್ತಿದ್ದಾಳೆ, ನಿನಗೆ ಇಷ್ಟವಾದರೆ-ನೀನೆ ಅವಳಿಗೆ ಮದುವೆಯಾಗುವಂತೆ ಕೇಳು’ ಎಂದು ಹುರಿದುಂಬಿಸುತ್ತಿದ್ದ. ಏರು ಯೌವನದ ಸೆಳೆವಿನಲ್ಲಿದ್ದ ನಾನು ಒಂದು ದಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ಸಂಜೆಯ ವಿಹಾರದಲ್ಲಿದ್ದಾಗ ನನ್ನನ್ನು ಮದುವೆಯಾಗುತ್ತೀಯ ಎಂದು ಕೇಳಿಯೇ ಬಿಟ್ಟೆ. ನನಗಿಂತಲೂ ವಯಸ್ಸಿನಲ್ಲಿ ಮತ್ತು ಬುದ್ದಿಯಲ್ಲಿ ಮುಂದಿದ್ದ ಅವಳು ನನ್ನ ಪ್ರೇಮ ಭಿಕ್ಷೆಯನ್ನು ನಯವಾಗಿ ತಿರಸ್ಕರಿಸಿದ್ದಳು. ನಂತರ ನಾನು ನನ್ನ ವೃತ್ತಿಯನ್ನೇ ಬದಲಾಯಿಸಿದ ಕಾರಣ ಆ ಪ್ರೇಮ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿ ಬಿಆರ್‌ಪಿಗೆ ವರ್ಗವಾಗಿ ಬಂದಿದ್ದೆ.
ಈ ಹಿನ್ನೆಲೆಯಲ್ಲಿದ್ದ ನನಗೆ ತಕ್ಷಣದಲ್ಲಿ ಪ್ರೀತಿಯ ಪ್ರಸ್ತಾಪವನ್ನು ಮಾಡುವಾಗ ಅನೇಕ ರೀತಿಯ ಹಿಂಜರಿಕೆಯಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಪ್ರಭು ಮತ್ತು ಕೇಶವಮೂರ್ತಿಯವರೊಡನೆ ನಂತರ ನನ್ನ ಹಳೆ ವಿದ್ಯಾರ್ಥಿನಿಯರಾದ ಯಶೋಧ ಮತ್ತು ಶಾರದಾ ಅವರ ಮುಖಾಂತರ ಗಾಯತ್ರಿಯ ಬಗ್ಗೆ ನನಗಿರುವ ಆಸಕ್ತಿ ತಿಳಿಸಿದೆ. ಅವಳು ಎಂ.ಎ. ಪರೀಕ್ಷೆ ಮುಗಿದಿದ್ದರಿಂದ ಊರಿಗೆ ಹೋಗಿದ್ದಳು. ಅವಳು ಮದುವೆಗೆ ಒಪ್ಪಿಗೆ ಸೂಚಿಸಿದ್ದರೂ ಅವಳಿಗೆ ಒಂದು ಕೆಲಸ ಪಡೆದ ನಂತರ ದಿನಗಳಲ್ಲಿ ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿ ನಾನಿದ್ದೆ. ಗಾಯತ್ರಿಯೂ ರಜೆಯಿದ್ದ ಕಾರಣ ತನ್ನ ಊರಾದ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರಕ್ಕೆ ಹೋಗಿದ್ದಳು. ನನ್ನ ಜೊತೆ ಮನೆತನ, ಜಾತಕಗಳ ವಿವರಗಳ ಗೊಡವೆ ಇಲ್ಲದೆ, ನನ್ನನ್ನು ಮದುವೆಯಾಗಲು ಒಪ್ಪಿಸುವಲ್ಲಿ ಗಾಯತ್ರಿಯ ಗೆಳತಿಯರು, ನನ್ನ ಮಿತ್ರ ಪ್ರಭು ಎಲ್ಲ ಕಾರಣರಾಗಿದ್ದರು. ನಾನಾವ ಜಾತಿ ಮತ್ತು ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಏನೂ ಕೆದಕದೆ ನನ್ನನ್ನು ಮಾತ್ರ ನೋಡಿ ಒಪ್ಪಿದ ಗಾಯತ್ರಿಯ ಬಗ್ಗೆ ಅಭಿಮಾನದ ಪ್ರೀತಿಯಲ್ಲಿ ಕಾಲ ಕಳೆಯುತ್ತಿದ್ದೆ. ಹೀಗಿರುವಾಗ ಮೇ ತಿಂಗಳ ಕೊನೆ ವಾರದಲ್ಲಿ ತನ್ನ ಗೆಳತಿಯ ಜೊತೆ ಬಿ.ಆರ್.ಪಿ.ಗೆ ಬಂದ ಗಾಯತ್ರಿ ಹೊಸ ಸುದ್ದಿಯನ್ನು ತಂದಿದ್ದಳು. ರಜೆಯಲ್ಲಿ ಅವರ ಮನೆಗೆ ಬಂದಿದ್ದ ಹುಡುಗನೊಬ್ಬ ಗಾಯತ್ರಿಯನ್ನು ನೋಡಿ ಮದುವೆಯಾಗಲು ಒಪ್ಪಿರುವುದಾಗಿಯೂ, ಇಷ್ಟರಲ್ಲೇ ಮದುವೆ ಮಾತು ಆಗಬಹುದೆಂಬ ಆತಂಕದ ಸುದ್ದಿಯನ್ನು ತಿಳಿಸಿದಳು.
ಗಾಯತ್ರಿಯ ಎಂ.ಎ. ಮುಗಿದು ನೌಕರಿ ಹಿಡಿದ ನಂತರ ಎಲ್ಲರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದ ನಮಗೆ ನಂತರದ ಬೆಳವಣಿಗೆಗಳು ನಮ್ಮಿಬ್ಬರ ಕೈತಪ್ಪಿ ಹೋಗುವ ಆತಂಕವಾಯಿತು. ಈ ನನ್ನ ಎಲ್ಲ ಅಂತರಂಗದ ವಿಷಯಗಳನ್ನು ಚರ್ಚಿಸಲು ಪ್ರಭು ಜೊತೆ ಭದ್ರಾವತಿಗೆ ಕೃಷ್ಣಪ್ಪನವರನ್ನು ಕಂಡು ಚರ್ಚಿಸಿಕೊಂಡು ಬರಲು ಹೋದೆವು. ಕೃಷ್ಣಪ್ಪ ಮತ್ತು ಇಂದಿರಾ ಅವರ ಜೊತೆ ಎಲ್ಲ ವಿಷಯಗಳನ್ನು ಚರ್ಚಿಸಿ ದಿನಾಂಕ 4-6-1979ರಂದು ರಿಜಿಸ್ಟರ್ ಮದುವೆಯ ಕಾರ್ಯ ಮುಗಿಸಲು ತೀರ್ಮಾನಿಸಿದೆವು. ಅದಕ್ಕೂ ಮುಂಚೆ ಗಾಯತ್ರಿಯನ್ನು ಕರೆದುಕೊಂಡು ಬರಲು ತಿಳಿಸಿದರು. ಅದರಂತೆ ಹೋದಾಗ ಇಂದಿರಾ ಕೂಡ ಇದ್ದು ಗಾಯತ್ರಿಗೆ ಸಮಾಧಾನ, ಧೈರ್ಯ ಹೇಳಿ ಮದುವೆಯ ಆತಂಕವನ್ನು ಹಗುರ ಮಾಡಿದ್ದರು. ತುರ್ತಾಗಿ ಇದ್ದ ಪರಿಸ್ಥಿತಿಯಲ್ಲೇ ಮದುವೆಮಾಡಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ. ನಮ್ಮ ಊರ ಮನೆಯಲ್ಲಿ ಈ ವಿಷಯಗಳನ್ನು ತಿಳಿಸಿ ಚರ್ಚಿಸಿ ಒಪ್ಪಿಸುವುದು ಸಾಧ್ಯವಿರಲಿಲ್ಲ. ಏಕೆಂದರೆ ಅವ್ವ ನನ್ನ ಅಕ್ಕನ ಮಗಳನ್ನು ಮದುವೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದಳು. ಆ ರೀತಿ ಅಕ್ಕನ ಮಗಳನ್ನು ಮದುವೆಯಾಗುವುದು, ಅವರು ನನ್ನನ್ನು ಅವರ ಸಾಗರದ ಮನೆಯಲ್ಲಿಟ್ಟುಕೊಂಡು ಓದಿಸಿದ ಬಗ್ಗೆ ಋಣ ತೀರಿಸುವ ಜವಾಬ್ದಾರಿ ಎಂದು ಎಲ್ಲರ ನಂಬಿಕೆಯಾಗಿತ್ತು. ಇದನ್ನೆಲ್ಲ ತಿಳಿಗೊಳಿಸಿ ಪ್ರಸ್ತುತ ಮದುವೆ ವಿಷಯಕ್ಕೆ ಒಪ್ಪಿಸಿ ಕರೆತರುವುದು ಆ ಕ್ಷಣದಲ್ಲಿ ಸಾಧ್ಯವಿಲ್ಲದ ಮಾತಾಗಿತ್ತು.
ಇನ್ನು ಗಾಯತ್ರಿ ಮನೆಯವರು ಶೃಂಗೇರಿ ಮಠದ ಅನುಯಾಯಿಗಳು. ಪ್ರಥಮದಲ್ಲಿ ನಾನು ಅಬ್ರಾಹ್ಮಣನಾದ ಕಾರಣ ಈ ಮುದುವೆಯ ಪ್ರಸ್ತಾಪವೇ ಸಾಧ್ಯವಿಲ್ಲದ ಮಾತಾಗಿತ್ತು. ಅದರಲ್ಲೂ ನನ್ನ ಜಾತಿ ದಲಿತ ಗುಂಪಿಗೆ ಸೇರಿದ್ದೆಂಬುದು ತಿಳಿಸಿದರೆ ಇನ್ನು ಅನೇಕ ಸಮಸ್ಯೆಗಳನ್ನು ಹುಟ್ಟುಹಾಕುವುದರಲ್ಲಿತ್ತು. ಹಾಗಾಗಿ ಅವರಿಗೂ ಈ ಮದುವೆ ವಿಷಯ ತಿಳಿಸಿ ಒಪ್ಪಿಗೆ ಪಡೆದು ಮದುವೆಯಾಗುವುದು ಸಾಧ್ಯವಿರಲಿಲ್ಲ. ಈ ವಿಷಯಗಳೇನಾದರೂ ಮೊದಲೇ ಗೊತ್ತಾದರೆ, ಮದುವೆಯಾಗಲು ಖಂಡಿತ ಬಿಡುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿದ್ದ ಕಾರಣದಿಂದಾಗಿ ಎಲ್ಲದನ್ನು ಗೌಪ್ಯವಾಗಿಟ್ಟು ಮದುವೆಯ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕೃಷ್ಣಪ್ಪ – ಇಂದಿರಾ ಅವರ ಮದುವೆ 1975ರಲ್ಲಿಯೇ ನಡೆದು ಆ ನಂತರ ಅನೇಕ ಅಂತರ್ಜಾತೀಯ, ಧರ್ಮೀಯ ಮತ್ತು ಸರಳ ಮದುವೆಗಳನ್ನು ಮಾಡಿಸಿ ಹೆಸರಾಗಿದ್ದರು. ಸಮಾಜವಾದಿ ಚಳುವಳಿ, ದಲಿತ ಚಳುವಳಿಯ ಅನೇಕ ಯುವಕ, ಯುವತಿಯರು ಇಂದಿರಾ ಕೃಷ್ಣಪ್ಪನವರ ನೇತೃತ್ವದಲ್ಲಿ ಅಂತರ್‌ಜಾತಿ ಮದುವೆಯಾಗಿದ್ದರು. ಕೃಷ್ಣಪ್ಪನವರ ಅಭಿಮಾನಿ ಬಳಗ – ಭದ್ರಾವತಿ, ಶಿವಮೊಗ್ಗದಲ್ಲಿ ಸದಾ ಇಂತಹ ಸಂದರ್ಭದಲ್ಲಿ ಬೇಕಾದ ನೆರವು ನೀಡಲು ಮುಂದಾಗಿರುತ್ತಿತ್ತು.
ಈ ತಯಾರಿಯ ಸಮಯದಲ್ಲಿಯೇ ನನ್ನ ಹಳೆಯ ವಿದ್ಯಾರ್ಥಿನಿಯರಾಗಿದ್ದ ಯಶೋಧ ಮತ್ತು ಶಾರದ ಅವರು ನೀವು ಹೇಗೂ ಲಿಂಗಾಯತರಂತೆ ಕಾಣುತ್ತೀರಿ, ಸದ್ಯದ ಸಮಯದಲ್ಲಿ ನೀವು ನಿಮ್ಮ ಜಾತಿಯನ್ನು ಲಿಂಗಾಯತರೆಂದು ಹೇಳಿ ಮದುವೆಗೆ ಗಾಯತ್ರಿ ಮನೆಯವರನ್ನು ಒಪ್ಪಿಸುವ ಸಲಹೆ ನೀಡಿದರು. ಆದರೆ ಅದೆಲ್ಲ ಆಗದ ಮಾತು ಎಂದು ನಾನು ಅವರಿಗೆ ಆಗಲೇ ತಿಳಿ ಹೇಳಿದೆ. ಮದುವೆಯ ದಿನಕ್ಕೆ ಬೇಕಾದ ಸೀರೆ, ಒಂದು ತಾಳಿ ಚೈನು ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ನನಗೆ ಒಂದು ಜೊತೆ ಷರ್ಟ್ ಪ್ಯಾಂಟ್ ಹೊಲಿಯಲು ಹಾಕಿದ್ದೆ. ಆದರೆ ನನಗೆ ಆ ಟೈಲರ್ ಮದುವೆ ದಿನಕ್ಕೆ ಕೊಡಲೇ ಇಲ್ಲ. ಗಾಯತ್ರಿಯನ್ನು ಭದ್ರಾವತಿಯ ಕೃಷ್ಣಪ್ಪನವರ ಮನೆಗೆ ಬರಲು ಹೇಳಿ ನಂತರ ಎಲ್ಲರೂ ಸೇರಿ ಸಬ್ ರಿಜಿಸ್ಟಾçರ್ ಆಫೀಸಿಗೆ ಹೋದೆವು. ಆಗ ಚಿತ್ರದುರ್ಗದಲ್ಲಿದ್ದ ಬಸವಣ್ಯಪ್ಪ ಕಟ್ಟಲು ತಾಳಿಯೊಂದನ್ನು ಕೊಂಡು ತಂದಿದ್ದ. ಸಬ್‌ರಿಜಿಸ್ಟರ್ ಆಫೀಸಿನಲ್ಲಿ ಫೀಸಾಗಿ 14ರೂ.ಗಳ ಖರ್ಚಿನಲ್ಲಿ ಭದ್ರಾವತಿಯಲ್ಲಿ ಸಮಾಜವಾದಿ ಮತ್ತು ದಲಿತ ಗೆಳೆಯರ ಸಮಕ್ಷಮದಲ್ಲಿ ಕೃಷ್ಣಪ್ಪ-ಇಂದಿರಾ ದಂಪತಿಗಳ ನೇತೃತ್ವದಲ್ಲಿ ಮದುವೆಯಾಗಿತ್ತು. ಉಟ್ಟ ಸೀರೆಯಲ್ಲಿ ನರಸಿಂಹರಾಜಪುರದಿಂದ ಬಂದಿದ್ದ ಗಾಯತ್ರಿ ಅವರ ಮನೆಯವರಿಗೆ ಪ್ರಭು ಮತ್ತು ಕೇಶವಮೂರ್ತಿಗಳು ಮಾರನೆದಿನ ಹೋಗಿ ನಮ್ಮ ವಿವಾಹ ಆಗಿರುವ ಬಗ್ಗೆ ತಿಳಿಸಿ ಬರಬೇಕೆಂಬ ಮಾತಿಗೆ ಇಬ್ಬರೂ ಮಾರನೇ ದಿನ ಗಾಯತ್ರಿಯ ಮನೆಗೆ ಹೋಗಿ ಮದುವೆಯಾದ ಸುದ್ದಿ ತಿಳಿಸಿದ್ದರು. `ಗಾಯತ್ರಿಯು ಅವಳಿಗೆ ಅಧ್ಯಾಪಕರಾಗಿದ್ದ ರುದ್ರಪ್ಪ ಎನ್ನುವವರನ್ನು ಮದುವೆಯಾಗಿದ್ದಾಳೆ, ಅವರಿಬ್ಬರೂ ಚೆನ್ನಾಗಿರುತ್ತಾರೆ, ನೀವೇನು ಚಿಂತಿಸುವ ಅಗತ್ಯವಿಲ್ಲ’ ಎಂಬುದನ್ನು ಬಾಯಿಪಾಠ ಮಾಡಿದಂತೆ ಒಪ್ಪಿಸಿ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿ ಬಂದಿದ್ದರು. ಅದರಿಂದಾಗಿ ಅವರ ಮನೆಯವರಿಗೆ ಗಾಯತ್ರಿ ಎಲ್ಲಿ ಹೋಗಿದ್ದಾಳೆ ಮತ್ತು ಏನಾಗಿದೆ ಎಂಬುದರ ಬಗ್ಗೆ ತಕ್ಷಣ ತಿಳಿದಂತಾಗಿತ್ತು.
ನನ್ನ ಮದುವೆ ದಿನ ಕೃಷ್ಣಪ್ಪನವರ ಮನೆಯಲ್ಲಿದ್ದ ನಾವು ಅಲ್ಲಿದ್ದರೆ ಗಾಯತ್ರಿ ಮನೆ ಕಡೆಯವರು ಬಂದು ಗಲಾಟೆ ಮಾಡಬಹುದೆಂದು ಭಾವಿಸಿ ಇಂದಿರಾ ಕೃಷ್ಣಪ್ಪನವರ ಹಿತೈಷಿ ಆಧ್ಯಾಪಕ ಶಿವಮೊಗ್ಗ ಮುನೀರ್ ಮತ್ತು ಅವರ ತಾಯಿ (ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ) ಬಚ್ಚಿಮ್ಮಾ ಮನೆಗೆ ಹೋಗಿ ಉಳಿಯಬೇಕೆಂದು ತೀರ್ಮಾನಿಸಿದ್ದರು. ಅದರಂತೆ ಮೊದಲ ರಾತ್ರಿ ಬಚ್ಚಿಮ್ಮಾ ಸಿಹಿ ಅಡುಗೆ ಮಾಡಿ ಔತಣ ಏರ್ಪಡಿಸಿದ್ದರು. ಊಟದ ಶಾಸ್ತç ಮಾಡಿ ಮಲಗಿದರೆ ನಿದ್ದೆ ಬಾರದೇ ಇಡೀ ರಾತ್ರಿ ಆತಂಕ ಮತ್ತು ಚಿಂತೆಗಳಲ್ಲಿ ಕಳೆದೆವು. ಮದುವೆಯಾಗಿ ಒಂದು ವಾರದಲ್ಲಿ ಅಂದರೆ 10-6-1979ರಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಒಂದು ಸಂತೋಷಕೂಟ ವ್ಯವಸ್ಥೆ ಮಾಡಿದ್ದೆವು. ಅದಕ್ಕೆಲ್ಲಾ ಶಿವಮೊಗ್ಗದವನೇ ಆಗಿದ್ದ ಪ್ರಭು ಮತ್ತು ಅವನ ಅಲ್ಲಿನ ಗೆಳೆಯರಾದ ರೈತಸಂಘದ ಚಟ್ನಳ್ಳಿ ಮಂಜಪ್ಪ, ಅರ್ಚನ ಟ್ರೇರ‍್ಸ್ ಕಾಂತರಾಜ್ ಓಡಾಡಿ ನಿಗದಿಗೊಳಿಸಿದ್ದರು. ಸುಮಾರು 300-400 ಜನರಿಗೆ ಲಘು ಉಪಹಾರದೊಡನೆ ಈ ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅದಕ್ಕಾಗಿ ಒಂದು ಸಾಮಾನ್ಯ ಕರೆಯೋಲೆಯನ್ನು ಸಹ ಮುದ್ರಿಸಿ ಬೇಕಾದ ಸ್ನೇಹಿತರಿಗೆ ಮತ್ತು ನನ್ನ ಊರಿನ ಸಂಬಂಧಿಕರಿಗೆ ಹಂಚಲು ನಮ್ಮ ಊರಿನ ಮಾಂತೇಶಿಗೆ ಜವಾಬ್ದಾರಿ ನೀಡಿದ್ದೆನು. ಅವನ ಮುಖಾಂತರ ಊರಿಗೆ ಕಳಿಸಿಕೊಟ್ಟಿದ್ದೆ. ಅವ್ವ ಮತ್ತು ಎಲ್ಲ ಸಂಬಂಧಿತ ಬಳಗ ಮತ್ತು ಊರಿನವರು ಹೇಳಿ ಕೇಳಿ ಮದುವೆಯಾಗದೆ ದಿಢೀರ್ ಆಗಿ ಈ ರೀತಿ ಆದ ಬಗ್ಗೆ ಆಕ್ಷೇಪಗಳನ್ನು ಮಾಡಿ ಅರ‍್ಯಾರೂ ಬಾರದೆ 7-8 ಜನ ಸ್ನೇಹಿತರು ಮಾತ್ರ ಊರಿನಿಂದ ಬಂದಿದ್ದರು. ನಂತರ ನಡೆಯಬೇಕಾಗಿದ್ದ ಸಂತೋಷಕೂಟವೂ ಕೂಡ ಶಿವಮೊಗ್ಗದಲ್ಲಿ ನಡೆಸಲು ಗಾಯತ್ರಿಯವರ ಮನೆಕಡೆಯಿಂದ ಶಿವಮೊಗ್ಗದಲ್ಲಿ ಮಾತ್ರ ಈ ಸಮಾರಂಭ ಮಾಡುವುದು ಬೇಡ ಎಂಬ ಅಭಿಪ್ರಾಯಪಟ್ಟಿದ್ದರಿಂದ ಕೊನೆ ಹಂತದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಂದೆ ಒಂದು ತಿಳುವಳಿಕೆಯ ಸೂಚನೆಯನ್ನು ಬರೆದು ಹಾಕಿ ಇಲ್ಲಿ ನಡೆಯಬೇಕಾಗಿದ್ದ ಸಂತೋಷ ಕೂಟ ಸಮಾರಂಭವನ್ನು ಬಿಆರ್‌ಪಿಯಲ್ಲಿನ ಸ್ನಾತಕೋತ್ತರ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ನನ್ನ ಅನೇಕ ಸ್ನೇಹಿತರು ಸಂಜೆ ಬಂದವರು ನಂತರದ ಸ್ಥಳ ಬದಲಾವಣೆಯನ್ನು ತಿಳಿದು ಕಡೆಗವರು ಬಿಆರ್‌ಪಿಯಲ್ಲಿ ನಡೆದ ಸಂತೋಷಕೂಟದಲ್ಲಿ ಪಾಲ್ಗೊಳ್ಳಲಾಗಲಿಲ್ಲ. ಮತ್ತೆ ಕೆಲವರು ಅಲ್ಲಿ ಇಲ್ಲಿ ವಿಚಾರಿಸಿ ಬಿಆರ್‌ಪಿಗೆ ಬರುವ ವೇಳೆಗೆ ಸಂತೋಷಕೂಟವೇ ಅವಸರದ ಗಲಾಟೆಯಲ್ಲಿ ಮುಕ್ತಾಯವಾಗಿತ್ತು.
ಮದುವೆಯಾದ ಮಾರನೇ ದಿನ ಭದ್ರಾವತಿಯಲ್ಲಿರುವುದಾಗಲೀ ಹತ್ತಿರದಲ್ಲಿ ಇಲ್ಲೆಲ್ಲಿ ಇರುವುದು ಸೂಕ್ತವಲ್ಲವೆಂದು ಅವಸರದಲ್ಲಿ ಇಂದಿರಾ ಜೋಡಿಸಿಕೊಟ್ಟಿದ್ದ ಅವರದೇ ಸೂಟ್‌ಕೇಸ್‌ನಲ್ಲಿ ಒಂದೆರಡು ಸೀರೆ ಬಟ್ಟೆಗಳನ್ನು ಜೋಡಿಸಿಕೊಂಡು ಭದ್ರಾವತಿಯ ಬಸ್ ಸ್ಟಾö್ಯಂಡ್‌ಗೆ ಬಂದೆವು. ನಾನು ದಾವಣಗೆರೆಗೆ ಹೋಗೋಣವೆಂದು ಯೋಚಿಸುತ್ತಿರುವಾಗಲೇ ಅಲ್ಲಿಗೆ ಬಂದ ಶಂಕರ್ ಮೋಟಾರ್ ಟ್ರಾನ್ಸ್ಪೋರ್ಟ್ ನೋಡಿ, ಇವಳು ಅದು ನಮ್ಮ ಊರಿಗೆ ಹೋಗುವ ಬಸ್, ಅದರಲ್ಲಿ ತಮ್ಮ ಊರಿನವರು ಯಾರಾದರು ಇರುತ್ತಾರೆ ಎಂದು ಗಡಿಬಿಡಿ ಮಾಡಿದಾಗ ಅಲ್ಲೇ ಮೈಸೂರು ಕಡೆ ಹೊರಟು ನಿಂತಿದ್ದ ಬಸ್ ಹತ್ತಿ ಅರಸೀಕೆರೆಗೆ ಎರಡು ಟಿಕೆಟ್ ತೆಗೆದುಕೊಂಡು ಬಸ್ ಹತ್ತಿ ಕೂತೆವು. ಸದ್ಯ ಭದ್ರಾವತಿ ಬಿಟ್ಟೆವಲ್ಲ ಎಂಬ ಸಮಾಧಾನದಲ್ಲಿ ಸ್ವಲ್ಪ ಯೋಚಿಸುತ್ತಾ ಮೈಸೂರಿಗೆ ಹೋಗುವುದೋ ಇಲ್ಲ, ಅರಸೀಕೆರೆಯಲ್ಲಿ ಉಳಿಯುವುದೋ ಎಂಬ ಯೋಚನೆಯಲ್ಲಿದ್ದಾಗಲೇ, ಅರಸೀಕೆರೆಯಲ್ಲಿ ನಾನು ಬಿ.ಎ., ಮತ್ತು ಎಂ.ಎ. ನಲ್ಲಿ ನನ್ನ ರೂಂಮೇಟ್ ಮತ್ತು ಬ್ಯಾಚ್‌ಮೇಟ್ ಆಗಿದ್ದ ಎಲ್. ರವೀಂದ್ರ ಆಗ ಅರಸೀಕೆರೆ ತಹಸೀಲ್ದಾರನಾಗಿದ್ದ. ನಾವು ಅರಸೀಕೆರೆಯಲ್ಲಿ ಇಳಿದು ಬಸ್ ಸ್ಟಾö್ಯಂಡ್ ಹತ್ತಿರದಲ್ಲಿದ್ದ ವಸತಿಗೃಹದಲ್ಲಿ ರೂಂ ಮಾಡಿದೆವು. ನಂತರ ಸೂಟ್‌ಕೇಸ್‌ನಲ್ಲಿದ್ದ ಬಟ್ಟೆಯನ್ನೆಲ್ಲಾ ನೋಡಿ ಅವಳಿಗೊಂದು ಹೊಸ ಸೀರೆ ತೆಗೆದುಕೊಳ್ಳಲು ನಿರ್ಧರಿಸಿ, ವಸತಿಗೃಹದ ಎದುರಲ್ಲಿದ್ದ ಈಗಲೂ ಇರುವ `ಕನ್ನಿಕಾ ಪರಮೇಶ್ವರಿ ಕ್ಲಾತ್ ಸೆಂಟರ್’ನಲ್ಲಿ ಗಾಯತ್ರಿಗೆ `ನಾಳೆಯೊಳಗೆ ಬ್ಲೌಸ್ ಹೊಲೆದುಕೊಡುವ ಒಪ್ಪಿಗೆಯ ಮೇಲೆ ಒಂದು ಸೀರೆ ಮತ್ತಿತರ ಸಣ್ಣಪುಟ್ಟ ಸಾಮಾನುಗಳನ್ನು ಕೊಂಡುಕೊಂಡೆವು. ನಂತರ ತಹಸೀಲ್ದಾರನಾಗಿದ್ದ ರವೀಂದ್ರನಿಗೆ ಪೋನ್ ಮಾಡಿದೆ. ಹೀಗೆ ನಾನು ಮದುವೆಯಾಗಿ ಹೆಂಡತಿಯೊಡನೆ ಅರಸೀಕೆರೆ ಲಾಡ್ಜ್ನಲ್ಲಿ ಉಳಿದಿರುವ ಬಗ್ಗೆ ತಿಳಿಸಿದೆ. ಅವನು ನೇರ ಸಂಜೆ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದ. ಆತಂಕದ ಆವೇಗದಲ್ಲಿದ್ದ ನಮಗೆ ಅವನಿದ್ದುದು ಮತ್ತು ಮನೆಗೆ ತಕ್ಷಣ ಆಹ್ವಾನಿಸಿದ್ದುದು ಒಂದು ರೀತಿಯ ಸಮಾಧಾನ ನೀಡಿತ್ತು. ಸಂಜೆ ಅವರ ಮನೆಗೆ ಊಟಕ್ಕೆ ಹೊರಡುವ ಮುನ್ನ ಗಾಯತ್ರಿಯ ಎಲ್ಲಾ ಅಕ್ಕಂದಿರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ತುರ್ತಾಗಿ ಮದುವೆಯಾದ ಬಗ್ಗೆ ವಿವರಿಸಿ ತಾವೆಲ್ಲರೂ ಆಶೀರ್ವದಿಸಬೇಕೆಂದೂ, ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ನಮ್ರವಾಗಿ ವಿನಂತಿಸಿಕೊಂಡಿದ್ದೆವು.
ಸಂಜೆ ರವೀಂದ್ರನ ಮನೆಗೆ ಮದುವೆಯ ಜೋಡಿಯಾಗಿ ಔತಣವೊಂದಕ್ಕೆ ಜೊತೆಯಾಗಿ ಹೋಗುತ್ತಿರುವುದು ಮೊಟ್ಟಮೊದಲನೆಯದಾಗಿತ್ತು.
ನಾನು ಮಾಂಸಾಹಾರಿ ಮತ್ತು ಬೀರ್ ಕುಡಿಯುತ್ತಿದ್ದುದು ಗಾಯತ್ರಿಗೆ ಗೊತ್ತಿದ್ದರೂ ನಾನು ಅವಳಿಗಾಗಿ ಆ ಕ್ಷಣದಲ್ಲಿ ಕುಡಿಯುವುದು ಬೇಡ ಎಂದು ನಿರ್ಧರಿಸಿದ್ದೆ. ರವೀಂದ್ರನ ಮನೆಯಲ್ಲಿ ಅವರ ತಂದೆ ಆರ್.ಎಫ್.ಒ. ಆಗಿ ನಿವೃತ್ತರಾದವರು. ಮನೆಯಲ್ಲಿ ಮೊದಲೇ ಊಟಕ್ಕೆ ಕೂತಿದ್ದರು. ಜೊತೆಗೆ ಮ್ಯಾಕ್‌ಡೆವಲ್ ವಿಸ್ಕಿ ಬಾಟಲ್ ಹಾಗೂ ಮಾಂಸದೂಟದ ಎಲುಬಿನ ತುಣುಕುಗಳೆಲ್ಲ ಸುತ್ತಲೂ ಇದ್ದವು. ಗಾಯತ್ರಿ ನೋಡಿದ ಮೊದಲ ಮಾಂಸಹಾರಿ ಊಟದ ನೋಟದಲ್ಲಿಯೇ ಹೌಹಾರಿ ನಿಂತಿದ್ದಳು. ನಾನು ಮದುವೆ ಮಾಡಿಕೊಂಡು ಬಂದಿರುವ ಕಾರಣ ರವೀಂದ್ರ ನಿಜವಾಗಿಯೂ ಅದ್ದೂರಿ ಊಟ ಮತ್ತು ವಿಸ್ಕಿಗೆ ವ್ಯವಸ್ಥೆ ಮಾಡಿದ್ದ. ನಾನು ನನ್ನ ಮದುವೆಯ ಯಾವ ವಿವಾದಗಳನ್ನೂ ಅವನಿಗೆ ತಿಳಿಸದ ಕಾರಣ ಅವನು ತೋಚಿದಂತೆ ಮಾಡಿದ್ದ. ನಾನು ಅವನಿಗೂ ಮತ್ತು ಅವನ ಶ್ರೀಮತಿಯವರಿಗೆ, ಇವಳು ಮಾಂಸ ತಿನ್ನುವುದಿಲ್ಲ ಬೇರೇನಾದರೂ ಇದ್ದರೆ ಆದೀತೆಂದು ಹೇಳಿದೆ. ಅದಕ್ಕೇನೆಂದು 10 ನಿಮಿಷದಲ್ಲಿ ತಿಳಿಸಾರೊಂದು ತಯಾರಿಸಿದರು. ನಾನು ಗಾಯತ್ರಿ ಮತ್ತು ರವೀಂದ್ರ ಊಟ ಮಾಡಿದೆವು. ಮೊದಲ ಮದುವೆಯ ಔತಣಕೂಟ ತಿಳಿಸಾರು ಉಪ್ಪಿನಕಾಯಿ ಮೊಸರಲ್ಲಿ ಅವಳ ಊಟ ಮುಗಿದಿತ್ತು. ನನಗೆ ಒಳ್ಳೆಯ ಮಾಂಸಾಹಾರದ ಊಟವಾಗಿತ್ತು. ಅಲ್ಲಿಂದ ಮಾರನೇ ದಿನ ಮೈಸೂರಿಗೆ ಬಂದು ಜಗನ್ಮೋಹನ ಪ್ಯಾಲೇಸ್ ಹತ್ತಿರದಲ್ಲಿದ್ದ ಮಹಾರಾಜಾ ಲಾಡ್ಜ್ನಲ್ಲಿ ಉಳಿದುಕೊಂಡೆವು. ಅಲ್ಲಿಂದ ಮೈಸೂರಿನ ಗೆಳೆಯರಿಗೆ ನನ್ನ ಹಿರಿಕಿರಿ ಸ್ನೇಹಿತರಿಗೆ ಫೋನಿನಲ್ಲೆ ನಾವು ಮದುವೆಯಾಗಿ ಬಂದಿರುವ ವಿಷಯ ತಿಳಿಸಿದೆ.
ಹಿರಿಯರಾದ ಪಿ. ಮಲ್ಲೇಶ್ ಅವರು ಮನೆಗೆ ಕರೆದು ಅದ್ದೂರಿಯಾದ ಔತಣ ಮಾಡಿಸಿ ನನಗೆ ಗೊತ್ತಿರುವ ಮತ್ತು ಇನ್ನಿತರ ಸ್ನೇಹಿತರನ್ನು ಕರೆದು ನಾವಿಬ್ಬರೂ ಹೊಸದಾಗಿ ಮದುವೆಯಾಗಿ ಬಂದಿರುವ ಬಗ್ಗೆ ಅಭಿಮಾನದಿಂದ ಪರಿಚಯ ಮಾಡಿಸಿ ಹರಸಿ ಜೊತೆಗೆ ನನ್ನ ಹೆಂಡತಿಗೆ ಒಳ್ಳೆಯ ಸೀರೆಯನ್ನು ತಂದು ಉಡುಗೊರೆ ನೀಡಿದ್ದನ್ನ ಈಗಲೂ ಗಾಯತ್ರಿ ನೆನಪಿಸಿಕೊಳ್ಳುತ್ತಾಳೆ. ಮಲ್ಲೇಶ್ ಮತ್ತು ಅವರ ಶ್ರೀಮತಿ ಅವರು ಗಾಯತ್ರಿಯನ್ನು ಚೆನ್ನಾಗಿ ಮಾತಾಡಿಸಿ, ಒಳ್ಳೆಯ ಹುಡುಗನನ್ನು ಮದುವೆಯಾಗಿದ್ದೀಯ ಏನೂ ಯೋಚನೆ ಮಾಡಬೇಡ ಎಂದೆಲ್ಲ ಅವಳಿಗೆ ಸಮಾಧಾನದ ಮಾತು ಹೇಳಿ ಕಳುಹಿಸಿದ್ದರು.
ಹಾಗೆಯೇ ಮಾದೇವ ಮತ್ತು ಸುಮಿತ್ರಾಬಾಯಿಯವರು ಮನೆಗೆ, ಪಿ.ಕೆ. ಮಿಶ್ರಾಜಿ ಮತ್ತು ಮಹೇಶನ ಮನೆಗೂ ಹೋಗಿದ್ದೆವು. ಸುಮಿತ್ರಾಬಾಯಿ ಅವರು ನನ್ನ ಹೆಂಡತಿಯ ಹಿನ್ನೆಲೆ ಮೊದಲೇ ತಿಳಿದುಕೊಂಡಿದ್ದ ಕಾರಣ ಸೊಗಸಾದ ಸಸ್ಯಾಹಾರಿ ಔತಣ ಮಾಡಿದ್ದರು. ನನಗೆ ಬ್ರಾಹ್ಮಣ ಜಾತಿಯ ಅನೇಕ ಸ್ನೇಹಿತರಿರುವುದಾಗಿಯೂ ಆದುದರಿಂದ ಸಸ್ಯಾಹಾರಿ ಊಟ ಉಪಚಾರಗಳು ನನಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿ ಸುಮಿತ್ರಾಬಾಯಿ ಅವರು ಆದರಿಸಿದ್ದರು.
ಎಲ್ಲ ಸ್ನೇಹಿತರನ್ನು ಮಾತಾಡಿಸಿದ ನಂತರ ಸಂಜೆ ಎಂ.ಸಿ. ಸುಂದರೇಶ ನಮ್ಮ ಕಿರಿಯ ಗೆಳೆಯ ಮತ್ತು ತನ್ನ ಎಂಬಿಎ ಶಿಕ್ಷಣದ ನಂತರ ಸ್ವಂತ ಗ್ಯಾಸ್ ಏಜೆನ್ಸಿ ನಡೆಸುತ್ತಾ ಬೆಳೆಯುವ ಉದ್ಯಮಿಯಾಗಿದ್ದ. ಅವನು ದೊಡ್ಡ ಹೋಟೆಲೊಂದರಲ್ಲಿ ಪಾರ್ಟಿ ಏರ್ಪಡಿಸಿದ್ದ. ಮಹೇಶ ಮತ್ತಿತರ ಗೆಳೆಯರ ಜೊತೆ ಪಾರ್ಟಿಗೆ ಹೋಗಿದ್ದೆವು. ಆಗ ಅಲ್ಲಿಗೆ `ಆಂದೋಲನ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ತನ್ನ ಪ್ರೇಮ ಪ್ರಕರಣದ ವೈಫಲ್ಯ ಕುರಿತು ಹೇಳುತ್ತಾ… ಅಳುತ್ತಾ ಮತ್ತಾರೂ ಮಾತಾಡಲಾಗದಂತೆ ಅವನದೇ ದೊಡ್ಡ ಗೋಳಾಯಿತು. ಮಹೇಶ ಎಲ್ಲರನ್ನು ಸಮಾಧಾನ ಮಾಡುತ್ತಾ ಪಾರ್ಟಿ ಮುಗಿಸಿದ್ದೆವು. ಸುಂದರೇಶ್, ಇವರೆಲ್ಲ ಅದಕ್ಕೆ ನಾನು ಬೇಡ ಅಂದಿದ್ದು, ಎಂದು ಬೇಸರ ಮಾಡಿಕೊಂಡಿದ್ದ. ನಾನೇ ಆತನಿಗೆ ಸಮಾಧಾನದ ಮಾತುಗಳನ್ನು ಹೇಳಿ ಅಲ್ಲಿಂದ ಬೀಳ್ಕೊಂಡಿದ್ದೆವು.
ಮಾರನೇ ದಿನ ಮಹೇಶನ ಊರಿಗೆ ಹೋಗಿ ಎರಡು ದಿನ ಅವನ ಊರಾದ ಕುಪ್ಪೇಗಾಲದಲ್ಲಿ ಇದ್ದೆವು. ಮಹೇಶನ ತಂದೆ ದೊಡ್ಡ ಜಮೀನುದಾರರು. ಮನೆಯಲ್ಲಿ ಹತ್ತಾರು ಆಳು ಕಾಳುಗಳು ಇದ್ದು ರೈತಾಪಿ ಕೆಲಸಗಳು ನಡೆಯುತ್ತಿದ್ದವು. ರೇಷ್ಮೆ, ತೆಂಗು, ಬತ್ತದ ಬೆಳೆಗಳಿದ್ದ ಹೊಲ ಗದ್ದೆಗಳ ಕಡೆ ತಿರುಗಾಡುತ್ತಾ ಅವರೂರಿಗೆ ಹೊಂದಿಕೊಂಡ ನದಿಕಡೆ ತಿರುಗಾಡಿ ಮನೆಗೆ ಬರುತ್ತಿದ್ದೆವು. ಮಹೇಶನ ಮನೆಯವರು ವಿಶೇಷವಾಗಿ ಉಪಚರಿಸಿದರು. ಗಾಯತ್ರಿ, ಅವರ ಅಡುಗೆಯ ಮನೆಯಲ್ಲಿದ್ದ ಒಂದು ಬುಟ್ಟಿ ತುಂಬಾ ಕಟ್ಟಿಟ್ಟಿದ್ದ ರಾಗಿ ಮುದ್ದೆಗಳನ್ನು ನೋಡಿ `ಇಷ್ಟೊಂದಾ’ ಎಂದು ಉದ್ಗಾರ ತೆಗೆದಿದ್ದಳು. ಅದಕ್ಕೆ ಅವರಮ್ಮ ಕೆಲಸಗಾರರಿಗೆ ಊಟ ಕೊಡದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದೆಲ್ಲ ವಿವರಣೆ ನೀಡುತ್ತಿದ್ದರು. ಎರಡು ದಿನ ಆರಾಮ ಇದ್ದು ಕುಪ್ಪೇಗಾಲದಿಂದ ಮೈಸೂರಿಗೆ ಹೊರಟು ನಿಂತಿದ್ದ ಬಸ್ಸು ಏರಿದ್ದೆವು. ನಮ್ಮನ್ನು ಕಳಿಸಲು ಬಂದಿದ್ದ ಮಹೇಶ ಏನೋ ನೆನಪು ಮಾಡಿಕೊಂಡವನಂತೆ ಬಸ್ಸಿನ ಪಕ್ಕಕ್ಕೆ ಬಂದು 200ರೂಗಳನ್ನು ನನ್ನ ಕೈಗಿಟ್ಟು ನಾನೇ ಮದುವೆ ಕಾಲಕ್ಕೆ ಸ್ವಲ್ಪ ಮುಂಚೆ ಬರಬೇಕಾಗಿತ್ತು, ಆಗಲಿಲ್ಲ ಎಂದು ಹೇಳುತ್ತಿರುವಾಗಲೇ ಬಸ್ ಮುಂದೆ ಮುಂದೆ ಚಲಿಸುತ್ತಿತ್ತು. ಧಾವಂತದಲ್ಲಿ ಮದುವೆ ನೋಂದಾಯಿಸಿಕೊಂಡು ಮೈಸೂರು ಕಡೆಗೆ ಹೋಗಿದ್ದ ನಾನು ಬಿಆರ್‌ಪಿಗೆ ವಾಪಸ್ ಬಂದಿದ್ದೆ. ನಂತರ 10ನೇ ತಾರೀಖಿನಂದು ಆಯೋಜಿಸಿದ್ದ ಔತಣಕೂಟಕ್ಕೆ ರೆಡಿಯಾಗುತ್ತಿದ್ದೆವು. ಯಾರೆಲ್ಲಾ ಬರಬಹುದು, ಏನೇನು ಬೆಳವಣಿಗೆಯಾಗಬಹುದೆಂಬ ದುಗುಡದಲ್ಲಿದ್ದೆವು. ನಮ್ಮ ಮದುವೆಗೆಲ್ಲಾ ಒತ್ತಾಸೆಯಾಗಿದ್ದ ಪ್ರಭುವಿನ ಮೇಲೆ ಎಲ್ಲರ ವಕ್ರದೃಷ್ಟಿ ಬಿದ್ದಿತ್ತು. ಗಾಯತ್ರಿ ಮನೆಯವರು ಮತ್ತು ಅವರಲ್ಲಿನ ಹಿರಿಯರನೇಕರು ಶಿವಮೊಗ್ಗದ ಅವರ ಮನೆಗೆ ಬಂದು ಗಾಯತ್ರಿಯನ್ನು ಅವರುಗಳು ಮಾತಾಡಿಸಬೇಕೆಂದು ಅದಕ್ಕಾಗಿ ನೀವು ಅವರಿಬ್ಬರನ್ನು ಶಿವಮೊಗ್ಗಕ್ಕೆ ಕರೆಸಲು ಪ್ರಭುಗೆ ಒತ್ತಾಯಿಸಿದ್ದರು.
ಅವರ ಇಚ್ಛೆಯಂತೆ ನಾನು ಗಾಯತ್ರಿ ಪ್ರಭು ಮನೆಗೆ ಸುಮಾರು ಮಧ್ಯಾಹ್ನ 11-12ರ ಸಮಯಕ್ಕೆ ಹೋದೆವು. ಗಾಯತ್ರಿಯ ಹಿರಿಯ ಅಣ್ಣ ಹೆಚ್.ಸಿ. ನಂಜುಂಡಭಟ್ಟ ಮತ್ತು ಹೆಚ್.ಸಿ. ಜಗದೀಶ್ ಹಾಗೂ ಬಂಧುವಾಗಿದ್ದ ಶಾರದಮ್ಮ ಅವರುಗಳ ಜೊತೆ ಇನ್ನೂ ಹಲವರು ಗಾಯತ್ರಿಯೊಡನೆ ಮಾತನಾಡಿದರು. ಅವರನ್ನೆಲ್ಲ ನೋಡಿದ ಗಾಯತ್ರಿ ಭಾವುಕಳಾಗಿ ಕೂತಿದ್ದಳು. ಬಂದ ಗಾಯತ್ರಿ ಬಂಧುಗಳು ಯಾರೂ ನನ್ನನ್ನು ಮಾತಾಡಿಸಲಿಲ್ಲ. ಅವರೆಲ್ಲ ಗಾಯತ್ರಿಯೊಡನೆ ಮಾತಾಡಿ ಬೇರೆಲ್ಲ ಮಾತು ಮುಗಿದು ಕೊನೆಯಲ್ಲಿ ಈಗ ಎಂ.ಎ. ಮುಗಿದಿರುವ ಕಾರಣ ಮುಂದಿನ ಓದಿಗಾಗಿ ಹೊರದೇಶಕ್ಕೆ ಹೋಗುವ ವ್ಯವಸ್ಥೆ ಮಾಡುವುದಾಗಿಯೂ, ಜೀವನದಲ್ಲಿ ಭೋಗಕ್ಕಿಂದ ತ್ಯಾಗ ದೊಡ್ಡದು ಎಂಬೆಲ್ಲ ಮಾತಾಡಿ ಈಗ ಆಗಿರುವ ಮದುವೆ ಮದುವೆಯಲ್ಲ, ಬಿಟ್ಟು ಬಿಡು ಎಂದೆಲ್ಲ ಮಾತುಗಳು ಬಂದವು. ಆಗ ಅದುವರೆಗೂ ಸುಮ್ಮನಿದ್ದ ಪ್ರಭು ಮಧ್ಯೆ ಪ್ರವೇಶಿಸಿ, ಈಗ ನನ್ನ ಸ್ನೇಹಿತ ನಿಮ್ಮ ತಂಗಿಯನ್ನು ಮದುವೆಯಾಗಿದ್ದು ಮುಂದಿನ ಜೀವನದ ವಿಷಯ ಮಾತನಾಡುವುದನ್ನು ಬಿಟ್ಟು ನೀವು ಬೇರ್ಪಡಿಸುವ ಮಾತಾಡುತ್ತಿದ್ದೀರಿ ಎಂದು ಆಕ್ಷೇಪಿಸಿ, ಇನ್ನು ಸಾಕು ಹೊರಡಿ ಎಂದು ಏರು ಧ್ವನಿಯಲ್ಲಿ ಹೇಳಿದ. ಗಾಯತ್ರಿ ಚಿಕ್ಕ ಅಣ್ಣ ಜಗದೀಶ, ಇದು ಏನು ಮನೆಯೋ ಜೈಲೋ ಹೀಗೆಲ್ಲಾ ಮಾತಾಡುತ್ತೀರೆಂದು ಹೇಳುವಾಗಲೇ, ಪ್ರಭು ಹೌದು ಇದು ಜೈಲು ನಾನಿಲ್ಲಿನ ಜೈಲ್ ಸೂಪರಿಂಟೆಂಡೆಂಟ್ ಎಂದು ಏರು ಧ್ವನಿಯಲ್ಲಿ ಹೇಳಿದ ಕಾರಣ ಮುಂದಿನ ಮಾತುಗಳು ನಿಂತು ನಮ್ಮೆಲ್ಲರ ಭೇಟಿ ಕೊನೆಗೊಂಡಿತ್ತು.
ದಿನಾಂಕ 10-6-1979ರ ಮಧ್ಯಾಹ್ನ 3-4 ಗಂಟೆಗೆ ನಾವಿಬ್ಬರೂ ನಮ್ಮ ಸ್ನಾತಕೋತ್ತರ ಕೇಂದ್ರದಲ್ಲಿನ ಒಂದು ಶಾಲಾ ಕೊಠಡಿಯಲ್ಲಿ ಸಂತೋಷ ಕೂಟ ಆಯೋಜಿಸಲಾಗಿತ್ತು. ಕೃಷ್ಣಪ್ಪನವರ ಸಮಾಜವಾದಿ, ದಲಿತ ಮಿತ್ರರನೇಕರು ಹಾಜರಿದ್ದರು. ಪ್ರಾಸ್ತಾವಿಕವಾಗಿ ಕೃಷ್ಣಪ್ಪನವರು ಮಾತಾಡಿ, ಸರಳ, ಜಾತ್ಯತೀತ ಮದುವೆಗಳು ಭಾರತೀಯರಿಗೆ ಇಂದಿನ ಅವಶ್ಯಕವಾದ ಅಂಶಗಳೆಂದು ಮಾತನಾಡಿ ಇಂತಹ ಮದುವೆಯಾಗುತ್ತಿರುವ ನಮ್ಮಿಬ್ಬರಿಗೂ ಶುಭ ಕೋರಿದ್ದರು. ನಂತರದಲ್ಲಿ ಡಾ. ತೀ.ನಂ. ಶಂಕರನಾರಾಯಣ, ಡಾ. ಶ್ರೀಕಂಠ ಕೂಡಿಗೆ, ಡಾ. ಜಿ.ಎನ್ ಕೇಶವಮೂರ್ತಿ ಮತ್ತು ಪ್ರಭು ಕೂಡ ಮಾತಾಡಿದ ನಂತರ ನಾನು ಎಲ್ಲರಿಗೂ ಕೃತಜ್ಞತೆ ಹೇಳಿದ್ದೆ. ಇನ್ನೇನು ಇದೆಲ್ಲ ಆಗುವ ಸಮಯಕ್ಕೆ ಸರಿಯಾಗಿ ಗಾಯತ್ರಿಯ ತಂದೆ, ಅಣ್ಣಂದಿರು ಹಾಗೂ ಇತರ ಕೆಲವರು ಅಲ್ಲಿಗೆ ಬಂದರು. ಕೃಷ್ಣಪ್ಪನವರು ಇದೆಲ್ಲವನ್ನು ಗಮನಿಸುತ್ತಾ ಇದ್ದ ಕಾರಣ ಗಲಾಟೆ ಆಗುವ ಸಂಭವವನ್ನು ನಿರೀಕ್ಷಿಸಿ ನಮ್ಮಿಬ್ಬರನ್ನು ಒಂದು ಅಂಬಾಸಿಡರ್ ಕಾರಿನಲ್ಲಿ ಭದ್ರಾವತಿಗೆ ತರಾತುರಿಯಲ್ಲಿ ಕಳಿಸಿಕೊಟ್ಟರು. (ಸುದ್ದಿದಿನ.ಕಾಂ|ವಾಟ್ಸಾಪ್|9980346243
ಮುಂದುವರಿಯುವುದು